Karnataka Weather: ಮುಂಗಾರು ಚುರುಕು; ಈ ಜಿಲ್ಲೆಗಳಲ್ಲಿ ಇಂದು ಭಾರೀ ಮಳೆ ಅಲರ್ಟ್ ಕೊಟ್ಟ ಹವಾಮಾನ ಇಲಾಖೆ
Karnataka Weather: ರಾಜ್ಯದಲ್ಲಿ ನೈಋತ್ಯ ಮುಂಗಾರು ಮಾರುತಗಳು ಚುರುಕಾಗಿದ್ದು, ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಭಾರಿ ಮಳೆಯಾಗುತ್ತಿದೆ. ಕರಾವಳಿ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಹಾಗೂ ಒಳನಾಡಿನ ಹಲವು ಪ್ರದೇಶಗಳಲ್ಲಿ ಉತ್ತಮ ಮಳೆಯಾಗಿರುವ ಬಗ್ಗೆ ಹವಾಮಾನ ಇಲಾಖೆ ವರದಿ ಮಾಡಿದೆ. ದಕ್ಷಿಣ ಒಳನಾಡಿನಲ್ಲಿ ಮುಂಗಾರು ಸಾಮಾನ್ಯ ಸ್ಥಿತಿಯಲ್ಲಿದೆ. ಇಂದು ಕೂಡ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದೆ.
ಇಂದು ಯಾವ ಜಿಲ್ಲೆಗಳಲ್ಲಿ ಮಳೆ?
ಇಂದು ಕರ್ನಾಟಕದಾದ್ಯಂತ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ. ರಾಜ್ಯದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಮುಂಗಾರು ಮಾರುತಗಳು ಅತ್ಯಂತ ಬಲಿಷ್ಠವಾಗಿದ್ದು, ಭಾರಿ ಪ್ರಮಾಣದ ಮಳೆಯಾಗುವ ಮುನ್ನೆಚ್ಚರಿಕೆ ನೀಡಲಾಗಿದೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಇದೆ. ಇದರೊಂದಿಗೆ ಗಂಟೆಗೆ 30ರಿಂದ 40 ಕಿಲೋಮೀಟರ್ ವೇಗದಲ್ಲಿ ಬಲವಾದ ಗಾಳಿ ಬೀಸಲಿದ್ದು, ಕರಾವಳಿ ತೀರದ ಜನರಿಗೆ ಜಾಗರೂಕರಾಗಿರಲು ಸೂಚಿಸಲಾಗಿದೆ. ಮಲೆನಾಡಿನ ಪ್ರಮುಖ ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳಲ್ಲೂ ಸಹ ಇದೇ ರೀತಿಯ ಪರಿಸ್ಥಿತಿ ಇರಲಿದ್ದು, ಮಳೆಯ ಜೊತೆಗೆ ಭಾರಿ ವೇಗದ ಗಾಳಿ ಬೀಸುವ ಸಾಧ್ಯತೆಯಿದೆ.

ಉತ್ತರ ಒಳನಾಡಿನ ಪ್ರಮುಖ ಜಿಲ್ಲೆಗಳಾದ ಬೆಳಗಾವಿ, ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆಗಳ ಒಂದೆರಡು ಪ್ರದೇಶಗಳಲ್ಲಿ ಭಾರಿ ಮಳೆಯಾಗುವ ಸಂಭವವಿದೆ. ಈ ಭಾಗದಲ್ಲೂ ಮಳೆಯ ಮುನ್ಸೂಚನೆಯೊಂದಿಗೆ ಗಂಟೆಗೆ 30ರಿಂದ 40 ಕಿಲೋಮೀಟರ್ ವೇಗದಲ್ಲಿ ನಿರಂತರವಾಗಿ ಗಾಳಿ ಬೀಸಲಿದ್ದು, ಕೃಷಿ ಚಟುವಟಿಕೆಗಳಿಗೆ ಪೂರಕವಾದ ವಾತಾವರಣ ನಿರ್ಮಾಣವಾಗಲಿದೆ. ಇನ್ನುಳಿದಂತೆ ಉತ್ತರ ಒಳನಾಡಿನ ಬಾಗಲಕೋಟೆ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳ ಬಹುತೇಕ ಎಲ್ಲ ಭಾಗಗಳಲ್ಲಿ ಸಾಧಾರಣದಿಂದ ಹಗುರವಾದ ಮಳೆಯಾಗುವ ಮುನ್ಸೂಚನೆ ಇದ್ದು, ಈ ಜಿಲ್ಲೆಗಳಲ್ಲೂ ಗಾಳಿಯ ವೇಗವು ಜೋರಾಗಿರಲಿದೆ.
ದಕ್ಷಿಣ ಒಳನಾಡಿನ ಪ್ರಮುಖ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲೂ ವರುಣನ ಸಿಂಚನವಾಗಲಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಡ್ಯ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ, ವಿಜಯನಗರ, ಚಾಮರಾಜನಗರ ಹಾಗೂ ಕೊಡಗು ಜಿಲ್ಲೆಗಳ ಹಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಈ ಎಲ್ಲ ಜಿಲ್ಲೆಗಳಲ್ಲೂ ಮುಂಗಾರು ಮಾರುತಗಳ ಪ್ರಭಾವದಿಂದಾಗಿ ಗಂಟೆಗೆ 30ರಿಂದ 40 ಕಿಲೋಮೀಟರ್ ವೇಗದಲ್ಲಿ ತಂಪಾದ ಗಾಳಿ ಬೀಸಲಿದ್ದು, ತಂಪು ವಾತಾವರಣ ಇರಲಿದೆ ಎಂದು ತಿಳಿಸಿದೆ.
ಎಲ್ಲೆಲ್ಲಿ ಎಷ್ಟು ಮಳೆ?
ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಅತ್ಯಂತ ಭಾರಿ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಉಡುಪಿ ಜಿಲ್ಲೆಯ ಸಿದ್ದಾಪುರ, ಉತ್ತರ ಕನ್ನಡ ಜಿಲ್ಲೆಯ ಕಾರವಾರ ಮತ್ತು ಗೇರುಸೊಪ್ಪದಲ್ಲಿ 12 ಸೆಂ.ಮೀ, ಅಂಕೋಲಾ, ಗೋಕರ್ಣ 11 ಸೆಂ.ಮೀ, ಬ್ರಹ್ಮಾವರ, ಧರ್ಮಸ್ಥಳ, ಹೊನ್ನಾವರ, ಬೆಳ್ತಂಗಡಿ, ಕುಮಟಾ, ಮಂಕಿ, ಕೊಟ್ಟಿಗೆಹಾರ (ಚಿಕ್ಕಮಗಳೂರು) ಮತ್ತು ತಲಗುಪ್ಪ (ಶಿವಮೊಗ್ಗ) 7 ಸೆಂ.ಮೀ ಮಳೆ ವರದಿಯಾಗಿದೆ.
ಉತ್ತರ ಭಾರತಕ್ಕೆ ಮುಂಗಾರು
ಜೂನ್ 30ರ ವೇಳೆಗೆ ನೈಋತ್ಯ ಮುಂಗಾರು ದೇಶದ ಪ್ರಮುಖ ಭಾಗಗಳಿಗೆ ವಿಸ್ತರಿಸಿದೆ. ಮಧ್ಯಪ್ರದೇಶದ ಕೆಲವು ಭಾಗಗಳು, ಛತ್ತೀಸ್‌ಗಢ, ಜಾರ್ಖಂಡ್, ಬಿಹಾರದ ಉಳಿದ ಭಾಗಗಳು, ಉತ್ತರ ಪ್ರದೇಶದ ಕೆಲವು ಪ್ರದೇಶಗಳು ಹಾಗೂ ಉತ್ತರಾಖಂಡದ ಬಹುತೇಕ ಭಾಗಗಳಿಗೆ ಮುಂಗಾರು ಮುನ್ನಡೆದಿದೆ. ಅಲ್ಲದೆ, ಹಿಮಾಚಲ ಪ್ರದೇಶ ಮತ್ತು ಲಡಾಖ್‌ನ ಕೆಲವು ಭಾಗಗಳನ್ನೂ ಮುಂಗಾರು ಆವರಿಸಿದೆ. ಮುಂದಿನ 2-3 ದಿನಗಳಲ್ಲಿ ಗುಜರಾತ್, ಉತ್ತರ ಪ್ರದೇಶದ ಉಳಿದ ಭಾಗಗಳು, ದಮನ್ ಮತ್ತು ದಿಯು, ಜಮ್ಮು-ಕಾಶ್ಮೀರ, ಹರಿಯಾಣ, ಚಂಡೀಗಢ, ದೆಹಲಿ, ಪಂಜಾಬ್ ಮತ್ತು ರಾಜಸ್ಥಾನದ ಕೆಲವು ಭಾಗಗಳಿಗೆ ಮುಂಗಾರು ಮತ್ತಷ್ಟು ವ್ಯಾಪಿಸಲು ಪೂರಕ ವಾತಾವರಣವಿದೆ.
ವಾಯುಭಾರ ಕುಸಿತದ ಸಾಧ್ಯತೆ
ಉತ್ತರ ಬಂಗಾಳ ಕೊಲ್ಲಿ ಮತ್ತು ಬಾಂಗ್ಲಾದೇಶದ ಕರಾವಳಿ ವಲಯದಲ್ಲಿ ಸಮುದ್ರ ಮಟ್ಟದಿಂದ 1.5ರಿಂದ 5.8 ಕಿ.ಮೀ ಎತ್ತರದಲ್ಲಿ ಸುಳಿಗಾಳಿ ಮುಂದುವರಿದಿದೆ. ಇದರ ಪ್ರಭಾವದಿಂದ ಜುಲೈ 3ರ ಸುಮಾರಿಗೆ ವಾಯುವ್ಯ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆಯಿದೆ. ಮಹಾರಾಷ್ಟ್ರ ಕರಾವಳಿಯಿಂದ ಹಿಡಿದು ಕೇರಳದ ಉತ್ತರದವರೆಗೆ ಸಮುದ್ರ ಮಟ್ಟದಲ್ಲಿ ಮುಂಗಾರು ಗಾಳಿ ಸಕ್ರಿಯವಾಗಿದೆ. ಇದು ಕರಾವಳಿ ಕರ್ನಾಟಕದಲ್ಲಿ ಭಾರಿ ಮಳೆಯನ್ನು ತರುತ್ತಿದೆ. ಮುಂದಿನ ಕೆಲವು ದಿನಗಳ ಕಾಲ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಮಳೆಯ ಆರ್ಭಟ ಮುಂದುವರಿಯಲಿದ್ದು, ಸಾರ್ವಜನಿಕರು ಹಾಗೂ ಮೀನುಗಾರರು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.












Click it and Unblock the Notifications