ಶಂಕರಾಚಾರ್ಯರು ರಾಕ್ಷಸರಂತೆ! ವೈರಲ್‌ ಆಗಿರೋ ವಿಡಿಯೋದ ನಿಜಾಂಶ ಏನು?

ಉಡುಪಿಯ ರಾಜಾಂಗಣದಲ್ಲಿ ನಡೆದ ಹರಿಕಥೆಯೊಂದರಲ್ಲಿ ಶ್ರೀ ಶಂಕರಾಚಾರ್ಯರ ಬಗ್ಗೆ ಆಕ್ಷೇಪಾರ್ಹ ವಿವರಣೆ ನೀಡಿದ ವಿಡಿಯೋ ವೈರಲ್ ಆಗಿ ವ್ಯಾಪಕ ವಿವಾದಕ್ಕೆ ಕಾರಣವಾಯಿತು. ಈ ಘಟನೆಯ ಹಿನ್ನೆಲೆಯ ಕುರಿತು ವಿವರ ಇಲ್ಲಿದೆ.

ನಿನ್ನೆ ಒಂದು ವಿಡಿಯೋ ವೈರಲ್‌ ಆಗಿದೆ. ಅದು ಉಡುಪಿಯ ರಾಜಾಂಗಣದಲ್ಲಿ ನಡೆದ ಒಂದು ಹರಿಕಥೆಯದ್ದು. ಹರಿಕಥೆಯನ್ನು ನಡೆಸಿಕೊಟ್ಟವರು ಮೂವರು ಹೆಣ್ಣುಮಕ್ಕಳು (ಇಬ್ಬರು ವ್ಯಾಖ್ಯಾನಕಾರರು, ಒಬ್ಬಳು ವಾದಕಿ). ಅದರಲ್ಲಿ, ಹಿಂದೂ ಧರ್ಮದ ಆದ್ಯ ಯತಿಗಳಾದ ಶ್ರೀ ಶಂಕರಾಚಾರ್ಯರ ಕುರಿತು ಆಕ್ಷೇಪಾರ್ಹವಾದ ಕತೆ- ವಿವರಣೆ ಇತ್ತು. ಅದು ವೈರಲ್‌ ಆದ ಕೂಡಲೇ ಶಂಕರಾಚಾರ್ಯರ ಭಕ್ತರು, ಅಭಿಮಾನಿಗಳು, ಮಾತ್ರವಲ್ಲ ವೈಷ್ಣವರಲ್ಲೂ ತುಂಬಾ ಮಂದಿ ರೊಚ್ಚಿಗೆದ್ದರು. ಉಡುಪಿಯ ಅಷ್ಟಮಠಗಳಿಂದ ನಡೆಸಲ್ಪಡುವ ರಾಜಾಂಗಣ ಕಾರ್ಯಕ್ರಮದಲ್ಲಿ ಇಂಥ ಘಟನೆ ನಡೆಯಬಹುದೇ, ಇದಕ್ಕೆ ಅವಕಾಶ ಮಾಡಿಕೊಟ್ಟವರು ಯಾರು, ಮಾಧ್ವರ ಸಂಪ್ರದಾಯವೇ ಹೀಗೇನಾ, ಮಾಧ್ವರಿಗೂ- ಶಾಕ್ತರಿಗೂ ಮೊದಲಿನಿಂದ ಈ ವೈರತ್ವ ಇದೆಯಾ, ಇದ್ದರೆ ಯಾಕೆ- ಎಂಬೆಲ್ಲ ಚರ್ಚೆಗಳಾದವು.

Udupi Harikatha Row Explained

ವಿಡಿಯೋದಲ್ಲಿ ಏನಿತ್ತು?

ವಿಡಿಯೋ ಹರಿಕಥೆಯ ಒಂದು ತುಣುಕಾಗಿತ್ತು. ಹರಿಕಥೆ ಇದ್ದುದು ʼಪ್ರಹ್ಲಾದ ವಿಜಯʼ. ಮಹಾವಿಷ್ಣು ನರಸಿಂಹಾವತಾರ ಎತ್ತಿ ಬಂದು ಹಿರಣ್ಯಕಶ್ಯಪುವನ್ನು ಕೊಂದು ಪ್ರಹ್ಲಾದನನ್ನು ರಕ್ಷಿಸುವ ಕಥೆ. ಅದರ ಮಧ್ಯೆ ಈ ಹುಡುಗಿಯರು ಶಂಕರಾಚಾರ್ಯರನ್ನು ಎಳೆತಂದಿದ್ದರು. ಯಾರೋ ಬರೆದುಕೊಟ್ಟಿದ್ದನ್ನು ಅವರು ಓದಿದ್ದರು ಅಷ್ಟೆ. "ಮಣಿಮಂತ ಎಂಬ ರಾಕ್ಷಸನು ರುದ್ರದೇವರ ವರ ಪಡೆದು ಕೇರಳದ ಕಾಲಟಿಯಲ್ಲಿ ಶಂಕರ ಎಂಬ ನಾಮದಿಂದ ಜನಿಸುತ್ತಾನೆ. ಮುಂದೆ ಅವನು ದುಶ್ಶಾಸ್ತ್ರಗಳನ್ನು ರಚಿಸುತ್ತಾನೆ. ಆತ್ಮ- ಪರಮಾತ್ಮರಲ್ಲಿ ಭೇದ ಇಲ್ಲ, ಎಲ್ಲರೂ ಒಂದೇ ಎಂದು ಹೇಳುತ್ತ ದುಶ್ಶಾಸ್ತ್ರಗಳನ್ನು ರಚಿಸುತ್ತಾನೆ." ಎಂದೆಲ್ಲ ಹೇಳಿದರು. ನಂತರ ಶಂಕರನಿಂದ ಕಲುಷಿತವಾದ ವಾತಾವರಣ ಸರಿಪಡಿಸಲು ಮಧ್ವಾಚಾರ್ಯರು ಉಡುಪಿಯಲ್ಲಿ ಜನ್ಮ ತಾಳಿದರು ಎಂದು ಹೇಳುತ್ತಾರೆ.

SSLC ಪರೀಕ್ಷೆಯಲ್ಲಿ ಪೂರ್ಣ ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಉಡುಪಿಯ ಬಸ್ ಕಂಡಕ್ಟರ್‌ ಪುತ್ರ ಪ್ರೀತಂ
SSLC ಪರೀಕ್ಷೆಯಲ್ಲಿ ಪೂರ್ಣ ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಉಡುಪಿಯ ಬಸ್ ಕಂಡಕ್ಟರ್‌ ಪುತ್ರ ಪ್ರೀತಂ

ಈ ಹುಡುಗಿಯರು ಯಾರೋ ಬರೆದುಕೊಟ್ಟಿದ್ದನ್ನು ಓದಿದ್ದರು. ಅಂದರೆ ಇದರ ಹಿಂದೆ ಇನ್ಯಾರೋ ಇದ್ದರು ಎಂಬುದು ಸ್ಪಷ್ಟ. ಬಹುಶಃ ಅವರ ಹೆತ್ತವರೋ, ಗುರುಗಳೋ ಬರೆದುಕೊಟ್ಟಿರಬಹುದು. ಇದಾದ ಮರುದಿನವೇ, ಶಿರೂರು ಮಠದವರು ಒಂದು ಪ್ರಕಟಣೆ ಹೊರಡಿಸಿದರು. ಈ ಘಟನೆ ನಮ್ಮ ಗಮನಕ್ಕೆ ಬರದೇ ಆಗಿದೆ. ಇದಕ್ಕಾಗಿ ಆ ಹೆಣ್ಣು ಮಕ್ಕಳ ಕ್ಷಮಯಾಚನೆ ವಿಡಿಯೋ ಮಾಡಿಸಲಾಗಿದ ಎಂದು ಪ್ರಕಟಣೆ ನೀಡಿದರು.

ಶಾಂಕರ- ಮಾಧ್ವ ವೈರ

ಇದರ ಹಿನ್ನೆಲೆ ಅರಿಯದವರಿಗೆ ಒಂದು ಪುಟ್ಟ ಹಿನ್ನೆಲೆ ಇಲ್ಲಿ ನೀಡಬಹುದು. ಶ್ರೀ ಶಂಕರಾಚಾರ್ಯರು ಎಂಟನೇ ಶತಮಾನದಲ್ಲಿ ಕೇರಳದಲ್ಲಿ ಜನಿಸಿ, ಆಗ ಶಿಥಿಲವಾಗುತ್ತಿದ್ದ ಹಿಂದೂ ಧರ್ಮವನ್ನು ಮರಳಿ ಗಟ್ಟಿಗೊಳಿಸಲು ಯತ್ನಿಸಿದರು. ವೇದಗಳಿಗೆ ಭಾಷ್ಯಗಳನ್ನು ಬರೆದರು. ಜೀವ- ಶಿವ ಒಂದೇ, ಆತ್ಮ- ಪರಮಾತ್ಮ ಭೇದವಿಲ್ಲ ಎಂಬುದು ಅವರ ಬೋಧೆಯ ಸಾರ. ಹೀಗಾಗಿ ಇದು ಅದ್ವೈತ. ದೇವಾಲಯಗಳಿಗೆ ಪಂಚಾಯತನ ಪೂಜಾ ಪದ್ಧತಿಯನ್ನು ರೂಪಿಸಿದರು, ಇಂದೂ ಎಲ್ಲ ದೇವಾಲಯಗಳೂ ಇದೇ ರೀತಿಯಲ್ಲಿ ನಿರ್ಮಾಣವಾಗುತ್ತವೆ. ಇವರು ಶಿವನ ಅವತಾರ ಎಂದು ನಂಬಿಕೆ. ಶಿವ ಹಾಗೂ ಶಕ್ತಿಯರ ಆರಾಧನೆಯನ್ನು ಜನಪ್ರಿಯಗೊಳಿಸಿದರು. ಇವರ ಭಕ್ತರನ್ನು ಶೈವರು, ಶಾಂಕರರು, ಶಾಕ್ತರು ಎಂದೆಲ್ಲ ಕರೆಯಲಾಗುತ್ತದೆ.

ಇವರ ಬಳಿಕ 13ನೇ ಶತಮಾನದಲ್ಲಿ ಶ್ರೀ ಮಧ್ವಾಚಾರ್ಯರು ಜನಿಸಿ, ವೈಷ್ಣವ ಆರಾಧನೆಯನ್ನು ಜನಪ್ರಿಯಗೊಳಿಸಿದರು. ಜೀವ- ಶಿವ ಬೇರೆ ಎಂದು ಪ್ರತಿಪಾದಿಸಿದರು. ಹೀಗಾಗಿ ಇವರ ಬೋಧನೆಯನ್ನು ದ್ವೈತ ಎಂದು ಕರೆಯಲಾಗುತ್ತದೆ. ಇವರ ಅನುಯಾಯಿಗಳು ಮಾಧ್ವರು. ಉಡುಪಿಯ ಕೃಷ್ಣಮಠಗಳು, ಮಂತ್ರಾಲಯ ಇವೆಲ್ಲ ಮಾಧ್ವ ಸಂಪ್ರದಾಯದವು. ಶೃಂಗೇರಿ, ಶಕ್ತಿಪೀಠಗಳೆಲ್ಲ ಶಂಕರ ಪರಂಪರೆಯವು.

ಬಹಳ ಕಾಲದ ನಂತರ ಮಧ್ವರಲ್ಲಿಯೂ ಹಲವರು ಕಠೋರವಾದಿಗಳು ಹುಟ್ಟಿಕೊಂಡರು. ಇವರಲ್ಲಿ ನಾರಾಯಣ ಪಂಡಿತಾಚಾರ್ಯ ಎಂಬಾತ ʼಮಣಿಮಂಜರಿʼ ಎಂಬ ಗ್ರಂಥವನ್ನು ರಚಿಸಿದ. ಅದರಲ್ಲಿ ಮೇಲೆ ಹೇಳಲಾದ ಕಪೋಲಕಲ್ಪಿತ ಕಥೆಯನ್ನು ಸೃಷ್ಟಿಸಿ ಬರೆದ. ಇದರಲ್ಲಿ ಶಂಕರಖಂಡನೆ, ಶಂಕರಾನುಯಾಯಿಗಳ ನಿಂದನೆ, ಅವಹೇಳನವೇ ಮುಖ್ಯವಾಗಿದೆ. ಇಂದಿಗೂ ಹಲವು ಮಾಧ್ವರ ಮನೆಗಳಲ್ಲಿ, ಪಾಠಶಾಲೆಗಳಲ್ಲಿ ಈ ಗ್ರಂಥವನ್ನು ಬೋಧಿಸಲಾಗುತ್ತದೆ ಎನ್ನಲಾಗಿದೆ. ಈಗ ವೈರಲ್‌ ಆಗಿರುವ ಹೆಣ್ಣುಮಕ್ಕಳು ಈ ಬೋಧನೆಯ ಬಲಿಪಶುಗಳು ಅಷ್ಟೇ.

Udupi: ಉಡುಪಿ ಜಿಲ್ಲೆಗೆ 'ಸಂಪೂರ್ಣ ಸಾಕ್ಷರತಾ' ಸ್ಥಾನಮಾನ, ಶೀಘ್ರವೇ ಘೋಷಣೆ
Udupi: ಉಡುಪಿ ಜಿಲ್ಲೆಗೆ 'ಸಂಪೂರ್ಣ ಸಾಕ್ಷರತಾ' ಸ್ಥಾನಮಾನ, ಶೀಘ್ರವೇ ಘೋಷಣೆ

ನಿಜಕ್ಕೂ ವೈರ ಇದೆಯೇ?

ದ್ವೈತಕ್ಕೂ ಅದ್ವೈತಕ್ಕೂ ಅತ್ಯುನ್ನತ ನೆಲೆಯಲ್ಲಿ ಭೇದ ಇದೆ. ಆತ್ಮನ ನೆಲೆಯಲ್ಲಿ ನೋಡಿದಾಗ, ಜೀವ- ಶಿವ ಒಂದೇ ಎಂದು ಅದ್ವೈತ ಹೇಳುತ್ತದೆ. ಆದರೆ ಲೌಕಿಕ ವಿಷಯ ಬಂದಾಗ, ದೇವರ ಪೂಜೆಯನ್ನು ಅದು ಪ್ರತಿಪಾದಿಸುವುದರಿಂದ, ದ್ವೈತವನ್ನು ಮಾನ್ಯ ಮಾಡುತ್ತದೆ. ಹೀಗಾಗಿ ಅದ್ವೈತಿಗಳಿಗೆ ದ್ವೈತದ ಮೇಲಾಗಲೀ, ದ್ವೈತಿಗಳ ಮೇಲಾಗಲೀ ದ್ವೇಷವಿಲ್ಲ. ಆದರೆ ದ್ವೈತಿಗಳಲ್ಲಿ ಬಹಳ ಮಂದಿ ಕರ್ಮಠರಾಗಿದ್ದು, ಶಂಕರದ್ವೇಷವನ್ನೇ ಬಂಡವಾಳ ಮಾಡಿಕೊಂಡಿದ್ದಾರೆ. ಪ್ರವಚನ ನೀಡುವವರು ಕೂಡ ಇದನ್ನೇ ಪ್ರಚೋದಿಸುತ್ತಾರೆ ಎಂಬುದು ಅದ್ವೈತಿಗಳ ಅಳಲು.

ದ್ವೈತಿಗಳ ಸ್ವಾಮೀಜಿಗಳು, ಅಂದರೆ ಉಡುಪಿಯ ಅಷ್ಟಮಠಗಳ ಶ್ರೀಗಳೂ ಸೇರಿದಂತೆ, ಶಂಕರಾಚಾರ್ಯರು ಸನಾತನ ಧರ್ಮವನ್ನು ಪುನರುತ್ಥಾನ ಮಾಡಿದರು ಎಂಬುದನ್ನು ವಾಗ್ವಾದ ಇಲ್ಲದಂತೆ ಒಪ್ಪಿಕೊಳ್ಳುತ್ತಾರೆ. ಶಂಕರಾಚಾರ್ಯರು ಹುಟ್ಟಿರದೆ ಇದ್ದರೆ ಬೌದ್ಧ ಧರ್ಮ ಇಡೀ ದೇಶವನ್ನು ಆಕ್ರಮಿಸಿಕೊಂಡುಬಿಡುತ್ತಿತ್ತು ಎನ್ನಲಾಗುತ್ತದೆ. ಹೀಗಾಗಿ ಶಂಕರರು ಅವರಿಗೂ ಪೂಜ್ಯರೇ.

ಹಾಗಾದರೆ ದ್ವೇಷ ಎಲ್ಲಿದೆ? ಕೆಲವೇ ಕರ್ಮಠರು, ಮೂಲಭೂತವಾದಿಗಳ ಕೈವಾಡ ಇದು. ಇವರು ದ್ವೈತಿಗಳು- ಅದ್ವೈತಿಗಳ ನಡುವೆ ತಂದಿಕ್ಕಲು ನೋಡುತ್ತಾರೆ. ಬ್ರಾಹ್ಮಣರು ಅಥವಾ ಹಿಂದೂಗಳ ಒಳಪಂಗಡಗಳೇ ಹೀಗೆ ಕಚ್ಚಾಡುತ್ತಿದ್ದರೆ, ನಮ್ಮನ್ನು ನಾಶಮಾಡಲು ಹೊರಗಿನ ವೈರಿಗಳು ಬೇಕಾಗಿಲ್ಲ ಎಂಬುದು ಪ್ರಜ್ಞಾವಂತರ ಆತಂಕ. ಹಾಗೇ ಬ್ರಾಹ್ಮಣರು ಒಗ್ಗಟ್ಟಾಗಬೇಕಾದ ಅಗತ್ಯವನ್ನೂ ಈ ಘಟನೆ ಸಾರಿದಂತಿದೆ.

(ಬರಹ: ಭವಾನಿ ಭಟ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+