ಯುದ್ಧಕ್ಕೆ ಸಜ್ಜಾಗಿದೆ ಭಾರತದ ಆಗಸದ ಕಣ್ಣು 'ನೇತ್ರಾ'! ಡಿಆರ್‌ಡಿಒ ಸಾಧನೆಗೆ ಹೊಸ ಮೈಲಿಗಲ್ಲು

ಬಾಹ್ಯಾಕಾಶ, ರಕ್ಷಣಾ ಮತ್ತು ಜಾಗತಿಕ ರಾಜಕೀಯ ವಿಶ್ಲೇಷಕರಾದ ಗಿರೀಶ್ ಲಿಂಗಣ್ಣ ಅವರ ವಿಶೇಷ ಬರಹ ಇಲ್ಲಿದೆ.

ನೀವು ಗಡಿ ಪ್ರದೇಶದ ಬಳಿ ನಿಂತಿರುವುದನ್ನು ಊಹಿಸಿಕೊಳ್ಳಿ. ನಿಮ್ಮಿಂದ ಸಾಕಷ್ಟು ದೂರದಲ್ಲಿ ನಿಂತಿರುವ ಶತ್ರು ಮೌನವಾಗಿಯೇ ತನ್ನ ಮುಂದಿನ ನಡೆಯನ್ನು ಯೋಜಿಸುತ್ತಿದ್ದಾನೆ. ಆದರೆ, ಆತ ಒಂದೇ ಒಂದು ಹೆಜ್ಜೆ ಮುಂದಿಡುವ ಮುನ್ನವೇ ಶತ್ರು ಏನು ಮಾಡುತ್ತಾನೆ ಎನ್ನುವುದು ನಿಮಗೆ ತಿಳಿದು ಹೋಗುತ್ತದೆ. ಇದು ಯಾವುದೋ ಕಾಲ್ಪನಿಕ ಚಲನಚಿತ್ರದ ಕಥೆಯಂತೆ ತೋರುತ್ತದಲ್ಲವೇ? ಆದರೆ, ಇದು ವಾಸ್ತವವಾಗಿ ಯುದ್ಧಕ್ಕೆ ಸಜ್ಜಾದ ಭಾರತದ ಆಗಸದ ಕಣ್ಣು 'ನೇತ್ರಾ'! ಡಿಆರ್‌ಡಿಒ ಸಾಧನೆಗೆ ಹೊಸ ಮೈಲಿಗಲ್ಲುಭಾರತ ಇಂದು ಹೊಂದಿರುವ ಸಾಮರ್ಥ್ಯ! ಇದಕ್ಕೆ ಕಾರಣ ಡಿಆರ್‌ಡಿಒ ನೇತ್ರ ಎನ್ನುವ ಹಾರಾಡುವ ಯಂತ್ರ.

ಹಾಗಾದರೆ, ಈ ನೇತ್ರ ಎಂದರೇನು? ಸರಳವಾಗಿ ಹೇಳುವುದಾದರೆ, ನೇತ್ರ ಎನ್ನುವುದು ಒಂದು ಹಾರಾಡುವ ರೇಡಾರ್. ಇದೊಂದು ವಿಶೇಷ ಏರ್‌ಕ್ರಾಫ್ಟ್ ಆಗಿದ್ದು, ಆಗಸದಲ್ಲಿ ಮೇಲಕ್ಕೆ ಹಾರಿ, ಮೋಡಗಳ ಮೇಲೆ ತೇಲುತ್ತಿರುವ ಬೃಹತ್ ಮೋಡದ ರೀತಿಯಲ್ಲಿ ವಿಶಾಲ ಭೂ ಪ್ರದೇಶವನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತದೆ. ಇಂತಹ ಒಂದು ವ್ಯವಸ್ಥೆಗೆ ಎಡಬ್ಲ್ಯುಎಸಿಎಸ್ ಎನ್ನುವ ಹೆಸರಿದೆ. ಇದು ಏರ್‌ಬಾರ್ನ್ ಅರ್ಲಿ ವಾರ್ನಿಂಗ್ ಆ್ಯಂಡ್ ಕಂಟ್ರೋಲ್ ಸಿಸ್ಟಮ್ ಎನ್ನುವುದರ ಹೃಸ್ವರೂಪವಾಗಿದೆ. ಇದರಲ್ಲಿನ 'ಅರ್ಲಿ ವಾರ್ನಿಂಗ್', ಅಂದರೆ ಬೇಗ ಮುನ್ನೆಚ್ಚರಿಕೆ ನೀಡುವುದೇ ನಿಜವಾದ ಜಾದೂ ಆಗಿದೆ. ನಿಜಕ್ಕೂ ಅಪಾಯ ನಮ್ಮನ್ನು ತಲುಪುವ ಮುನ್ನವೇ ಇದು ನಮ್ಮ ಪಡೆಗಳಿಗೆ ಅಪಾಯದ ಮುನ್ನೆಚ್ಚರಿಕೆ ನೀಡುತ್ತದೆ.

DRDO Netra AWACS

ಈಗ ಲಭಿಸಿರುವ ದೊಡ್ಡ ಸುದ್ದಿಯೆಂದರೆ, ನೇತ್ರಾಗೆ ಅದರ ಫೈನಲ್ ಆಪರೇಷನ್ ಕ್ಲಿಯರೆನ್ಸ್ ಅಥವಾ ಎಫ್ಒಸಿ ಲಭಿಸಿದೆ. ಈ ಪದ ಏಕೋ ದೊಡ್ಡದಾಗಿ ಕಂಡರೂ, ಇದರ ಅರ್ಥ ಮಾತ್ರ ಸೊಗಸಾಗಿದೆ. ಸರಳವಾಗಿ ಹೇಳುವುದಾದರೆ, ನಮ್ಮ ವಿಜ್ಞಾನಿಗಳು ಈ ಯಂತ್ರವನ್ನು ಸಂಪೂರ್ಣವಾಗಿ ಪರಿಶೀಲಿಸಿ, ಅದಕ್ಕೆ ಸಿದ್ಧತಾ ಪ್ರಮಾಣ ಪತ್ರ ನೀಡಿದ್ದಾರೆ. ನೇತ್ರ ಸಿದ್ಧವಾಗಿದ್ದು, ಸಾಕಷ್ಟು ಗಟ್ಟಿಯಾಗಿದ್ದು, ಅವಶ್ಯಕತೆ ಎದುರಾದರೆ ನೈಜ ಯುದ್ಧದ ಸನ್ನಿವೇಶದಲ್ಲೂ ಬಳಕೆಗೆ ಸಜ್ಜಾಗಿದೆ. ಅಂದರೆ, ಅದು ತನ್ನ ಪರೀಕ್ಷಾ ಹಂತಗಳನ್ನು ಪೂರ್ಣಗೊಳಿಸಿದೆ. ಆ ಮೂಲಕ ನೇತ್ರ ಈಗ ಭಾರತೀಯ ವಾಯು ಸೇನೆಯ ಸಂಪೂರ್ಣ ನಂಬಿಕಾರ್ಹ ಯೋಧನಾಗಿದೆ.

 ಪಾಕಿಸ್ತಾನಕ್ಕೆ ಸಂಕಷ್ಟ ತಂತು ಡೊನಾಲ್ಡ್ ಟ್ರಂಪ್‌ರ ಇಸ್ರೇಲ್ ಒಪ್ಪಂದದ ಬೇಡಿಕೆ
ಪಾಕಿಸ್ತಾನಕ್ಕೆ ಸಂಕಷ್ಟ ತಂತು ಡೊನಾಲ್ಡ್ ಟ್ರಂಪ್‌ರ ಇಸ್ರೇಲ್ ಒಪ್ಪಂದದ ಬೇಡಿಕೆ

ಭಾರತೀಯರೆಲ್ಲರೂ ಹೆಮ್ಮೆ ಪಡಬೇಕಾದ ಒಂದು ವಿಚಾರವೂ ಇಲ್ಲಿದೆ. ಅದೇನೆಂದರೆ, ನೇತ್ರ ಸಂಪೂರ್ಣವಾಗಿ ಭಾರತದಲ್ಲೇ ನಿರ್ಮಾಣಗೊಂಡಿದೆ. ಇದರ ದೇಹ ಬ್ರೆಜಿಲ್‌ನಿಂದ ಬಂದಿರುವುದೇನೋ ನಿಜವೇ. ಆದರೆ, ನಿಜವಾದ ಹೀರೋ ಆಗಿರುವ ನೇತ್ರಾದ ಮೆದುಳು ಮಾತ್ರ 100% ಭಾರತೀಯವಾಗಿದ್ದು, ನಮ್ಮ ಡಿಆರ್‌ಡಿಒ ವಿಜ್ಞಾನಿಗಳು ಇದನ್ನು ನಿರ್ಮಿಸಿದ್ದಾರೆ. ದಶಕಗಳ ಕಾಲ, ಭಾರತ ಇಂತಹ ಶಕ್ತಿಶಾಲಿ ಯಂತ್ರಗಳಿಗಾಗಿ ವಿದೇಶಗಳ ಮೇಲೆ ಅವಲಂಬನೆ ಹೊಂದಿತ್ತು. ಆದರೆ ಈಗ ನಾವು ಅಂತಹ ಅವಲಂಬನೆಯನ್ನು ಕಡಿತಗೊಳಿಸಿದ್ದೇವೆ. ಇದನ್ನೇ ತಜ್ಞರು 'ಏರೋಸ್ಪೇಸ್ ಸ್ವಾವಲಂಬನೆ' ಎಂದು ಕರೆಯುತ್ತಾರೆ. ಇದು ಆಗಸದಲ್ಲೂ ನಾವು ನಮ್ಮ ಕಾಲ ಮೇಲೆ ನಿಲ್ಲುವುದನ್ನು ಸೂಚಿಸುತ್ತದೆ.

ಇದು ಎಷ್ಟು ಬುದ್ಧಿವಂತ ಯಂತ್ರ ಎನ್ನುವುದನ್ನು ಅರ್ಥ ಮಾಡಿಕೊಳ್ಳಲು ನಾವು ಇದರ ಒಳಗನ್ನು ಒಮ್ಮೆ ಗಮನಿಸೋಣ. ಇದರ ಮೇಲ್ಭಾಗದಲ್ಲಿ ಒಂದು ವಿಶೇಷ ರೇಡಾರ್ ಇದ್ದು, ಅದು ಏಕಕಾಲದಲ್ಲಿ ಸಾಕಷ್ಟು ದೂರದಲ್ಲಿರುವ ನೂರಾರು ಗುರಿಗಳನ್ನು ಗಮನಿಸಿ ಗುರುತಿಸಬಲ್ಲದು. ಇದು ಎರಡು ಬದಿಗೆ ಗಮನಿಸುವ ಎರಡು ಆ್ಯಂಟೆನಾಗಳನ್ನು ಹೊಂದಿದ್ದು, ಎರಡೂ ಒಂದೊಂದು ಬದಿಯಲ್ಲಿದ್ದು, ಆ ಮೂಲಕ ಯಾವುದೇ 'ಬ್ಲೈಂಡ್ ಸ್ಪಾಟ್' ಇಲ್ಲದಂತೆ ಖಾತ್ರಿಪಡಿಸುತ್ತದೆ. ಅದರ ಕಣ್ಣು ತಪ್ಪಿಸಿ ಯಾವುದೂ ಸಾಗಲು ಸಾಧ್ಯವಿಲ್ಲ. ಆ ಪ್ರದೇಶದಲ್ಲಿ ಹಾರಾಟ ನಡೆಸುವ ಯಾವುದೇ ಶತ್ರು ಯುದ್ಧ ವಿಮಾನವಾಗಲಿ, ಡ್ರೋನ್‌ಗಳಾಗಲಿ, ಕ್ಷಿಪಣಿಗಳಾಗಲಿ, ಎಲ್ಲವೂ ನೇತ್ರದ ಕಣ್ಣಿಗೆ ಬೀಳುತ್ತದೆ.

ಕರ್ನಾಟಕದ ಕೈತಪ್ಪಿದ ಭಾರತದ 5ನೇ ತಲೆಮಾರಿನ ಸ್ಟೆಲ್ತ್ ಯುದ್ಧ ವಿಮಾನ ನಿರ್ಮಾಣದ ಅವಕಾಶ!
ಕರ್ನಾಟಕದ ಕೈತಪ್ಪಿದ ಭಾರತದ 5ನೇ ತಲೆಮಾರಿನ ಸ್ಟೆಲ್ತ್ ಯುದ್ಧ ವಿಮಾನ ನಿರ್ಮಾಣದ ಅವಕಾಶ!

ಕೇವಲ ಅವುಗಳನ್ನು ಗಮನಿಸುವುದು ಎಂದರೆ ಅರ್ಧ ಕೆಲಸ ಮಾಡಿದಂತೆ. ನೇತ್ರಾ ಯೋಚನಾ ಶಕ್ತಿಯನ್ನೂ ಹೊಂದಿದೆ. ದೇಶೀಯವಾಗಿ ನಿರ್ಮಿಸಿರುವ ಅದರ ಸಾಫ್ಟ್‌ವೇರ್ ಸ್ವಯಂಚಾಲಿತವಾಗಿಯೇ ಯಾವುದಾದರೂ ವಸ್ತು ಅಪಾಯಕಾರಿಯೇ ಎಂದು ಗುರುತಿಸಿ, ಮಾನವರು ತಮ್ಮ ಪರದೆಯ ಮೇಲೆ ಅದನ್ನು ವೀಕ್ಷಿಸಿ ತೀರ್ಮಾನಿಸುವ ಮುನ್ನವೇ ಎಚ್ಚರಿಕೆ ಮೊಳಗಿಸಲಾರಂಭಿಸುತ್ತದೆ. ಯುದ್ಧದ ಸಂದರ್ಭದಲ್ಲಿ ಪ್ರತಿಯೊಂದು ಸೆಕೆಂಡೂ ಅಮೂಲ್ಯವಾಗಿದ್ದು, ಈ ವೇಗವೇ ಜೀವ ರಕ್ಷಕವಾಗಿರುತ್ತದೆ. ಒಂದು ಬಾರಿ ಅಪಾಯ ಕಂಡುಬಂದರೆ, ಈ ವ್ಯವಸ್ಥೆ ಸುರಕ್ಷಿತವಾದ, ಕೋಡೆಡ್ ಸಂವಹನವನ್ನು ಬಳಸಿಕೊಂಡು, ಅಪಾಯದ ನಿಖರ ಸ್ಥಾನವನ್ನು ನೇರವಾಗಿ ನಮ್ಮ ಯುದ್ಧ ವಿಮಾನಗಳ ಪೈಲಟ್‌ಗಳಿಗೆ ರವಾನಿಸುತ್ತದೆ. ಇದರಿಂದ ಶತ್ರುಗಳು ತಲುಪುವ ಮುನ್ನವೇ ನಮ್ಮ ಯುದ್ಧ ವಿಮಾನಗಳು ಸಿದ್ಧವಾಗಿರುತ್ತವೆ.

ಆದರೆ, ಒಂದು ವೇಳೆ ಶತ್ರುಗಳು ನೇತ್ರಾ ಮೇಲೆಯೇ ದಾಳಿ ನಡೆಸಲು ಪ್ರಯತ್ನಿಸಿದರೆ? ಆಗಲೂ ಏನೂ ತೊಂದರೆಯಿಲ್ಲ. ಏಕೆಂದರೆ, ನೇತ್ರಾ ಶತ್ರುಗಳ ರೇಡಾರ್‌ಗಳನ್ನು ಜಾಮ್ ಮಾಡಬಲ್ಲ ತನ್ನದೇ ರಕ್ಷಣಾ ಕವಚವನ್ನೂ ಹೊಂದಿದ್ದು, ಅದು ನೇತ್ರಾ ಸುರಕ್ಷಿತವಾಗಿ ಆಗಸದಿಂದ ತನ್ನ ಕೆಲಸ ಮಾಡುವುದನ್ನು ಖಾತ್ರಿಪಡಿಸುತ್ತದೆ.

ಡಿಆರ್‌ಡಿಒ ಮುಖ್ಯಸ್ಥರು ಒಂದು ಪ್ರಮುಖ ವಿಚಾರವನ್ನು ಹೇಳಿದ್ದಾರೆ. ಯಾವುದೇ ಒಂದು ಆಯುಧ ವ್ಯವಸ್ಥೆ ನಾಲ್ಕು ವಿಭಿನ್ನ ಜಗತ್ತಿನಲ್ಲಿ ಕೆಲಸ ಮಾಡಬೇಕು ಎಂದು ಅವರು ಹೇಳಿದ್ದಾರೆ. ಮೊದಲನೆಯದಾಗಿ ವಿನ್ಯಾಸ ಕೇಂದ್ರದಲ್ಲಿ, ಬಳಿಕ ಪ್ರಯೋಗಾಲಯದಲ್ಲಿ, ಮೂರನೆಯದಾಗಿ ಪರೀಕ್ಷಾ ಹಂತದಲ್ಲಿ, ಮತ್ತು ಕೊನೆಯದಾಗಿ ನೈಜ ಯುದ್ಧ ಭೂಮಿಯಲ್ಲಿ ಎಂದು ಅವರು ವಿವರಿಸಿದ್ದಾರೆ. ಇವು ನಾಲ್ಕು ಸಂಪೂರ್ಣ ವಿಭಿನ್ನವಾದ ಸವಾಲುಗಳಾಗಿವೆ. ನೇತ್ರಾ ಯೋಜನೆಯ ಮೂಲಕ ಭಾರತ ಇವೆಲ್ಲ ಸವಾಲುಗಳನ್ನು ಯಶಸ್ವಿಯಾಗಿ ದಾಟಿದೆ. ಇದೇನು ಸಣ್ಣ ವಿಚಾರವಲ್ಲ. ಇದು ನಮ್ಮ ವಿಜ್ಞಾನಿಗಳ ಹಲವು ವರ್ಷಗಳ ಅವಿಶ್ರಾಂತ ಪ್ರಯತ್ನ ಮತ್ತು ನಂಬಿಕೆ ವಾಸ್ತವವಾಗಿ ಬದಲಾಗಿರುವುದಕ್ಕೆ ಸಾಕ್ಷಿಯಾಗಿದೆ.

ಇಲ್ಲಿನ ಇನ್ನೊಂದು ಅಂಶವೆಂದರೆ, ನಾವು ಇಲ್ಲಿಗೇ ನಮ್ಮ ಪ್ರಯತ್ನಗಳನ್ನು ನಿಲ್ಲಿಸುತ್ತಿಲ್ಲ. ನೇತ್ರಾದ ಮುಂದಿನ ಆವೃತ್ತಿಯಾದ ನೇತ್ರಾ ಮಾರ್ಕ್ 2 ಈಗಾಗಲೇ ಅಭಿವೃದ್ಧಿ ಹೊಂದುತ್ತಿದೆ. ಇದು ಇನ್ನಷ್ಟು ದೊಡ್ಡ, ಬಲಶಾಲಿ ಮತ್ತು ಸ್ಮಾರ್ಟ್ ಆಗಿರಲಿದೆ. ನೇತ್ರಾ ಈ ಕಥೆಯ ಕೊನೆಯಲ್ಲ, ಬದಲಿಗೆ ಆರಂಭವಷ್ಟೇ.

ಅಂತಿಮವಾಗಿ, ನೇತ್ರಾ ಕೇವಲ ರೇಡಾರ್‌ಗಳು ಮತ್ತು ವಯರುಗಳಷ್ಟೇ ಅಲ್ಲ. ಇದೊಂದು ಸಂಕೇತವೂ ಹೌದು. ಭಾರತ ದೊಡ್ಡ ಕನಸುಗಳನ್ನು ಕಾಣಬಲ್ಲದು, ದೊಡ್ಡ ನಿರ್ಮಾಣಗಳನ್ನು ಕೈಗೊಳ್ಳಬಲ್ಲದು, ಮತ್ತು ತನ್ನ ಆಗಸಗಳನ್ನು ಸ್ವತಃ ತಾನೇ ಕಾಪಾಡಿಕೊಳ್ಳಬಲ್ಲದು ಎನ್ನುವ ಸಂದೇಶವನ್ನು ಜಗತ್ತಿಗೆ ನೀಡುತ್ತಿದೆ. ನೇತ್ರಾ ಆಗಸದಲ್ಲಿ ಮೌನವಾಗಿಯೇ ಹಾರಾಡುತ್ತಿರುವ ನಮ್ಮ ರಕ್ಷಕನಾಗಿದ್ದು, ಸದಾ ವೀಕ್ಷಣೆ ನಡೆಸುತ್ತಾ, ಸದಾ ಸನ್ನದ್ಧವಾಗಿರುತ್ತಾ, ನಮ್ಮ ಯೋಧರಿಗೆ ಸತ್ಯವನ್ನು ಬೇರೆಲ್ಲರಿಗಿಂತಲೂ ಮೊದಲೇ ತಿಳಿಸಿ, ಅವರು ಯುದ್ಧದಲ್ಲಿ ಗೆಲ್ಲುವಂತೆ ಮಾಡುತ್ತದೆ.

ಇದು ನಿಜಕ್ಕೂ ಭಾರತದ ಬಹುದೊಡ್ಡ ಮೇಲುಗೈ ಆಗಿದೆ. ಇದು ಸಂಪೂರ್ಣವಾಗಿ, ಹೆಮ್ಮೆಯಿಂದ ಭಾರತದಲ್ಲೇ ನಿರ್ಮಾಣಗೊಂಡಿದೆ.

(ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: [email protected])

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+