ಬೆಂಗಳೂರು: ಮಾಗಡಿ to ಮೈಸೂರು ರಸ್ತೆಗೆ ಇನ್ಮುಂದೆ ಕೇವಲ 20 ನಿಮಿಷ: 10.7 ಕಿ.ಮೀ ಸಿಗ್ನಲ್ ಫ್ರೀ ರಸ್ತೆ ಉದ್ಘಾಟಿಸಿದ ಸಿಎಂ ಡಿಕೆಶಿ
ಟ್ರಾಫಿಕ್ ದಟ್ಟಣೆಯಿಂದ ನಿತ್ಯ ಪರದಾಡುವ ಬೆಂಗಳೂರಿಗರಿಗೆ ರಾಜ್ಯ ಸರ್ಕಾರ ಭರ್ಜರಿ ಸಿಹಿಸುದ್ದಿ ನೀಡಿದೆ. ಮಾಗಡಿ ರಸ್ತೆ ಮತ್ತು ಮೈಸೂರು ರಸ್ತೆ ನಡುವೆ ಸಂಚರಿಸುವ ವಾಹನ ಸವಾರರಿಗೆ ಇನ್ಮುಂದೆ ಟ್ರಾಫಿಕ್ ಕಿರಿಕಿರಿ ಇರುವುದಿಲ್ಲ. ಶನಿವಾರದಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು 10.7 ಕಿಲೋಮೀಟರ್ ಉದ್ದ ಮತ್ತು 100 ಮೀಟರ್ ಅಗಲದ ಟೋಲ್ ಮುಕ್ತ ಹಾಗೂ ಸಿಗ್ನಲ್ ಮುಕ್ತ ರಸ್ತೆಯನ್ನು ಲೋಕಾರ್ಪಣೆ ಮಾಡಿದ್ದಾರೆ.
ಆಧುನಿಕ ಬೆಂಗಳೂರಿನ ನಿರ್ಮಾತೃ, ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರ ಹೆಸರನ್ನು ಈ ರಸ್ತೆಗೆ ಇಡಲಾಗಿದ್ದು, ಇದು ರಾಜಧಾನಿಯ ಸಂಚಾರ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆ ತರುವ ನಿರೀಕ್ಷೆಯಿದೆ. ಈ ಬೆಂಗಳೂರು ಸಿಗ್ನಲ್ ಫ್ರೀ ರಸ್ತೆಯಿಂದಾಗಿ ಸಾವಿರಾರು ವಾಹನ ಸವಾರರಿಗೆ ದೈನಂದಿನ ಪ್ರಯಾಣ ಸುಗಮವಾಗಲಿದೆ.

ಎಸ್.ಎಂ.ಕೃಷ್ಣ ರಸ್ತೆ: 631 ಕೋಟಿ ರೂ. ವೆಚ್ಚದ ಬೃಹತ್ ಯೋಜನೆ
ಬರೋಬ್ಬರಿ 631 ಕೋಟಿ ರೂಪಾಯಿ ವೆಚ್ಚದಲ್ಲಿ ಈ 10 ಪಥದ ರಸ್ತೆಯನ್ನು ನಿರ್ಮಿಸಲಾಗಿದೆ. ಈ ಹಿಂದೆ ಮಾಗಡಿ ರಸ್ತೆಯಿಂದ ಮೈಸೂರು ರಸ್ತೆಗೆ ತಲುಪಲು ವಾಹನ ದಟ್ಟಣೆಯಲ್ಲಿ ಸಿಲುಕಿ ಸುಮಾರು 60 ನಿಮಿಷಗಳ ಸಮಯ ಬೇಕಾಗುತ್ತಿತ್ತು. ಆದರೆ ಈ ಹೊಸ ಸಿಗ್ನಲ್ ಮುಕ್ತ ರಸ್ತೆಯಿಂದಾಗಿ ಪ್ರಯಾಣದ ಸಮಯ ಕೇವಲ 20 ನಿಮಿಷಗಳಿಗೆ ಇಳಿಕೆಯಾಗಲಿದೆ.
ಕಡಬಗೆರೆ ಕ್ರಾಸ್‌ನಿಂದ ಚಲ್ಲಘಟ್ಟ ಮೆಟ್ರೋ ನಿಲ್ದಾಣದವರೆಗೆ ನೇರ ಸಂಪರ್ಕ ಕಲ್ಪಿಸುವ ಈ ರಸ್ತೆಯಲ್ಲಿ ಪರಿಸರ ಸ್ನೇಹಿ ಹಸಿರು ಪಥ, ಸ್ಥಳೀಯ ವಾಹನಗಳಿಗೆ ಸರ್ವಿಸ್ ರಸ್ತೆಗಳು ಹಾಗೂ ಸೈಕಲ್ ಸವಾರರಿಗಾಗಿಯೇ ಪ್ರತ್ಯೇಕ ಟ್ರ್ಯಾಕ್ ನಿರ್ಮಿಸಲಾಗಿದೆ. ನೈಸ್ ರಸ್ತೆಗೆ ಪರ್ಯಾಯವಾಗಿ ಮತ್ತು ವೇಗವಾಗಿ ಸಾಗಲು ರೂಪುಗೊಂಡಿರುವ ಈ ಮಾರ್ಗದಲ್ಲಿ ಮೂರು ಅಂಡರ್‌ಪಾಸ್‌ಗಳು, 11 ಸೇತುವೆಗಳು ಮತ್ತು 270 ಮೀಟರ್ ಉದ್ದದ ಸುರಂಗ ಮಾರ್ಗವಿದೆ. ಮುಂದಿನ ದಿನಗಳಲ್ಲಿ ಮೆಟ್ರೋ ಸಂಪರ್ಕ ಕಲ್ಪಿಸಲು ಅನುಕೂಲವಾಗುವಂತೆ ಮೂರು ಮೀಟರ್ ಅಗಲದ ಸೆಂಟ್ರಲ್ ಮೀಡಿಯನ್ ಕೂಡ ಬಿಡಲಾಗಿದೆ.
ನಾಡಪ್ರಭು ಕೆಂಪೇಗೌಡ ಲೇಔಟ್ ಮತ್ತು ಇತರ ಪ್ರದೇಶಗಳಿಗೆ ಸುಲಭ ಸಂಪರ್ಕ
ಈ ರಸ್ತೆಯು ನಾಡಪ್ರಭು ಕೆಂಪೇಗೌಡ ಬಡಾವಣೆಯ ಎಲ್ಲಾ ಒಂಬತ್ತು ಬ್ಲಾಕ್‌ಗಳಿಗೆ ಹಾಗೂ ಸುತ್ತಮುತ್ತಲಿನ 11 ಹಳ್ಳಿಗಳಿಗೆ ಸುಗಮ ಸಂಪರ್ಕ ಕಲ್ಪಿಸುತ್ತದೆ. ಇದರಿಂದಾಗಿ ಕಂಬಿಪುರ, ಕೊಮ್ಮಘಟ್ಟ, ಕೆಂಚನಪುರ ಸೇರಿದಂತೆ ಇತರ ಭಾಗಗಳ ಜನರಿಗೆ ಬಹಳ ಅನುಕೂಲವಾಗಲಿದೆ. ಅಲ್ಲದೆ ಮೈಸೂರು, ಮಂಡ್ಯ, ಹಾಸನ, ರಾಮನಗರ, ಕುಣಿಗಲ್ ಮತ್ತು ಮಾಗಡಿಯಿಂದ ಬರುವ ಪ್ರಯಾಣಿಕರು ನಗರದೊಳಗೆ ಸುಲಭವಾಗಿ ಹಾಗೂ ತ್ವರಿತವಾಗಿ ಪ್ರವೇಶಿಸಲು ಇದು ನೆರವಾಗಲಿದೆ.
ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಸಿಎಂ ಡಿ.ಕೆ.ಶಿವಕುಮಾರ್, ಅಭಿವೃದ್ಧಿ ಕಾರ್ಯಗಳಿಗಾಗಿ ಸ್ವಯಂಪ್ರೇರಿತವಾಗಿ ತಮ್ಮ ಭೂಮಿಯನ್ನು ಬಿಟ್ಟುಕೊಟ್ಟವರ ತ್ಯಾಗವನ್ನು ಸ್ಮರಿಸಿದರು.
"ರಸ್ತೆ, ಶಾಲೆ, ಕೆರೆ ಹಾಗೂ ಕೈಗಾರಿಕಾ ಪ್ರದೇಶಗಳಂತಹ ಸಾರ್ವಜನಿಕ ಯೋಜನೆಗಳಿಗೆ ಯಾವುದೇ ತಕರಾರು ಮಾಡದೆ ಭೂಮಿ ನೀಡಿದವರ ಹೆಸರನ್ನು ಶಾಶ್ವತವಾಗಿ ಉಳಿಸಲು 'ಕೃತಜ್ಞತಾ ಗೋಡೆ' ನಿರ್ಮಿಸಲು ಸರ್ಕಾರ ನಿರ್ಧರಿಸಿದೆ. ಈ ನೂತನ ಎಸ್.ಎಂ.ಕೃಷ್ಣ ರಸ್ತೆಯಲ್ಲೂ ಕೃತಜ್ಞತಾ ಗೋಡೆ ತಲೆಎತ್ತಲಿದ್ದು, ಯೋಜನೆ ಕೇವಲ 11 ಕಿ.ಮೀ ಗೆ ಸೀಮಿತವಾಗದೆ ಮುಂದಿನ ದಿನಗಳಲ್ಲಿ 123 ಕಿ.ಮೀ ವರೆಗೆ ವಿಸ್ತರಣೆಯಾಗಲಿದೆ," ಎಂದು ಅವರು ತಿಳಿಸಿದರು.
ಹೆಬ್ಬಾಳ ಟನಲ್ ರಸ್ತೆ ಮತ್ತು ಬೆಂಗಳೂರು ಬ್ಯುಸಿನೆಸ್ ಕಾರಿಡಾರ್
ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಸರ್ಕಾರ ಕೈಗೊಂಡಿರುವ ಇತರ ಯೋಜನೆಗಳ ಬಗ್ಗೆಯೂ ಸಿಎಂ ಇದೇ ವೇಳೆ ಮಾಹಿತಿ ನೀಡಿದರು. 123 ಕಿ.ಮೀ ಉದ್ದದ ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ರಸ್ತೆ ಕಾಮಗಾರಿಗೆ ಟೆಂಡರ್ ಕರೆಯಲಾಗಿದ್ದು, ಎಲೆಕ್ಟ್ರಾನಿಕ್ ಸಿಟಿಯಿಂದ ಮೈಸೂರು ರಸ್ತೆಗೆ ಸಂಪರ್ಕ ಕಲ್ಪಿಸುವ ಮಾರ್ಗಕ್ಕೆ ಶೀಘ್ರದಲ್ಲೇ ಅಂತಿಮ ಅಧಿಸೂಚನೆ ಹೊರಡಿಸಲಾಗುವುದು ಎಂದರು.
ಅಭಿವೃದ್ಧಿಗಾಗಿ ಭೂಮಿ ಕಳೆದುಕೊಳ್ಳುವವರಿಗೆ ಶೇ.35ರಷ್ಟು ವಾಣಿಜ್ಯ ಭೂಮಿ, ಶೇ.40ರಷ್ಟು ವಸತಿ ಭೂಮಿ ಅಥವಾ ಟಿಡಿಆರ್ ಪರಿಹಾರದ ಆಯ್ಕೆಯನ್ನು ನೀಡಲಾಗುವುದು, ಅವರಿಗೆ ಯಾವುದು ಬೇಕೋ ಅದನ್ನು ಆಯ್ದುಕೊಳ್ಳಬಹುದು ಎಂದು ವಿವರಿಸಿದರು. ಇದರ ಜೊತೆಗೆ, ನಗರದ ಸಂಚಾರ ದಟ್ಟಣೆ ಕಡಿಮೆ ಮಾಡಲು ಹೆಬ್ಬಾಳ ಬಳಿ ಶಾರ್ಟ್ ಟನಲ್ ರಸ್ತೆ ನಿರ್ಮಾಣ ಕಾಮಗಾರಿ ಕೆಲವೇ ದಿನಗಳಲ್ಲಿ ಆರಂಭವಾಗಲಿದೆ ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು.












Click it and Unblock the Notifications