ಬಲ ಅಥವಾ ಎಡ : ಶಿವನ ನಂದಿಯ ಯಾವ ಕಿವಿಯಲ್ಲಿ ಬೇಡಿಕೆ ಇಟ್ಟರೆ ಈಡೇರುವುದು? ಪುರಾಣ ಹೇಳುವುದೇನು?
ಹಿಂದೂ ಧರ್ಮದಲ್ಲಿ ನಂದಿಯು ಶಿವನ ಅತ್ಯಂತ ನಂಬಿಕಸ್ಥ ವಾಹನ ಮತ್ತು ಕೈಲಾಸದ ದ್ವಾರಪಾಲಕ. ಇದು ಶುದ್ಧತೆ, ಭಕ್ತಿ, ಶಕ್ತಿ ಮತ್ತು ಧರ್ಮದ ಸಂಕೇತವಾಗಿದೆ. ಶಿವನ ದೇವಾಲಯಗಳಲ್ಲಿ ನಂದಿಯನ್ನು ಯಾವಾಗಲೂ ಶಿವಲಿಂಗದ ಎದುರು ಕುಳಿತಿರುವ ಭಂಗಿಯಲ್ಲಿ ಕಾಣಬಹುದು. ಪುರಾಣಗಳ ಪ್ರಕಾರ, ನಂದಿಯು 'ಶಿಲಾದ' ಎಂಬ ಋಷಿಯ ಮಗ. ಬಾಲ್ಯದಿಂದಲೇ ಶಿವನ ಭಕ್ತನಾಗಿದ್ದ ನಂದಿ, ಶಿವನನ್ನು ಕುರಿತು ಕಠಿಣ ತಪಸ್ಸು ಮಾಡಿದನು. ಅವನ ಭಕ್ತಿಗೆ ಮೆಚ್ಚಿದ ಶಿವನು ಅವನನ್ನು ತನ್ನ ವಾಹನವನ್ನಾಗಿ ಮತ್ತು ಕೈಲಾಸದ ದ್ವಾರಪಾಲಕನನ್ನಾಗಿ ನೇಮಿಸುತ್ತಾನೆ.
ಈಶ್ವರನ ದೇವಸ್ಥಾನದಲ್ಲಿ ನಂದಿಗೆ ವಿಶೇಷ ಸ್ಥಾನ ಇರುತ್ತದೆ. ಈ ನಂದಿ ಸದಾ ಶಿವನನ್ನೇ ದೃಷ್ಟಿ ನೆಟ್ಟು ಕುಳಿತಿರುತ್ತಾನೆ. ಇದು ಶಿವನ ಮೇಲಿನ ಅವನ ಅಚಲ ಭಕ್ತಿ, ಏಕಾಗ್ರತೆ ಮತ್ತು ಸಮರ್ಪಣಾ ಮನೋಭಾವದ ಸಂಕೇತವಾಗಿದೆ.

ನಂದಿ ಧ್ಯಾನಸ್ಥ ಸ್ಥಿತಿಯ ಸಂಕೇತ. ನಂದಿಯು ಧರ್ಮ, ಸತ್ಯ ಮತ್ತು ಶುದ್ಧ ಮನಸ್ಸಿನ ಪ್ರತೀಕ. ಆದ್ದರಿಂದಲೇ ಶಿವಾಲಯಕ್ಕೆ ಹೋದಾಗ, ಮೊದಲು ನಂದಿಗೆ ನಮಸ್ಕರಿಸಿ, ನಂತರ ಶಿವನ ದರ್ಶನ ಪಡೆಯುವುದು ಪದ್ಧತಿ.
ಹಿಂದೂ ಧರ್ಮದಲ್ಲಿ, ಶಿವನಿಗೆ ಎಷ್ಟು ಮಹತ್ವ ಇದೆಯೋ ಶಿವನ ಮುಂದೆ ಇರುವ ನಂದಿಗೂ ಅಷ್ಟೇ ಪ್ರಾಮುಖ್ಯತೆ ಇದೆ. ನಂದಿಯನ್ನು ಶಿವನ ಅತ್ಯಂತ ಪ್ರಿಯ ಭಕ್ತ ಎಂದು ಹೇಳಲಾಗುತ್ತದೆ. ಶಿವನ ದೇವಾಲಯಗಳಿರುವಲ್ಲೆಲ್ಲಾ ನಂದಿ ಮಹಾರಾಜನ ವಿಗ್ರಹ ಇದ್ದೇ ಇರುತ್ತದೆ. ನಂದಿ ಬರೀ ಶಿವನ ರಥದ ಸಾರಥಿ ಮಾತ್ರವಲ್ಲ, ಭಕ್ತರ ಮನಸಸಿನ ಆಸೆ ಆಕಾಂಕ್ಷೆಗಳನ್ನು ಶಿವನಿಗೆ ತಲುಪಿಸುವ ಮಾರ್ಗ ಕೂಡಾ.
ಇನ್ನು ಅನೇಕ ಭಕ್ತರು ಶಿವನ ದೇವಸ್ಥಾನದಲ್ಲಿ ನಂದಿಯ ಕಿವಿಯಲ್ಲಿ ತಮ್ಮ ಇಷ್ಟಾರ್ಥಗಳನ್ನು ಪಿಸುಗುಟ್ಟುತ್ತಾರೆ. ಶಿವನ ದೇವಾಲಯಕ್ಕೆ ಬಂದ ಮೇಲೆ ನೇರವಾಗಿ ಶಿವನಿಗೆ ಪ್ರಾರ್ಥನೆ ಸಲ್ಲಿಸುವ ಬದಲು ನಂದಿಯ ಕಿವಿಯಲ್ಲಿ ತಮ್ಮ ಇಚ್ಛೆಗಳನ್ನು ಹೇಳುವುದರ ಹಿಂದೆ ಒಂದು ಕಾರಣವಿದೆ. ಶಾಸ್ತ್ರಗಳ ಪ್ರಕಾರ, ಶಿವನು ಸದಾ ತಪಸ್ಸಿನಲ್ಲಿ ಮಗ್ನನಾಗಿರುತ್ತಾನೆ. ಭಕ್ತರ ಬೇಡಿಕೆಗಳು ತಪಸ್ಸಿಗೆ ಭಂಗ ತರಬಾರದೆಂದು, ನಂದಿಯ ಕಿವಿಯಲ್ಲಿ ಹೇಳಿದರೆ ಅದು ನೇರವಾಗಿ ಶಿವನಿಗೆ ತಲುಪುತ್ತದೆ ಎಂಬ ನಂಬಿಕೆ ಇದೆ. ನಂದಿಯ ಕಿವಿಯಲ್ಲಿ ಹೇಳಿಕೊಳ್ಳುವ ಭಕ್ತರ ಆಸೆಗಳನ್ನು ತಾನು ಶಿವನಿಗೆ ತಲುಪಿಸುವುದಾಗಿ ಮತ್ತು ಅವು ಈಡೇರುವಂತೆ ಮಾಡುತ್ತಾನೆಯಂತೆ. ಇದು ಸ್ವತಃ ಶಿವನೇ ನಂದಿಗೆ ನೀಡಿರುವ ವರ ಎನ್ನುವುದು ಪ್ರತೀತಿ.
ಆದರೆ ಈಗ ಇರುವ ಪ್ರಶ್ನೆ ಎಂದರೆ ನಂದಿಯ ಯಾವ ಕಿವಿಯಲ್ಲಿ ಭಕ್ತರು ತಮ್ಮ ಮನದ ಆಸೆಯನ್ನು ಹೇಳಿಕೊಳ್ಳಬೇಕು? ಅನೇಕ ಜನರಿಗೆ ತಮ್ಮ ಇಚ್ಛೆಗಳು ಈಡೇರಲು ಯಾವ ಕಿವಿಯಲ್ಲಿ ಪ್ರಾರ್ಥಿಸಬೇಕೆಂದು ತಿಳಿದಿರುವುದಿಲ್ಲ. ಅದಕ್ಕೆ ಉತ್ತರ ಇಲ್ಲಿದೆ.
ನಂದಿಯ ಕಿವಿಯಲ್ಲಿ ಪ್ರಾರ್ಥಿಸುವಾಗ, ನೀವು ಯಾವಾಗಲೂ ಎಡ ಕಿವಿಯಲ್ಲಿ ಪ್ರಾರ್ಥಿಸಬೇಕು. ಆದರೆ ಎಡ ಕಿವಿಯಲ್ಲಿ ಪ್ರಾರ್ಥನೆ ಸಲ್ಲಿಸುವಾಗ ಒಂದು ವಿಷಯದ ಬಗ್ಗೆಯೂ ಕಾಳಜಿ ವಹಿಸುವುದು ಬಹಳ ಮುಖ್ಯ. ನೀವು ನಿಮ್ಮ ಬೇಡಿಕೆಗಳ ಪಟ್ಟಿಯನ್ನು ಸಲ್ಲಿಸುವಾಗ ನಂದಿ ಮಹಾರಾಜರ ಬಲ ಕಿವಿಯ ಮೇಲೆ ಯಾವಾಗಲೂ ನಿಮ್ಮ ಕೈಯನ್ನು ಇರಿಸಿ ಎಡ ಕಿವಿಯಲ್ಲಿ ನಿಮ್ಮಿಚ್ಛೆಯನ್ನು ತೋಡಿಕೊಳ್ಳಬೇಕು.
ಇದೆಲ್ಲವೂ ಸಂಪ್ರದಾಯದ ಒಂದು ಭಾಗ ಎಂದು ಹೇಳುವುದು ಸುಲಭ. ಆದರೆ ನೀವು ಮಾಡುವ ಪ್ರಾರ್ಥನೆಯಲ್ಲಿ ಸಂಪೂರ್ಣ ನಂಬಿಕೆ ಇಟ್ಟು ಮನಸಾರೆ ಬೇಡಿಕೊಂಡರೆ ವಿಭಿನ್ನವಾದ ಆಧ್ಯಾತ್ಮಿಕ ಶಕ್ತಿಯನ್ನು ಭಕ್ತರು ಪಡೆಯುತ್ತಾರೆಯಂತೆ. ನಂದಿ ಮಹಾರಾಜ ಮತ್ತು ಭಗವಾನ್ ಶಂಕರರ ನಡುವಿನ ಈ ಸಂಬಂಧವು ಭಕ್ತಿ ಮತ್ತು ನಂಬಿಕೆಯ ಸಂಕೇತವಾಗಿದೆ.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications