ವೈಭವ್ ಸೂರ್ಯವಂಶಿ ಮೈದಾನದಲ್ಲಿ ನೀರಿನ ಬಾಟಲ್ ಹೊರುವುದು ಕೀಳು ಮಟ್ಟದ ಕೆಲಸವಲ್ಲ: ಆರ್ ಅಶ್ವಿನ್
R Ashwin: ಐಪಿಎಲ್ 2026ರಲ್ಲಿ ರಾಜಸ್ಥಾನ್ ಪರ ಆಕ್ರಮಣಕಾರಿ ಆಟವಾಡಿ ಎದುರಾಳಿಗಳಿಗೆ ನಡುಕ ಹುಟ್ಟಿಸಿದ್ದ ವೈಭವ್ ಸೂರ್ಯವಂಶಿ ಅವರು ಇತ್ತೀಚೆಗಷ್ಟೇ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದರು. ಶ್ರೀಲಂಕಾ ಎ ವಿರುದ್ಧದ ಏಕದಿನ ತ್ರಿಕೋನ ಸರಣಿಯ ಫೈನಲ್ ಪಂದ್ಯದಲ್ಲೂ ಟೀಮ್ ಇಂಡಿಯಾ ಪರ ಸ್ಫೋಟಕ ಬ್ಯಾಟಿಂಗ್ ಮಾಡಿದ್ದರು. ಇದಾದ ಬಳಿಕ ಐರ್ಲೆಂಡ್ ಪ್ರವಾಸದಲ್ಲಿ ಅವರಿಗೆ ಆಡುವ ಅವಕಾಶ ಸಿಗಲಿಲ್ಲ. ಈ ವೇಳೆ ವಂಡರ್ ಕಿಡ್‌ಗೆ ಮೈದಾನದಲ್ಲಿ ಹಿರಿಯ ಆಟಗಾರರಿಗೆ ನೀರು ಕೊಡುವ ಕೆಲಸ ಕೊಟ್ಟಿದ್ದರಿಂದ ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಬಿಸಿಸಿಐ ವಿರುದ್ಧ ಟೀಕೆಗಳ ಸುರಿಮಳೆ ಹರಿಸಿದ್ದರು. ಇದೀಗ ಈ ಬಗ್ಗೆ ಆರ್.ಅಶ್ವಿನ್ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.
ಈ ವಿಚಾರದಲ್ಲಿ ಟೀಮ್ ಇಂಡಿಯಾ ಮಾಜಿ ಸ್ಟಾರ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು 15 ವರ್ಷದ ಯುವ ಆಟಗಾರ ವೈಭವ್ ಪರ ಬ್ಯಾಟ್ ಬೀಸಿದ್ದಾರೆ. ಐರ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ವೈಭವ್‌ಗೆ ಪೆವಿಲಿಯನ್‌ನಲ್ಲಿ ಹಿರಿಯ ಆಟಗಾರರಿಗೆ ಡ್ರಿಂಕ್ಸ್ ಹೊರುವ ಕೆಲಸ ನೀಡಿದ್ದಕ್ಕಾಗಿ ಕೆಲವು ನೆಟ್ಟಿಗರು ಸೋಷಿಯಲ್ ಜಾಲತಾಣದಲ್ಲಿ ಭಾರತೀಯ ಕ್ರಿಕೆಟ್ ಮಂಡಳಿ ಮತ್ತು ಮ್ಯಾನೇಜ್‌ಮೆಂಟ್ ಅನ್ನು ತರಾಟೆಗೆ ತೆಗೆದುಕೊಂಡಿದ್ದರು. ಇದೀಗ ಇದಕ್ಕೆ ಅಶ್ವಿನ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಪ್ಲೇಯಿಂಗ್ 11ನಿಂದ ಹೊರಗುಳಿದಿದ್ದ ವೈಭವ್
ಐಪಿಎಲ್ ಮತ್ತು ಶ್ರೀಲಂಕಾದಲ್ಲಿ ನಡೆದ ಭಾರತ ಎ ತಂಡದ ತ್ರಿಕೋನ ಸರಣಿಯಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಅವರನ್ನು ಭಾರತದ ಹಿರಿಯರ ಟಿ20 ತಂಡಕ್ಕೆ ಆಯ್ಕೆ ಮಾಡಲಾಗಿತ್ತು. ಐರ್ಲೆಂಡ್ ವಿರುದ್ಧದ ಟಿ20 ಪಂದ್ಯದಲ್ಲಿ ಅವರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಲು ಅವಕಾಶ ಸಿಗಬಹುದು ಎಂದು ಅಭಿಮಾನಿಗಳು ನಿರೀಕ್ಷಿಸಿದ್ದರು.
ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್ ವಿರುದ್ಧ ಆಕ್ರೋಶ
ಆದರೆ ಮ್ಯಾನೇಜ್‌ಮೆಂಟ್ ಅವರನ್ನು ಪ್ಲೇಯಿಂಗ್ 11ನಿಂದ ಕೈಬಿಟ್ಟಿದ್ದು, ಹಿರಿಯ ಆಟಗಾರರಿಗೆ ಮೈದಾನದಲ್ಲಿ ನೀರು ಕೊಡುವ ಜವಾಬ್ದಾರಿ ನೀಡಿತ್ತು. ಈ ಅದ್ಭುತ ಪ್ರತಿಭೆಗೆ ಪದಾರ್ಪಣೆ ಮಾಡಲು ಅವಕಾಶ ನೀಡದೆ, ಕೇವಲ ನೀರು ಹೊರಲು ಬಳಸಿಕೊಳ್ಳುತ್ತಿರುವುದಕ್ಕೆ ಕೆಲವು ಕ್ರಿಕೆಟ್ ಪ್ರೇಮಿಗಳು ಮತ್ತು ಟೀಕಾಕಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.
ಟೀಕಾಕಾರರಿಗೆ ಆರ್ ಅಶ್ವಿನ್ ತಿರುಗೇಟು
ಇದೀಗ ಟೀಕಾಕಾರರ ವಿರುದ್ಧ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಕಿಡಿಕಾರಿದ ಆರ್.ಅಶ್ವಿನ್, 'ಹಿರಿಯ ಆಟಗಾರರಿಗೆ ನೀರು ತರುವುದು ಅಥವಾ ಮೈದಾನದಲ್ಲಿ ಡ್ರಿಂಕ್ಸ್ ಕ್ಯಾರಿ ಮಾಡುವುದು ಕೀಳು ಮಟ್ಟದ ಕೆಲಸವೇ?,' ಎಂದು ಪ್ರಶ್ನಿಸಿದ್ದಾರೆ. ಮುಂದುವರೆದು ಮಾತನಾಡಿದ ಅವರು, 'ವೈಭವ್ ಸೂರ್ಯವಂಶಿಗೆ ನಾವು ಸಮಯ ನೀಡಬೇಕಾಗಿದೆ. ಅವರು ಖಂಡಿತವಾಗಿಯೂ ಒಂದಲ್ಲ ಒಂದು ದಿನ ದೇಶಕ್ಕಾಗಿ ಆಡಲಿದ್ದಾರೆ, ಅದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ಮೈದಾನದಲ್ಲಿ ನೀರು ತರುವುದು ಗೌರವಕ್ಕೆ ಧಕ್ಕೆ ತರುವ ಕೆಲಸವಲ್ಲ. ಹಿರಿಯ ಆಟಗಾರರಿಗೆ ನೀರು ಕೊಡುವುದು ಎಂದಿನಿಂದ ನೆಗೆಟಿವ್ ವಿಷಯವಾಯಿತು? ಕ್ರಿಕೆಟ್‌ನ ಸಂಸ್ಕೃತಿ ಮತ್ತು ನೈತಿಕತೆ ಯಾವಾಗ ಬದಲಾಯಿತು?,' ಅಂತಲೂ ಅವರು ಪ್ರಶ್ನಿಸಿದ್ದಾರೆ.
'ನೀರಿನ ಬಾಟಲ್ ಕೊಡುವುದು ಕೀಳು ಮಟ್ಟದ ಕೆಲಸವಲ್ಲ'
ತಮ್ಮದೇ ಉದಾಹರಣೆ ನೀಡಿದ ಅಶ್ವಿನ್, '1990 ಮತ್ತು 2000ರ ದಶಕದಲ್ಲಿ ನಾನು ಚೆನ್ನೈನಲ್ಲಿ ಬಾಲ್ ಬಾಯ್ ಆಗಿದ್ದೆ. ಆ ಸಮಯದಲ್ಲಿ ಹಿರಿಯ ಕ್ರಿಕೆಟಿಗರಿಗೆ ಮೈದಾನದಲ್ಲಿ ನೀರು ತರಲು ನನಗೆ ತುಂಬಾ ಸಂತೋಷವಾಗುತ್ತಿತ್ತು. ಮೈದಾನಕ್ಕೆ ಓಡಿಹೋಗಿ ಭಾರತೀಯ ಆಟಗಾರರಿಗೆ ನೀರಿನ ಬಾಟಲ್ ಕೊಡುವುದು ಕೀಳು ಮಟ್ಟದ ಕೆಲಸ ಎಂದು ಜನರು ಯೋಚಿಸುತ್ತಿರುವುದು ಸರಿಯಲ್ಲ,' ಎಂದು ಹೇಳಿದ್ದಾರೆ.
'ಹೊರಗಡೆ ಕುಳಿತು ಪಂದ್ಯವನ್ನು ನೋಡುವುದರಲ್ಲೂ ದೊಡ್ಡ ಕಲಿಕೆಯಿದೆ. ವೈಭವ್ ತಂಡಕ್ಕೆ ಸೇವೆ ಸಲ್ಲಿಸಲಿ, ಸಹಾಯ ಮಾಡಲಿ, ನೀರು ತರಲಿ, ಆ ಅನುಭವದಿಂದ ಕಲಿಯುವುದು ತುಂಬಾ ಇದೆ. ಒಬ್ಬ ಶ್ರೇಷ್ಠ ಆಟಗಾರ ರಾತ್ರೋರಾತ್ರಿ ಸೃಷ್ಟಿಯಾಗುವುದಿಲ್ಲ. ಒಮ್ಮೆ ವೈಭವ್ ಆಡಲು ಶುರುಮಾಡಿದರೆ, ಅವರು ಎಂದಿಗೂ ತಂಡದಿಂದ ಹೊರಹೋಗದ ದಿನ ಬರಬಹುದು. ಹಿಂದೆ ಸಚಿನ್ ತೆಂಡೂಲ್ಕರ್ ವಿಷಯದಲ್ಲೂ ಹೀಗೆಯೇ ಆಗಿತ್ತು,' ಎಂದು ಅಶ್ವಿನ್ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ಅಶ್ವಿನ್ ಟೀಕಾಕಾರರಿಗೆ ಚಳಿ ಬಿಡಿಸುವುದಲ್ಲದೆ, ವೈಭವ್ ಪರವಾಗಿಯೂ ಬ್ಯಾಟ್ ಬೀಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.












Click it and Unblock the Notifications