ಐಟಿ ರಿಫಂಡ್ ಎಷ್ಟು ದಿನದಲ್ಲಿ ನಿಮ್ಮ ಖಾತೆಗೆ ಬರುತ್ತೆ? ಈ 5 ತಪ್ಪು ಮಾಡಿದ್ರೆ ರಿಫಂಡ್ ವಿಳಂಬ ಪಕ್ಕಾ!
ಆದಾಯ ತೆರಿಗೆ ರಿಟರ್ನ್ (ಐಟಿಆರ್) ಸಲ್ಲಿಸಿದ ನಂತರ ಬಹುತೇಕ ತೆರಿಗೆದಾರರ ಮನಸ್ಸಿನಲ್ಲಿ ಮೂಡುವ ಮೊದಲ ಪ್ರಶ್ನೆ ಒಂದೇ - ನನ್ನ ತೆರಿಗೆ ರಿಫಂಡ್ ಯಾವಾಗ ಖಾತೆಗೆ ಬರುತ್ತೆ? ಕೆಲ ವರ್ಷಗಳ ಹಿಂದೆ ಈ ಪ್ರಶ್ನೆಗೆ ಉತ್ತರ ಪಡೆಯಲು ತಿಂಗಳುಗಟ್ಟಲೆ ಕಾಯಬೇಕಾಗುತ್ತಿತ್ತು. ಆದರೆ ಈಗ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಆದಾಯ ತೆರಿಗೆ ಇಲಾಖೆಯ ಹೊಸ ತಂತ್ರಜ್ಞಾನ ವ್ಯವಸ್ಥೆಯಿಂದಾಗಿ ಅನೇಕ ತೆರಿಗೆದಾರರು 7ರಿಂದ 10 ಕೆಲಸದ ದಿನಗಳಲ್ಲೇ ತಮ್ಮ ಬ್ಯಾಂಕ್ ಖಾತೆಗೆ ರಿಫಂಡ್ ಪಡೆಯುತ್ತಿದ್ದಾರೆ.
ಆದರೆ ಎಲ್ಲರಿಗೂ ಇದೇ ವೇಗದಲ್ಲಿ ಹಣ ಬರುವುದಿಲ್ಲ. ಕೆಲವರಿಗೆ ಇನ್ನೂ 4ರಿಂದ 5 ವಾರಗಳು, ಕೆಲವೊಮ್ಮೆ ಅದಕ್ಕಿಂತಲೂ ಹೆಚ್ಚು ಸಮಯ ಕಾಯಬೇಕಾಗಬಹುದು.

ಯಾವಾಗ ಪ್ರಾರಂಭವಾಗುತ್ತದೆ ರಿಫಂಡ್ ಪ್ರಕ್ರಿಯೆ?
ಐಟಿಆರ್ ಸಲ್ಲಿಸಿದ ತಕ್ಷಣ ರಿಫಂಡ್ ಬರೋದಿಲ್ಲ. ಮೊದಲು ತೆರಿಗೆದಾರರು ತಮ್ಮ ರಿಟರ್ನ್ ಅನ್ನು ʼಇ-ವೆರಿಫೈ (e-Verify)ʼ ಮಾಡಬೇಕು. ಈ ಪ್ರಕ್ರಿಯೆ ಪೂರ್ಣಗೊಂಡ ನಂತರವೇ ಆದಾಯ ತೆರಿಗೆ ಇಲಾಖೆ ರಿಫಂಡ್ ಪ್ರಕ್ರಿಯೆಯನ್ನು ಆರಂಭಿಸುತ್ತದೆ.
ತೆರಿಗೆ ಇಲಾಖೆಯ ಮಾಹಿತಿಯ ಪ್ರಕಾರ, ಸಾಮಾನ್ಯವಾಗಿ ಇ-ವೆರಿಫಿಕೇಶನ್ ಪೂರ್ಣಗೊಂಡ ಬಳಿಕ 4ರಿಂದ 5 ವಾರಗಳಲ್ಲಿ ರಿಫಂಡ್ ಜಮೆಯಾಗುತ್ತದೆ. ಆದರೆ ದಾಖಲೆಗಳು ಸರಿಯಾಗಿದ್ದರೆ ಈಗ ಬಹುತೇಕ ಪ್ರಕರಣಗಳಲ್ಲಿ ಹಣ ಇನ್ನೂ ಬೇಗ ಬರುತ್ತದೆ.
ರಿಫಂಡ್ ಬೇಗ ಬರಲು ಕಾರಣವೇನು?
ಕಳೆದ ಕೆಲವು ವರ್ಷಗಳಲ್ಲಿ ಆದಾಯ ತೆರಿಗೆ ಇಲಾಖೆಯ ಸಂಪೂರ್ಣ ವ್ಯವಸ್ಥೆ ಡಿಜಿಟಲ್ ಆಗಿದೆ. ಈಗ ಇಲಾಖೆ AIS (Annual Information Statement), TIS (Taxpayer Information Summary), Form 26AS, Pre-filled ITR, TDS ಮಾಹಿತಿ, ಬ್ಯಾಂಕ್, ಕಂಪನಿಗಳು, ಷೇರು ಬ್ರೋಕರ್‌ಗಳು ಸೇರಿದಂತೆ ವಿವಿಧ ಮೂಲಗಳಿಂದ ಬರುವ ಮಾಹಿತಿಯನ್ನು ಸ್ವಯಂಚಾಲಿತವಾಗಿ ಪರಿಶೀಲಿಸುತ್ತದೆ. ನೀವು ನೀಡಿದ ಮಾಹಿತಿಯೂ ಇಲಾಖೆಯ ದಾಖಲೆಗಳೂ ಒಂದಕ್ಕೊಂದು ಹೊಂದಿದರೆ ನಿಮ್ಮ ರಿಫಂಡ್ ಬೇಗನೆ ಮಂಜೂರಾಗುತ್ತದೆ.
ಆದರೆ ಈ ತಪ್ಪು ಮಾಡಬೇಡಿ
ಸಲ್ಲಿಕೆ ಮಾಡುವಾಗ ತಪ್ಪುಗಳನ್ನು ಮಾಡಿದರೆ ರಿಫಂಡ್ ತಡವಾಗಬಹುದು. ತೆರಿಗೆ ತಜ್ಞರ ಪ್ರಕಾರ, ಕೆಲವು ಸಾಮಾನ್ಯ ತಪ್ಪುಗಳಿಂದಲೇ ರಿಫಂಡ್ ವಿಳಂಬವಾಗುತ್ತದೆ.
* ಎಐಎಸ್ ಮತ್ತು ಐಟಿಆರ್ ಮಾಹಿತಿಯಲ್ಲಿ ವ್ಯತ್ಯಾಸ ಇರುವುದು
* ಟಿಡಿಎಸ್ ವಿವರಗಳು ಸರಿಯಾಗಿ ಹೊಂದಿಕೆಯಾಗದಿರುವುದು
* ಬ್ಯಾಂಕ್ ಖಾತೆ ಸಂಖ್ಯೆ ಅಥವಾ IFSC ಕೋಡ್ ತಪ್ಪಾಗಿರುವುದು
* ಬಂಡವಾಳ ಲಾಭ (Capital Gains) ಸರಿಯಾಗಿ ಘೋಷಿಸದಿರುವುದು
* ವಿದೇಶಿ ಆದಾಯ ಇದ್ದರೆ ಅದನ್ನು ನಮೂದಿಸದೇ ಬಿಡುವುದು
* ಐಟಿಆರ್ ಸಲ್ಲಿಸಿದ ಬಳಿಕ ಇ-ವೆರಿಫೈ ಮಾಡದಿರುವುದು
ಈ ರೀತಿಯ ತಪ್ಪುಗಳು ಕಂಡುಬಂದರೆ ಇಲಾಖೆ ಹೆಚ್ಚುವರಿ ಪರಿಶೀಲನೆ ನಡೆಸುವುದರಿಂದ ರಿಫಂಡ್ ತಡವಾಗಬಹುದು.
ಎಲ್ಲರಿಗೂ 7-10 ದಿನದಲ್ಲಿ ರಿಫಂಡ್ ಸಿಗುತ್ತಾ? ಇಲ್ಲ. ಕೆಲವು ರಿಟರ್ನ್‌ಗಳನ್ನು ಆದಾಯ ತೆರಿಗೆ ಇಲಾಖೆಯ ರಿಸ್ಕ್ ಮ್ಯಾನೇಜ್‌ಮೆಂಟ್ ಫ್ರೇಮ್‌ವರ್ಕ್ (RMF) ವಿಶೇಷ ಪರಿಶೀಲನೆಗೆ ಆಯ್ಕೆ ಮಾಡುತ್ತದೆ. ಆದಾಯವನ್ನು ಕಡಿಮೆ ತೋರಿಸಿರುವ ಅನುಮಾನ, ಮಾಹಿತಿ ಅಪೂರ್ಣವಾಗಿರುವುದು ಅಥವಾ ತೆರಿಗೆ ವಂಚನೆ ಸಾಧ್ಯತೆ ಕಂಡುಬಂದರೆ ರಿಟರ್ನ್ ಹೆಚ್ಚಿನ ಪರಿಶೀಲನೆಗೆ ಒಳಗಾಗುತ್ತದೆ. ಇಂತಹ ಸಂದರ್ಭಗಳಲ್ಲಿ ರಿಫಂಡ್ ಬರಲು ಹೆಚ್ಚು ಸಮಯ ಹಿಡಿಯಬಹುದು.
ರಿಫಂಡ್ ಬರದಿದ್ದರೆ ಏನು ಮಾಡಬೇಕು?
ನೀವು ಇ-ವೆರಿಫೈ ಮಾಡಿದ ನಂತರವೂ ನಿಗದಿತ ಅವಧಿಯಲ್ಲಿ ರಿಫಂಡ್ ಬರದಿದ್ದರೆ ಮೊದಲು ಈ ಕ್ರಮಗಳನ್ನು ಅನುಸರಿಸಿ.
* ಆದಾಯ ತೆರಿಗೆ ಇಲಾಖೆಯಿಂದ ಯಾವುದೇ ಇ-ಮೇಲ್ ಅಥವಾ ಸೂಚನೆ ಬಂದಿದೆಯೇ ಎಂದು ಪರಿಶೀಲಿಸಿ.
* ಇ-ಫೈಲಿಂಗ್ ಪೋರ್ಟಲ್‌ನಲ್ಲಿ ರಿಫಂಡ್ ಸ್ಟೇಟಸ್ ಪರಿಶೀಲಿಸಿ.
* ಯಾವುದೇ ದೋಷ ಕಂಡುಬಂದರೆ ಅದನ್ನು ಸರಿಪಡಿಸಿ.
* ಅಗತ್ಯವಿದ್ದರೆ ರಿಫಂಡ್ ರಿ ಇಶ್ಯೂ ರಿಕ್ವೆಸ್ಟ್ ಸಲ್ಲಿಸಿ. ಈ ವಿನಂತಿ ಸಲ್ಲಿಸಿದ ಬಳಿಕ ಸಾಮಾನ್ಯವಾಗಿ 7ರಿಂದ 10 ದಿನಗಳಲ್ಲಿ ರಿಫಂಡ್ ಖಾತೆಗೆ ಜಮೆಯಾಗಬಹುದು.
ಏನು ನೆನಪಿಟ್ಟುಕೊಳ್ಳಬೇಕು?
ಈಗ ಆದಾಯ ತೆರಿಗೆ ಇಲಾಖೆಯ ವ್ಯವಸ್ಥೆ ಹಿಂದೆಂದಿಗಿಂತ ಹೆಚ್ಚು ವೇಗವಾಗಿ ಮತ್ತು ತಂತ್ರಜ್ಞಾನ ಆಧಾರಿತವಾಗಿ ಕೆಲಸ ಮಾಡುತ್ತಿದೆ. ಆದರೆ ರಿಫಂಡ್ ಬೇಗ ಬರಬೇಕಾದರೆ ತೆರಿಗೆದಾರರೂ ಅಷ್ಟೇ ಎಚ್ಚರಿಕೆಯಿಂದ ಮಾಹಿತಿಯನ್ನು ಸಲ್ಲಿಸಬೇಕು.
ಎಐಎಸ್, ಟಿಡಿಎಸ್, ಬ್ಯಾಂಕ್ ಖಾತೆ ವಿವರಗಳು ಹಾಗೂ ಇತರೆ ಮಾಹಿತಿಗಳನ್ನು ಸರಿಯಾಗಿ ಪರಿಶೀಲಿಸಿ, ಸಮಯಕ್ಕೆ ಇ-ವೆರಿಫೈ ಮಾಡಿದರೆ ಹೆಚ್ಚಿನ ಸಂದರ್ಭಗಳಲ್ಲಿ ಕೆಲವೇ ದಿನಗಳಲ್ಲಿ ತೆರಿಗೆ ರಿಫಂಡ್ ನಿಮ್ಮ ಬ್ಯಾಂಕ್ ಖಾತೆಗೆ ಜಮೆಯಾಗುವ ಸಾಧ್ಯತೆ ಇದೆ.
(ಬರಹ: ಭವಾನಿ ಭಟ್)














Click it and Unblock the Notifications