LPG: ತಿಂಗಳ ಮೊದಲ ದಿನವೇ ಗುಡ್‌ನ್ಯೂಸ್‌: ಭಾರೀ ಇಳಿಕೆ ಕಂಡ ಎಲ್‌ಪಿಜಿ ಸಿಲಿಂಡರ್ ದರ

ಎಲ್‌ಪಿಜಿ ಸಿಲಿಂಡರ್‌ ಬಳಕೆದಾರರಿಗೆ ಜುಲೈ ತಿಂಗಳ ಮೊದಲ ದಿನವೇ ಸಮಾಧಾನಕರ ಸುದ್ದಿಯೊಂದು ಹೊರಬಿದ್ದಿದೆ. ಇಂದಿನಿಂದಲೇ (ಜುಲೈ 1) ಅನ್ವಯವಾಗುವಂತೆ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ (Commercial LPG Cylinder) ದರದಲ್ಲಿ ಭಾರಿ ಕಡಿತ ಮಾಡಲಾಗಿದೆ. ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಇಂದು ರಿಲೀಫ್‌ ಸಿಕ್ಕಂತಾಗಿದೆ. ಇಂದಿನ ಪರಿಷ್ಕೃತ ದರಗಳ ವಿವರ ಇಲ್ಲಿದೆ.

ಈಗಿನ ಹೊಸ ದರ ಎಷ್ಟು?

ತೈಲ ಮಾರುಕಟ್ಟೆ ಕಂಪನಿಗಳು 19 ಕೆಜಿ ತೂಕದ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 183.50 ರೂಪಾಯಿ ಇಳಿಕೆ ಮಾಡಿವೆ. ತಿಂಗಳ ಆರಂಭದಲ್ಲೇ ಈ ಸಿಹಿಸುದ್ದಿ ಪ್ರಕಟವಾಗಿರುವುದರಿಂದ ಡಾಬಾ, ಹೋಟೆಲ್ ಮತ್ತು ಕ್ಯಾಟರಿಂಗ್ ವ್ಯವಹಾರ ನಡೆಸುವವರಿಗೆ ದೊಡ್ಡ ಮಟ್ಟದ ಆರ್ಥಿಕ ಪರಿಹಾರ ಸಿಕ್ಕಂತಾಗಿದೆ. ಈ ಕಡಿತದ ಬಳಿಕ 19 ಕೆಜಿಯ ವಾಣಿಜ್ಯ ಸಿಲಿಂಡರ್ ಬೆಲೆ 2,930 ರೂಪಾಯಿಗೆ ತಲುಪಿದೆ. ಇದಕ್ಕೂ ಮುನ್ನ ಇದರ ಬೆಲೆ 3,113.50 ರೂಪಾಯಿ ಇತ್ತು. ಆದರೆ ಗೃಹಬಳಕೆಯ ಗ್ರಾಹಕರಿಗೆ ಈ ಬಾರಿ ಯಾವುದೇ ವಿನಾಯಿತಿ ಸಿಕ್ಕಿಲ್ಲ. ಮನೆಗಳಲ್ಲಿ ಬಳಸುವ 14.2 ಕೆಜಿಯ ಅಡುಗೆ ಅನಿಲ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಅದು ಹಿಂದಿನಂತೆಯೇ 942 ರೂಪಾಯಿಗಳಲ್ಲೇ ಮುಂದುವರಿದಿದೆ.

LPG

ಬೆಲೆ ಏರಿಕೆಗೆ ಕಾರಣವಾಗಿದ್ದ ಜಾಗತಿಕ ಬಿಕ್ಕಟ್ಟು

ಪ್ರಸಕ್ತ ವರ್ಷದ ಫೆಬ್ರವರಿ 28ರಂದು ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ದಾಳಿಯ ನಂತರ ಜಾಗತಿಕವಾಗಿ ಇಂಧನ ಬಿಕ್ಕಟ್ಟು ತಲೆದೂರಿತ್ತು. ನಂತರ ಇರಾನ್ ತನ್ನ ನಿಯಂತ್ರಣದಲ್ಲಿದ್ದ 'ಸ್ಟ್ರೈಟ್ ಆಫ್ ಹಾರ್ಮುಜ್' (Strait of Hormuz) ಜಲಮಾರ್ಗದ ಮೂಲಕ ಕಚ್ಚಾ ತೈಲ ಮತ್ತು ಅನಿಲ ಸಾಗಿಸುವ ಹಡಗುಗಳ ಸಂಚಾರವನ್ನು ಸ್ಥಗಿತಗೊಳಿಸಿತ್ತು. ಈ ಪೂರೈಕೆ ವ್ಯತ್ಯಯದಿಂದಾಗಿ ವಿಶ್ವಾದ್ಯಂತ ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್ ಬೆಲೆಗಳು ದಿಢೀರನೆ ಗಗನಕ್ಕೇರಿದ್ದವು. ಫೆಬ್ರವರಿಯಲ್ಲಿ ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷದ ಬಳಿಕ ಇರಾನ್ ಈ ಮಾರ್ಗವನ್ನು ಬ್ಲಾಕ್ ಮಾಡಿದ್ದರಿಂದಲೇ ಭಾರತ ಸೇರಿದಂತೆ ವಿಶ್ವದಾದ್ಯಂತ ಎಲ್‌ಪಿಜಿ ಬೆಲೆ ಮೇ ತಿಂಗಳಲ್ಲಿ ಒಂದೇ ಬಾರಿಗೆ ₹993ರಷ್ಟು ಏರಿಕೆಯಾಗುವಂತಾಗಿತ್ತು.

ಕಳೆದ 4 ತಿಂಗಳು ಸತತ ಏರಿಕೆಯಾಗಿದ್ದ ದರ

ಹಾರ್ಮುಜ್ ಜಲಮಾರ್ಗದ ಬಿಕ್ಕಟ್ಟಿನಿಂದಾಗಿ ತೈಲ ಕಂಪನಿಗಳು ನಷ್ಟದ ಹಾದಿ ಹಿಡಿದಿದ್ದವು. ಇದನ್ನು ಸರಿದೂಗಿಸಲು ಕಳೆದ ನಾಲ್ಕು ತಿಂಗಳುಗಳಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆಯನ್ನು ಸತತವಾಗಿ 4 ಬಾರಿ ಹೆಚ್ಚಿಸಲಾಗಿತ್ತು. ಮಾರ್ಚ್ ತಿಂಗಳಲ್ಲಿ 144 ರೂಪಾಯಿ ಏರಿಕೆ, ಏಪ್ರಿಲ್ ತಿಂಗಳಲ್ಲಿ 195.50 ರೂಪಾಯಿ ಏರಿಕೆ, ಮೇ ತಿಂಗಳಲ್ಲಿ ದಾಖಲೆಯ 993 ರೂಪಾಯಿ ಏರಿಕೆ, ಜೂನ್ 42 ರೂಪಾಯಿ ಏರಿಕೆ ಕಂಡಿತ್ತು. ಒಟ್ಟಾರೆಯಾಗಿ ನಾಲ್ಕು ಕಂತುಗಳಲ್ಲಿ ಬರೋಬ್ಬರಿ 1,374.50 ರೂಪಾಯಿಗಳಷ್ಟು ದರ ಏರಿಕೆ ಕಂಡು ವ್ಯಾಪಾರಿಗಳು ಕಂಗಾಲಾಗಿದ್ದರು. ಇದೀಗ ಮೊದಲ ಬಾರಿಗೆ ಬೆಲೆ ಇಳಿಕೆಯ ಹಾದಿಗೆ ಬಂದಿರುವುದು ನಿಟ್ಟುಸಿರು ಬಿಡುವಂತೆ ಮಾಡಿದೆ.

ಗೃಹಬಳಕೆಯ 14.2 ಕೆಜಿ ಸಿಲಿಂಡರ್ ಬೆಲೆಯನ್ನು ಸಹ ಈ ಅವಧಿಯಲ್ಲಿ ಎರಡು ಬಾರಿ ಹೆಚ್ಚಿಸಲಾಗಿತ್ತು (ಮಾರ್ಚ್‌ನಲ್ಲಿ 60 ರೂ. ಮತ್ತು ಜೂನ್‌ನಲ್ಲಿ 29 ರೂ. ಸೇರಿ ಒಟ್ಟು 89 ರೂ. ಏರಿಕೆ ಮಾಡಲಾಗಿತ್ತು). ಸದ್ಯಕ್ಕೆ ಗೃಹಬಳಕೆ ಸಿಲಿಂಡರ್ ಬೆಲೆಯಲ್ಲಿ ಇಳಿಕೆಯಾಗದಿದ್ದರೂ, ವಾಣಿಜ್ಯ ಸಿಲಿಂಡರ್ ದರ ಇಳಿಕೆಯಾಗಿರುವುದು ನೆಮ್ಮದಿ ತಂದಿದೆ.

LPG Price: ಗೃಹಬಳಕೆ ಎಲ್‌ಪಿಜಿ ಸಿಲಿಂಡರ್ ದರ ದಿಢೀರ್‌ ಭಾರೀ ಏರಿಕೆ: ಇಂದಿನಿಂದಲೇ ಜಾರಿ
LPG Price: ಗೃಹಬಳಕೆ ಎಲ್‌ಪಿಜಿ ಸಿಲಿಂಡರ್ ದರ ದಿಢೀರ್‌ ಭಾರೀ ಏರಿಕೆ: ಇಂದಿನಿಂದಲೇ ಜಾರಿ

ಹೋಟೆಲ್ ಊಟದ ಬೆಲೆ ಕಮ್ಮಿಯಾಗುತ್ತಾ?

ವಾಣಿಜ್ಯ ಸಿಲಿಂಡರ್ ಬೆಲೆ ₹183.50 ರಷ್ಟು ದೊಡ್ಡ ಪ್ರಮಾಣದಲ್ಲಿ ಕಡಿಮೆಯಾಗಿರುವುದರಿಂದ ಹೋಟೆಲ್, ರೆಸ್ಟೋರೆಂಟ್ ಮತ್ತು ಬೇಕರಿ ಮಾಲೀಕರ ದೈನಂದಿನ ನಿರ್ವಹಣಾ ವೆಚ್ಚ (Input Cost) ಕಡಿಮೆಯಾಗುತ್ತದೆ. ಕಳೆದ 4 ತಿಂಗಳುಗಳಿಂದ ಸತತ ಬೆಲೆ ಏರಿಕೆಯಿಂದಾಗಿ ಕಂಗಾಲಾಗಿದ್ದ ಹೋಟೆಲ್ ಉದ್ಯಮಿಗಳಿಗೆ ಇದು ದೊಡ್ಡ ರಿಲೀಫ್ ನೀಡಿದೆ. ಆದರೆ, ಇದು ಸಾರ್ವಜನಿಕರ ಹೋಟೆಲ್ ಊಟದ ಬಿಲ್ ಕಡಿಮೆ ಮಾಡುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ, ಏಕೆಂದರೆ ಇತ್ತೀಚಿನ ತಿಂಗಳುಗಳಲ್ಲಿ ತರಕಾರಿ ಮತ್ತು ದಿನಸಿ ಪದಾರ್ಥಗಳ ಬೆಲೆಯೂ ಹೆಚ್ಚಾಗಿದೆ.

ತೈಲ ಮಾರುಕಟ್ಟೆ ಕಂಪನಿಗಳು (IOCL, BPCL, HPCL) ವಾಣಿಜ್ಯ ಸಿಲಿಂಡರ್ ಬೆಲೆಯನ್ನು ಜಾಗತಿಕ ಮಾರುಕಟ್ಟೆಯ ಏರಿಳಿತಕ್ಕೆ ತಕ್ಕಂತೆ ಪ್ರತಿ ತಿಂಗಳ 1ನೇ ತಾರೀಖು ಪರಿಷ್ಕರಿಸುತ್ತವೆ. ಆದರೆ ಗೃಹಬಳಕೆಯ ಎಲ್‌ಪಿಜಿ (14.2 ಕೆಜಿ) ಸಬ್ಸಿಡಿ ಮತ್ತು ಸರ್ಕಾರದ ನೀತಿಗಳಿಗೆ ಒಳಪಟ್ಟಿರುವುದರಿಂದ, ಅದರ ಬೆಲೆಯನ್ನು ಇಳಿಸಲು ಕಂಪನಿಗಳು ಸರ್ಕಾರದ ಅನುಮತಿಗೆ ಕಾಯಬೇಕಾಗುತ್ತದೆ. ಹಾಗಾಗಿ ಜಾಗತಿಕ ಇಂಧನ ಬಿಕ್ಕಟ್ಟು ಸಂಪೂರ್ಣ ತಿಳಿಯಾಗುವವರೆಗೆ ಗೃಹಬಳಕೆ ಸಿಲಿಂಡರ್ ಬೆಲೆ ಇಳಿಯುವುದು ಕಷ್ಟ ಎನ್ನಲಾಗಿದೆ.

ಪ್ರಸ್ತುತ ಜುಲೈ ಆರಂಭದ ವೇಳೆಗೆ ಜಾಗತಿಕವಾಗಿ ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲದ ಪೂರೈಕೆಯಲ್ಲಿ ಅಲ್ಪ ಸುಧಾರಣೆ ಕಂಡುಬಂದಿದೆ. ಪರ್ಯಾಯ ಜಲಮಾರ್ಗಗಳ ಬಳಕೆ ಮತ್ತು ಅಂತರರಾಷ್ಟ್ರೀಯ ಮಟ್ಟದ ರಾಜತಾಂತ್ರಿಕ ಮಾತುಕತೆಗಳಿಂದಾಗಿ ಇಂಧನ ಬಿಕ್ಕಟ್ಟು ಸ್ವಲ್ಪ ಮಟ್ಟಿಗೆ ತಿಳಿಯಾಗುತ್ತಿರುವುದರಿಂದಲೇ, ತೈಲ ಕಂಪನಿಗಳು ಈ ತಿಂಗಳು ಬೆಲೆ ಕಡಿತದ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಲು ಸಾಧ್ಯವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+