Gold Price Crash: 2008ರ ನಂತರ ಚಿನ್ನದ ಮಾರುಕಟ್ಟೆಯಲ್ಲಿ ಮಹಾ ಕುಸಿತ; ಎರಡೇ ದಿನಕ್ಕೆ ₹38,200 ಇಳಿಕೆ ಕಂಡ ಬಂಗಾರ
ಜಾಗತಿಕ ಮಾರುಕಟ್ಟೆಯ ತಲ್ಲಣಗಳ ನಡುವೆ ಚಿನ್ನದ ಮಾರುಕಟ್ಟೆಯಲ್ಲಿ ದೊಡ್ಡ ಸುನಾಮಿ ಎದ್ದಿದೆ. 2008ರ ಜಾಗತಿಕ ಆರ್ಥಿಕ ಹಿಂಜರಿತದ ನಂತರ ಬಂಗಾರದ ಬೆಲೆಯಲ್ಲಿ ಸಂಭವಿಸಿರುವ ಅತ್ಯಂತ ಭೀಕರ ಕುಸಿತ ಇದು ಎಂದು ಹೇಳಲಾಗುತ್ತಿದೆ. ಜೂನ್ ತಿಂಗಳ ಕೊನೆಯ ದಿನವಾದ ಇಂದು ದೇಶದ ರಾಜಧಾನಿ ದೆಹಲಿ ಸೇರಿದಂತೆ ದೇಶಾದ್ಯಂತ ಚಿನ್ನದ ಬೆಲೆ ಸತತವಾಗಿ ಪಾತಾಳಕ್ಕೆ ಕುಸಿದಿದ್ದು, ಖರೀದಿದಾರರಿಗೆ ವರದಾನವಾಗಿದೆ. ಕೇವಲ ಎರಡೇ ದಿನಗಳ ವಹಿವಾಟಿನಲ್ಲಿ ಪ್ರತಿ 100 ಗ್ರಾಂ 24 ಕ್ಯಾರೆಟ್ ಅಪರಂಜಿ ಚಿನ್ನದ ದರದಲ್ಲಿ ಬರೋಬ್ಬರಿ ₹38,200 ರಷ್ಟು ಭಾರಿ ಇಳಿಕೆ ದಾಖಲಾಗಿದೆ.
ಬೆಲೆ ದಿಢೀರ್ ಕುಸಿಯಲು ಕಾರಣವೇನು?
ದೆಹಲಿಯಲ್ಲಿ 24 ಕ್ಯಾರೆಟ್ ಚಿನ್ನ ಇಂದು ಪ್ರತಿ ಗ್ರಾಂಗೆ ₹180 ಇಳಿಕೆಯಾಗಿದ್ದು, ಪ್ರಸ್ತುತ ₹14,028ಕ್ಕೆ ತಲುಪಿದೆ. 22 ಕ್ಯಾರೆಟ್ ಚಿನ್ನ ಪ್ರತಿ ಗ್ರಾಂಗೆ ₹165ರಷ್ಟು ಇಳಿಕೆ ಕಂಡಿದ್ದು, ಪ್ರಸ್ತುತ ₹12,860 ಆಗಿದೆ. ಕಳೆದ 18 ವರ್ಷಗಳ ಇತಿಹಾಸದಲ್ಲೇ ಜೂನ್ ತಿಂಗಳು ಚಿನ್ನದ ಪಾಲಿಗೆ ಅತ್ಯಂತ ಕರಾಳ ತಿಂಗಳಾಗಿ ಮಾರ್ಪಟ್ಟಿದೆ. ಜಾಗತಿಕ ಸುದ್ದಿ ಸಂಸ್ಥೆ 'ರಾಯಿಟರ್ಸ್' ವರದಿಯ ಪ್ರಕಾರ, ಕೇವಲ ಜೂನ್ ತಿಂಗಳೊಂದರಲ್ಲೇ ಚಿನ್ನದ ಬೆಲೆ ಶೇ.13ರಷ್ಟು ಕುಸಿದಿದೆ. ಇದು ಸತತ ನಾಲ್ಕನೇ ತಿಂಗಳ ಇಳಿಕೆಯಾಗಿದೆ. 2013ರ ನಂತರ ಅತ್ಯಂತ ಕಳಪೆ ತ್ರೈಮಾಸಿಕ ನಷ್ಟವನ್ನು ಹಳದಿ ಲೋಹ ಅನುಭವಿಸುತ್ತಿದೆ.

ಇದಕ್ಕೆ ಮುಖ್ಯ ಕಾರಣಗಳು
ಯುಎಸ್ (US) ಫೆಡರಲ್ ಬ್ಯಾಂಕ್ ತನ್ನ ಬಡ್ಡಿದರಗಳನ್ನು ದೀರ್ಘಕಾಲದವರೆಗೆ ಗರಿಷ್ಠ ಮಟ್ಟದಲ್ಲೇ ಉಳಿಸಿಕೊಳ್ಳಬಹುದು ಎಂಬ ಮುನ್ಸೂಚನೆ ಸಿಕ್ಕಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಮೆರಿಕನ್ ಡಾಲರ್ ಸೂಚ್ಯಂಕ ಭಾರಿ ಬಲಪಡೆಯುತ್ತಿರುವುದರಿಂದ, ಹೂಡಿಕೆದಾರರು ಸುರಕ್ಷಿತ ಹೂಡಿಕೆಯಾಗಿದ್ದ ಚಿನ್ನದಿಂದ ಹಣವನ್ನು ಹಿಂಪಡೆದು ಡಾಲರ್ ಮೇಲೆ ಹೂಡಿಕೆ ಮಾಡುತ್ತಿದ್ದಾರೆ. ಖ್ಯಾತ ಮಾರುಕಟ್ಟೆ ವಿಶ್ಲೇಷಣಾ ಸಂಸ್ಥೆ 'ಚಾಯ್ಸ್ ಬ್ರೋಕಿಂಗ್'ನ ಕಮೋಡಿಟಿ ಅನಾಲಿಟಿಕ್ಸ್ ತಜ್ಞರಾದ ಕಾವೇರಿ ಮೋರೆ ಅವರ ಪ್ರಕಾರ, ಮಾರುಕಟ್ಟೆಯಲ್ಲಿ ಸದ್ಯಕ್ಕೆ ಚಿನ್ನದ ಮೇಲಿನ ಹಿಡಿತ ಮಂದಗತಿಯಲ್ಲೇ ಮುಂದುವರಿಯಲಿದೆ. ಜುಲೈ ತಿಂಗಳ ಆರಂಭದಲ್ಲಿ ಚಿನ್ನಕ್ಕೆ ₹1,40,000ರಿಂದ ₹1,38,960 ರವರೆಗೆ ತಕ್ಷಣದ ಬೆಂಬಲವಿದೆ. ಒಂದು ವೇಳೆ ಮಾರುಕಟ್ಟೆ ಇದರಗಿಂತಲೂ ಕೆಳಕ್ಕೆ ಕುಸಿದರೆ ಮಾರಾಟದ ಒತ್ತಡ ಮತ್ತಷ್ಟು ಹೆಚ್ಚಾಗಬಹುದು. ಇಳಿಕೆ ಹಾದಿ ಮುಗಿದು ಚಿನ್ನ ಚೇತರಿಸಿಕೊಳ್ಳಬೇಕಾದರೆ ₹1,44,780ರಿಂದ ₹1,47,000 ಮಟ್ಟವನ್ನು ದಾಟಬೇಕಾಗುತ್ತದೆ.
ಬೆಂಗಳೂರಿನಲ್ಲಿ ಒಂದೇ ದಿನದಲ್ಲಿ ₹1,800 ಕುಸಿತ
ರಾಜಧಾನಿ ಬೆಂಗಳೂರಿನಲ್ಲಿ ಇಂದು ಚಿನ್ನದ ಬೆಲೆಯಲ್ಲಿ ಭಾರಿ ಕುಸಿತ ಕಂಡುಬಂದಿದೆ. ಕಳೆದ ಕೆಲವು ದಿನಗಳಿಂದ ಸಾರ್ವಜನಿಕರನ್ನು ಕಂಗಾಲು ಚಿನ್ನದ ದರವು ಇಂದು ಬರೋಬ್ಬರಿ 1,800 ರೂಪಾಯಿಗಳವರೆಗೆ (10 ಗ್ರಾಂಗೆ) ಇಳಿಕೆಯಾಗಿದ್ದು, ಆಭರಣ ಪ್ರಿಯರಿಗೆ ಮತ್ತು ಶೀಘ್ರದಲ್ಲೇ ಮದುವೆ ಮುಂತಾದ ಶುಭ ಸಮಾರಂಭಗಳಿಗೆ ಬಂಗಾರ ಖರೀದಿಸಲು ಯೋಜಿಸುತ್ತಿರುವವರಿಗೆ ಇದು ಅತ್ಯಂತ ಸಿಹಿ ಸುದ್ದಿಯಾಗಿದೆ.
22 ಕ್ಯಾರೆಟ್ ಆಭರಣ ಚಿನ್ನದ ಬೆಲೆಯಲ್ಲಿ ಇಂದು ಪ್ರತಿ ಗ್ರಾಂಗೆ ₹165 ರಷ್ಟು ಇಳಿಕೆಯಾಗಿದೆ. 1 ಗ್ರಾಂ ಚಿನ್ನದ ಬೆಲೆ ₹12,845, 8 ಗ್ರಾಂ ಚಿನ್ನದ ಬೆಲೆ ₹1,02,760, 10 ಗ್ರಾಂ ಚಿನ್ನದ ಬೆಲೆ ₹1,28,450 ಆಗಿದೆ. 24 ಕ್ಯಾರೆಟ್ ಚಿನ್ನದ ದರ ಇಂದು ಪ್ರತಿ ಗ್ರಾಂಗೆ ₹180ರಷ್ಟು ಭಾರಿ ಕುಸಿತ ದಾಖಲಾಗಿದೆ. 1 ಗ್ರಾಂ ಚಿನ್ನದ ಬೆಲೆ ₹14,013, 8 ಗ್ರಾಂ ಚಿನ್ನದ ಬೆಲೆ ₹1,12,104, 18 ಕ್ಯಾರೆಟ್ ಚಿನ್ನದ ದರದಲ್ಲೂ ಇಂದು ಪ್ರತಿ ಗ್ರಾಂಗೆ ₹135ರಷ್ಟು ಇಳಿಕೆಯಾಗಿದೆ.
ಚಿನ್ನ ಮತ್ತು ಬೆಳ್ಳಿಯ ದರಗಳು ಪ್ರತಿದಿನ ಅಂತರರಾಷ್ಟ್ರೀಯ ವಿದ್ಯಮಾನಗಳಿಗೆ ತಕ್ಕಂತೆ ಬದಲಾಗುತ್ತವೆ. ಆಭರಣ ಖರೀದಿಸುವ ಮುನ್ನ ಅಧಿಕೃತ ಜ್ಯುವೆಲ್ಲರಿ ಮಳಿಗೆಗಳಲ್ಲಿ ಇಂದಿನ ಜಿಎಸ್‌ಟಿ ಹಾಗೂ ಮೇಕಿಂಗ್ ಚಾರ್ಜ್‌ಗಳನ್ನು ಒಳಗೊಂಡ ಅಂತಿಮ ದರವನ್ನು ಪರಿಶೀಲಿಸಿಕೊಳ್ಳಿ.













Click it and Unblock the Notifications