NHAI: ತುಮಕೂರು-ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿ-4ರ ಯೋಜನೆ ಸಂಬಂಧದ ವಿವಾದದಲ್ಲಿ NHAIಗೆ ಐತಿಹಾಸಿಕ ಜಯ
NHAI: ಕರ್ನಾಟಕದ ಪ್ರಮುಖ ರಾಷ್ಟ್ರೀಯ ಹೆದ್ದಾರಿ ಯೋಜನೆಗೆ ಸಂಬಂಧಿಸಿದ ವಿವಾದದಲ್ಲಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಐತಿಹಾಸಿಕ ಜಯ ಸಾಧಿಸಿದೆ. ನ್ಯಾಯಮಂಡಳಿಯು ಗುತ್ತಿಗೆದಾರ ಸಂಸ್ಥೆಯ ವಿರುದ್ಧ ಎನ್‌ಎಚ್‌ಎಐ ಪರವಾಗಿ 1,202 ಕೋಟಿ ರೂಪಾಯಿ ಮೊತ್ತದ ಬೃಹತ್ ತೀರ್ಪನ್ನು ನೀಡಿದೆ. ಈ ಪ್ರಕರಣವು ತುಮಕೂರು-ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿ-4ರ 6 ಪಥಗಳ ಯೋಜನೆಗೆ ಸಂಬಂಧಿಸಿದ್ದಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಇದು ಗುತ್ತಿಗೆದಾರ ಸಂಸ್ಥೆಯೊಂದರ ವಿರುದ್ಧದ ಮಧ್ಯಸ್ಥಿಕೆ ಪ್ರಕರಣದಲ್ಲಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇತಿಹಾಸದಲ್ಲೇ ಪಡೆದಿರುವ ಅತಿ ದೊಡ್ಡ ಗೆಲುವಾಗಿದೆ. ನ್ಯಾಯಮಂಡಳಿಯು ಗುತ್ತಿಗೆದಾರರ ಆರ್ಥಿಕ ಬೇಡಿಕೆಗಳನ್ನು ಸಂಪೂರ್ಣವಾಗಿ ತಿರಸ್ಕರಿಸಿ, ಪ್ರಾಧಿಕಾರದ ಒಪ್ಪಂದದ ಹಕ್ಕುಗಳನ್ನು ಎತ್ತಿಹಿಡಿದಿದೆ.

ವಿವಾದದ ಹಿನ್ನೆಲೆ ಏನು?
2010-11ರ ಅವಧಿಯಲ್ಲಿ ಬಿಲ್ಡ್-ಆಪರೇಟ್-ಟ್ರಾನ್ಸ್‌ಫರ್ ಮಾದರಿ ಅಡಿಯಲ್ಲಿ ಈ ಯೋಜನೆಯನ್ನು ಐಆರ್‌ಬಿ ತುಮಕೂರು ಚಿತ್ರದುರ್ಗ ಟೋಲ್‌ವೇ ಲಿಮಿಟೆಡ್ ಸಂಸ್ಥೆಗೆ ನೀಡಲಾಗಿತ್ತು. ಇದರ ಒಪ್ಪಂದದ ಅವಧಿ ಜೂನ್ 2037ರ ವರೆಗೆ ಇತ್ತು. ಒಪ್ಪಂದದ ಪ್ರಕಾರ ಗುತ್ತಿಗೆದಾರ ಸಂಸ್ಥೆಯು ಪ್ರತಿ ವರ್ಷ 140 ಕೋಟಿ ರೂಪಾಯಿ ವಾರ್ಷಿಕ ಪ್ರೀಮಿಯಂ ಅನ್ನು ವರ್ಷಕ್ಕೆ ಶೇಕಡಾ 5ರಷ್ಟು ಹೆಚ್ಚಳದೊಂದಿಗೆ ಪ್ರಾಧಿಕಾರಕ್ಕೆ ಪಾವತಿಸಬೇಕಾಗಿತ್ತು.
ವಿವಾದಕ್ಕೆ ಕಾರಣ ಏನು?
ಆದರೆ ಗುತ್ತಿಗೆದಾರ ಸಂಸ್ಥೆಯು ಪ್ರೀಮಿಯಂ ಪಾವತಿಯಲ್ಲಿ ಬಾಕಿ ಉಳಿಸಿಕೊಂಡ ಹಿನ್ನೆಲೆಯಲ್ಲಿ ಒಪ್ಪಂದದ ನಿಯಮಗಳ ಪ್ರಕಾರ ಆಗಸ್ಟ್ 2019ರಲ್ಲಿ ಎನ್‌ಎಚ್‌ಎಐ ಅವರಿಗೆ ನೀಡಲಾಗಿದ್ದ ಪ್ರೀಮಿಯಂ ಮುಂದೂಡಿಕೆ ಸೌಲಭ್ಯವನ್ನು ಹಿಂತೆಗೆದುಕೊಂಡಿತ್ತು. ಇದನ್ನು ಪ್ರಶ್ನಿಸಿದ ಗುತ್ತಿಗೆದಾರ ಸಂಸ್ಥೆಯು, ಈ ಸೌಲಭ್ಯವನ್ನು ಮರುಸ್ಥಾಪಿಸುವಂತೆ ಕೋವಿಡ್ ಮತ್ತು ಇತರ ಕಾರಣಗಳಿಂದ ಆದ ನಷ್ಟಕ್ಕೆ 95 ಕೋಟಿ ರೂಪಾಯಿ ಪರಿಹಾರ ನೀಡುವಂತೆ ಹಾಗೂ ರಿಯಾಯಿತಿ ಅವಧಿಯನ್ನು 138 ದಿನಗಳವರೆಗೆ ವಿಸ್ತರಿಸುವಂತೆ ಕೋರಿ ಕೋರ್ಟ್ ಮೆಟ್ಟಿಲೇರಿತು.
ಎನ್‌ಎಚ್‌ಎಐ ಪರ ಐತಿಹಾಸಿಕ ತೀರ್ಪು
ಇದಕ್ಕೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತೀವ್ರ ಪ್ರತಿರೋಧ ಒಡ್ಡಿತ್ತು. ನವೆಂಬರ್ 2022ರ ವರೆಗಿನ ಪ್ರೀಮಿಯಂ ಬಾಕಿ 679 ರೂಪಾಯಿ ಕೋಟಿ ಹಾಗೂ ತುಮಕೂರು ಬೈಪಾಸ್‌ನ ಆದಾಯದ ಪಾಲು 96 ಕೋಟಿ ರೂಪಾಯಿ ಸೇರಿದಂತೆ ಒಟ್ಟು ಬಾಕಿಯನ್ನು ಪಾವತಿಸಬೇಕೆಂದು ಪ್ರತಿ ಬೇಡಿಕೆ ಸಲ್ಲಿಸಿತ್ತು.
ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳಾದ ಜಸ್ಟಿಸ್ ಜಿ.ಎಸ್.ಸಿಂಘ್ವಿ, ಜಸ್ಟಿಸ್ ಬಿ.ಎಸ್. ಚೌಹಾಣ್ ಮತ್ತು ಎನ್‌ಸಿಎಲ್‌ಎಟಿ ಮಾಜಿ ಸದಸ್ಯ ವಿ.ಪಿ.ಸಿಂಗ್ ಅವರನ್ನೊಳಗೊಂಡ ನ್ಯಾಯಮಂಡಳಿಯು ಗುತ್ತಿಗೆದಾರರ 95 ಕೋಟಿ ರೂಪಾಯಿ ಹಣಕಾಸಿನ ಬೇಡಿಕೆಯನ್ನು ಸಂಪೂರ್ಣವಾಗಿ ತಿರಸ್ಕರಿಸಿದೆ. ಅಲ್ಲದೆ ಗುತ್ತಿಗೆದಾರರು ಕೋರಿದ್ದ 138 ದಿನಗಳ ಅವಧಿ ವಿಸ್ತರಣೆಯನ್ನು ಕೇವಲ 23 ದಿನಗಳಿಗೆ ಸೀಮಿತಗೊಳಿಸಿ ಜೂನ್ 2026ರ ವರೆಗಿನ ಬಾಕಿ ಪ್ರೀಮಿಯಂ ಮತ್ತು ಆದಾಯದ ಪಾಲಿಗೆ ಸಂಬಂಧಿಸಿದಂತೆ ಎನ್‌ಎಚ್‌ಎಐ ಪರವಾಗಿ ಒಟ್ಟು 1,202 ರೂಪಾಯಿ ಕೋಟಿ ತೀರ್ಪು ನೀಡಿದೆ.
ಮತ್ತೊಂದು ಪ್ರಕರಣದಲ್ಲಿ ಪ್ರಾಧಿಕಾರಕ್ಕೆ ಬಿಗ್ ರಿಲೀಫ್
ಇದೇ ವೇಳೆ ಅಸ್ಸಾಂನ 30 ಕಿಲೋ ಮೀಟರ್ ಉದ್ದದ ಬಿಜ್ನಿ-ಪಶ್ಚಿಮ ಬಂಗಾಳ ಗಡಿ ನಾಲ್ಕು ಪಥಗಳ ಹೆದ್ದಾರಿ ಯೋಜನೆಗೆ ಸಂಬಂಧಿಸಿದ ವಿವಾದದಲ್ಲೂ ದೆಹಲಿ ಹೈಕೋರ್ಟ್‌ನ ವಿಭಾಗೀಯ ಪೀಠವು ಎನ್‌ಎಚ್‌ಎಐಗೆ ಬಿಗ್ ರಿಲೀಫ್ ನೀಡಿದೆ. ಕೋರ್ಟ್ ಪ್ರಾಧಿಕಾರ ಪಾವತಿಸಬೇಕಾಗಿದ್ದ 161 ಕೋಟಿ ರೂಪಾಯಿ ಹಣಕಾಸಿನ ಹೊಣೆಗಾರಿಕೆಯನ್ನು ಕೇವಲ 36 ಕೋಟಿ ರೂಪಾಯಿಗೆ ಇಳಿಸಿದೆ.
ಇತ್ತೀಚಿನ ದಿನಗಳಲ್ಲಿ ಕಟ್ಟುನಿಟ್ಟಿನ ತಂತ್ರಜ್ಞಾನದ ಬಳಕೆಯಿಂದಾಗಿ ಎನ್‌ಎಚ್‌ಎಐ ಮಧ್ಯಸ್ಥಿಕೆ ಪ್ರಕರಣಗಳಲ್ಲಿ ಸರಣಿ ಯಶಸ್ಸನ್ನು ಸಾಧಿಸುತ್ತಿದೆ. ಈ ಹಿಂದೆ ಏಪ್ರಿಲ್‌ನಲ್ಲಿ ಪಾಣಿಪತ್-ಜಲಂಧರ್ ರಸ್ತೆ ಯೋಜನೆಗೆ ಸಂಬಂಧಿಸಿದ ವಿವಾದದಲ್ಲೂ ಹೆದ್ದಾರಿ ಪ್ರಾಧಿಕಾರವು 820 ಕೋಟಿ ರೂಪಾಯಿ ಪ್ರತಿ-ಕ್ಲೈಮ್ ಗೆದ್ದುಕೊಂಡಿತ್ತು. ಒಟ್ಟನಲ್ಲಿ ಸತತ ತೀರ್ಪು ಭಾರತೀಯ ರಾಷ್ಟ್ರೀಯ ಪ್ರಾಧಿಕರದ ಪರ ಆಗುತ್ತಿದ್ದು, ಇದು ದೊಡ್ಡ ಮಟ್ಟದ ಗೆಲುವುವಾಗಿ ಗಮನ ಸೆಳೆದಿದೆ.












Click it and Unblock the Notifications