Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್‌ಗೆ ಸೂರ್ಯ ಸವಾಲು
T20 World Cup 2026 Final: ಟಿ20 ವಿಶ್ವಕಪ್ ಫೈನಲ್ 2026ರ ಪಂದ್ಯವು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದ್ದು, ಭಾರತ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಮುಖಾಮುಖಿಯಾಗಲಿವೆ. ಇದಕ್ಕೂ ನಡೆದ ಪತ್ರಿಕಾಗೋಷ್ಠಿಯಲ್ಲಿ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರು ನ್ಯೂಜಿಲೆಂಡ್ ಕ್ಯಾಪ್ಟನ್ ಮಿಚೆಲ್ ಸ್ಯಾಂಟ್ನರ್ ಸೈಲೆಂಟ್ ಹೇಳಿಕೆಗೆ ನಗುತ್ತಲೇ ತಿರುಗೇಟು ಕೊಟ್ಟು ಅಭಿಮಾನಿಗಳ ಗಮನ ಸೆಳೆದಿದ್ದಾರೆ.
ಫೈನಲ್ ಪಂದ್ಯದ ಒತ್ತಡದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಅವರು, "ಒತ್ತಡವಿಲ್ಲದಿದ್ದರೆ ಮಜಾ ಇಲ್ಲ" ಎಂದು ನಗುತ್ತಲೇ ಉತ್ತರಿಸಿದರು. ಅಲ್ಲದೆ, ತಂಡದಲ್ಲಿ ಉತ್ತಮ ವಾತಾವರಣವಿದ್ದು, ಆಟಗಾರರು ಉತ್ಸುಕರಾಗಿದ್ದಾರೆ ಎಂದು ಅವರು ತಿಳಿಸಿದರು. ಇದೇ ವೇಳೆ ನ್ಯೂಜಿಲೆಂಡ್ ತಂಡದ ಕ್ಯಾಪ್ಟನ್ ಸ್ಯಾಂಟ್ನರ್ ಅಭಿಮಾನಿಗಳನ್ನು ಸೈಲೆಂಟ್ ಮಾಡುತ್ತೇವೆ ಎಂಬ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ನ್ಯೂಜಿಲ್ಯಾಂಡ್ ನಾಯಕ ಮಿಚೆಲ್ ಸ್ಯಾಂಟ್ನರ್ ಅವರು, 2023ರ ಏಕದಿನ ವಿಶ್ವಕಪ್ ಫೈನಲ್ ಸಂದರ್ಭದಲ್ಲಿ ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ ನೀಡಿದ್ದ ಹೇಳಿಕೆಯನ್ನು ಪುನರುಚ್ಚರಿಸಿದರು. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಸೇರುವ ಲಕ್ಷಾಂತರ ಅಭಿಮಾನಿಗಳನ್ನು ಮೌನವಾಗಿಸುವುದೇ ನಮ್ಮ ಗುರಿ ಎಂದು ಸ್ಯಾಂಟ್ನರ್ ಹೇಳಿದ್ದಾರೆ. ಅಲ್ಲದೆ, ಟ್ರೋಫಿ ಗೆಲ್ಲಲು ತಾವು ಭಾರತೀಯ ಅಭಿಮಾನಿಗಳ ಹೃದಯವನ್ನು ಒಡೆಯಲು ಕೂಡ ಹಿಂಜರಿಯುವುದಿಲ್ಲ ಎಂಬರ್ಥದಲ್ಲಿ ಮಾತನಾಡಿದ್ದಾರೆ.
'ಏನಾದರೂ ಹೊಸದಾಗಿ ಪ್ರಯತ್ನಿಸಲಿ'
ಸ್ಯಾಂಟ್ನರ್ ಅವರ ಈ "ಹೃದಯ ಒಡೆಯುವ" ಮತ್ತು "ಪ್ರೇಕ್ಷಕರನ್ನು ಮೌನವಾಗಿಸುವ" ಹೇಳಿಕೆಗೆ ಸೂರ್ಯಕುಮಾರ್ ಯಾದವ್ ತಮ್ಮದೇ ಶೈಲಿಯಲ್ಲಿ ತಮಾಷೆಯಾಗಿ ಸಾವಾಲು ಹಾಕಿದರು. "ಎಲ್ಲರೂ ಒಂದೇ ರೀತಿಯ ಮಾತುಗಳನ್ನೇ ಆಡುತ್ತಿದ್ದಾರೆ, ಏನಾದರೂ ಹೊಸದಾಗಿ ಪ್ರಯತ್ನಿಸಲಿ" ಎಂದು ಹೇಳುವ ಮೂಲಕ ಗಮನ ಸೆಳೆದಿದ್ದಾರೆ.
2023ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮಿನ್ಸ್ ಇದೇ ರೀತಿಯ ಹೇಳಿಕೆಯನ್ನು ನೀಡಿದ್ದರು. ಭಾರತೀಯ ಅಭಿಮಾನಿಗಳಿಂದ ತುಂಬಿರುವ ಸ್ಟೇಡಿಯಂ ಅನ್ನು ಮೌನಗೊಳಿಸುವುದೇ ತಮ್ಮ ಉದ್ದೇಶ ಎಂದು ಕಮಿನ್ಸ್ ಹೇಳಿದ್ದರು ಮತ್ತು ಅವರು ಅಂದು ಆಸ್ಟ್ರೇಲಿಯಾವನ್ನು ಗೆಲ್ಲಿಸುವ ಮೂಲಕ ಅದನ್ನು ಸಾಬೀತುಪಡಿಸಿದ್ದರು.
ಆಸ್ಟ್ರೇಲಿಯಾ ತಂತ್ರ ಬಳಸಿದ ಸ್ಯಾಂಟ್ನರ್
ಈಗ ಸ್ಯಾಂಟ್ನರ್ ಕೂಡ ಅದೇ ತಂತ್ರವನ್ನು ಬಳಸಲು ಮುಂದಾಗಿದ್ದಾರೆ. ತವರಿನ ಬೆಂಬಲವಿಲ್ಲದಂತೆ ಮಾಡುವುದು ಎದುರಾಳಿ ತಂಡಗಳ ಹಳೆಯ ತಂತ್ರ. ಲಕ್ಷಾಂತರ ಅಭಿಮಾನಿಗಳನ್ನು ಮೌನಗೊಳಿಸುವುದು ಎದುರಾಳಿ ಆಟಗಾರರ ಆತ್ಮವಿಶ್ವಾಸವನ್ನು ಕುಗ್ಗಿಸುವ ಒಂದು ಮಾರ್ಗವಾಗಿದೆ. 2023ರ ಕಹಿ ನೆನಪನ್ನು ಭಾರತೀಯ ತಂಡ ಮರೆತಿದೆ ಎಂದು ಹೇಳಲಾಗದು. ಸ್ಯಾಂಟ್ನರ್ ಈ ಮಾತನ್ನು ಹೇಳುವ ಮೂಲಕ ಪರೋಕ್ಷವಾಗಿ ಭಾರತೀಯ ತಂಡದ ಮೇಲೆ ಒತ್ತಡವನ್ನು ಹೇರಲು ಪ್ರಯತ್ನಿಸುತ್ತಿದ್ದಾರೆ.
ಸ್ಯಾಂಟ್ನರ್ ತಂತ್ರಕ್ಕೆ ಸೂರ್ಯ ಕೌಂಟರ್
ಸ್ಯಾಂಟ್ನರ್ ಅವರ 'ಪ್ರೇಕ್ಷಕರನ್ನು ಮೌನಗೊಳಿಸುವ' ಹೇಳಿಕೆಯ ಬಗ್ಗೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸೂರ್ಯಕುಮಾರ್ ಯಾದವ್, ತುಂಬಾ ಶಾಂತವಾಗಿ ಮತ್ತು ಲವಲವಿಕೆಯಿಂದ ಉತ್ತರಿಸಿದರು. "ಎದುರಾಳಿ ತಂಡಗಳು ಕೇವಲ ಒಂದೇ ರೀತಿಯ ಹೇಳಿಕೆಗಳನ್ನು ನೀಡುತ್ತಿವೆ. ಇದು ಈಗ ಒಂದು ಟ್ರೆಂಡ್ ಆಗಿಬಿಟ್ಟಿದೆ" ಎಂದು ಸೂರ್ಯಕುಮಾರ್ ಅವರು ವ್ಯಂಗ್ಯವಾಡಿದರು. ಈ ಮೂಲಕ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ ನೋಡೋಣ ಎನ್ನುವ ರೀತಿಯಲ್ಲಿ ಕೌಂಟರ್ ಕೊಟ್ಟಿದ್ದಾರೆ.
ಒತ್ತಡದ ಜೊತೆ, ಉತ್ಸಾಹವೂ ಇದೆ: ಎಸ್‌ಕೆವೈ
2026ರ ಟಿ20 ವಿಶ್ವಕಪ್‌ನಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಎರಡನೇ ಆಟಗಾರನಾಗಿರುವ ಭಾರತೀಯ ನಾಯಕ, ಈ ಫೈನಲ್ ಪಂದ್ಯದಲ್ಲಿ ತಮ್ಮ ಮೇಲೆ ಒತ್ತಡವಿರುವುದನ್ನು ಮುಚ್ಚುಮರೆಯಿಲ್ಲದೆ ಒಪ್ಪಿಕೊಂಡರು. "ಆದರೆ, ಈ ಮಹತ್ವದ ಪಂದ್ಯದಲ್ಲಿ ಒತ್ತಡಕ್ಕೆ ಮಣಿಯುವ ಬದಲು ಆನಂದಿಸುವುದು ಮುಖ್ಯ ಮತ್ತು ಇದರಲ್ಲಿ ಸಂದರ್ಭಕ್ಕೆ ತಕ್ಕಂತೆ ಅತ್ಯುತ್ತಮ ಪ್ರದರ್ಶನ ನೀಡಲು ಪ್ರಯತ್ನಿಸುತ್ತೇವೆ," ಎಂದು ಅವರು ತಿಳಿಸಿದರು.
"ಒಬ್ಬ ನಾಯಕನಾಗಿ ಒತ್ತಡ ಇರುತ್ತದೆ, ಅದನ್ನು ನಾನು ನಿರಾಕರಿಸಲು ಸಾಧ್ಯವಿಲ್ಲ. ಖಂಡಿತವಾಗಿಯೂ ಹೆಚ್ಚುವರಿ ಒತ್ತಡ ಇದ್ದೇ ಇರುತ್ತದೆ, ಅದರಲ್ಲೂ ವಿಶೇಷವಾಗಿ ಭಾರತದಲ್ಲಿ ವಿಶ್ವಕಪ್ ಫೈನಲ್ ಆಡುತ್ತಿರುವ ಬಗ್ಗೆ ಒಂದು ರೀತಿಯ ಉತ್ಸಾಹವೂ ಇದೆ," ಎಂದು ಸೂರ್ಯಕುಮಾರ್ ಹೇಳಿದರು.
ಈ ಟಿ20 ವಿಶ್ವಕಪ್‌ನಲ್ಲಿ ನ್ಯೂಜಿಲ್ಯಾಂಡ್ ಆಡಿದ ಪಂದ್ಯಗಳನ್ನು ತಾವು ದೂರದರ್ಶನದಲ್ಲಿ ನೋಡಿಲ್ಲ. ನ್ಯೂಜಿಲ್ಯಾಂಡ್ ಅತ್ಯಂತ ಬಲಿಷ್ಠ ತಂಡ ಎಂಬುದರಲ್ಲಿ ಸಂಶಯವಿಲ್ಲ, ಆದರೆ, ಯಾವುದೇ ಪರಿಸ್ಥಿತಿಯನ್ನು ಎದುರಿಸಲು ತಮ್ಮ ತಂಡ ಸಂಪೂರ್ಣವಾಗಿ ಸಜ್ಜಾಗಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಹೇಳುವುದಾದರೆ, ಸೂರ್ಯಕುಮಾರ್ ಯಾದವ್ ಅವರ ಈ ಮಾತುಗಳು, ಎದುರಾಳಿ ತಂಡದ ಆಟದ ಬಗ್ಗೆ ತಲೆಕೆಡಿಸಿಕೊಳ್ಳುವ ಬದಲು ತಮ್ಮ ತಂಡದ ಪ್ರದರ್ಶನದ ಮೇಲೆ ಹೆಚ್ಚು ಗಮನ ಹರಿಸುತ್ತಿದ್ದಾರೆ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ.












Click it and Unblock the Notifications