ಬರಗಾಲ ಎಫೆಕ್ಟ್ ಜನರ ಗುಳೆ ಹೆಚ್ಚಳ: ವಿಬಿ-ಜಿ ರಾಮ್-ಜಿ ಯೋಜನೆಯಡಿ ಕೆಲಸ ಕೊಡಲು ಡಿಸಿಎಂ ಸೂಚನೆ
ಬೆಂಗಳೂರು: ರಾಜ್ಯದಲ್ಲಿ ಬರಗಾಲ ಆವರಿಸಿದ್ದು, ಮುಂದಿನ ಹಲವು ವಾರಗಳ ಕಾಲ ಸಾಕಾಗುವಷ್ಟು ಮೇವು ಇದೆ. ಆದರೆ ಜನರು ಗುಳೆ ಹೋಗುವ ಪ್ರಮಾಣ ಹೆಚ್ಚಾಗಿದೆ. ರಾಜ್ಯದ ಎಲ್ಲ ಜಿಲ್ಲಾ ಪಂಚಾಯತ್ ಸಿಇಒಗಳು ವಿಬಿ-ಜಿ ರಾಮ್-ಜಿ ಯೋಜನೆಯಡಿ ಕೂಡಲೇ ಜನರಿಗೆ ಉದ್ಯೋಗ ನೀಡಬೇಕು ಅಲ್ಲದೇ ಗುಳೆ ಹೋಗುವುದನ್ನು ತಪ್ಪಿಸಲು ಕ್ರಮ ವಹಿಸುವಂತೆ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಅವರು ನಿರ್ದೇಶಿಸಿದರು.
ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ 'ಬರ ಪರಿಸ್ಥಿತಿ, ಕುಡಿಯುವ ನೀರು, ಜಾನುವಾರುಗಳಿಗೆ ಮೇವು, ಕೃಷಿ, ಚಟುವಟಿಕೆ ಹಾಗೂ ಉದ್ಯೋಗ ವಿಷಯಗಳ ಕುರಿತು ಎಲ್ಲಾ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳ ಜೊತೆಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಮಾಹಿತಿ ಪಡೆದರು.

ವಿಜಯಪುರ ತಾಲ್ಲೂಕಿನಲ್ಲಿ ವಿಬಿ-ಜಿ ರಾಮ್ ಜಿ ಯೋಜನೆಯ ಅಡಿ 20 ಗ್ರಾಮ ಪಂಚಾಯಿತಿಗಳಲ್ಲಿ ಮಾತ್ರ ಜನರಿಗೆ ಕೆಲಸ ನೀಡಲಾಗುತ್ತಿದೆ. ಬರಗಾಲದ ಹಿನ್ನೆಲೆಯಲ್ಲಿ ಜನ ಗುಳೆ ಹೋಗುತ್ತಿದ್ದಾರೆ ಎಂದು ವರದಿಯಾಗುತ್ತಿದೆ. ಕೂಡಲೇ ಕೆಲಸ ಆರಂಭಿಸಬೇಕು. ಜನರಿಗೆ ಊರುಗಳಲ್ಲಿ ಕೆಲಸ ನೀಡಿ, ಗುಳೆ ಹೋಗುವುದನ್ನು ತಪ್ಪಿಸಬೇಕು ಎಂದು ಹೇಳಿದರು.
ವಿಬಿ ಜಿ ರಾಮ್ ಜಿ: ಕೆಲಸ ಆರಂಭವಾಗದ್ದಕ್ಕೆ ಡಿಸಿಎಂ ತರಾಟೆ
ವಿಬಿ ಜಿ ರಾಮ್ ಜಿ ಯೋಜನೆಯಡಿ ರಾಜ್ಯದ್ಯಾಂತ ತಿಂಗಳಿಗೆ 1.10 ಕೋಟಿ ಮಾನವ ದಿನಗಳನ್ನು ಸೃಜಿಸಿ, ಪೂರ್ಣಗೊಳಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಈವರೆಗೂ ಕೆಲಸ ಆರಂಭಿಸಿಲ್ಲ. ಹೀಗಾದರೆ ಗುರಿ ಪೂರ್ಣಗೊಳಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಡಿಸಿಎಂ ಪರಮೇಶ್ವರ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಬರ ಇರುವುದರಿಂದ ಜನರಿಗೆ ಉದ್ಯೋಗದ ಅವಶ್ಯಕತೆ ಬಹಳ ಇದೆ. ಎಲ್ಲ ಜಿಲ್ಲಾ ಪಂಚಾಯತ್ ಸಿಇಒಗಳು ವಿಬಿ -ಜಿ ರಾಮ್ ಜಿ ಯೋಜನೆಯಡಿ ಕೂಡಲೇ ಜನರಿಗೆ ಕೆಲಸ ನೀಡಬೇಕು. ಈ ಬಗ್ಗೆ ತ್ವರಿತಗತಿಯಲ್ಲಿ ಕ್ರಮ ವಹಿಸಿ ಎಂದು ಹೇಳಿದರು.
ವಿಬಿ-ಜಿ ರಾಮ್ ಜಿ: ಹಿಂದೆ ಬಿದ್ದ ಜಿಲ್ಲೆಗಳು
ಬಳ್ಳಾರಿ, ಬಾಗಲಕೋಟೆ, ಹಾವೇರಿ, ಚಾಮರಾಜನಗರ, ವಿಜಯಪುರ ಸೇರಿದಂತೆ ಮುಂತಾದ ಜಿಲ್ಲೆಗಳು ವಿಬಿ-ಜಿ ರಾಮ್-ಜಿ-ಯೋಜನೆಯಡಿ ಜನರಿಗೆ ಕೆಲಸ ನೀಡುವಲ್ಲಿ ತೀರ ಹಿಂದೆ ಬಿದ್ದಿವೆ. ಬಹುತೇಕ ಆರಂಭಿಸಿಲ್ಲ. ಚಾಮರಾಜನಗರ ಜಿಲ್ಲೆಯ ಅಂಕಿ-ಅಂಶ ಗಮನಿಸಿದರೆ ಆಶ್ಚರ್ಯವಾಗುತ್ತದೆ. ಜನ ತಮಿಳುನಾಡು, ಬೆಂಗಳೂರಿಗೆ ವಲಸೆ ಹೋಗುತ್ತಿದ್ದಾರೆ. ವಿಬಿ-ಜಿ ರಾಮ್-ಜಿ ಯೋಜನೆಯಡಿ ಏನೆಲ್ಲ ಕೆಲಸಗಳನ್ನು ತೆಗೆದುಕೊಳ್ಳಬಹುದು ಎಂಬುದನ್ನು ಸಾರ್ವಜನಿಕರಿಗೆ ತಿಳಿಸುವ ಕೆಲಸವಾಗಬೇಕು ಎಂದು ಹೇಳಿದರು.
ಸದ್ಯಕ್ಕೆ ಮೇವು ದಾಸ್ತಾನಿದೆ
ಬಹುತೇಕ ಜಿಲ್ಲೆಗಳಲ್ಲಿ 25 ವಾರ, 38 ವಾರ, 54 ವಾರಗಳಿಗೆ ಆಗುವಷ್ಟು ಮೇವು ಸಂಗ್ರಹವಿದೆ ಎಂದೆಲ್ಲ ಮಾಹಿತಿ ನೀಡಲಾಗುತ್ತಿದೆ. ರೈತರ ಬಳಿ ಸಂಗ್ರಹವಿರುವ ಮೇವಿನ ಬಣವೆಗಳನ್ನು ಆಧರಿಸಿ ಸರ್ಕಾರಕ್ಕೆ ಮಾಹಿತಿ ನೀಡುವುದು ಸರಿಯಲ್ಲ. ರೈತರು ಸಂಗ್ರಹಿಸಿರುವುದು ನಮಗೆ ಲಭ್ಯವಾಗುವುದಿಲ್ಲ. ನಿಮ್ಮಲ್ಲಿ ಲಭ್ಯತೆ ಇರುವುದನ್ನು ಮಾತ್ರ ತಿಳಿಸಬೇಕು. ಜಾನವಾರುಗಳಿಗೆ ತಕ್ಷಣಕ್ಕೆ ಮೇವು ಬೇಕು ಎಂದಾಗ ಒದಗಿಸುತ್ತೀರ ಎಂಬುದು ಮುಖ್ಯವಾಗುತ್ತದೆ ಎಂದು ಹೇಳಿದರು.













Click it and Unblock the Notifications