ಆಕ್ಸಿಡೆಂಟ್ ಆದಾಗ ವಿನೀಶ್ ಕಾರ್ ಡ್ರೈವ್ ಮಾಡ್ತಿದ್ರಾ? ಎಲ್ಲದಕ್ಕೂ ಸ್ಪಷ್ಟನೆ ಕೊಟ್ಟ ವಿಜಯಲಕ್ಷ್ಮಿ ದರ್ಶನ್
ಸ್ಯಾಂಡಲ್‌ವುಡ್ ನಟ ದರ್ಶನ್ ಅವರ ಪುತ್ರ ವಿನೀಶ್ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಬೆಂಗಳೂರಿನ ರಾಜರಾಜೇಶ್ವರಿ ನಗರದ ಕೆಂಗೇರಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರದಂದು ಈ ಘಟನೆ ನಡೆದಿರುವುದಾಗಿ ವರದಿಯಾಗಿತ್ತು. ವಿನೀಶ್ ಅವರೇ ಕಾರು ಚಲಾಯಿಸುತ್ತಿದ್ದರು ಮತ್ತು ಅಪಘಾತದ ಬಳಿಕ ಸ್ಥಳೀಯರೊಂದಿಗೆ ವಾಗ್ವಾದ ನಡೆದಿದೆ ಎಂಬ ಸುದ್ದಿಗಳು ಹರಿದಾಡಿದ್ದವು. ಆದರೆ, ಈ ಎಲ್ಲಾ ವಿಚಾರದ ಬಗ್ಗೆ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ವಿನೀಶ್ ಸೇಫ್ ಆಗಿದ್ದಾನೆ
ನಟ ದರ್ಶನ್ ಪುತ್ರ ವಿನೀಶ್ ಅವರಿಗೆ ಅಪಘಾತವಾಗಿದೆ ಮತ್ತು ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಕೆಲವು ಮಾಧ್ಯಮಗಳಲ್ಲಿ ಹರಡುತ್ತಿರುವ ಸುದ್ದಿಗಳು ಸಂಪೂರ್ಣವಾಗಿ ಸುಳ್ಳು ಎಂದು ವಿಜಯಲಕ್ಷ್ಮಿ ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಪೋಸ್ಟ್ ಹಂಚಿಕೊಂಡಿರುವ ಅವರು, ಘಟನೆಯ ನಿಜವಾದ ಹಿನ್ನೆಲೆಯನ್ನು ಬಿಚ್ಚಿಟ್ಟಿದ್ದಾರೆ. ವಿನೀಶ್ ಯಾವುದೇ ಅಪಾಯವಿಲ್ಲದೆ ಅತ್ಯಂತ ಕ್ಷೇಮವಾಗಿದ್ದಾರೆ. ಅಪಘಾತದ ವದಂತಿಗಳಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದಿದ್ದಾರೆ.

ಕಾರು ಡ್ರೈವ್ ಮಾಡಿದ್ದು ಚಾಲಕ
ಇನ್ನು ಈ ಘಟನೆ ನಡೆದ ಸಮಯದಲ್ಲಿ ವಿನೀಶ್ ಕಾರು ಚಲಾಯಿಸುತ್ತಿರಲಿಲ್ಲ. ಎಂದಿನಂತೆ ಅವರ ಕುಟುಂಬದ ಚಾಲಕನೇ ಇದ್ದರು. ಬೆಂಗಳೂರಿನ ಸಂಚಾರ ದಟ್ಟಣೆಯಲ್ಲಿ ಸಾಮಾನ್ಯ ಎಂಬಂತೆ ಒಂದೊಂದ ಸಣ್ಣ ರಸ್ತೆ ಘಟನೆ ನಡೆದಿತ್ತು ಅಷ್ಟೇ. ಇದರಲ್ಲಿ ಎದುರು ಪಾರ್ಟಿಯವರದ್ದೇ ತಪ್ಪು ಎಂದು ಅವರೂ ಒಪ್ಪಿಕೊಂಡು, ಸ್ಥಳದಲ್ಲೇ ಕ್ಷಮೆಯನ್ನೂ ಕೇಳಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಬೈಕ್‌ನಲ್ಲಿದ್ದವರು ಸುರಕ್ಷಿತವಾಗಿದ್ದಾರೆಯೇ ಎಂದು ವಿಚಾರಿಸಲು ವಿನೀಶ್ ಕಾರಿನಿಂದ ಕೆಳಗಿಳಿದಿದ್ದರು. ಆದರೆ ಆ ಕೆಲವು ಕ್ಷಣಗಳ ದೃಶ್ಯಗಳನ್ನು ಸಂದರ್ಭಕ್ಕೆ ತಕ್ಕಂತೆ ಬಳಸಿ, ತಪ್ಪುದಾರಿಗೆಳೆಯುವಂತೆ ಬಿಂಬಿಸಲಾಗಿದೆ ಎಂದು ಗರಂ ಆಗಿದ್ದಾರೆ.
"ನಮ್ಮ ಕುಟುಂಬ ಈಗಾಗಲೇ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಇಂತಹ ಸಂದರ್ಭದಲ್ಲಿ ಸತ್ಯಾಸತ್ಯತೆ ಪರಿಶೀಲಿಸದ ಇಂತಹ ವದಂತಿಗಳು ನಮ್ಮ ನೋವು ಮತ್ತು ಆತಂಕವನ್ನು ಮತ್ತಷ್ಟು ಹೆಚ್ಚಿಸುತ್ತವೆ" ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಯಾರೂ ಇಂತಹ ಸುಳ್ಳು ಸುದ್ದಿಗಳನ್ನು ನಂಬಬೇಡಿ ಹಾಗೂ ಶೇರ್ ಮಾಡಬೇಡಿ. ಯಾವುದೇ ಮಾಹಿತಿಯನ್ನು ಪ್ರಕಟಿಸುವ ಮುನ್ನ ಮಾಧ್ಯಮ ಸಂಸ್ಥೆಗಳು ಸತ್ಯವನ್ನು ಪರಿಶೀಲಿಸಬೇಕು ಎಂದು ವಿನಂತಿಸುತ್ತೇನೆ" ಎಂದು ವಿಜಯಲಕ್ಷ್ಮಿ ದರ್ಶನ್ ಮನವಿ ಮಾಡಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾಹಿತಿಯ ಪ್ರಕಾರ, ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಈ ಘಟನೆ ಸಂಭವಿಸಿದೆ. ರಸ್ತೆಯಲ್ಲಿ ಹೋಗುತ್ತಿದ್ದ ದ್ವಿಚಕ್ರ ವಾಹನಕ್ಕೆ ವಿನೀಶ್ ಅವರು ಪ್ರಯಾಣಿಸುತ್ತಿದ್ದ ಐಷಾರಾಮಿ ಫೋರ್ಡ್ ಎಂಡೋವರ್ ಕಾರು ಡಿಕ್ಕಿ ಹೊಡೆದಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ವೈರಲ್ ಆಗಿತ್ತು. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ವಿಜಯಲಕ್ಷ್ಮಿ ಅವರು, ವಾಹನವನ್ನು ಚಾಲಕನೇ ಚಲಾಯಿಸುತ್ತಿದ್ದ ಹಾಗೂ ಸಾಮಾನ್ಯ ಸಂಚಾರ ದಟ್ಟಣೆಯಲ್ಲಿ ನಡೆದ ಸಣ್ಣ ಘಟನೆಯನ್ನು ದೊಡ್ಡದಾಗಿ ಬಿಂಬಿಸಲಾಗುತ್ತಿದೆ ಎಂದಿದ್ದಾರೆ.













Click it and Unblock the Notifications