Rain: ಕರ್ನಾಟಕದ ಜಿಲ್ಲೆಗಳು 31 ಜಿಲ್ಲೆಗಳಲ್ಲೂ ಮಳೆ ಕೊರತೆ: ಅಡಿಕೆ ಸೇರಿ ಈ ರೈತರಿಗೆ ಸರ್ಕಾರದಿಂದ ಗುಡ್‌ನ್ಯೂಸ್!

Rain: ಕರ್ನಾಟಕದ ಜಿಲ್ಲೆಗಳು 31 ಜಿಲ್ಲೆಗಳಲ್ಲೂ ಮಳೆ ಕೊರತೆ ಎದುರಾಗಿದೆ. ಈ ರೀತಿ ಇರುವಾಗಲೇ ಕರ್ನಾಟಕದ ಅಡಿಕೆ ಬೆಳೆಗಾರರು ಸೇರಿದಂತೆ ಹಲವರಿಗೆ ಕರ್ನಾಟಕ ಸರ್ಕಾರವು ಗುಡ್‌ನ್ಯೂಸ್ ಕೊಟ್ಟಿದೆ.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ 'ಬರ ಪರಿಸ್ಥಿತಿ, ಕುಡಿಯುವ ನೀರು, ಜಾನುವಾರುಗಳಿಗೆ ಮೇವು, ಕೃಷಿ, ಚಟುವಟಿಕೆ ಹಾಗೂ ಉದ್ಯೋಗ' ವಿಷಯಗಳ ಕುರಿತು ಎಲ್ಲಾ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಅವರು ವೀಡಿಯೋ ಕಾನ್ಫರೆನ್ಸ್ ಮೂಲಕ ಪರಿಸ್ಥಿತಿಯನ್ನು ಅವಲೋಕನ ನಡೆಸಿ, ಬರ ಪರಿಸ್ಥಿತಿಯನ್ನು ಎದುರಿಸಲು ಸೂಕ್ತ ನಿರ್ದೇಶನಗಳನ್ನು ನೀಡಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ಅವರು ಕೆಲವೊಂದು ಪ್ರಮುಖ ಸೂಚನೆಗಳನ್ನು ಕೊಟ್ಟಿದ್ದಾರೆ.

1. ಕಳೆದ ಒಂದೂವರೆ ತಿಂಗಳಲ್ಲಿ ನಿಮ್ಮೊಂದಿಗೆ ಹಲವಾರು ಬಾರಿ ಸಭೆಗಳನ್ನು ನಡೆಸಿದ್ದೇವೆ. ಸ್ವತಃ ನಾನು ಬೆಳಗಾವಿ ವಿಭಾಗ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳ ಸಭೆಗಳನ್ನು ನಡೆಸಿದ್ದೇನೆ. ಮುಖ್ಯಮಂತ್ರಿಗಳೊಂದಿಗೆ ಬೆಳಗಾವಿ, ಕಲಬುರಗಿ ವಿಭಾಗಗಳ 14 ಜಿಲ್ಲೆಗಳ ಪರಿಶೀಲನೆ ಮಾಡಿದ್ದೇವೆ. ಅಲ್ಲದೆ ಆರಂಭದಲ್ಲಿಯೇ ನಿಮ್ಮ ಜೊತೆಯೂ ಬೆಂಗಳೂರಿನಲ್ಲಿ ಸಭೆ ನಡೆಸಿ ಸೂಚನೆಗಳನ್ನು ನೀಡಿದ್ದೇವೆ. ಸರ್ಕಾರ ಯಾಕೆ ಬರದ ಕುರಿತು ಇಷ್ಟೊಂದು ಒತ್ತು ನೀಡುತ್ತಿದೆ ಎಂಬುದನ್ನು ನೀವು ಅರ್ಥ ಮಾಡಿಕೊಳ್ಳಬೇಕು. ಇದರಿಂದ ಸರ್ಕಾರವು ಬರ ಪರಿಸ್ಥಿತಿಯನ್ನು ಎಷ್ಟು ಗಂಭೀರವಾಗಿ ಪರಿಗಣಿಸಿದೆ ಎಂಬುದು ನಿಮಗೆ ಅರ್ಥವಾಗುತ್ತದೆ. ನೀವು ಒಂದಿಷ್ಟೂ ಉದಾಸೀನ ಮಾಡದೆ ಪರಿಸ್ಥಿತಿಯ ಗಾಂಭೀರ್ಯವನ್ನು ಅರಿತು ಕಾರ್ಯೋನ್ಮುಖರಾಗಬೇಕು ಎಂದೂ ಜಿ. ಪರಮೇಶ್ವರ್ ಅವರು ಹೇಳಿದ್ದಾರೆ.

Rain

2. ಈಗ ಉದ್ಭವಿಸಿರುವ ಎಲ್‌ನಿನೊ ಮುಂದಿನ ವರ್ಷದ ಏಪ್ರಿಲ್‌ವರೆಗೆ ಮುಂದುವರೆಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಅಂದಾಜು ಮಾಡುತ್ತಿದೆ. ಅಕ್ಟೋಬರ್ ಮತ್ತು ಡಿಸೆಂಬರ್ ನಡುವೆ ಬಹಳ ಬಲಿಷ್ಠವಾದ ಎಲ್‌ನಿನೊ ಪರಿಸ್ಥಿತಿ ಉದ್ಭವಿಸಬಹುದೆಂದು ಅಂದಾಜು ಮಾಡಲಾಗಿದೆ.

3. ಕಳೆದ 76 ವರ್ಷಗಳಲ್ಲಿ ಸುಮಾರು 25 ವರ್ಷಗಳು ಎಲ್ ನಿನೊಗೆ ತುತ್ತಾಗಿವೆ. ಅಂದರೆ ಸರಾಸರಿ ಪ್ರತಿ 3 ವರ್ಷಗಳಿಗೆ ಒಮ್ಮೆ ಎಲ್‌ನಿನೊ ಬರುತ್ತದೆ.

4. ಜಾಗತಿಕ ತಾಪಮಾನವು ಸರಾಸರಿ 2 ಡಿಗ್ರಿಗಳಿಗಿಂತ ಹೆಚ್ಚಾದ ವರ್ಷಗಳು-1965, 1972, 1982, 1991, 1997, 2015. 1997.

5. ಗಾಬರಿ ಹುಟ್ಟಿಸುವ ಸಂಗತಿಯೆಂದರೆ, ಈ ಬಾರಿ ರಾಜ್ಯದ ಉತ್ತರ ಒಳನಾಡಿನ ಕೆಲವು ಕಡೆಗಳಲ್ಲಿ ಈ ತುಂಬು ಮಳೆಗಾಲದ ಅವಧಿಯಲ್ಲಿ ಸರಾಸರಿಗಿಂತ 4ರಿಂದ 6 ಡಿಗ್ರಿಗಳಷ್ಟು ಉಷ್ಣಾಂಶ ಹೆಚ್ಚಾಗಿದೆ. ದಕ್ಷಿಣ ಒಳನಾಡಿನ ಕೆಲವು ಕಡೆಗಳಲ್ಲಿ 4 ಡಿಗ್ರಿಯವರೆಗೆ ಹೆಚ್ಚಾಗಿದೆ. ಮಳೆಗಾಲದಲ್ಲಿ ಇಷ್ಟು ತಾಪಮಾನ ದಾಖಲಾದರೆ ಕೆರೆ, ಕಟ್ಟೆಗಳಲ್ಲಿನ ನೀರು ಆವಿಯಾಗುವ ಪ್ರಮಾಣವೂ ಹೆಚ್ಚಾಗುತ್ತದೆ. ನೀರು ಭೂಮಿಗೆ ಇಂಗುವ ಬದಲು ಆವಿಯಾದರೆ ಅಂತರ್ಜಲದ ಪ್ರಮಾಣವೂ ಕಡಿಮೆಯಾಗುತ್ತದೆ.

6. ರಾಜ್ಯದ 31 ಜಿಲ್ಲೆಗಳಲ್ಲೂ ಮಳೆ ಕಡಿಮೆಯಾಗಿದೆ. ಶೇ.9 ರಿಂದ ಶೇ.68 ರಷ್ಟು ಕೊರತೆ ಕಾಣಿಸಿಕೊಂಡಿದೆ. 26 ಜಿಲ್ಲೆಗಳಲ್ಲಿ ಮಳೆಯ ಅತೀವ ಅಭಾವವಿದೆ. 178 ತಾಲ್ಲೂಕುಗಳಲ್ಲಿ ಮಳೆ ಕೊರತೆಯಾಗಿದೆ. 158 ತಾಲ್ಲೂಕುಗಳಲ್ಲಿ ಕೊರತೆಯಿದೆ. 20 ತಾಲ್ಲೂಕುಗಳಲ್ಲಿ ತೀವ್ರ ಕೊರತೆಯಿದೆ.

7. ಇಡೀ ರಾಜ್ಯದ ಚಿತ್ರಣವನ್ನೆ ಗಮನಿಸಿದರೂ ಸಹ ಜೂನ್ 1 ರಿಂದ ಜುಲೈ 17 ರವರೆಗೆ ಸರಾ 346 ಮಿ. ಮೀ ಮಳೆಯಾಗಬೇಕಾದ ಕಡೆ ಕೇವಲ 215 ಮಿ.ಮೀ ಮಾತ್ರ ಮಳೆಯಾಗಿದೆ. ರಾಜ್ಯವ್ಯಾಪಿ ಶೇ.37 ರಷ್ಟು ಮಳೆ ಕೊರತೆಯಾಗಿದೆ. ನದಿಗಳಿಗೆ ನೀರು ಪೂರೈಸುವ ಮಲೆನಾಡಿನಲ್ಲಿ ಶೇ.43 ರಷ್ಟು ಕೊರತೆಯಾಗಿದೆ. ಕರಾವಳಿಯಲ್ಲಿ ಶೇ.35, ಉತ್ತರ ಒಳನಾಡಿನಲ್ಲಿ ಶೇ.33, ದಕ್ಷಿಣ ಒಳನಾಡಿನಲ್ಲಿ ಶೇ.31 ಮಿಮೀ ಕಡಿಮೆಯಾಗಿದೆ.

8. ಈ ಸಾರಿ ಬಂದಿರುವ ಬರ ಪರಿಸ್ಥಿತಿಯು ಈ ಹಿಂದಿನ ಬರಗಳಂತೆ ಅಲ್ಲ. 2023 ರಲ್ಲಿ ದೊಡ್ಡ ಬರ ಬಂದಿದ್ದಾಗಲೂ ಅಣೆಕಟ್ಟೆಗಳಲ್ಲಿ ನೀರಿತ್ತು. ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ಮೇವಿಗೆ ಸಮಸ್ಯೆಯಾಗಿರಲಿಲ್ಲ. 2023 ರ ಬರವನ್ನು ಹಸಿರು ಅಥವಾ Green Drought ಎಂದು ಕರೆಯಲಾಯಿತು. ಬೆಳೆಯೇನೊ ಬೆಳೆದಿತ್ತು ಆದರೆ ಸಕಾಲದಲ್ಲಿ ಮಳೆ ಕಾಣದೆ ರೈತನಿಗೇನೂ ಸಿಗಲಿಲ್ಲ.

9. ಕೋವಿಡ್ ನಂತರದ ಅವಧಿಯಲ್ಲಿ ರಾಜ್ಯದಲ್ಲಿ ತೋಟಗಾರಿಕಾ ಬೆಳೆಗಳ ಪ್ರಮಾಣ ಹೆಚ್ಚಾಗಿದೆ. ಅಡಿಕೆಯಂತಹ ಬೆಳೆಗಳು ತೋಟಗಾರಿಕಾ ಬೆಳೆಗಳಲ್ಲಿ ಮೊನೊಪಲಿ ಸಾಧಿಸುತ್ತಿವೆ. ಅಡಿಕೆಗೆ 15-20 ದಿನ ನೀರಿಲ್ಲದಿದ್ದರೆ ತೋಟಗಳು ಒಣಗಿ ಹೋಗುತ್ತವೆ.

10. ರಾಜ್ಯದ ಬೆಳೆಗಳ ಚಿತ್ರಣವನ್ನೆ ಗಮನಿಸಿದರೆ, ಕಬ್ಬು, ಭತ್ತ, ಅಡಿಕೆ ಮತ್ತು ಮುಸುಕಿನ ಜೋಳಗಳು ಒಟ್ಟಾರೆ ಶೇ.50 ರಷ್ಟು ಪ್ರದೇಶವನ್ನು ಆಕ್ರಮಿಸಿಕೊಂಡಿವೆ. ಒಟ್ಟು ಗರಿಷ್ಟ ಬಿತ್ತನೆಯಾಗುವ ಪ್ರದೇಶ 84 ಲಕ್ಷ ಹೆಕ್ಟೇರ್. ಅದರಲ್ಲಿ; ಈ 4 ಬೆಳೆಗಳು ಅತಿ ಹೆಚ್ಚಿನ ನೀರನ್ನು ಬೇಡುತ್ತವೆ. ಹೆಚ್ಚು ಒತ್ತಡ ಕೂಡ ಈ ಬೆಳೆ ಬೆಳೆಯುವ ರೈತರದ್ದೇ ಆಗಿರುತ್ತದೆ. ಈ ಕುರಿತು ನೀವು ಸೂಕ್ಷ್ಮವಾಗಿ ಗಮನಿಸುತ್ತಿರಬೇಕು ಮತ್ತು ಎಚ್ಚರ ವಹಿಸಬೇಕು. ಡ್ಯಾಂಗಳಿಂದ ನೀರು ಹರಿಸಿ ಎಂದು ಒತ್ತಾಯಗಳು ಬರುತ್ತವೆ. ಆದರೆ ಮುಂದಿನ ಜೂನ್‌ವರೆಗೆ ಕುಡಿಯುವ ನೀರನ್ನು ಕಾಪಾಡಿಕೊಳ್ಳಬೇಕಾದ ಅನಿವಾರ್ಯತೆ ನಿಮ್ಮ ಮೇಲಿರುತ್ತದೆ ಎಂಬುದನ್ನು ಮರೆಯಬಾರದು.

1. ಈಗಾಗಲೆ ಶೇ. 82 ರಷ್ಟು ಪ್ರದೇಶದಲ್ಲಿ ಮುಸುಕಿನ ಜೋಳದ ಬಿತ್ತನೆಯಾಗಿದೆ. ಕಬ್ಬು ಶೇ.111 ರಷ್ಟು ಪ್ರದೇಶದಲ್ಲಿ ಬಿತ್ತನೆಯಾಗಿದೆ ಎಂಬುದು ನಿಮ್ಮ ಗಮನದಲ್ಲಿರಲಿ.

2. ಈ ಬಾರಿ ಕಡಿಮೆ ನೀರು ಬಯಸುವ ಬೆಳೆಗಳನ್ನು ಬೆಳೆಯಿರಿ ಎಂದು ರೈತರನ್ನು ಉತ್ತೇಜಿಸಿ

3. 2022 ರಲ್ಲಿ ಅತಿವೃಷ್ಟಿ ಸಂಭವಿಸಿದ್ದ ಕಾರಣ ಅಂತರ್ಜಲದ ಪ್ರಮಾಣ ತೀವ್ರವಾಗಿ ಹೆಚ್ಚಳವಾಗಿತ್ತು. ಕೆರೆ ಕಟ್ಟೆಗಳಲ್ಲಿ ನೀರಿತ್ತು. ಆದರೆ ಈ ವರ್ಷದ ಪರಿಸ್ಥಿತಿ ತೀರಾ ಭಿನ್ನವಾಗಿದೆ. 2025 ರ ಅಕ್ಟೋಬರ್ ತಿಂಗಳಿOದಲೇ ಮಳೆ ಕೈಕೊಟ್ಟಿತು. ಒಣ ಹವೆ ಹೆಚ್ಚಾಯಿತು. ಕೆರೆಕಟ್ಟೆ, ಅಣೆಕಟ್ಟೆಗಳಲ್ಲಿ ಇರಬೇಕಾದಷ್ಟು ನೀರಿಲ್ಲ. 2025 ಕ್ಕೆ ಹೋಲಿಸಿದರೆ 2026 ರಲ್ಲಿ 206 ತಾಲ್ಲೂಕುಗಳ ಅಂತರ್ಜಲವು ಕಡಿಮೆಯಾಗಿದೆ. 88 ತಾಲ್ಲೂಕುಗಳು ರೆಡ್ ಕೆಟಗರಿಯಲ್ಲಿವೆ. 50 ತಾಲ್ಲೂಕುಗಳು ಆರೆಂಜ್ ಕೆಟಗರಿಯಲ್ಲಿವೆ. 68 ತಾಲ್ಲೂಕುಗಳು ಆರೆಂಜ್ ಕೆಟಗರಿಯಲ್ಲಿವೆ.

4. ಸಣ್ಣ ನೀರಾವರಿ ಇಲಾಖೆಯ ಕೆರೆಗಳನ್ನೇ ನೋಡಿದರೂ ಸಹ ಶೇ.50ಕ್ಕಿಂತ ಹೆಚ್ಚಿನ ನೀರಿದ್ದ ಕೆರೆಗಳ ಸಂಖ್ಯೆ ಶೇ.17 ರಷ್ಟು. ಈ ವರ್ಷ ಅದಕ್ಕಿಂತ ಕಡಿಮೆ ನೀರಿದೆ.

5. ಶೇ.30ಕ್ಕಿಂತ ಕಡಿಮೆ ನೀರಿದ್ದ ಶೇ. 20 ರಷ್ಟು ನೀರಿದ್ದವು. ಈ ವರ್ಷ ಈಗಾಗಲೇ ಆ ಪ್ರಮಾಣ ಶೇ. 15ಕ್ಕೆ ಇಳಿದಿದೆ. ಹಾಗಾಗಿ ನೀವು ಪರಿಸ್ಥಿತಿಯ ಕುರಿತು ಅತ್ಯಂತ ಗಂಭೀರವಾಗಿ ಅವಲೋಕಿಸಿ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು.

6. ತುಂಬು ಮಳೆಗಾಲದಲ್ಲಿ ಈಗಾಗಲೆ 733 ಗ್ರಾಮಗಳಲ್ಲಿ 103 ಟ್ಯಾಂಕರುಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ನಗರ ಪ್ರದೇಶಗಳ 114 ವಾರ್ಡ್‌ಗಳಿಗೂ ಸಹ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ.

7. ನಿಮ್ಮ ಮಾಹಿತಿಯ ಪ್ರಕಾರವೇ ಈವರೆಗೆ ಶೇ.86 ರಷ್ಟು ಬಿತ್ತನೆಯಾಗಬೇಕಾದ ಕಡೆ ಶೇ.52 ರಷ್ಟು ಬಿತ್ತನೆಯಾಗಿದೆ. ತೋಟಗಾರಿಕಾ ಬೆಳೆಗಳೂ ಅಷ್ಟೆ. 4.36 ಲಕ್ಷ ಹೆಕ್ಟೇರುಗಳಲ್ಲಿ ಬಿತ್ತನೆಯಾಗಬೇಕಾದ ಕಡೆ ಕೇವಲ 1.53 ಲಕ್ಷ ಹೆಕ್ಟೇರುಗಳಲ್ಲಿ ಮಾತ್ರ ಬಿತ್ತನೆಯಾಗಿದೆ.

8. ಜಾನುವಾರುಗಳ ಮೇವಿನ ಬಗ್ಗೆಯೂ ಅಷ್ಟೆ. ಮೇವು ಖರೀದಿಸಲು ಸಾಧ್ಯವಾಗದಷ್ಟು ಪರಿಸ್ಥಿತಿ ಹದಗೆಡಬಹುದು. ಇಡೀ ದಕ್ಷಿಣ ಭಾರತದಲ್ಲಿ ಎಲ್ಲಿಯೂ ಮೇವು ಸಿಗದೆ ಹೋಗಬಹುದು. ಯಾಕೆಂದರೆ ಎಲ್ಲ ಕಡೆಯೂ ಅಭಾವವಿದೆ. ಮೊದಲೆಲ್ಲ ಅಕ್ಕಪಕ್ಕದ ರಾಜ್ಯಗಳಿಂದ ಮೇವು ಖರೀದಿಸಿ ಮೇವಿನ ಬ್ಯಾಂಕುಗಳನ್ನು ಸ್ಥಾಪಿಸಿ ಗೋಶಾಲೆಗಳನ್ನು ತೆರೆಯಲಾಗುತ್ತಿತ್ತು. ಆದರೆ ಈ ವರ್ಷ ಅದೂ ಸಾಧ್ಯವಾಗದೆ ಹೋಗಬಹುದು ಎಂಬ ಆತಂಕ ನನ್ನದು. ಆದ್ದರಿಂದ ಯಾವ ಯಾವ ರೈತರು ಮೇವಿನ ಕಿಟ್‌ಗಳನ್ನು ಪಡೆದು ಮೇವು ಬೆಳೆಯಲು ಆಸಕ್ತಿ ತೋರಿಸುತ್ತಾರೊ ಅವರಿಗೆ ಪ್ರೋತ್ಸಾಹ ನೀಡಿ.

9. ಅಣೆಕಟ್ಟುಗಳಲ್ಲಿನ, ಕೆರೆ ಕಟ್ಟೆಗಳಲ್ಲಿನ ನೀರನ್ನು ಅತ್ಯಂತ ಎಚ್ಚರಿಕೆಯಿಂದ ಕಾಪಾಡಿಕೊಳ್ಳಿ.

10. ಎಲ್ಲಕ್ಕಿಂತ ಮುಖ್ಯವಾಗಿ ಉದ್ಯೋಗದ ವಿಚಾರ; ಮಳೆಯಾಗಲಿಲ್ಲವೆಂದು ಗ್ರಾಮಗಳನ್ನು ಬಿಟ್ಟು ಗುಳೆ ಹೋಗುವವರ ಪ್ರಮಾಣ ಹೆಚ್ಚಾಗುತ್ತದೆ. ಮೈಗ್ರೇಶನ್ನಿನ ಲೆಗಸಿ ಇರುವ ಗ್ರಾಮಗಳನ್ನು ಗುರುತಿಸಿ ಅಲ್ಲಿ ವಿಬಿ ಜಿ ರಾಮ್ ಜಿ ಯೋಜನೆಯ ಕೆಳಗೆ ಉದ್ಯೋಗ ದೊರೆಯುವಂತೆ ಮಾಡುವ ಮೂಲಕ ವಲಸೆಯನ್ನು ತಪ್ಪಿಸಬಹುದಾಗಿದೆ. ಮುಖ್ಯವಾಗಿ ಕಲ್ಯಾಣ ಕರ್ನಾಟಕದ ಗ್ರಾಮಗಳಲ್ಲಿ ಈ ಸಮಸ್ಯೆ ತೀವ್ರವಾಗಿದೆ ಎಂಬುದು ನಿಮ್ಮ ಗಮನದಲ್ಲಿರಲಿ. ಸಾವಿರಾರು ಮಕ್ಕಳು ಶಾಲೆಗೆ ಹೋಗದೆ ವಲಸೆ ಹೋಗುತ್ತಿದ್ದಾರೆಂದು ಪತ್ರಿಕೆಗಳು ವರದಿ ಮಾಡುತ್ತಿವೆ. ಈ ಕುರಿತು ನಿಗಾವಹಿಸಿ.

11. ರಾಜ್ಯದ ಯಾವ ಜಿಲ್ಲೆಗಳಲ್ಲಿ ವಲಸೆ ಪ್ರಮಾಣ ಹೆಚ್ಚಿದೆಯೊ ಆ ಜಿಲ್ಲೆಗಳಲ್ಲಿ ನೀವು ಸಮರೋಪಾದಿಯಲ್ಲಿ ಉದ್ಯೋಗಗಳನ್ನು ನೀಡುವುದು

ಈ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಯಾವ ಸಮಸ್ಯೆಯಾಗಿದೆ? ಬೆಳಗಾವಿಯಂಥ ಕಡೆ 487 ಗ್ರಾಮ ಪಂಚಾಯತಿಗಳಲ್ಲಿ ಉದ್ಯೋಗ ತೆಗೆದುಕೊಂಡಿದ್ದಾರೆ. ದಕ್ಷಿಣ ಕನ್ನಡದಲ್ಲಿ 208 ಪಂಚಾಯತಿಗಳಲ್ಲಿ ಕೆಲಸ ನಡೆಯುತ್ತಿವೆ. ಕಲಬುರಗಿಯಲ್ಲಿ ಕೇವಲ 98 ಪಂಚಾಯತಿಗಳಲ್ಲಿ, ವಿಜಯಪುರದಲ್ಲಿ ಕೇವಲ 20 ಪಂಚಾಯತಿಗಳಲ್ಲಿ, ರಾಯಚೂರಿನಲ್ಲಿ 59, ಕೊಪ್ಪಳ 58 ರಲ್ಲಿ, ವಿಜಯನಗರದಲ್ಲಿ ಕೇವಲ 7 ರಲ್ಲಿ ಮಾತ್ರ ಉದ್ಯೋಗ ತೆಗೆದುಕೊಳ್ಳಲಾಗಿದೆ.

ಇದೇ ಪರಿಸ್ಥಿತಿ ಮುಂದುವರೆದರೆ ಸರ್ಕಾರ ನಿಮ್ಮನ್ನು ಕ್ಷಮಿಸುವುದಿಲ್ಲ. ಜನರೂ ನಿಮ್ಮನ್ನು ಕ್ಷಮಿಸುವುದಿಲ್ಲ.

1. ಕಲುಷಿತ ನೀರಿನ ಸಮಸ್ಯೆಯಾಗದಂತೆ ಕ್ರಮವಹಿಸಿ.

2. ಬರಗಾಲದ ಸಂದರ್ಭಗಳಲ್ಲಿ ಸಾಂಕ್ರಾಮಿಕ ಕಾಯಿಲೆಗಳು ಹರಡುತ್ತವೆ. ಅವುಗಳ ಕುರಿತು ನಿಗಾವಹಿಸಿ.

3. ಎಲ್ಲಿಯೂ ಸಹ ಬೀಜ, ಗೊಬ್ಬರಗಳಿಗೆ ತೊಂದರೆಯಾಗದಂತೆ ಕ್ರಮವಹಿಸಿ.

4. ಬಿಕ್ಕಟ್ಟಿನ ಕಾಲದಲ್ಲಿ ಮತೀಯ ದ್ವೇಷ, ಹಿಂಸೆಗಳನ್ನು ಹುಟ್ಟು ಹಾಕುವವರು ಹೆಚ್ಚಾಗುತ್ತಾರೆ. ಅದರ ಕುರಿತು ಎಚ್ಚರ ವಹಿಸಿ.

5. ಪತ್ರಿಕೆಗಳು ತಪ್ಪು ವರದಿ ಮಾಡಿದರೆ ಕೂಡಲೆ ಸತ್ಯಾಂಶವೇನೆಂದು ಕೂಡಲೆ ಸ್ಪಷ್ಟೀಕರಣ ನೀಡಬೇಕು.

6. ಎಸ್ ಐ ಆರ್ ಕುರಿತಂತೆ ಸಂವಿಧಾನದ ಆಶಯಗಳನ್ನು ಅರಿತು ಕಾರ್ಯನಿರ್ವಹಿಸಿ. ಒಬ್ಬರು ಅರ್ಹ ಮತದಾರರೂ ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ನೋಡಿಕೊಳ್ಳಿ ಎಂದೂ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+