Bengaluru New Tax: ನಗರಾಭಿವೃದ್ಧಿಗಾಗಿ ಜನರ ಮೇಲೆ ಹೊಸ ತೆರಿಗೆ ಹೇರಿಕೆ ಪ್ರಸ್ತಾವನೆ: ವಿಪಕ್ಷ ನಾಯಕ ಕಿಡಿ
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಹಳೇ ಮದ್ರಾಸ್ ರಸ್ತೆಯ ಸ್ವಾಮಿ ವಿವೇಕಾನಂದ ಮೆಟ್ರೋ ನಿಲ್ದಾಣದಿಂದ ಸಿಲ್ಕ್ ಬೋರ್ಡ್ ಜಂಕ್ಷನ್ ವರೆಗೆ 11 ಕಿಲೋ ಮೀಟರ್ ನಾಲ್ಕು ಪಥಗಳ ಎಲಿವೇಟೆಡ್ ರಸ್ತೆ ಯೋಜನೆಗೆ (Bengaluru Elevated Corridor) ಸುಮಾರು 1300 ಕೊಟಿ ರೂಪಾಯಿ ವೆಚ್ಚವಾಗುವ ಸಾಧ್ಯತೆ. ಇದರ ಅಂದಾಜು ವೆಚ್ಚ ಸರಿದೂಗಿಸಲು ರಾಜ್ಯ ಸರ್ಕಾರ ಆಸ್ತಿ ತೆರಿಗೆ ಸೇರಿದಂತೆ ವಿವಿಧ ತೆರಿಗೆಗಳನ್ನು ಹೆಚ್ಚಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಇದೇ ವಿಚಾರವಾಗಿ ವಿಪಕ್ಷ ನಾಯಕರು ಬೆಂಗಳೂರು ನಗರಾಭಿವೃದ್ಧಿ ಸಚಿವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಎಕ್ಸ್ ಪೋಸ್ಟ್ ಮಾಡಿರುವ ವಿಪಕ್ಷ ನಾಯಕ ಆರ್.ಅಶೋಕ್ ಅವರು, "ರೀಲ್ಸ್ ಮಂತ್ರಿ" ಕೃಷ್ಣ ಬೈರೇಗೌಡರು "ANTICIPATORY TAX"-ಕ್ಯಾಮೆರಾ ಮುಂದೆ ಅಧಿಕಾರಿಗಳನ್ನು ಗದರಿಸುವ REELS, ಪರದೆ ಹಿಂದೆ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುವ TAX' ಎಂಬ ಹೊಸ ಆರ್ಥಿಕ ಸಿದ್ಧಾಂತ ಹೊಂದಿದ್ದಾರೆ. ಇದು ಹೊಸ ಬೆಂಗಳೂರು ಅಭಿವೃದ್ಧಿ ಮಂತ್ರಿ ಕೃಷ್ಣ ಬೈರೇಗೌಡರ ನಿಜವಾದ ಮುಖ ಎಂದು ವಾಗ್ದಾಳಿ ನಡೆಸಿದ್ದಾರೆ.

ಹಳೆ ಮದ್ರಾಸ್ ರಸ್ತೆ ಎಲಿವೇಟೆಡ್ ಕಾರಿಡಾರ್‌ಗೆ 1,300 ಕೋಟಿ ರೂ. ಹಣ ಖಚ್ಚಾಗಲಿದ್ದು,ಹಣ ಸಂಗ್ರಹಿಸಲು ದಿವಾಳಿ ಸರ್ಕಾರದ "ಬುದ್ಧಿವಂತ" ಲಾಜಿಕ್ ಮಾಡಿದೆ. "ರಸ್ತೆ ಆದ ಮೇಲೆ ನಿಮ್ಮ ಆಸ್ತಿಯ ಬೆಲೆ ಹೆಚ್ಚಾಗಬಹುದು, ಅಂಗಡಿಗಳ ವ್ಯಾಪಾರ ಹೆಚ್ಚಾಗಬಹುದು. ಆದ್ದರಿಂದ ಹೆಚ್ಚಿನ ತೆರಿಗೆ ಕಟ್ಟಲು ಸಜ್ಜಾಗಿ ಎಂದು ಹೇಳಿದ್ದಾರೆ.
ಇನ್ನೂ ಆದಾಯ ಇಲ್ಲ. ಇನ್ನೂ ಲಾಭ ಇಲ್ಲ. ಆಸ್ತಿ ಮಾರಿಲ್ಲ, ಬಾಡಿಗೆ ಹೆಚ್ಚಿಸಿಲ್ಲ. ಆದರೂ ತೆರಿಗೆ ಮಾತ್ರ ಈಗಲೇ ಕಟ್ಟಬೇಕು?. ಇದಕ್ಕೆ ಆಸ್ತಿ ತೆರಿಗೆ (Property Tax) ಎಂದು ಹೆಸರಿಡುವುದೂ ತಪ್ಪು. ಇದರ ನಿಜವಾದ ಹೆಸರು "ANTICIPATORY TAX" (ನಿರೀಕ್ಷಿತ ತೆರಿಗೆ) ಭವಿಷ್ಯದಲ್ಲಿ ಆಗಬಹುದಾದ ಲಾಭದ ಮೇಲೆ, ಇಂದೇ ಹೇರುವ ಊಹಾತ್ಮಕ ತೆರಿಗೆ! ಎಂದು ಅವರು ವ್ಯಂಗ್ಯವಾಡಿದ್ದಾರೆ.
ಸರ್ಕಾರದಿಂದ ಹೊಸ ತೆರಿಗೆ ಬರೆ?
ಇಂದು ಎಲಿವೇಟೆಡ್ ರಸ್ತೆಗೆ ನಿರೀಕ್ಷಿತ ತೆರಿಗೆ, ನಾಳೆ ಮೆಟ್ರೋ ಬಂದರೆ "Metro Proximity Tax"? ಫ್ಲೈಓವರ್ ಆದರೆ "Flyover Tax"? ಬಸ್ ನಿಲ್ದಾಣ ಬಂದರೆ "Connectivity Tax"? ಹಾಕಲೂಬಹುದು. ಈ ತರ್ಕವನ್ನು ಒಪ್ಪಿಕೊಂಡರೆ, ಬೆಂಗಳೂರಿನ ಪ್ರತಿ ಮೂಲಸೌಕರ್ಯ ಯೋಜನೆಯೂ ಜನರ ಮೇಲೆ ಹೊಸ ತೆರಿಗೆಯ ಬರೆ ಎಳೆಯುತ್ತದೆ!
ಅಭಿವೃದ್ಧಿ ಕಾರ್ಯಗಳಿಗೆ ಸಂಪನ್ಮೂಲ ಹೊಂದಿಸುವುದು ಸರ್ಕಾರದ ಜವಾಬ್ದಾರಿ. ಆದರೆ ಆ ಜವಾಬ್ದಾರಿ ನಿಭಾಯಿಸಲಾಗದೆ, ಇನ್ನೂ ಸಂಭವಿಸಿಲ್ಲದ ಲಾಭದ ಮೇಲೆ ಮುಂಗಡ ತೆರಿಗೆ ವಿಧಿಸುವುದು ಆಡಳಿತ ವೈಫಲ್ಯವನ್ನು ಜನರ ಜೇಬಿನಿಂದ ಸರಿದೂಗಿಸುವ ಹಗಲು ದರೋಡೆ! ಮಾಡಲು ಮುಂದಾಗಿದೆ.
ಬೆಂಗಳೂರಿನ ಇಂದಿರಾನಗರ, ಎಚ್‌ಎಎಲ್ ರಸ್ತೆ, ದೊಮ್ಮಲೂರು, ಮಡಿವಾಳ, ಹೊಸೂರು ರಸ್ತೆ, ಸಿಎಂಎಚ್ ರಸ್ತೆ ಭಾಗದ ನಾಗರಿಕರೇ ಎಚ್ಚರ ಒಂದು ಕಡೆ ಟೋಲ್ ಹೊರೆ, ಇನ್ನೊಂದು ಕಡೆ ಈ ನಿರೀಕ್ಷಿತ ತೆರಿಗೆ ಹೊರೆ. ನಿಮ್ಮ ಮನೆ, ನಿಮ್ಮ ಅಂಗಡಿ, ನಿಮ್ಮ ಬದುಕು ಹೀಗಿ ಎಲ್ಲದರ ಮೇಲೂ ಕಣ್ಣಿಟ್ಟಿದೆ ಈ ದಿವಾಳಿ ಸರ್ಕಾರ ಎಂದು ಕಿಡಿ ಕಾರಿದರು.
ತೆರಿಗೆ ಹೇರಿಕೆ ನಿರ್ಧಾರ ಹಿಂಪಡೆಯಿರಿ
ಕೃಷ್ಣ ಬೈರೇಗೌಡ ಅವರೇ, ರೀಲ್ಸ್‌ನಲ್ಲಿ ಅಧಿಕಾರಿಗಳ ಮೇಲೆ ಕೂಗಾಡುವ ಬದಲು, ಒಂದು ಸಲ ಜನರ ಮುಂದೆ ನಿಂತು ಆತ್ಮಸಾಕ್ಷಿಯ ಉತ್ತರ ಕೊಡಿ. ಎಷ್ಟು ನಿರೀಕ್ಷಿತ ತೆರಿಗೆ ವಿಧಿಸಲಿದ್ದೀರಿ? ಯಾವಾಗಿನಿಂದ? ಮತ್ತು ಇದಕ್ಕೆ ಜನರ ಒಪ್ಪಿಗೆ ಕೇಳಿದ್ದೀರಾ? ಎಂದು ಖಾರವಾಗಿ ಪ್ರಶ್ನಿಸಿದರು. ಬೆಂಗಳೂರಿಗರ ಮೇಲೆ ಭವಿಷ್ಯದ ಊಹೆಯ ಆಧಾರದಲ್ಲಿ ತೆರಿಗೆ ಹೇರುವ ಈ ಜನವಿರೋಧಿ ತೆರಿಗೆ ಹೇರಿಕೆ ಪ್ರಸ್ತಾವನೆಯನ್ನು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ದಿವಾಳಿ ಸರ್ಕಾರ ಕೂಡಲೇ ಕೈಬಿಡಬೇಕು ಎಂದು ಅವರು ಆಗ್ರಹಿಸಿದ್ದಾರೆ.













Click it and Unblock the Notifications