Ladakh: ದುಬಾರಿ ಕಾರಿನಲ್ಲಿ ಲಡಾಖ್‌ ಹೋದವರಿಗೆ ಬಿತ್ತು ₹2 ಲಕ್ಷ ದಂಡ; ಹೊಸ ಆದೇಶ ಕೇಳಿ ಬೆಚ್ಚಿಬಿದ್ದ ಆಫ್-ರೋಡರ್ಸ್

ವಿಶ್ವವಿಖ್ಯಾತ ಪ್ರವಾಸಿ ತಾಣವಾದ ಲಡಾಖ್‌ನ ಅತ್ಯಂತ ಸೂಕ್ಷ್ಮ ಪರಿಸರ ವಲಯಗಳು ಹಾಗೂ ನದಿ-ಸರೋವರಗಳಿಗೆ ಧಕ್ಕೆ ತರುತ್ತಿರುವ ಬೇಜವಾಬ್ದಾರಿ ಪ್ರವಾಸಿಗರ ವಿರುದ್ಧ ಲಡಾಖ್ ಆಡಳಿತವು ಇದೇ ಮೊದಲ ಬಾರಿಗೆ ಅತ್ಯಂತ ಕಠಿಣ ಕಾನೂನು ಕ್ರಮಕ್ಕೆ ಮುಂದಾಗಿದೆ. ಇತ್ತೀಚಿನ ದಿನಗಳಲ್ಲಿ ಪ್ರವಾಸಿಗರು ತಮಗೆ ಇಷ್ಟಬಂದಂತೆ ಲಡಾಖ್‌ನ ನದಿ ತೊರೆಗಳು ಹಾಗೂ ಸಂರಕ್ಷಿತ ಸರೋವರಗಳ ಒಳಗೆ ಐಷಾರಾಮಿ ಕಾರುಗಳನ್ನು ಚಲಾಯಿಸಿ ಅಕ್ರಮವಾಗಿ ಆಫ್-ರೋಡಿಂಗ್ ಮಾಡಿ ಪರಿಸರ ಮಾಲಿನ್ಯ ಮಾಡುತ್ತಿರುವ ಪ್ರಕರಣಗಳು ಗಣನೀಯವಾಗಿ ಹೆಚ್ಚಾಗಿದ್ದವು. ಈ ಗಂಭೀರ ಪರಿಸ್ಥಿತಿ ಹತ್ತಿಕ್ಕಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಲಡಾಖ್‌ನ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ನೀಡಿದ ಆದೇಶದ ಬೆನ್ನಲ್ಲೇ, ನಿಯಮ ಉಲ್ಲಂಘಿಸಿದ ಚಾಲಕರ ವಿರುದ್ಧ ಭಾರಿ ಮೊತ್ತದ ದಂಡ ವಿಧಿಸುವ ಪ್ರಕ್ರಿಯೆ ಆರಂಭವಾಗಿದೆ.

ವಾಹನ ಮಾಲೀಕರಿಗೆ ತಟ್ಟಿದ ಬಿಸಿ

ಇದರ ಭಾಗವಾಗಿ ಜೂನ್ 26ರಂದು ಲಡಾಖ್‌ನ ವನ್ಯಜೀವಿ ಇಲಾಖೆಯು ವನ್ಯಜೀವಿ ಸಂರಕ್ಷಣಾ ಕಾಯ್ದೆಯ ನಿಯಮಗಳನ್ನು ಗಾಳಿಗೆ ತೂರಿದ ನಾಲ್ಕು ಪ್ರಮುಖ ವಾಹನಗಳ ಮಾಲೀಕರಿಗೆ ತಲಾ ₹50,000ಗಳಂತೆ ಒಟ್ಟು ಬರೋಬ್ಬರಿ ₹2 ಲಕ್ಷ ಭಾರಿ ಮೊತ್ತದ ದಂಡ ವಿಧಿಸಿದೆ. ಕಳೆದ ಕೆಲವು ದಿನಗಳ ಅವಧಿಯಲ್ಲಿ ಈ ನಾಲ್ಕು ವಾಹನಗಳ ಚಾಲಕರು ಲಡಾಖ್‌ನ ಅತ್ಯಂತ ಪವಿತ್ರ ಹಾಗೂ ರಮಣೀಯ ಪ್ಯಾಂಗಾಂಗ್ ಸರೋವರದ (Pangong Lake) ಒಳಗೆ ಮತ್ತು ಚಾಂಗ್‌ಥಾಂಗ್ ಹಾಗೂ ನುಬ್ರಾ ಕಣಿವೆಯ ಸಂರಕ್ಷಿತ ವನ್ಯಜೀವಿ ವಲಯಗಳಲ್ಲಿ ಅಕ್ರಮವಾಗಿ ತಮ್ಮ ಕಾರುಗಳನ್ನು ಚಲಾಯಿಸುತ್ತಾ ಹುಚ್ಚಾಟ ನಡೆಸಿ ಸಿಕ್ಕಿಬಿದ್ದಿದ್ದರು. ಈ ವಾಹನಗಳು ಹಿಮಾಚಲ ಪ್ರದೇಶ, ಚಂಡೀಗಢ, ಪಂಜಾಬ್ ಮತ್ತು ಉತ್ತರ ಪ್ರದೇಶ ರಾಜ್ಯಗಳಿಗೆ ಸೇರಿವೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.

Ladakh

ಲಡಾಖ್‌ನ ಲೆಫ್ಟಿನೆಂಟ್ ಗವರ್ನರ್ ಸಚಿವಾಲಯವು ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಪ್ರವಾಸಿಗರ ಇಂತಹ ಬೇಜವಾಬ್ದಾರಿ ವರ್ತನೆಗಳನ್ನು ಇನ್ನು ಮುಂದೆ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದೆ. ಲಡಾಖ್‌ನ ಅತ್ಯಂತ ಸೂಕ್ಷ್ಮ ಮತ್ತು ಸಣ್ಣ ಹಾನಿಗೂ ತುತ್ತಾಗಬಲ್ಲ ವಿಶಿಷ್ಟ ಪರಿಸರ ವ್ಯವಸ್ಥೆ ಹಾಗೂ ಅಲ್ಲಿನ ಅಳಿವಿನ ಅಂಚಿನಲ್ಲಿರುವ ಅಪರೂಪದ ವನ್ಯಜೀವಿಗಳನ್ನು ರಕ್ಷಿಸಲು ಪ್ರಾದೇಶಿಕ ಆಡಳಿತವು ಸಂಪೂರ್ಣ ಬದ್ಧವಾಗಿದೆ ಎಂಬುದನ್ನು ಈ ಕಠಿಣ ಕ್ರಮವು ಸಾಬೀತುಪಡಿಸಿದೆ ಎಂದು ಸಚಿವಾಲಯ ತಿಳಿಸಿದೆ.

ಮುಂದಿನ ದಿನಗಳಲ್ಲೂ ಸಹ ಲಡಾಖ್‌ಗೆ ಬರುವ ಪ್ರವಾಸಿಗರು ಅಲ್ಲಿನ ನೈಸರ್ಗಿಕ ಸಂಪತ್ತಿಗೆ ಹಾನಿ ಮಾಡಿದರೆ ಜೈಲು ಶಿಕ್ಷೆ ಮತ್ತು ವಾಹನ ಮುಟ್ಟುಗೋಲು ಹಾಕಿಕೊಳ್ಳುವಂತಹ ಕಠಿಣ ಕಾನೂನು ಕ್ರಮಗಳನ್ನು ಎದುರಿಸಬೇಕಾಗುತ್ತದೆ ಎಂದು ಪ್ರವಾಸೋದ್ಯಮ ವಲಯಕ್ಕೆ ಕಟ್ಟುನಿಟ್ಟಿನ ಸಂದೇಶ ರವಾನಿಸಿದೆ. ಲಡಾಖ್ ಪ್ರಾದೇಶಿಕ ಆಡಳಿತವು ಕೈಗೊಂಡಿರುವ ಈ ದಿಢೀರ್ ಕ್ರಮದ ಹಿಂದೆ ಸಾಮಾಜಿಕ ಜಾಲತಾಣಗಳ ಪಾತ್ರ ದೊಡ್ಡದಾಗಿದೆ.

ಸಿಕ್ಕಿಬಿದ್ದಿದ್ದೇಗೆ?

ಇತ್ತೀಚಿನ ದಿನಗಳಲ್ಲಿ ಪ್ರವಾಸಿಗರು ಲಡಾಖ್‌ನ ಸುಂದರ ಪರಿಸರದಲ್ಲಿ ತಮ್ಮ ಐಷಾರಾಮಿ ಎಸ್‌ಯುವಿ ಕಾರುಗಳೊಂದಿಗೆ ಅಪಾಯಕಾರಿ ಸ್ಟಂಟ್‌ಗಳನ್ನು ಮಾಡುತ್ತಾ, ರೀಲ್ಸ್ ಮತ್ತು ವಿಡಿಯೋಗಳನ್ನು ಮಾಡಿ ಇಂಟರ್ನೆಟ್‌ನಲ್ಲಿ ಹಂಚಿಕೊಳ್ಳುತ್ತಿದ್ದರು. ಇಂತಹದ್ದೇ ಒಂದು ಘಟನೆಯಲ್ಲಿ ಜೂನ್ 23ರಂದು ಮಹೀಂದ್ರಾ ಥಾರ್ (Mahindra Thar) ವಾಹನವೊಂದನ್ನು ಪ್ಯಾಂಗಾಂಗ್ ಸರೋವರದ ಮೀರಕ್ ಎಂಬಲ್ಲಿ ನೇರವಾಗಿ ನೀರಿಗೆ ಇಳಿಸಿ ಹುಚ್ಚಾಟ ನಡೆಸಿರುವುದು ಪತ್ತೆಯಾಗಿತ್ತು. ಈ ವಿಡಿಯೋಗಳು ಮತ್ತು ವನ್ಯಜೀವಿ ಇಲಾಖೆಯ ನಿಯಮಿತ ಗಸ್ತು ತಿರುಗುವಿಕೆ (Routine Patrols) ವೇಳೆ ಸಿಕ್ಕ ಸಾಕ್ಷ್ಯಗಳ ಆಧಾರದ ಮೇಲೆ ಅಧಿಕಾರಿಗಳು ವಾಹನಗಳನ್ನು ಪತ್ತೆ ಹಚ್ಚಿ ದಂಡ ವಿಧಿಸಿದ್ದಾರೆ.

ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅಡಿಯಲ್ಲಿ ಅಪರಾಧ ಎಸಗಿದ ನಾಲ್ಕು ವಾಹನಗಳ ಮಾಲೀಕರನ್ನು ಅಧಿಕಾರಿಗಳು ಚಾಂಗ್‌ಥಾಂಗ್ ಕೋಲ್ಡ್ ಡೆಸರ್ಟ್ ವನ್ಯಜೀವಿ ಧಾಮ ಹಾಗೂ ಕಾರಾಕೋರಂ (ನುಬ್ರಾ-ಶಯೋಕ್) ವನ್ಯಜೀವಿ ಧಾಮದ ವ್ಯಾಪ್ತಿಯಲ್ಲಿ ಇಂಟರ್‌ಸೆಪ್ಟ್ ಮಾಡಿ ವಶಕ್ಕೆ ಪಡೆದಿದ್ದರು. ಸಿಕ್ಕಿಬಿದ್ದ ಪ್ರಮುಖ ವಾಹನಗಳಲ್ಲಿ ಮಹೀಂದ್ರಾ ಥಾರ್, ಹ್ಯುಂಡೈ ಕ್ರೆಟಾ ಮತ್ತು ಟೊಯೋಟಾ ಫಾರ್ಚೂನರ್ ಕಾರುಗಳು ಸೇರಿವೆ. ಈ ವಾಹನಗಳನ್ನು ಇಲಾಖೆಯು ತಕ್ಷಣವೇ ಮುಟ್ಟುಗೋಲು ಹಾಕಿಕೊಂಡಿತ್ತು. ಇಲಾಖೆ ತನಿಖೆಯ ನಂತರ ತಲಾ ₹50,000 ಗಳಂತೆ ಒಟ್ಟು ₹2 ಲಕ್ಷ ದಂಡದ ಮೊತ್ತವನ್ನು ಸಂಪೂರ್ಣವಾಗಿ ಪಾವತಿಸಿದ ಬಳಿಕವಷ್ಟೇ ಆಯಾ ವಾಹನಗಳನ್ನು ಮಾಲೀಕರಿಗೆ ಬಿಡುಗಡೆ ಮಾಡಲಾಗಿದೆ. ಲಡಾಖ್ ಇತಿಹಾಸದಲ್ಲೇ ಇಷ್ಟು ದೊಡ್ಡ ಮಟ್ಟದ ದಂಡವನ್ನು ಪ್ರವಾಸಿಗರ ಮೇಲೆ ವಿಧಿಸಿರುವುದು ಇದೇ ಮೊದಲು ಎನ್ನಲಾಗಿದೆ.

ಲಡಾಖ್‌ಗೆ ಬರುವ ಎಲ್ಲ ದೇಶೀಯ ಮತ್ತು ಅಂತರರಾಷ್ಟ್ರೀಯ ಪ್ರವಾಸಿಗರು ಕಡ್ಡಾಯವಾಗಿ ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸಬೇಕು ಎಂದು ಸೂಚಿಸಿದೆ. ಪ್ರವಾಸಿಗರು ಕೇವಲ ಸರ್ಕಾರ ನಿಗದಿಪಡಿಸಿರುವ ಅಧಿಕೃತ ರಸ್ತೆ ಹಾಗೂ ಮಾರ್ಗಗಳಲ್ಲಿ ಮಾತ್ರ ವಾಹನ ಚಲಾಯಿಸಬೇಕು. ಯಾವುದೇ ಕಾರಣಕ್ಕೂ ಮುಖ್ಯ ರಸ್ತೆಯನ್ನು ಬಿಟ್ಟು ನದಿ ತೀರ, ಮರಳು ದಿಬ್ಬಗಳು ಅಥವಾ ಪ್ರಾಣಿಗಳ ವಾಸಸ್ಥಾನಗಳ ಕಡೆಗೆ ಆಫ್-ರೋಡಿಂಗ್ ಮಾಡಬಾರದು. ಇದಲ್ಲದೆ 2026ರ ಪ್ರವಾಸಿ ಸೀಸನ್ ನಿಯಮಗಳ ಪ್ರಕಾರ, ನುಬ್ರಾ ವ್ಯಾಲಿ, ಪ್ಯಾಂಗಾಂಗ್ ಸರೋವರ ಹಾಗೂ ಹ್ಯಾನ್ಲೆಯಂತಹ ನಿರ್ಬಂಧಿತ ಪ್ರದೇಶಗಳಿಗೆ ಭೇಟಿ ನೀಡುವ ಮುನ್ನ ಆನ್‌ಲೈನ್ ಪೋರ್ಟಲ್ ಮೂಲಕ ಸೂಕ್ತವಾದ ಇನ್ನರ್ ಲೈನ್ ಪರ್ಮಿಟ್ ಪಡೆದಿರಬೇಕು. ನಿಯಮ ಮೀರಿದರೆ ಮುಂದಿನ ದಿನಗಳಲ್ಲಿ ವಾಹನಗಳ ಲೈಸೆನ್ಸ್ ರದ್ದು ಮಾಡುವುದಾಗಿಯೂ ಎಚ್ಚರಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+