ಹರಹರ ಮಹಾದೇವ ಘೋಷಣೆ ಕೂಗುವಾಗ ಎರಡೂ ಕೈ ಮೇಲೆತ್ತುವುದು ಏಕೆ ಗೊತ್ತಾ? ಶಿವ ಪೂಜೆಯಲ್ಲಿ ಇದು ಬಹಳ ಮುಖ್ಯ
ಶಿವನನ್ನು ಮಹಾದೇವ ಎಂದು ಕರೆಯಲಾಗುತ್ತದೆ. ಮಹಾದೇವ ಎಂದರೆ ದೇವರುಗಳಿಗೆ ದೇವ ಎಂದರ್ಥ. ಶಿವನನ್ನು ನಾನಾ ಹೆಸರುಗಳಿಂದಲೂ ಸಂಭೋದಿಸಲಾಗುತ್ತದೆ. ಶಂಕರ, ಮಹೇಶ, ರುದ್ರ, ಗಂಗಾಧರ, ಭೋಲೆನಾಥ ಹೀಗೆ ಹತ್ತು ಹಲವು ಹೆಸರುಗಳಿಂದ ಶಿವನನ್ನು ಪೂಜಿಸಲಾಗುತ್ತದೆ.ಇನ್ನು ಶಿವ ಆರಾಧಕರು ಹರ ಹರ ಮಹಾದೇವ ಎಂದು ಕೂಗುವಾಗ ಎರಡು ಕೈಗಳನ್ನು ಮೇಲೆತ್ತುವುದನ್ನು ನೀವು ಕೂಡಾ ಗಮನಿಸಿರಬಹುದು. ಭಕ್ತರು ಸುಮ್ಮನೆ ಹೀಗೆ ಕೈಯನ್ನು ಮೇಲಕ್ಕೆ ಎತ್ತುವುದಿಲ್ಲ. ಇದರ ಹಿಂದೆ ಧಾರ್ಮಿಕ ಕಾರಣವಿದೆ. ಹರಹರ ಮಹಾದೇವ ಎಂದು ಕೂಗುವಾಗ ಕೈಗಳನ್ನು ಮೇಲಕ್ಕೆ ಎತ್ತುವುದು ಕೇವಲ ಒಂದು ಆಚರಣೆಯಲ್ಲ, ಬದಲಿಗೆ ಅದು ಭಕ್ತಿ ಮತ್ತು ಸಮರ್ಪಣೆಯ ಸಂಕೇತವಾಗಿದೆ.
ದೇವರಿಗೆ ಶರಣಾಗುವ ಪರಿ:
ಎರಡೂ ಕೈಗಳನ್ನು ಎತ್ತುವುದೆಂದರೆ ಶಿವನಿಗೆ ಸಂಪೂರ್ಣವಾಗಿ ಅಂದರೆ ತನು ಮನ ಧನಗಳಿಂದ ಶರಣಾಗುವುದು ಎಂದರ್ಥ. ಭಕ್ತರು ತಮ್ಮ ಎರಡೂ ಕೈಗಳನ್ನು ಮೇಲಕೆತ್ತಿ ಹರ ಹರ ಮಹಾದೇವ ಎಂದು ಕೂಗುವ ವೇಳೆ ದೇವರ ಬಳಿ ತಾನು ನಿನಗೆ ತನ್ನನ್ನು ಸಂಪೂರ್ಣವಾಗಿ ಸಮರ್ಪಿಸುತ್ತಿದ್ದೇನೆ ಎಂದು ಹೇಳಿಕೊಳ್ಳುತ್ತಾನೆ. ತನ್ನ ಅಹಂಕಾರ, ಆಸೆ, ಸ್ವಾರ್ಥವನ್ನು ಸಂಪೂರ್ಣವಾಗಿ ತ್ಯಜಿಸಿರುವುದಾಗಿ ದೇವರ ಬಳಿ ಹೇಳಿಕೊಳ್ಳುವ ಪರಿ ಅದು. ಹಾಗಾಗಿ ಕೈಗಳನ್ನು ಮೇಲೆತ್ತುವುದು ದೇವರಿಗೆ ಭಕ್ತಿ ಭಾವದಿಂದ ಸಮರ್ಪಿಸಿಕೊಳ್ಳುವ ಒಂದು ರೀತಿಯಾಗಿದೆ. ಈ ಮೂಲಕ ಭಕ್ತನು ನನ್ನ ಜೀವನವನ್ನು ಇನ್ನು ಮುಂದೆ ನೀನೇ ನಿಯಂತ್ರಿಸು ಎಂದು ಕೇಳಿಕೊಳ್ಳುತ್ತಾನೆ.

ಸರ್ವ ಸಮಸ್ಯೆಗಳಿಂದ ಮುಕ್ತಿ:
ಶಿವ ಪೂಜೆಯ ವೇಳೆ ಎರಡೂ ಕೈಗಳನ್ನು ಮೇಲೆತ್ತುವುದು ಎಂದರೆ ತೊಂದರೆಗಳಿಂದ ಸಂಪೂರ್ಣ ಮುಕ್ತಿ ಪಡೆದುಕೊಳ್ಳುವುದು ಎಂದರ್ಥ. ನಾವು ನಮ್ಮ ಎರಡೂ ಕೈಗಳನ್ನು ಮೇಲಕೆತ್ತಿ ಹರಹರ ಮಹಾದೇವ ಎಂದು ಜಪಿಸುವ ಮೂಲಕ ದೇವರು ನಮ್ಮ ಜೀವನದ ಎಲ್ಲಾ ರೀತಿಯ ದುಃಖ ಮತ್ತು ಅಡೆತಡೆಗಳನ್ನು ನಿವಾರಿಸಿ ಬಿಡುತ್ತಾನೆ ಎನ್ನುವುದು ಅಗಾಧವಾದ ನಂಬಿಕೆ. ಕೈಗಳನ್ನು ಎತ್ತುವ ಮೂಲಕ ಇನ್ನು ಮುಂದೆ ತನ್ನ ಸಮಸ್ಯೆಗಳ ಹೊರೆಯನ್ನು ತಾನು ಹೊರುವುದಿಲ್ಲ ಬದಲಿಗೆ ಅವುಗಳನ್ನೆಲ್ಲಾ ನಿನ್ನ ಪಾದದ ಅಡಿಗೆ ಹಾಕುತ್ತೇನೆ. ಎಲ್ಲವನ್ನೂ ನೀನೇ ಪರಿಹರಿಸು ಎಂದು ಆ ಮಹಾದೇವನನ್ನು ಕೇಳಿಕೊಳ್ಳುವ ರೀತಿ ಅದು.
ಹರ ಎಂದರೆ ವಿನಾಶಕ ಎಂದರ್ಥ. ಹರಹರ ಮಹಾದೇವ ಎಂದು ಕೂಗುವಾಗ ಕೈಗಳನ್ನು ಎತ್ತುವುದೆಂದರೆ ಅದು ನಮ್ಮ ಜಾಗೃತ ಪ್ರಜ್ಞೆಯನ್ನು ಸಂಕೇತಿಸುತ್ತದೆ. ಭಕ್ತರ ಇಂದ್ರೀಯಗಳನ್ನು ನಿಯಂತ್ರಿಸುವ ಮೂಲಕ ಅವರನ್ನು ಭೌತಿಕ ಪ್ರಪಂಚದಿಂದ ಆಧ್ಯಾತ್ಮದ ಕಡೆಗೆ ಕೊಂಡೊಯ್ಯುತ್ತದೆ. ಕೈಗಳನ್ನು ಎತ್ತುವ ಮೂಲಕ ಭಕ್ತನು ಲೌಕಿಕ ಬಾಂಧವ್ಯಗಳಿಂದ ಮುಕ್ತನಾಗಲು ಮತ್ತು ದೇವರ ಚರಣದಲ್ಲಿ ಆಶ್ರಯ ಪಡೆಯಲು ತಯಾರಿ ನಡೆಸುತ್ತಿದ್ದಾನೆ ಎನ್ನುವುದನ್ನು ಸೂಚಿಸುತ್ತದೆ.
ಶಾಂತಿ ಮತ್ತು ಮೋಕ್ಷ:
ಎರಡೂ ಕೈಗಳನ್ನು ಎತ್ತಿ ಶಿವನ್ನು ಸ್ತುತಿಸುವುದು ಎಂದರೆ ಅದು ಭಕ್ತಿಯ ಪರಾಕಾಷ್ಠೆ. ಈ ಸನ್ನೆಯು ಜೀವನದಲ್ಲಿನ ನಕಾರಾತ್ಮಕ ಶಕ್ತಿಯನ್ನು ಹೋಗಲಾಡಿಸುತ್ತದೆ. ಮನಸ್ಸನ್ನು ಶಾಂತಗೊಳಿಸುತ್ತದೆ. ಭಕ್ತರು ದೇವರಲ್ಲಿ ಸಂಪೂರ್ಣವಾಗಿ ಲೀನವಾಗಲು ಸಹಾಯ ಮಾಡುತ್ತದೆ. ನಿಜವಾದ ಭಕ್ತಿ ಮತ್ತು ಸಮರ್ಪಣೆಯು ಭಕ್ತರನ್ನು ಮರಣಾ ನಂತರ ಮೋಕ್ಷದ ಕಡೆಗೆ ಒಯ್ಯುತ್ತದೆ ಎನ್ನುತ್ತದೆ ಧರ್ಮಗ್ರಂಥಗಳು.
ಇನ್ನು ಮುಂದೆ ನೀವು ಕೂಡಾ ಶಿವನನನು ಪೂಜಿಸುವಾಗ ಎರಡೂ ಕೈಗಳನ್ನು ಮೇಲೆತ್ತಿ ಹರ ಹರ ಮಹಾದೇವ ಎಂದು ಕೂಗಿ. ಈ ಮೂಲಕ ಶಿವನ ಕೃಪಾ ಕಟಾಕ್ಷಕ್ಕೆ ಪಾತ್ರವಾಗುವುದು ಮಾತ್ರವಲ್ಲ, ಆಂತರಿಕ ಪ್ರಜ್ಞೆಯೂ ಹೆಚ್ಚುತ್ತದೆ. ಜೀವನ ಸಂತಸವನ್ನು ಹೆಚ್ಚಿಸುತ್ತದೆ.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications