Hardik Pandya: ಮುಂಬೈ ತೊರೆದು ಬೆಂಗಳೂರಿಗೆ ಬಂದ ಹಾರ್ದಿಕ್ ಪಾಂಡ್ಯ

Hardik Pandya: ಐಪಿಎಲ್‌ನ ಮುಂಬೈ ಇಂಡಿಯನ್ಸ್ ತಂಡದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರು ಆರ್‌ಸಿಬಿಗೆ ಸೇರಲಿದ್ದಾರೆ ಎಂದು ಕಳೆದ ಕೆಲ ದಿನಗಳ ಹಿಂದೆಯಷ್ಟೇ ವದಂತಿಗಳು ಹರಡಿದ್ದರು. ಇದರ ಬೆನ್ನಲ್ಲೇ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಇದೀಗ ಅವರು ಬೆಂಗಳೂರಿಗೆ ಶಿಫ್ಟ್‌ ಆಗಿದ್ದಾರೆ. ಹಾಗಾದ್ರೆ ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಭಾರತ ತಂಡದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರು ಇದೀಗ ಮುಂಬೈನಿಂದ ಬೆಂಗಳೂರಿಗೆ ಶಿಫ್ಟ್‌ ಆಗಿದ್ದಾರೆ. ತಮ್ಮ ವೃತ್ತಿಜೀವನದ ಮುಂದಿನ ದಿನಗಳಿಗಾಗಿ ಬಿಸಿಸಿಐನ 'ಸೆಂಟರ್ ಆಫ್ ಎಕ್ಸಲೆನ್ಸ್' ಅನ್ನು ತಮ್ಮ ಕಾಯಂ ತರಬೇತಿ ಕೇಂದ್ರವನ್ನಾಗಿ ಮಾಡಿಕೊಳ್ಳುವ ಉದ್ದೇಶದಿಂದ ಬೆಂಗಳೂರಿಗೆ ವಾಸ್ತವ್ಯ ಬದಲಾಯಿಸಿದ್ದಾರೆ. ಈ ರೀತಿಯ ನಿರ್ಧಾರ ಕೈಗೊಂಡ ಪ್ರಸ್ತುತ ಭಾರತೀಯ ಕ್ರಿಕೆಟ್ ತಂಡದ ಮೊದಲ ಪ್ರಮುಖ ಆಟಗಾರ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.

Hardik Pandya Shifts to Bengaluru From Mumbai for BCCI Training Sparks RCB Transfer Rumours

ಪಾಂಡ್ಯ ಬೆಂಗಳೂರಿಗೆ ಶಿಫ್ಟ್‌ ಆಗಿದ್ದೇಕೆ?

ಬಿಸಿಸಿಐನ ಅಧಿಕೃತ ಮೂಲಗಳ ಪ್ರಕಾರ, ಹಾರ್ದಿಕ್ ಪಾಂಡ್ಯ ಈ ಹಿಂದೆ ಮುಂಬೈನ ಲೋವರ್ ಪರೇಲ್‌ನಲ್ಲಿ ವಾಸಿಸುತ್ತಿದ್ದರು. ಅಲ್ಲಿಂದ ಪ್ರತಿದಿನ ತರಬೇತಿಗಾಗಿ ಮೈದಾನಗಳಿಗೆ ಪ್ರಯಾಣಿಸುವುದು ಸಂಚಾರ ದಟ್ಟಣೆಯ ಕಾರಣದಿಂದ ಅವರಿಗೆ ದೊಡ್ಡ ಸಮಸ್ಯೆಯಾಗಿತ್ತು. ಸಮಯ ವ್ಯರ್ಥವಾಗುವುದರ ಜೊತೆಗೆ ಫಿಟ್‌ನೆಸ್ ನಿರ್ವಹಣೆಗೆ ಇದು ಅಡ್ಡಿಯಾಗುತ್ತಿತ್ತು. ಆದ್ದರಿಂದ ಅವರು ಮುಂಬೈ ತೊರೆಯಲು ನಿರ್ಧರಿಸಿದರು.

ಬೆಂಗಳೂರಿಗೆ ಶಿಫ್ಟ್ ಆಗಿರುವ 32 ವರ್ಷದ ಹಾರ್ದಿಕ್ ಪಾಂಡ್ಯ, ನಗರದ ಹೊರವಲಯದಲ್ಲಿ ಅಂದರೆ ಸೆಂಟರ್ ಆಫ್ ಎಕ್ಸಲೆನ್ಸ್‌ಗೆ ಅತ್ಯಂತ ಹತ್ತಿರವಿರುವ ಪ್ರದೇಶದಲ್ಲಿ ಒಂದು ಸುಂದರವಾದ ಮನೆಯನ್ನು ಬಾಡಿಗೆಗೆ ಪಡೆದಿದ್ದಾರೆ. ಇದರಿಂದಾಗಿ ಅವರು ಯಾವುದೇ ತೊಂದರೆ ಇಲ್ಲದೆ ಪ್ರತಿದಿನ ಸುಲಭವಾಗಿ ತರಬೇತಿ ಕೇಂದ್ರಕ್ಕೆ ಭೇಟಿ ನೀಡಬಹುದಾಗಿದೆ.

ಸೆಂಟರ್ ಆಫ್ ಎಕ್ಸಲೆನ್ಸ್‌ನ ವಿಶೇಷತೆ ಏನು?

ಸಾಮಾನ್ಯವಾಗಿ ಬಿಸಿಸಿಐನ ಕೇಂದ್ರ ಒಪ್ಪಂದದಲ್ಲಿರುವ ಭಾರತೀಯ ಕ್ರಿಕೆಟಿಗರು ಕೇವಲ ಗಾಯದ ಚಿಕಿತ್ಸೆ, ಫಿಟ್‌ನೆಸ್ ಪರೀಕ್ಷೆಗಳು ಅಥವಾ ರಾಷ್ಟ್ರೀಯ ತಂಡದ ಶಿಬಿರಗಳು ಇದ್ದಾಗ ಮಾತ್ರ ಬೆಂಗಳೂರಿನ ಈ ಕೇಂದ್ರಕ್ಕೆ ಭೇಟಿ ನೀಡುತ್ತಾರೆ. ಆದರೆ ಪಾಂಡ್ಯ ಅವರ ನಡೆ ಕುತೂಹಲ ಮೂಡಿಸಿದೆ. ಅವರು ಭಾರತ ತಂಡ, ಐಪಿಎಲ್ ಅಥವಾ ದೇಶಿ ಕ್ರಿಕೆಟ್‌ನ ಕರ್ತವ್ಯದಲ್ಲಿ ಇಲ್ಲದ ಸಂದರ್ಭಗಳಲ್ಲೆಲ್ಲಾ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲೇ ತರಬೇತಿ ಪಡೆಯಲಿದ್ದಾರೆ.

ಉಚಿತ ಸೌಲಭ್ಯ ಪಡೆಯುವ ಅವಕಾಶ

ಕೇಂದ್ರ ಒಪ್ಪಂದದ ಆಟಗಾರನಾಗಿರುವುದರಿಂದ ಹಾರ್ದಿಕ್ ಅವರಿಗೆ ಈ ಅತ್ಯಾಧುನಿಕ ಕೇಂದ್ರದಲ್ಲಿರುವ ನಿರ್ವಹಣೆ, ಕೌಶಲ್ಯ ತರಬೇತಿ, ವಿಶ್ವದರ್ಜೆಯ ಜಿಮ್ ಹಾಗೂ ಫಿಟ್‌ನೆಸ್ ತಜ್ಞರ ಸೇವೆ ಸೇರಿದಂತೆ ಪ್ರತಿಯೊಂದು ಸೌಲಭ್ಯವನ್ನು ಉಚಿತವಾಗಿ ಪಡೆಯುವ ಅವಕಾಶವಿದೆ. ಇತ್ತೀಚೆಗೆ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಕಳೆದ ಆರು ತಿಂಗಳಿಂದ ಇಲ್ಲೇ ಚಿಕಿತ್ಸೆ ಹಾಗೂ ಚೇತರಿಕೆ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ.

ಹಾರ್ದಿಕ್ ಪಾಂಡ್ಯ ಅವರು ಕನಿಷ್ಠ ಇನ್ನು ಐದರಿಂದ ಆರು ವರ್ಷಗಳ ಕಾಲ ಭಾರತ ತಂಡದ ಪರ ಸೀಮಿತ ಓವರ್‌ಗಳ ಕ್ರಿಕೆಟ್ ಆಡುವ ಗುರಿ ಹೊಂದಿದ್ದಾರೆ. ತಮ್ಮ ಫಿಟ್‌ನೆಸ್‌ ಕಾಯ್ದುಕೊಳ್ಳುವುದು ಅವರ ಮೊದಲ ಆದ್ಯತೆಯಾಗಿದೆ. ತಮ್ಮ ಬ್ಯಾಟಿಂಗ್ ಅಭ್ಯಾಸಕ್ಕಾಗಿ ಸೆಂಟರ್ ಆಫ್ ಎಕ್ಸಲೆನ್ಸ್ ನೇಮಿಸಿಕೊಳ್ಳುವ ನೆಟ್ ಬೌಲರ್‌ಗಳಿಗೆ ಹಾರ್ದಿಕ್ ತಮ್ಮ ಸ್ವಂತ ಹಣ ಪಾವತಿಸಿ ಅಭ್ಯಾಸ ನಡೆಸುತ್ತಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಮೂಲತಃ ಗುಜರಾತ್‌ನ ಬರೋಡಾದವರಾದ ಪಾಂಡ್ಯ ಕಳೆದ ಒಂದು ದಶಕದಿಂದ ಮುಂಬೈನಲ್ಲೇ ನೆಲೆಸಿದ್ದರು ಮತ್ತು ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಸೌಲಭ್ಯಗಳನ್ನು ಬಳಸಿಕೊಳ್ಳುತ್ತಿದ್ದರು. ಆದರೆ ತಮ್ಮ ವೃತ್ತಿಜೀವನವನ್ನು ಮತ್ತಷ್ಟು ವಿಸ್ತರಿಸುವ ಉದ್ದೇಶದಿಂದ ಈಗ ಬೆಂಗಳೂರನ್ನು ತಮ್ಮ ಕಾಯಂ ತರಬೇತಿ ಕೇಂದ್ರವನ್ನಾಗಿ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಮತ್ತೊಂದೆಡೆ ಈ ಬೆಳವಣಿಗೆಯನ್ನ ಗಮನಿಸಿದರೆ ಅವರು ಮುಂದಿನ ಬಾರಿಯಿಂದ ಆರ್‌ಸಿಬಿ ಪರ ಆಡಬಹುದು ಎನ್ನುವ ಚರ್ಚೆಗಳು ಸಹ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+