Viral: ವಿಧಾನಸೌಧದ ಎದುರೇ ವಲಸಿಗರ ಮಾರಾಮಾರಿ ವಿಡಿಯೋ ವೈರಲ್‌, ಪೊಲೀಸ್ರು ನಿದ್ದೆ ಮಾಡ್ತಿದ್ರಾ? ಎಂದು ಪಬ್ಲಿಕ್‌ ಕ್ಲಾಸ್‌

ಬೆಂಗಳೂರು: ಸಿಲಿಕಾನ್ ಸಿಟಿಯ ಅತ್ಯಂತ ಸುರಕ್ಷಿತ ಹಾಗೂ ಶಕ್ತಿ ಕೇಂದ್ರ ಎಂದೇ ಪರಿಗಣಿಸಲಾಗುವ ವಿಧಾನಸೌಧದ ಮುಂಭಾಗದಲ್ಲೇ ಭಾರಿ ಹೈಡ್ರಾಮಾ ನಡೆದಿದೆ. ನೇಪಾಳದಿಂದ ಬೆಂಗಳೂರಿಗೆ ವಲಸೆ ಬಂದಿರುವ ಯುವಕರ ಎರಡು ಗುಂಪುಗಳ ನಡುವೆ ಭೀಕರ ಮಾರಾಮಾರಿ ನಡೆದಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ. ವಿಧಾನಸೌಧದ ಬಳಿ ಪೊಲೀಸರ ಕಣ್ಣೆದುರಲ್ಲೇ ಈ ಘಟನೆ ನಡೆದಿರುವುದು ಸ್ಥಳೀಯರ ಆಕ್ರೋಶಕ್ಕೂ ಕಾರಣವಾಗಿದೆ. ಈ ಹಿಂದೆಯೂ ವಿಧಾನಸೌಧದ ಎದುರು ವಲಸಿಗರ ಫೈಟಿಂಗ್‌ ನಡೆದಿತ್ತು.

ವೈರಲ್‌ ವಿಡಿಯೋದಲ್ಲೇನಿದೆ?

ಪ್ರವಾಸ ಅಥವಾ ವೈಯಕ್ತಿಕ ಕಾರಣಗಳಿಗಾಗಿ ವಿಧಾನಸೌಧದ ಮುಂಭಾಗಕ್ಕೆ ಬಂದಿದ್ದ ನೇಪಾಳಿ ಯುವಕರ ಎರಡು ಗುಂಪುಗಳ ನಡುವೆ ಮೊದಲಿಗೆ ಸಣ್ಣದಾಗಿ ಮಾತಿನ ಚಕಮಕಿ ಆರಂಭವಾಗಿದೆ. ಕ್ಷುಲ್ಲಕ ಕಾರಣಕ್ಕೆ ಶುರುವಾದ ಈ ಗಲಾಟೆ ಕೆಲವೇ ನಿಮಿಷಗಳಲ್ಲಿ ವಿಕೋಪಕ್ಕೆ ತಿರುಗಿದೆ. ಸಿಟ್ಟಿಗೆದ್ದ ಯುವಕರು ಪರಸ್ಪರ ಕೆಟ್ಟ ಪದಗಳಿಂದ ನಿಂದಿಸಿಕೊಳ್ಳುತ್ತಾ, ಸಾರ್ವಜನಿಕ ರಸ್ತೆಯಲ್ಲೇ ಕೈಕೈ ಮಿಲಾಯಿಸಲು ಆರಂಭಿಸಿದ್ದಾರೆ.

Vidhana Soudha

ಮಾತಿನ ಜಗಳ ತಾರಕಕ್ಕೇರುತ್ತಿದ್ದಂತೆ ಇಬ್ಬರ ನಡುವಿನ ಜಗಳ ಗುಂಪು ಘರ್ಷಣೆಯಾಗಿ ಮಾರ್ಪಟ್ಟಿದೆ. ರಸ್ತೆಯಲ್ಲೇ ಪರಸ್ಪರ ಕಾಲಿನಿಂದ ಒದೆಯುವುದು, ಮುಷ್ಟಿಯಿಂದ ಗುದ್ದುವುದು ಹಾಗೂ ಒಬ್ಬರ ಮೇಲೊಬ್ಬರು ಮುಗಿಬಿದ್ದು ಮನಸೋಇಚ್ಛೆ ಥಳಿಸಿಕೊಳ್ಳುವ ದೃಶ್ಯಗಳು ಅಲ್ಲಿ ನೆರೆದಿದ್ದ ಸಾರ್ವಜನಿಕರ ಮೊಬೈಲ್ ಕ್ಯಾಮೆರಾಗಳಲ್ಲಿ ಸೆರೆಯಾಗಿವೆ. ಹಗಲು ಹೊತ್ತಿನಲ್ಲೇ, ಅದೂ ರಾಜ್ಯದ ಶಕ್ತಿ ಕೇಂದ್ರದ ಮುಂಭಾಗದಲ್ಲೇ ಇಂತಹ ಘಟನೆ ನಡೆದಿದ್ದರಿಂದ ಸ್ಥಳದಲ್ಲಿದ್ದ ಸಾರ್ವಜನಿಕರು ಮತ್ತು ಪ್ರವಾಸಿಗರು ಕೆಲಕಾಲ ದಿಕ್ಕೆಟ್ಟು ಓಡಿದ್ದಾರೆ.

ಕರ್ನಾಟಕದಿಂದ ಕೇರಳಕ್ಕೂ ವಲಸೆ ಬರುತ್ತಿದ್ದಾರೆ, ವಲಸೆ ಸಾಮಾನ್ಯ: ಗ್ರೇಟ್ ಕೇರಳ ಟ್ವೀಟ್
ಕರ್ನಾಟಕದಿಂದ ಕೇರಳಕ್ಕೂ ವಲಸೆ ಬರುತ್ತಿದ್ದಾರೆ, ವಲಸೆ ಸಾಮಾನ್ಯ: ಗ್ರೇಟ್ ಕೇರಳ ಟ್ವೀಟ್

ಈ ರಸ್ತೆ ಜಗಳದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಸುರಕ್ಷತೆಯ ಬಗ್ಗೆ ಸಾರ್ವಜನಿಕರು ಪ್ರಶ್ನೆ ಎತ್ತುವಂತೆ ಮಾಡಿದೆ. ಬೆಂಗಳೂರಿನಲ್ಲಿ ನಿಜಕ್ಕೂ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆಯೇ? ಎಂದು ನಗರದ ನಿವಾಸಿಗಳು ಪ್ರಶ್ನೆ ಮುಂದಿಟ್ಟಿದ್ದಾರೆ. ಹೊರರಾಜ್ಯದಿಂದ ಬಂದಿರುವ ವಲಸಿಗರಿಗೆ ಇಲ್ಲಿನ ಕಾನೂನು ಭಯ ಇಲ್ಲದಂತಹ ವ್ಯವಸ್ಥೆಯನ್ನ ಸರ್ಕಾರವೇ ಮಾಡಿದೆಯೇ? ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ನೇಪಾಳಿ ಯುವಕರ ರಂಪಾಟ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ, ಇಂಟರ್ನೆಟ್‌ನಲ್ಲಿ ಸಾರ್ವಜನಿಕರ ಆಕ್ರೋಶ ಸ್ಫೋಟಗೊಂಡಿದೆ. ಬೆಂಗಳೂರಿನ ಕಾನೂನು ಸುವ್ಯವಸ್ಥೆ ಮತ್ತು ವಲಸಿಗರ ಅತಿರೇಕದ ವರ್ತನೆಯ ವಿರುದ್ಧ ನೆಟ್ಟಿಗರು ಕಮೆಂಟ್ ಮಾಡುವ ಮೂಲಕ ತಮ್ಮ ಆಕ್ರೋಶ ಹೊರಹಾಕುತ್ತಿದ್ದಾರೆ.

ಕನ್ನಡಿಗರಿಂದ ಸರ್ಕಾರಕ್ಕೆ ಕ್ಲಾಸ್‌

"ಇವರೆಲ್ಲಾ ಬದುಕು ಕಟ್ಟಿಕೊಳ್ಳಲು ಬೇರೆ ದೇಶ, ರಾಜ್ಯಗಳಿಂದ ನಮ್ಮೂರಿಗೆ ಬರುತ್ತಾರೆ. ಆದರೆ ಇಂತಹ ಕೃತ್ಯಗಳು ಇಡೀ ವ್ಯವಸ್ಥೆಗೆ ದೊಡ್ಡ ಕಪ್ಪುಚುಕ್ಕೆಯಾಗಿ ಪರಿಣಮಿಸುತ್ತವೆ" ಎಂದು ಬೇಸರ ವ್ಯಕ್ತಪಡಿಸಿದರೆ, ಮತ್ತೊಬ್ಬರು, "ಉತ್ತರ ಮತ್ತು ಈಶಾನ್ಯ ಭಾಗಗಳಿಂದ ನಗರಕ್ಕೆ ಹರಿದುಬರುತ್ತಿರುವ ಮಿತಿಮೀರಿದ ವಲಸೆಯನ್ನು ತಕ್ಷಣವೇ ನಿಯಂತ್ರಿಸಬೇಕಾಗಿದೆ. ಈ ವಲಸಿಗರಿಂದಾಗಿ ನಾವು ನಮ್ಮ ನೆಮ್ಮದಿಯನ್ನು ಕಳೆದುಕೊಂಡು ಬಹಳ ಕಾಲವಾಯಿತು" ಎಂದು ಬೆಂಗಳೂರಿನ ಜನಸಂಖ್ಯೆ ಮತ್ತು ಭದ್ರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

'ಗಾರ್ಡನ್ ಸಿಟಿ' ಈಗ 'ಗೂಂಡಾ ಸಿಟಿ' ಆಯಿತೇ?

ನಗರದ ಭದ್ರತೆಯ ಬಗ್ಗೆ ಸರ್ಕಾರದ ವಿರುದ್ಧ ಹರಿಹಾಯ್ದಿರುವ ನೆಟ್ಟಿಗರೊಬ್ಬರು, "ನಮ್ಮ ಗೃಹ ಸಚಿವರು ಆರ್‌ಎಸ್‌ಎಸ್ (RSS) ನೋಂದಣಿ ಪ್ರಕ್ರಿಯೆಯಲ್ಲಿ ಬ್ಯುಸಿಯಾಗಿದ್ದಾರೆ. ಇತ್ತ ಒಮ್ಮೆ ಕಣ್ಣೆತ್ತಿ ನೋಡಿ, ನಮ್ಮ ಹೆಮ್ಮೆಯ ಉದ್ಯಾನ ನಗರಿ ಈಗ ಗೂಂಡಾಗಳ ನಗರವಾಗಿ (Goonda City) ಬದಲಾಗುತ್ತಿದೆ" ಎಂದು ಆಡಳಿತ ವ್ಯವಸ್ಥೆಯನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.

ಅತ್ಯಂತ ಸುರಕ್ಷಿತ ವಲಯದಲ್ಲೇ ಈ ಘಟನೆ ನಡೆದಿರುವುದಕ್ಕೆ ಆಶ್ಚರ್ಯ ವ್ಯಕ್ತಪಡಿಸಿರುವ ಸಾರ್ವಜನಿಕರು, "ಅದೂ ವಿಧಾನಸೌಧದ ಮುಂಭಾಗದಲ್ಲೇ ಈ ತರಹ ಆಗಬೇಕಾ? ಅಲ್ಲಿ ಕಾವಲು ಕಾಯುವ ಪೊಲೀಸರು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕುಳಿತಿದ್ದಾರಾ? ಏನು ಮಾಡುತ್ತಿದ್ದಾರೆ ನಮ್ಮ ಪೊಲೀಸರು?" ಎಂದು ಭದ್ರತಾ ಲೋಪವನ್ನು ಪ್ರಶ್ನಿಸಿದ್ದಾರೆ.

"ವಿಧಾನಸೌಧದ ಮುಂಭಾಗದಂತಹ ಪ್ರಮುಖ ಫೋಟೋ ಪಾಯಿಂಟ್‌ಗಳಲ್ಲಿ ಕಾಯಂ ಆಗಿ ಕಠಿಣ ಪೊಲೀಸ್ ಗಸ್ತು ಇರಬೇಕು. ಈ ಕಾಲದ ಪುಂಡರು ಕೇವಲ ಸೋಶಿಯಲ್ ಮೀಡಿಯಾ ಲೈಕ್ಸ್ ಮತ್ತು ರೀಚ್‌ಗಾಗಿಯೇ ಇಂತಹ ನಕಲಿ ಡ್ರಾಮಾಗಳನ್ನು ಸೃಷ್ಟಿಸಿದರೂ ಆಶ್ಚರ್ಯವಿಲ್ಲ" ಎಂದು ಎಚ್ಚರಿಸಿದ್ದಾರೆ. ಜೊತೆಗೆ, "ಕರ್ನಾಟಕ ಸರ್ಕಾರ ತಕ್ಷಣವೇ ಎಚ್ಚೆತ್ತುಕೊಂಡು, ಇಂತಹ ಸಂಸ್ಕೃತಿ ಇಲ್ಲದ ವಲಸಿಗರನ್ನು ನಿಯಂತ್ರಿಸಲು ಕಠಿಣ ಕಾನೂನನ್ನು ಜಾರಿಗೆ ತರಬೇಕು" ಎಂದು ಒತ್ತಾಯಿಸಿದ್ದಾರೆ.

ಸ್ಥಳೀಯ ಪರಿಸ್ಥಿತಿಯನ್ನು ಬಲ್ಲವರೊಬ್ಬರು, "ಇದು ಕೇವಲ ಇವತ್ತಿನ ಕಥೆಯಲ್ಲ, ಪ್ರತಿ ವಾರಾಂತ್ಯದಲ್ಲೂ ಮಹಿಳೆಯರು ಸೇರಿದಂತೆ ನೇಪಾಳಿ ಮೂಲದವರು ವಿಧಾನಸೌಧದ ಮುಂದೆ ನಿಂತು ಗಲಾಟೆ ಮಾಡಿಕೊಳ್ಳುವುದು ಮಾಮೂಲಿಯಾಗಿಬಿಟ್ಟಿದೆ. ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನ ತುಂಬಾ ನೇಪಾಳಿ ಕಾರ್ಮಿಕರೇ ತುಂಬಿಹೋಗಿದ್ದಾರೆ, ಎಲ್ಲೆಂದರಲ್ಲಿ ಅವರೇ ಕಾಣಿಸುತ್ತಿದ್ದಾರೆ" ಎಂದು ಕಮೆಂಟ್ ಮಾಡಿದ್ದಾರೆ. ಈ ಒಂದು ವಿಡಿಯೋ ಬೆಂಗಳೂರಿಗರ ಮನಸ್ಸಿನಲ್ಲಿ ಮನೆ ಮಾಡಿರುವ ವಲಸಿಗರ ಮೇಲಿನ ಅಸಮಾಧಾನ ಮತ್ತು ನಗರದ ಭದ್ರತೆಯ ಬಗೆಗಿನ ಭೀತಿಯನ್ನು ಮತ್ತೊಮ್ಮೆ ಜಗಜ್ಜಾಹೀರು ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+