ಪಾಕಿಸ್ತಾನಕ್ಕೆ ಸಂಕಷ್ಟ ತಂತು ಡೊನಾಲ್ಡ್ ಟ್ರಂಪ್‌ರ ಇಸ್ರೇಲ್ ಒಪ್ಪಂದದ ಬೇಡಿಕೆ

ಬಾಹ್ಯಾಕಾಶ, ರಕ್ಷಣಾ ಮತ್ತು ಜಾಗತಿಕ ರಾಜಕೀಯ ವಿಶ್ಲೇಷಕರಾದ ಗಿರೀಶ್ ಲಿಂಗಣ್ಣ ಅವರ ವಿಶೇಷ ಬರಹ ಇಲ್ಲಿದೆ.

ಜಾಗತಿಕ ರಾಜಕಾರಣದಲ್ಲಿ, ಕೆಲವೊಂದು ಬಾರಿ ಶಕ್ತಿಶಾಲಿ ನಾಯಕರು ಮುಂದಿಡುವ ಒಂದು ಪ್ರಬಲ ಬೇಡಿಕೆಯೂ ಸಂಪೂರ್ಣ ದೇಶವನ್ನೇ ಸಂಕಷ್ಟಕ್ಕೆ ತಳ್ಳಬಲ್ಲದು. ಪಾಕಿಸ್ತಾನದ ವಿಚಾರದಲ್ಲಂತೂ ಈಗ ಅಕ್ಷರಶಃ ಅಂತಹ ಬೆಳವಣಿಗೆಯೇ ನಡೆಯುತ್ತಿದೆ. ಮೇ 25ರ ಸೋಮವಾರದಂದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಒಂದು ಬಹುದೊಡ್ಡ ಬೇಡಿಕೆ ಮುಂದಿಟ್ಟಿದ್ದು, ಇದು ಬಹಳಷ್ಟು ಮುಸ್ಲಿಂ ರಾಷ್ಟ್ರಗಳನ್ನು ಆತಂಕಕ್ಕೆ ತಳ್ಳಿದೆ. ಸಾಮಾನ್ಯ ಪಾಕಿಸ್ತಾನಿಗಳಿಗೆ ಇದು ಅಮೆರಿಕದ ಬಯಕೆ ಮತ್ತು ತಮ್ಮ ಮನಸ್ಸಿನ ಒಪ್ಪಿಗೆಗಳ ನಡುವೆ ನಡೆಯುತ್ತಿರುವ ಯಾತನಾದಾಯಕ ಪರೀಕ್ಷೆಯಾಗಿದೆ.

ಟ್ರಂಪ್ ನಿಜಕ್ಕೂ ಹೇಳಿದ್ದೇನು?

ತನ್ನ ಸಾಮಾಜಿಕ ಜಾಲತಾಣ ವೇದಿಕೆಯಾದ ಟ್ರುತ್ ಸೋಶಿಯಲ್‌ನಲ್ಲಿ ಸುದೀರ್ಘವಾಗಿ ಬರೆದುಕೊಂಡಿರುವ ಟ್ರಂಪ್, ಸೌದಿ ಅರೇಬಿಯಾ, ಕತಾರ್, ಪಾಕಿಸ್ತಾನ, ಟರ್ಕಿ, ಈಜಿಪ್ಟ್ ಮತ್ತು ಜೋರ್ಡಾನ್‌ನಂತಹ ದೇಶಗಳು ಅಬ್ರಹಾಂ ಒಪ್ಪಂದಕ್ಕೆ ಸಹಿ ಹಾಕಲೇಬೇಕು ಎಂದು ಆಗ್ರಹಿಸಿದ್ದಾರೆ. ಸರಳವಾಗಿ ಹೇಳುವುದಾದರೆ, ಈ ದೇಶಗಳು ಇಸ್ರೇಲನ್ನು ಅಧಿಕೃತವಾಗಿ ಒಂದು ಮಿತ್ರ ರಾಷ್ಟ್ರವೆಂದು ಒಪ್ಪಿಕೊಂಡು, ಅದನ್ನು ಬೇರೆ ಯಾವುದೇ ಇತರ ದೇಶವನ್ನು ಕಾಣುವಂತೆ ಕಾಣಬೇಕು ಎನ್ನುವುದು ಟ್ರಂಪ್ ಇಚ್ಛೆ. ಸೌದಿ ಅರೇಬಿಯಾ ಮತ್ತು ಕತಾರ್ ಮೊದಲು ಈ ಒಪ್ಪಂದಕ್ಕೆ ಸಹಿ ಹಾಕಬೇಕು. ಇತರ ದೇಶಗಳು ಬಳಿಕ ಅದನ್ನು ಒಂದೊಂದಾಗಿ ಅನುಸರಿಸಬೇಕು ಎಂದು ಟ್ರಂಪ್ ಹೇಳಿದ್ದಾರೆ. ಇದರೊಡನೆ ಟ್ರಂಪ್ ಒಂದು ಎಚ್ಚರಿಕೆಯನ್ನೂ ನೀಡಿದ್ದಾರೆ. ಅದೇನೆಂದರೆ, ಯಾವುದಾದರೂ ದೇಶ ಒಪ್ಪಂದಕ್ಕೆ ಸಹಿ ಹಾಕಲು ನಿರಾಕರಿಸಿದರೆ, ಅದನ್ನು ಮುಂದಿನ ದೊಡ್ಡ ಶಾಂತಿ ಒಪ್ಪಂದದಿಂದ ಸಂಪೂರ್ಣವಾಗಿ ಹೊರಗಿಡಲಾಗುತ್ತದೆ. ಏಕೆಂದರೆ, ಅಬ್ರಹಾಂ ಒಪ್ಪಂದಕ್ಕೆ ಸಹಿ ಹಾಕಲು ನಿರಾಕರಿಸುವುದು 'ಕೆಟ್ಟ ಉದ್ದೇಶ' ಹೊಂದಿರುವುದಕ್ಕೆ ಸಾಕ್ಷಿಯಾಗಲಿದೆ ಎಂದು ಟ್ರಂಪ್ ಪ್ರತಿಪಾದಿಸಿದ್ದಾರೆ. ಟ್ರಂಪ್ ಮೇ 23ರಂದು ಎಲ್ಲ ಎಂಟು ದೇಶಗಳ ಮುಖಂಡರೊಡನೆ ಸಮಾಲೋಚನೆ ನಡೆಸಿದ ಕೇವಲ ಎರಡು ದಿನಗಳಲ್ಲಿ ಈ ಬೆಳವಣಿಗೆ ನಡೆದಿದೆ. ಅಮೆರಿಕನ್ ಮಾಧ್ಯಮಗಳ ಪ್ರಕಾರ, ಇದ್ದಕ್ಕಿದ್ದಂತೆ ಟ್ರಂಪ್ ಮುಂದಿಟ್ಟಿರುವ ಬೇಡಿಕೆ ಬಹಳಷ್ಟು ಜಾಗತಿಕ ನಾಯಕರನ್ನು ಚಕಿತಗೊಳಿಸಿದೆ.

Girish Linganna

ಅಬ್ರಹಾಂ ಅಕಾರ್ಡ್ಸ್ ಎಂದರೇನು?

ಈ ಒಪ್ಪಂದವನ್ನು ಸರಳವಾಗಿ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸೋಣ. ಅಬ್ರಹಾಂ ಅಕಾರ್ಡ್ಸ್ ಎನ್ನುವುದು 2020ರಲ್ಲಿ ತನ್ನ ಮೊದಲ ಅಧ್ಯಕ್ಷೀಯ ಅವಧಿಯಲ್ಲಿ ಸ್ವತಃ ಟ್ರಂಪ್ ರೂಪಿಸಿದ ಶಾಂತಿ ಒಪ್ಪಂದಗಳಾಗಿವೆ. ಈ ಒಪ್ಪಂದಗಳ ಅಡಿಯಲ್ಲಿ, ಕೆಲವು ಅರಬ್ ಮತ್ತು ಮುಸ್ಲಿಂ ರಾಷ್ಟ್ರಗಳು ಇಸ್ರೇಲನ್ನು ಅಧಿಕೃತವಾಗಿ ಒಪ್ಪಿಕೊಂಡು, ಸಂಪೂರ್ಣ ಸ್ನೇಹ ಸಂಬಂಧವನ್ನು ಆರಂಭಿಸಿದವು. ಇದರ ಅಂಗವಾಗಿ, ಇಸ್ರೇಲಿನಲ್ಲಿ ರಾಯಭಾರ ಕಚೇರಿಗಳನ್ನು ತೆರೆದು, ಇಸ್ರೇಲಿನೊಡನೆ ಉದ್ಯಮಗಳನ್ನು ಆರಂಭಿಸಿ, ಮುಕ್ತವಾಗಿಯೇ ಸ್ನೇಹ ಪ್ರದರ್ಶಿಸಿದವು. ಯುಎಇ ಮತ್ತು ಬಹರೇನ್‌ಗಳು ಮೊದಲು ಅಬ್ರಹಾಂ ಒಪ್ಪಂದಕ್ಕೆ ಸಹಿ ಹಾಕಿದರೆ, ಮೊರಾಕೊ ಮತ್ತು ಸುಡಾನ್ ದೇಶಗಳು ಅವನ್ನು ಹಿಂಬಾಲಿಸಿದವು. ಈಗ ಟ್ರಂಪ್ ಈ ಗುಂಪನ್ನು ಇನ್ನಷ್ಟು ದೊಡ್ಡದಾಗಿಸುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಕೈತಪ್ಪಿದ ಭಾರತದ 5ನೇ ತಲೆಮಾರಿನ ಸ್ಟೆಲ್ತ್ ಯುದ್ಧ ವಿಮಾನ ನಿರ್ಮಾಣದ ಅವಕಾಶ!
ಕರ್ನಾಟಕದ ಕೈತಪ್ಪಿದ ಭಾರತದ 5ನೇ ತಲೆಮಾರಿನ ಸ್ಟೆಲ್ತ್ ಯುದ್ಧ ವಿಮಾನ ನಿರ್ಮಾಣದ ಅವಕಾಶ!

ಆದರೆ, ಇಲ್ಲಿ ಬಹಳಷ್ಟು ಜನರಿಗೆ ಅಹಿತಕರ ಎನಿಸುವ ನೈಜ ಸಮಸ್ಯೆಯೂ ಇದೆ. ಇವುಗಳ ಪೈಕಿ ಬಹಳಷ್ಟು ದೇಶಗಳು ಮೊದಲಿಗೆ ಪರಿಪೂರ್ಣವಾದ ದ್ವಿರಾಷ್ಟ್ರ ಪರಿಹಾರ ಜಾರಿಗೆ ಬಂದರೆ ಮಾತ್ರವೇ ಇಸ್ರೇಲನ್ನು ಅಧಿಕೃತವಾಗಿ ಒಪ್ಪಿಕೊಳ್ಳುವುದಾಗಿ ಹೇಳಿದ್ದವು. ಅಂದರೆ, ಪ್ಯಾಲೆಸ್ತೀನಿಯನ್ ಜನರಿಗಾಗಿ ಒಂದು ಪ್ರತ್ಯೇಕ, ಸ್ವತಂತ್ರ ದೇಶವನ್ನು ನಿರ್ಮಿಸಿ, ಅವರು ಇಸ್ರೇಲ್ ಬದಿಯಲ್ಲಿ, ಶಾಂತಿಯುತವಾಗಿ ಜೀವಿಸುವಂತೆ ಮಾಡುವುದು. ಕುತೂಹಲಕರ ವಿಚಾರವೆಂದರೆ, ತನ್ನ ಇತ್ತೀಚಿನ ಪೋಸ್ಟಿನಲ್ಲಿ ಟ್ರಂಪ್ ಭವಿಷ್ಯದ ಪ್ಯಾಲೆಸ್ತೀನಿಯನ್ ದೇಶದ ಕುರಿತಾಗಲಿ, ತೊಂದರೆಯಲ್ಲಿರುವ ಗಾಜಾ ಮತ್ತು ವೆಸ್ಟ್ ಬ್ಯಾಂಕ್ ಪ್ರದೇಶಗಳ ಕುರಿತಾಗಲಿ ಏನೂ ಹೇಳಿಲ್ಲ. ಇನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಂತೂ ತಾನು ಸ್ವತಂತ್ರ ಪ್ಯಾಲೆಸ್ತೀನಿಯನ್ ದೇಶವನ್ನು ಬೆಂಬಲಿಸುವುದಿಲ್ಲ ಎಂದು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದಾರೆ.

ಇಸ್ರೇಲ್ ಏಕೆ ಕೇಂದ್ರ ಸ್ಥಾನಿಯಾಗಿದೆ?

ಇಸ್ರೇಲ್ ಈ ಎಲ್ಲ ವಿಚಾರಗಳ ಮಧ್ಯ ಭಾಗದಲ್ಲಿ ಕುಳಿತಿದೆ. ಫೆಬ್ರವರಿ ತಿಂಗಳಲ್ಲಿ ಕದನ ಆರಂಭಗೊಂಡ ಬಳಿಕ, ಇಸ್ರೇಲ್ ಅಮೆರಿಕದ ಜೊತೆ ಕೈಜೋಡಿಸಿ, ಇರಾನ್ ಮೇಲೆ ದಾಳಿ ನಡೆಸಿತು. ಇದಕ್ಕೆ ಅಮೆರಿಕದ ಒಳಗೂ ಸಂಪೂರ್ಣ ಬೆಂಬಲ ಲಭಿಸಿರಲಿಲ್ಲ. ಮಾರ್ಚ್ ತಿಂಗಳಲ್ಲಿ, ಯುಎಸ್ ನ್ಯಾಷನಲ್ ಕೌಂಟರ್ ಟೆರರಿಸಂ ಸೆಂಟರ್ ಮುಖ್ಯಸ್ಥರಾಗಿ ಸ್ವತಃ ಟ್ರಂಪ್ ನೇಮಿಸಿದ್ದ ಜೋ ಕೆಂಟ್ ಅವರು ಈ ದಾಳಿಯನ್ನು ಪ್ರತಿಭಟಿಸಿ, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ತನ್ನ ಪತ್ರದಲ್ಲಿ, ಇರಾನ್ ಅಮೆರಿಕದ ಪಾಲಿಗೆ ತಕ್ಷಣದ ಅಪಾಯವಾಗಿರಲಿಲ್ಲ ಎಂದು ಅವರು ಸ್ಪಷ್ಟವಾಗಿ ಹೇಳಿದ್ದು, ಇಸ್ರೇಲ್ ಮತ್ತು ಅದರ ಬಲವಾದ ಬೆಂಬಲಿಗರ ಕಾರಣದಿಂದಲೇ ಈ ಯುದ್ಧ ನಡೆದಿದೆ ಎಂದು ಜೋ ಸ್ಪಷ್ಟಪಡಿಸಿದ್ದಾರೆ. ಹಲವಾರು ವರ್ಷಗಳ ಕಾಲ, ಇಸ್ರೇಲ್ ಇರಾನನ್ನು ತನಗೊಂದು ಗಂಭೀರವಾದ ಅಪಾಯ ಎಂದೇ ಪರಿಗಣಿಸಿತ್ತು. ಗಾಜಾದಲ್ಲಿನ ತನ್ನ ಮಿಲಿಟರಿ ಕ್ರಮಗಳಿಂದ ಸಾವಿರಾರು ಜನರು ಸಾವಿಗೀಡಾದ ಬಳಿಕ, ಇಸ್ರೇಲ್ ಇರಾನ್ ವಿರುದ್ಧ ಕಠಿಣ ಕ್ರಮಗಳಿಗೆ ಆಗ್ರಹಿಸಿತ್ತು. ಬಳಿಕ ಹಾನಿಗೊಳಗಾಗಿದ್ದ ಗಾಜಾದ ಮರುನಿರ್ಮಾಣದ ಕುರಿತು ಮಾತುಕತೆಗಳು ನಡೆದವು. ಆದರೆ, ಇದನ್ನು ಟ್ರಂಪ್ ಮತ್ತು ಅಮೆರಿಕ ಬೆಂಬಲಿತ 'ಬೋರ್ಡ್ ಆಫ್ ಪೀಸ್' ಎನ್ನುವ ಗುಂಪು ಆಯೋಜಿಸಿದ್ದವು

ಕ್ಯೂಬಾದ ವಯೋವೃದ್ಧ ರೌಲ್ ಕ್ಯಾಸ್ಟ್ರೋ ವಿರುದ್ಧ ಕ್ರಮಕ್ಕೆ ಮುಂದಾದ ಅಮೆರಿಕ
ಕ್ಯೂಬಾದ ವಯೋವೃದ್ಧ ರೌಲ್ ಕ್ಯಾಸ್ಟ್ರೋ ವಿರುದ್ಧ ಕ್ರಮಕ್ಕೆ ಮುಂದಾದ ಅಮೆರಿಕ

ಇಲ್ಲಿ ಪಾಕಿಸ್ತಾನದ ಸ್ಥಾನವೇನು?

ಪ್ರತಿಯೊಬ್ಬ ಸಾಮಾನ್ಯ ಪಾಕಿಸ್ತಾನಿಗೂ ಈ ಕಷ್ಟ ಸ್ಪಷ್ಟವಾಗುವುದೇ ಇಲ್ಲಿ. ಪಾಕಿಸ್ತಾನ ಬೋರ್ಡ್ ಆಫ್ ಪೀಸ್ ಒಪ್ಪಂದಕ್ಕೆ ಸಹಿ ಹಾಕಿದ್ದು, ಇರಾನ್ ಜೊತೆಗಿನ ಮಧ್ಯಸ್ಥಿಕೆಗೂ ನೆರವಾಗಿದೆ. ಟ್ರಂಪ್ ಪಾಕಿಸ್ತಾನದ ಪ್ರಧಾನಿ ಶೆಹಬಾಜ಼್ ಶರೀಫ್ ಮತ್ತು ಸೇನಾ ಮುಖ್ಯಸ್ಥ ಆಸಿಮ್ ಮುನೀರ್ ಅವರನ್ನು ಹಲವು ಬಾರಿ ಶ್ಲಾಘಿಸಿದ್ದಾರೆ. ಆದರೆ, ಈ ಎಲ್ಲ ಎಂಟು ದೇಶಗಳ ಪೈಕಿ, ಪಾಕಿಸ್ತಾನವೇ ಅತಿಹೆಚ್ಚು ಗೊಂದಲವನ್ನು ಎದುರಿಸುತ್ತಿದ್ದು, ಇದಕ್ಕೆ ಅದರ ಸುದೀರ್ಘ, ಭಾವನಾತ್ಮಕ ಇತಿಹಾಸವೂ ಕಾರಣವಾಗಿದೆ. ಪಾಕಿಸ್ತಾನ ಕಳೆದ 78 ವರ್ಷಗಳಲ್ಲಿ ಇಸ್ರೇಲನ್ನು ಎಂದಿಗೂ ಅಧಿಕೃತವಾಗಿ ಗುರುತಿಸಿಲ್ಲ. ಈ ಸ್ಥಿರವಾದ ನಿಲುವು ಪಾಕಿಸ್ತಾನದ ಸ್ಥಾಪಕ ಮೊಹಮ್ಮದ್ ಅಲಿ ಜಿನ್ನಾ ಅವರಿಂದಲೇ ಆರಂಭಗೊಂಡಿದ್ದು, ಅವರು 1947-48ರಲ್ಲಿ ಪ್ಯಾಲೆಸ್ತೀನ್ ವಿಭಜನೆಯನ್ನು ಬಲವಾಗಿ ವಿರೋಧಿಸಿದ್ದರು. ಅಂದಿನಿಂದ ಪ್ರತಿಯೊಂದು ಚುನಾಯಿತ ಸರ್ಕಾರವಾಗಲಿ, ಸಮ್ಮಿಶ್ರ ಸರ್ಕಾರವಾಗಲಿ, ಮಿಲಿಟರಿ ಆಡಳಿತವಾಗಲಿ, ಇದೇ ನೀತಿಯನ್ನು ಅನುಸರಿಸುತ್ತಾ ಬಂದಿದ್ದು, ಇದು ಸಾಮಾನ್ಯ ಪಾಕಿಸ್ತಾನಿಯರ ಭಾವನೆಗಳು ಮತ್ತು ನಂಬಿಕೆಗಳಿಗೂ ಸಂಬಂಧಿಸಿದೆ.

ಹಾಗೆಂದು ಈ ಒತ್ತಡ ಹೊಸದೇನಲ್ಲ. 2020ರ ಅಬ್ರಹಾಂ ಒಪ್ಪಂದದ ಬಳಿಕ, ಅಮೆರಿಕ ಈ ಒಪ್ಪಂದಕ್ಕೆ ಸಹಿ ಹಾಕುವಂತೆ ತನ್ನ ಮೇಲೆ ಒತ್ತಡ ಹೇರುತ್ತಿದೆ ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದು, ಪ್ಯಾಲೆಸ್ತೀನಿಯರ ಸಂಕಷ್ಟವನ್ನು ನೋಡಿದ ಮೇಲೆ ಇದಕ್ಕೆ ಸಹಿ ಹಾಕಲು ತನ್ನ ಆತ್ಮಸಾಕ್ಷಿ ಒಪ್ಪುವುದಿಲ್ಲ ಎಂದಿದ್ದರು. ಈ ಹಿಂದೆ ನೆತನ್ಯಾಹು ಅವರನ್ನು ಕಟುವಾಗಿ ಟೀಕಿಸಿದ್ದ, ಇಮ್ರಾನ್ ಖಾನ್ ಎದುರಾಳಿ ಶೆಹಬಾಜ಼್ ಶರೀಫ್ ಸಹ ಈ ವಿಚಾರದಲ್ಲಿ ಸಹಮತ ಸೂಚಿಸಿದ್ದರು. ಇತ್ತೀಚೆಗೆ, ಪಾಕಿಸ್ತಾನದ ವಿದೇಶಾಂಗ ಸಚಿವ ಇಶಾಕ್ ದರ್ ದ್ವಿರಾಷ್ಟ್ರ ಪರಿಹಾರ ಜಾರಿಗೆ ಬರುವ ತನಕ ಪಾಕಿಸ್ತಾನ ಇಸ್ರೇಲಿಗೆ ಅಧಿಕೃತ ಮಾನ್ಯತೆ ನೀಡುವುದಿಲ್ಲ ಎಂದು ಪ್ರತಿಪಾದಿಸಿದ್ದರು. ಮೇ 24ರಂದು, ಅಧಿಕಾರಿಗಳು ಒಪ್ಪಂದಕ್ಕೆ ಸಹಿ ಹಾಕುವ ಸಾಧ್ಯತೆಗಳನ್ನು ಮತ್ತೊಮ್ಮೆ ತಳ್ಳಿಹಾಕಿದ್ದಾರೆ ಎನ್ನಲಾಗಿದೆ.

ಇತರ ರಾಷ್ಟ್ರಗಳು ಮತ್ತು ಅಂತಿಮ ಸವಾಲು

ಪಾಕಿಸ್ತಾನದ ಮನಸ್ಥಿತಿಯೂ ಬಹುತೇಕ ಸೌದಿ ಅರೇಬಿಯಾದ ಸ್ಥಿತಿಯೇ ಆಗಿದ್ದು, ಎರಡೂ ದೇಶಗಳು ಸ್ವತಂತ್ರ ಪ್ಯಾಲೆಸ್ತೀನ್ ಸ್ಥಾಪನೆಯಾಗದೆ ಇಸ್ರೇಲನ್ನು ಒಪ್ಪಿಕೊಳ್ಳಲು ಸಿದ್ಧವಿಲ್ಲ. ಯುಎಇ ಮತ್ತು ಬಹರೇನ್ ಈಗಾಗಲೇ ಒಪ್ಪಂದಕ್ಕೆ ಸಹಿ ಹಾಕಿವೆ. ಈಜಿಪ್ಟ್ ಮತ್ತು ಜೋರ್ಡಾನ್ ಬಹಳಷ್ಟು ಹಿಂದೆಯೇ ಇಸ್ರೇಲನ್ನು ಅಧಿಕೃತವಾಗಿ ಗುರುತಿಸಿವೆ. ಭಾರತ ಬಹಳಷ್ಟು ಹಿಂದೆಯೇ ಇಸ್ರೇಲಿಗೆ ಅಧಿಕೃತ ಮಾನ್ಯತೆ ನೀಡಿದ್ದರೂ, ಇಸ್ರೇಲ್ - ಪ್ಯಾಲೆಸ್ತೀನ್ ದ್ವಿರಾಷ್ಟ್ರ ಸಿದ್ಧಾಂತವನ್ನು ಇಂದಿಗೂ ಬೆಂಬಲಿಸುತ್ತಿದೆ. ಇನ್ನು ಟರ್ಕಿ ಅಧ್ಯಕ್ಷ ಎರ್ದೋಗನ್ ಅಂತೂ ಇಸ್ರೇಲನ್ನು ರಕ್ತದ ಕಲೆ ಹೊಂದಿರುವ ನರಮೇಧದ ಜಾಲ ಎಂದೇ ಕರೆದಿದ್ದಾರೆ. ಟ್ರಂಪ್ ಇರಾನ್ ಸಹ ಅಬ್ರಹಾಂ ಒಪ್ಪಂದಕ್ಕೆ ಸೇರ್ಪಡೆಗೊಳ್ಳಬಹುದು ಎಂದು ಆಹ್ವಾನಿಸಿದ್ದು, ಇರಾನ್ ಇದಕ್ಕೆ ಯಾವುದೇ ಆಸಕ್ತಿ ತೋರಿಸಿಲ್ಲ.

ಪಾಕಿಸ್ತಾನದ ಪಾಲಿಗೆ ಈ ಆಯ್ಕೆ ಕಠಿಣವೂ, ಭಾವನಾತ್ಮಕವೂ ಆಗಿದೆ. ಒಂದೋ ಪಾಕಿಸ್ತಾನ ಒತ್ತಡಕ್ಕೆ ಮಣಿಯಬೇಕು. ಅಥವಾ, ಸ್ಥಿರವಾಗಿ ನಿಂತು, ಬಲಿಷ್ಠ ಸ್ನೇಹಿತನಿಗೆ ಅಸಮಾಧಾನ ಉಂಟುಮಾಡಬೇಕು. ಸದ್ಯದ ಮಟ್ಟಿಗೆ ಇತಿಹಾಸ, ನಂಬಿಕೆ, ಮತ್ತು ಪಾಕಿಸ್ತಾನಿ ಜನರ ಪ್ರಬಲ ಭಾವನೆಗಳು ಗೆಲ್ಲುವಂತೆ ಕಾಣುತ್ತಿವೆ. ಆದರೆ, ಪ್ರತಿಯೊಂದು ದಿನವೂ ಪಾಕಿಸ್ತಾನದ ಮೇಲೆ ಒತ್ತಡವಂತೂ ಹೆಚ್ಚಾಗುತ್ತಲೇ ಇದೆ.

(ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: [email protected])

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+