Bengaluru Dog: ಬೆಂಗಳೂರಿನಲ್ಲಿ 17 ರಕ್ಷಕರಿಂದ 40ಕ್ಕೂ ಹೆಚ್ಚು ದೇಶಿ ಶ್ವಾನಗಳ ರಕ್ಷಣೆ, ಪ್ರದರ್ಶನ, ಏನಿದರ ವಿಶೇಷ ?

Bengaluru Dog: ಬೆಂಗಳೂರಿನ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಮಹತ್ವದ ಯೋಜನೆಯೊಂದನ್ನು ಪರಿಚಯಿಸಲಾಗಿದೆ. ಬೆಂಗಳೂರಿನಲ್ಲಿ 17 ರಕ್ಷಕರಿಂದ 40ಕ್ಕೂ ಹೆಚ್ಚು ದೇಶಿ ಶ್ವಾನಗಳ ರಕ್ಷಣೆ ಹಾಗೂ ಪ್ರದರ್ಶನ ಮಾಡಲಾಗಿದೆ. ಏನಿದು ಹಾಗೂ ಇದರ ವಿಶೇಷವೇನು ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ಅಡಾಪ್ಟ್ ಮೀ - ಸೆಕೆಂಡ್ ಇನ್ನಿಂಗ್ಸ್‌ ಎನ್ನುವ ಅಭಿಯಾನವನ್ನು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಬೆಂಗಳೂರು ಪೂರ್ವ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಯಶಸ್ವಿಯಾಗಿ ನಡೆಸಲಾಗಿದೆ. ಅಭಿಯಾನಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ಸಿಕ್ಕಿದೆ ಎಂದು ಬೆಂಗಳೂರು ಪೂರ್ವ ನಗರ ಪಾಲಿಕೆಯ ಆಯುಕ್ತರಾದ ಡಿ.ಎಸ್. ರಮೇಶ್ ಅವರು ತಿಳಿಸಿದ್ದಾರೆ.

Bengaluru Dog

ಬೆಂಗಳೂರು ಪೂರ್ವ ನಗರ ಪಾಲಿಕೆ ವತಿಯಿಂದ ಆಯೋಜಿಸಲಾಗಿದ್ದ ಅಡಾಪ್ಟ್ ಮೀ - ಸೆಕೆಂಡ್ ಇನ್ನಿಂಗ್ಸ್ ದೇಶಿ ಶ್ವಾನ ದತ್ತು ಕಾರ್ಯಕ್ರಮಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಪ್ರಾಣಿ ಕಲ್ಯಾಣವನ್ನು ಉತ್ತೇಜಿಸುವುದು, ಅಪಘಾತಕ್ಕೊಳಗಾದ, ತ್ಯಜಿಸಲ್ಪಟ್ಟ ಹಾಗೂ ರಕ್ಷಿಸಲ್ಪಟ್ಟ ದೇಶಿ ಶ್ವಾನಗಳಿಗೆ ಶಾಶ್ವತ ಆಶ್ರಯ ಕಲ್ಪಿಸುವುದು ಹಾಗೂ ಸಾರ್ವಜನಿಕರಲ್ಲಿ ಜವಾಬ್ದಾರಿಯುತ ಶ್ವಾನ ಸಾಕಾಣಿಕೆಯ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಎಂದು ಆಯುಕ್ತರಾದ ಡಿ.ಎಸ್. ರಮೇಶ್ ಅವರು ಹೇಳಿದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಆಯುಕ್ತರು ಪ್ರತಿಯೊಂದು ರಕ್ಷಿಸಲ್ಪಟ್ಟ ಶ್ವಾನಕ್ಕೂ ಬದುಕಲು ಮತ್ತೊಂದು ಅವಕಾಶ ದೊರೆಯಬೇಕು. ದೇಶಿ ಶ್ವಾನಗಳನ್ನು ದತ್ತು ಪಡೆಯುವುದು ಕೇವಲ ಪ್ರಾಣಿ ಪ್ರೀತಿಯಲ್ಲ, ಅದು ಮಾನವೀಯತೆ ಮತ್ತು ಸಾಮಾಜಿಕ ಜವಾಬ್ದಾರಿಯ ಸಂಕೇತವಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ದೇಶಿ ಶ್ವಾನಗಳನ್ನು ದತ್ತು ಪಡೆದು ಈ ಸಮಾಜಮುಖಿ ಅಭಿಯಾನವನ್ನು ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು.

17 ರಕ್ಷಕರಿಂದ 40ಕ್ಕೂ ಹೆಚ್ಚು ರಕ್ಷಿಸಲ್ಪಟ್ಟ ದೇಶಿ ಶ್ವಾನಗಳ ಪ್ರದರ್ಶನ

ಈ ಕಾರ್ಯಕ್ರಮದಲ್ಲಿ 17ಕ್ಕೂ ಹೆಚ್ಚು ಪ್ರಾಣಿ ರಕ್ಷಕರು ಭಾಗವಹಿಸಿ 40ಕ್ಕೂ ಹೆಚ್ಚು ರಕ್ಷಿಸಲ್ಪಟ್ಟ ದೇಶಿ ಶ್ವಾನಗಳನ್ನು ದತ್ತು ಸ್ವೀಕಾರಕ್ಕಾಗಿ ಕರೆತಂದಿದ್ದರು. ಅವುಗಳಲ್ಲಿ ಪ್ರಾಣಿಗಳ ಮೇಲಿನ ಕ್ರೌರ್ಯಕ್ಕೆ ಒಳಗಾಗಿದ್ದ 5 ಶ್ವಾನಗಳು ಹಾಗೂ ಅಂಗವಿಕಲ ಮತ್ತು ವಿಶೇಷ ಆರೈಕೆಯ ಅಗತ್ಯವಿರುವ ಹಲವು ಶ್ವಾನಗಳೂ ಸೇರಿದ್ದವು. ಈ ಎಲ್ಲಾ ಶ್ವಾನಗಳಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ, ಆರೈಕೆ ಹಾಗೂ ಪುನರ್ವಸತಿ ಕಲ್ಪಿಸಿದ ಬಳಿಕ ಸಾರ್ವಜನಿಕರ ದತ್ತು ಸ್ವೀಕಾರಕ್ಕೆ ಅವಕಾಶ. ಕಲ್ಪಿಸಲಾಗಿತ್ತು.

ಸ್ಥಳದಲ್ಲೇ 4 ಶ್ವಾನಗಳ ದತ್ತು; ಇನ್ನೂ 4 ಶ್ವಾನಗಳ ದತ್ತು ಪ್ರಕ್ರಿಯೆ ಅಂತಿಮ ಹಂತದಲ್ಲಿ

ಕಾರ್ಯಕ್ರಮದಲ್ಲಿ ನಾಲ್ಕು ದೇಶಿ ಶ್ವಾನಗಳನ್ನು ಸ್ಥಳದಲ್ಲಿಯೇ ಸಾರ್ವಜನಿಕರು ದತ್ತು ಸ್ವೀಕರಿಸಿದ್ದು, ಮತ್ತಷ್ಟು ನಾಲ್ಕು ಶ್ವಾನಗಳ ದತ್ತು ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಅಗತ್ಯ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ದತ್ತು ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು. ಇನ್ನು ಕಾರ್ಯಕ್ರಮದ ವೇಳೆ ಸುರಿದ ಭಾರೀ ಮಳೆಯಿಂದಾಗಿ ಹೆಚ್ಚಿನ ಸಂಖ್ಯೆಯ ಸಾರ್ವಜನಿಕರು ಹಾಗೂ ದತ್ತು ಪಡೆಯಲು ಆಸಕ್ತಿ ಹೊಂದಿದ್ದವರು ಶ್ವಾನಗಳನ್ನು ನೇರವಾಗಿ ಭೇಟಿ ಮಾಡಲು ಸಾಧ್ಯವಾಗಲಿಲ್ಲ. ಆದಾಗ್ಯೂ, ದತ್ತು ಪ್ರಕ್ರಿಯೆಯನ್ನು ಮುಂದುವರಿಸುವ ಉದ್ದೇಶದಿಂದ ಈ ವಾರ ಪೂರ್ತಿ ವರ್ಚುವಲ್ ದತ್ತು ಅಭಿಯಾನವನ್ನು ಮುಂದುವರಿಸಲಾಗುವುದು ಎಂದು ಆಯುಕ್ತರು ತಿಳಿಸಿದರು. ಆಸಕ್ತರು ಆನ್‌ಲೈನ್ ಮೂಲಕ ಶ್ವಾನಗಳ ಮಾಹಿತಿ ಪಡೆದು ದತ್ತು ಪಡೆಯಲು ಅವಕಾಶ ಕಲ್ಪಿಸಲಾಗುತ್ತಿದೆ ಎಂದಿದ್ದಾರೆ.

ಪ್ರಾಣಿ ಕಲ್ಯಾಣ ಮತ್ತು ಜವಾಬ್ದಾರಿಯುತ ಸಾಕಾಣಿಕೆ ಕುರಿತು ಜಾಗೃತಿ

ಕಾರ್ಯಕ್ರಮದಲ್ಲಿ ಜವಾಬ್ದಾರಿಯುತ ಶ್ವಾನ ಸಾಕಾಣಿಕೆ, ರೇಬೀಸ್ ತಡೆಗಟ್ಟುವಿಕೆ, ಲಸಿಕೆಗಳ ಮಹತ್ವ, ಪ್ರಾಣಿ ಕಲ್ಯಾಣ ಕಾನೂನುಗಳು ಹಾಗೂ ಮಾನವ-ಶ್ವಾನ ಸಹಬಾಳ್ವೆಯ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು. ಶ್ವಾನಗಳನ್ನು ಖರೀದಿಸುವ ಬದಲು ದೇಶಿ ಶ್ವಾನಗಳನ್ನು ದತ್ತು ಪಡೆಯುವ ಸಂಸ್ಕೃತಿಯನ್ನು ಬೆಳೆಸುವ ಅಗತ್ಯವನ್ನು ಒತ್ತಿಹೇಳಲಾಯಿತು. ಈ ಕಾರ್ಯಕ್ರಮವನ್ನು ಸಹವರ್ತಿನ್ ಅನಿಮಲ್ ವೆಲ್ಫೇರ್ ಟ್ರಸ್ಟ್ ಸಂಸ್ಥೆಯು ಅಡ್ವಕಸಿ ಪಾಲುದಾರರಾಗಿ ಸಂಪೂರ್ಣ ಕಾರ್ಯಕ್ರಮದ ಸಮನ್ವಯ ವಹಿಸಿಕೊಂಡು ಯಶಸ್ವಿಯಾಗಿ ನಡೆಸಿಕೊಟ್ಟಿತು. ಕಾರ್ಯಕ್ರಮಕ್ಕೆ Supertails, Bow Petcare, Captain Waggatail, Pawtful, Asha - Tails of Hope ಹಾಗೂ Boonation ಸಂಸ್ಥೆಗಳು ಉಡುಗೊರೆ ಪ್ರಾಯೋಜಕರಾಗಿ ಸಹಕಾರ ನೀಡಿದ್ದಾರೆ.

ಪ್ರಾಣಿಗಳನ್ನು ದತ್ತು ಪಡೆಯಲು ಸಾರ್ವಜನಿಕರಲ್ಲಿ ಮನವಿ

ಪ್ರಾಣಿ ಪ್ರಿಯರು ಹಾಗೂ ಸಾರ್ವಜನಿಕರು ದೇಶಿ ಶ್ವಾನಗಳನ್ನು ದತ್ತು ಪಡೆಯುವ ಮೂಲಕ ಅಥವಾ ಅವುಗಳ ಆಹಾರ, ಚಿಕಿತ್ಸೆ ಹಾಗೂ ಆರೈಕೆಗೆ ಸಹಾಯ ಮಾಡುವ ಮೂಲಕ ಈ ಅಭಿಯಾನದಲ್ಲಿ ಕೈಜೋಡಿಸಬೇಕು. ಪ್ರತಿಯೊಂದು ದತ್ತು ಒಂದು ಮೂಕಜೀವಿಗೆ ಹೊಸ ಬದುಕನ್ನು ನೀಡುವ ಮಾನವೀಯ ಕಾರ್ಯವಾಗಿದ್ದು, ಸಮಾಜದಲ್ಲಿ ಪ್ರಾಣಿ ಕಲ್ಯಾಣ ಮತ್ತು ಸಹಬಾಳ್ವೆಯ ಮನೋಭಾವವನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಆಯುಕ್ತರಾದ ಡಿ.ಎಸ್. ರಮೇಶ್ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಹೆಚ್ಚುವರಿ ಆಯುಕ್ತರು ಪ್ರಜ್ಞಾ ಅಮ್ಮೆಂಬಳ, ಪಶುಪಾಲನೆ ಸಹಾಯಕ ನಿರ್ದೇಶಕರಾದ ಡಾ ರುದ್ರೇಶ್, ಡಾ. ವಿವೇಕ್,ಬೆಂಗಳೂರು ವಸತಿ ಸಮುಚ್ಚಯಗಳ ಅಧ್ಯಕ್ಷರಾದ ಸತೀಶ್ ಮಲ್ಯ, ವೈಟ್ ಫೀಲ್ಡ್ ರೈಸಿಂಗ್ ಸಿವಿಕ್ ಫೋರಂ ಸಂದೀಪ್ ಅನಿರುದ್, ವಿವಿಧ ಪ್ರಾಣಿ ಕಲ್ಯಾಣ ಸಂಸ್ಥೆಗಳ ಪ್ರತಿನಿಧಿಗಳು, ಪ್ರಾಣಿ ರಕ್ಷಕರು, ಸಾರ್ವಜನಿಕರು ಹಾಗೂ ಪ್ರಾಣಿ ಪ್ರಿಯರು ಭಾಗವಹಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+