ವಯಸ್ಸು, ಹಿಂದಿನ ಸಂಬಳ ಮುಖ್ಯವಲ್ಲ ಎಂದ ಸಂಸ್ಥಾಪಕ: 'ನಿಮ್ಮ HR ಮೊದಲು ರಿಪ್ಲೈ ಮಾಡಲಿ' ಎಂದು ಕ್ಲಾಸ್ ತೆಗೆದುಕೊಂಡ ನೆಟ್ಟಿಗರು
ಉದ್ಯೋಗ ಹುಡುಕುವುದು ಇಂದಿನ ಕಾರ್ಪೊರೇಟ್ ಜಗತ್ತಿನಲ್ಲಿ ಒಂದು ದೊಡ್ಡ ಸವಾಲು. ಅಭ್ಯರ್ಥಿಯ ಕೌಶಲ್ಯಕ್ಕಿಂತ ಹೆಚ್ಚಾಗಿ ಅವರ ವಯಸ್ಸು, ಹಿಂದಿನ ಸಂಬಳ ಮತ್ತು ವೃತ್ತಿಜೀವನದಲ್ಲಿರುವ ಅಂತರಗಳ ಆಧಾರದ ಮೇಲೆ ಅವರನ್ನು ಅಳೆಯಲಾಗುತ್ತದೆ. ಆದರೆ, ಕೇವಲ ಕೌಶಲ್ಯ ಮತ್ತು ಸಾಮರ್ಥ್ಯಕ್ಕೆ ಮಾತ್ರ ತಾವು ಪ್ರಮುಖ್ಯತೆ ನೀಡುವುದಾಗಿ ನೇಮಕಾತಿ ವಲಯದ ಹಿರಿಯರೊಬ್ಬರು ಹಂಚಿಕೊಂಡಿರುವ ವಿಚಾರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಈ ಹೊಸ ನೇಮಕಾತಿ ತತ್ವಕ್ಕೆ ಒಂದು ಕಡೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದರೆ, ಮತ್ತೊಂದೆಡೆ ಅಭ್ಯರ್ಥಿಗಳಿಗೆ ಕನಿಷ್ಠ ಪ್ರತಿಕ್ರಿಯೆಯನ್ನೂ ನೀಡದ ಹೆಚ್‌ಆರ್ ವಿಭಾಗದ ಕಾರ್ಯವೈಖರಿಯ ಬಗ್ಗೆ ತೀವ್ರ ಟೀಕೆಗಳು ವ್ಯಕ್ತವಾಗಿವೆ.

ನೇಮಕಾತಿ ಕ್ಷೇತ್ರದಲ್ಲಿ 15 ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಹಾಗೂ ಪ್ರಸ್ತುತ 'ಯುನಿಸನ್ ಇಂಟರ್ನ್ಯಾಷನಲ್ ಕನ್ಸಲ್ಟಿಂಗ್' ಸಂಸ್ಥೆಯ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿರುವ ಮಿತ್ತಲ್ ಅವರು ಲಿಂಕ್ಡ್‌ಇನ್‌ನಲ್ಲಿ ಈ ಬಗ್ಗೆ ಸುದೀರ್ಘ ಪೋಸ್ಟ್ ಹಾಕಿದ್ದರು.
"2026ರ ನೇಮಕಾತಿದಾರನಾಗಿ ನಾನು ನಿಮ್ಮ ವಯಸ್ಸು, ನಿಮ್ಮ ಪ್ರಸ್ತುತ ಸಂಬಳ, ನೀವು ಕೆಲಸ ಕಳೆದುಕೊಂಡಿದ್ದೀರಾ ಎಂಬ ವಿಚಾರಗಳು, ನಿಮ್ಮ ರೆಸ್ಯೂಮ್‌ನ ಉದ್ದ ಅಥವಾ ಕವರ್ ಲೆಟರ್‌ಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಜೀವನದಲ್ಲಿ ಅಂತರಗಳು ಸಹಜ, ಅದು ಓಕೆ. ನನಗೆ ಮುಖ್ಯವಾಗುವುದು ನಿಮ್ಮ ಕೌಶಲ್ಯ, ನಿಮ್ಮ ಸಾಮರ್ಥ್ಯ, ನಿಮ್ಮ ಮನಸ್ಥಿತಿ ಮತ್ತು ನಿಮ್ಮಲ್ಲಿರುವ ನಿಜವಾದ ಶಕ್ತಿ," ಎಂದು ಅವರು ಬರೆದುಕೊಂಡಿದ್ದರು. ಕೇವಲ ಕೌಶಲ್ಯ ಆಧಾರಿತ ನೇಮಕಾತಿಯ ಈ ವಿಚಾರವು ಉದ್ಯೋಗಾಕಾಂಕ್ಷಿಗಳ ಗಮನ ಸೆಳೆದಿತ್ತು.
ಎಚ್‌ಆರ್ ಪ್ರತಿಕ್ರಿಯೆ ಇಲ್ಲದಿರುವ ಬಗ್ಗೆ ನೆಟ್ಟಿಗರ ಅಸಮಾಧಾನ
ಸಂಸ್ಥಾಪಕರ ಈ ತತ್ವಕ್ಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದರೂ, ಬಹಳಷ್ಟು ವೃತ್ತಿಪರರು ಅವರದೇ ಸಂಸ್ಥೆಯ ಎಚ್‌ಆರ್ ತಂಡದ ಸಂವಹನದ ಕೊರತೆಯ ಬಗ್ಗೆ ಕಿಡಿಕಾರಿದ್ದಾರೆ. "ರೆಸ್ಯೂಮ್ ಅಪ್‌ಡೇಟ್ ಮಾಡಿ ಶ್ರಮ ವ್ಯರ್ಥ ಮಾಡಿಕೊಳ್ಳುವುದು ಏಕೆ? ಯುನಿಸನ್ ಎಚ್‌ಆರ್ ಅಧಿಕಾರಿಗಳು ಎಂದಿಗೂ ರಿಪ್ಲೈ ಮಾಡುವುದಿಲ್ಲ.
ನನ್ನ ಸ್ನೇಹಿತರ ವಲಯದಲ್ಲಿ ಯಾರೊಬ್ಬರಿಗೂ ಈ ಸಂಸ್ಥೆಯ ಮೂಲಕ ಕೆಲಸ ಸಿಕ್ಕಿಲ್ಲ ಅಥವಾ ಸಂದರ್ಶನಕ್ಕೂ ಕರೆ ಬಂದಿಲ್ಲ. ಇದು ನೇಮಕಾತಿಯೇ ಅಥವಾ ಕೇವಲ ಡೇಟಾ ಕದಿಯುವ ತಂತ್ರವೇ?" ಎಂದು ಓರ್ವ ಬಳಕೆದಾರರು ಪ್ರಶ್ನಿಸಿದ್ದಾರೆ.
ಮತ್ತೊಬ್ಬರು, "ನಾನು ಕಳೆದ ಕೆಲವು ವರ್ಷಗಳಿಂದ ನಿಮ್ಮ ತಂಡಕ್ಕೆ ಹಲವು ಬಾರಿ ರೆಸ್ಯೂಮ್ ಕಳುಹಿಸಿದ್ದೇನೆ. ನನ್ನ ಕರೆಗಳಿಗೂ ಉತ್ತರಿಸಿಲ್ಲ. ನೇಮಕಾತಿ ತಂಡದಿಂದ ಕನಿಷ್ಠ ಪ್ರತಿಕ್ರಿಯೆ ಇಲ್ಲದಿರುವುದು ನಿರಾಸೆ ಮೂಡಿಸಿದೆ," ಎಂದು ನೇರವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ.
ಟೀಕೆಗಳಿಗೆ ಉತ್ತರಿಸಿದ ಸಂಸ್ಥಾಪಕ
ನೆಟ್ಟಿಗರ ಈ ಕಟುವಾದ ಟೀಕೆಗಳಿಗೆ ಮಿತ್ತಲ್ ಅವರು ಸಕಾರಾತ್ಮಕವಾಗಿಯೇ ಸ್ಪಂದಿಸಿದ್ದಾರೆ. ಸಮಸ್ಯೆಯನ್ನು ಒಪ್ಪಿಕೊಂಡ ಅವರು, ಅಭ್ಯರ್ಥಿಗಳೊಂದಿಗಿನ ಸಂವಹನವನ್ನು ಸುಧಾರಿಸಲು ಕಂಪನಿಯು ಕೆಲಸ ಮಾಡುತ್ತಿದೆ ಎಂದು ತಿಳಿಸಿದ್ದಾರೆ.
"ಪ್ರತಿಯೊಬ್ಬ ಅಭ್ಯರ್ಥಿಗೂ ಸರಿಯಾದ ಗಮನ ಸಿಗಬೇಕು, ಮೌನವಲ್ಲ ಎಂಬ ಗುರಿಯೊಂದಿಗೆ ನಾವು ಎಐ ಪ್ಲಾಟ್‌ಫಾರ್ಮ್ ಒಂದನ್ನು ನಿರ್ಮಿಸುತ್ತಿದ್ದೇವೆ. ಈ ಹಿಂದೆ ನಾವು ತಪ್ಪು ಮಾಡಿದ್ದನ್ನು ನಾನು ಒಪ್ಪಿಕೊಳ್ಳುತ್ತೇನೆ. ಪ್ರಸ್ತುತ ನಮ್ಮ ತಂಡವು ಬರುವ ಪ್ರತಿಯೊಂದು ಅರ್ಜಿಯನ್ನು ಪರಿಶೀಲಿಸುತ್ತದೆ. ಆದರೆ, ಸದ್ಯಕ್ಕೆ ಕೇವಲ ಸೂಕ್ತವೆನಿಸುವ ಅಭ್ಯರ್ಥಿಗಳಿಗೆ ಮಾತ್ರ ನೇರವಾಗಿ ಪ್ರತಿಕ್ರಿಯೆ ನೀಡಲಾಗುತ್ತಿದೆ," ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
ಕೌಶಲ್ಯ ಆಧಾರಿತ ನೇಮಕಾತಿಗೆ ಬೆಂಬಲ
ಇಷ್ಟೆಲ್ಲಾ ಟೀಕೆಗಳ ನಡುವೆಯೂ, ಮಿತ್ತಲ್ ಅವರ ನೇಮಕಾತಿ ತತ್ವಕ್ಕೆ ವ್ಯಾಪಕ ಬೆಂಬಲವೂ ವ್ಯಕ್ತವಾಗಿದೆ. "2026ರ ನೇಮಕಾತಿಗೆ ಇದು ತುಂಬ ಅಗತ್ಯವಾದ ಮನಸ್ಥಿತಿ. ವಯಸ್ಸು, ಹಿಂದಿನ ಸಂಬಳ ಮತ್ತು ಲೇಬಲ್‌ಗಳು ವೃತ್ತಿಪರರ ಭವಿಷ್ಯವನ್ನು ನಿರ್ಧರಿಸಬಾರದು. ಕೇವಲ ಕೌಶಲ್ಯ, ಜವಾಬ್ದಾರಿ ಮತ್ತು ಮನಸ್ಥಿತಿ ಮುಖ್ಯವಾಗಬೇಕು," ಎಂದು ಒಬ್ಬರು ಬೆಂಬಲಿಸಿದ್ದಾರೆ.
"ಸಮರ್ಥ ಹಾಗೂ ಪ್ರಭಾವಶಾಲಿ ತಂಡಗಳನ್ನು ನಿರ್ಮಿಸುವ ಸಂಸ್ಥೆಗಳಿಗೆ ಇಂತಹ ದೃಷ್ಟಿಕೋನ ಅತ್ಯಗತ್ಯ, ಎಲ್ಲಾ ಎಚ್‌ಆರ್ ತಂಡಗಳೂ ಇಂತಹದ್ದೇ ಅರ್ಥಪೂರ್ಣ ನೇಮಕಾತಿ ಮಾದರಿಯನ್ನು ಅಳವಡಿಸಿಕೊಳ್ಳಬೇಕು," ಎಂದು ಮತ್ತೊಬ್ಬ ಬಳಕೆದಾರರು ಅಭಿಪ್ರಾಯಪಟ್ಟಿದ್ದಾರೆ. ಒಟ್ಟಿನಲ್ಲಿ ಈ ಒಂದು ಪೋಸ್ಟ್ ಕಾರ್ಪೊರೇಟ್ ನೇಮಕಾತಿಯ ಎರಡು ಮುಖಗಳನ್ನು ತೆರೆದಿಟ್ಟಿದೆ.












Click it and Unblock the Notifications