ಮಳೆಗಾಲದಲ್ಲಿ ಮಾಡುವ ಇದೊಂದು ತಪ್ಪು ಸೊಂಪಾಗಿ ಬೆಳೆದಿರುವ ತುಳಸಿ ಗಿಡ ಕೂಡಾ ಸಾಯಲು ಕಾರಣವಾಗಬಹುದು!
ಮಳೆಗಾಲ ಆರಂಭವಾದರೆ ಸಾಕು ಎಲ್ಲಿ ನೋಡಿದರೂ ಹಸಿರು ಕಣ್ಣಿಗೆ ಬೀಳುತ್ತದೆ. ತೋಟಗಾರಿಕೆಗೆ ಇದು ಬೆಸ್ಟ್ ಟೈಂ. ಮಳೆಗಾಲದ ಹವಾಮಾನವು ಸಸ್ಯಗಳ ಬೆಳವಣಿಗೆಗೆ ವಿಶೇಷವಾಗಿ ಪ್ರಯೋಜನಕಾರಿಯಾಗಿದೆ. ಇದೇ ಕಾರಣಕ್ಕೆ ಮಳೆಗಾಲದಲ್ಲಿ ಮನೆ ಮುಂದೆ ಇರುವ ಕೈ ದೋಟದಲ್ಲಿಯೂ ಬೇರೆ ಬೇರೆ ಗಿಡಗಳನ್ನು ನೆಡಲಾಗುತ್ತದೆ. ಯಾಕೆಂದರೆ ಮಳೆ ನೀರಿಗೆ ಬೀಜಗಳು ಮೊಳಕೆಯೊಡೆಯುತ್ತವೆ. ನೆಟ್ಟ ಗಿಡಗಳು ಚಿಗುರೊಡೆಯುತ್ತವೆ.
ಕೆಲವೊಮ್ಮೆ, ನೀವು ಗಮನಿಸಿರಬಹುದು ಬೀಜ ಹಾಕಿ ಎಷ್ಟು ದಿನಗಳಾದರೂ ಮೊಳೆಕೆ ಬರುವುದೇ ಇಲ್ಲ. ಆದರೆ ಒಂದು ಮಳೆ ಬಿದ್ದರೆ ಸಾಕು ತಕ್ಷಣ ಆ ಬೀಜ ಚಿಗುರೊಡೆಯುತ್ತದೆ. ಇನ್ನು ಈ ಋತುವಿನಲ್ಲಿ ನಾವು ಮಾಡುವ ಒಂದೇ ಒಂದು ತಪ್ಪು ಸಸ್ಯವು ಸಾಯುವುದಕ್ಕೂ ಕಾರಣವಾಗಬಹುದು. ಕೆಲವೊಮ್ಮೆ ಸೊಂಪಾಗಿ ಬೆಳೆದಿದ್ದ ಸಸ್ಯ ಕೂಡಾ ಮಳೆಗಾಲದಲ್ಲಿ ಕೊಳೆಯಲು ಪ್ರಾರಂಭಿಸಬಹುದು.

ಮಳೆಗಾಲದಲ್ಲಿ ಸಸ್ಯಗಳು ಚೆನ್ನಾಗಿ ಬೆಳೆಯುತ್ತವೆ ಎನ್ನುವುದರಲ್ಲಿ ಯಾವುದೇ ಸಂದೇಹ ಇಲ್ಲ. ಆದರೆ ಈ ಋತುವಿನಲ್ಲಿ ಸಸ್ಯಗಳ ಆರೈಕೆಗೆ ವಿಶೇಷ ಗಮನ ನೀಡುವ ಅಗತ್ಯವೂ ಇದೆ.
ತುಳಸಿಗೆ ಬೇಕು ಹೆಚ್ಚಿನ ಕಾಳಜಿ:
ಸಾಮಾನ್ಯವಾಗಿ ಎಲ್ಲಾ ಮನೆಯ ಅಂಗಳದಲ್ಲಿ ತುಳಸಿ ಇದ್ದೇ ಇರುತ್ತದೆ. ಮಳೆಗಾಲದಲ್ಲಿ ತುಳಸಿ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಅಗತ್ಯ. ಯಾಕೆಂದರೆ ಈ ಸಮಯದಲ್ಲಿ ತುಳಸಿ ಸಸ್ಯಗಳು ಬೇಗನೆ ಕೊಳೆಯುತ್ತವೆ. ಭಾರತೀಯ ಮನೆಗಳಲ್ಲಿ ತುಳಸಿಗೆ ಪವಿತ್ರ ಸ್ಥಾನವಿದೆ. ಆದರೆ ಇಲ್ಲಿ ನಾವು ಮಾಡುವ ಒಂದೇ ಒಂದು ತಪ್ಪು ತುಳಸಿ ಸಸ್ಯ ಸಾಯುವುದಕ್ಕೆ ಕಾರಣವಾಗಬಹುದು.
ಮಳೆಗಾಲದಲ್ಲಿ ಈ ತಪ್ಪುಗಳ ಬಗ್ಗೆ ಇರಲಿ ಎಚ್ಚರ:
ನೀರು ಹರಿಯಲು ಸರಿಯಾದ ವ್ಯವಸ್ಥೆ:
ತುಳಸಿಯನ್ನು ತುಳಸಿ ಕಟ್ಟೆಯಲ್ಲಿ ಇಟ್ಟಿರಲಿ ಅಥವಾ ಪಾಟ್‌ನಲ್ಲಿ ಇಟ್ಟಿರಲಿ. ಮಳೆಗಾಲದಲ್ಲಿ, ಸಂಗ್ರಹವಾಗುವ ಹೆಚ್ಚುವರಿ ನೀರು ಹೊರಕ್ಕೆ ಹರಿದು ಹೋಗಲು ಸ್ಥಳವಿರಬೇಕು. ಇಲ್ಲವಾದರೆ ಆ ನೀರು ಕಟ್ಟೆ ಅಥವಾ ಪಾಟ್‌ನಲ್ಲಿಯೇ ಸಂಗ್ರಹವಾಗುತ್ತದೆ. ಕ್ರಮೇಣ, ನಿಂತ ನೀರಿನಿಂದ ಮಣ್ಣು ತೇವಾಂಶದಿಂದಲೇ ಕೂಡಿರುವಂತೆ ಮಾಡುತ್ತದೆ. ಅತಿಯಾದ ತೇವಾಂಶವು ಸಸ್ಯಕ್ಕೆ ಆಮ್ಲಜನಕದ ಹರಿವನ್ನು ಕಡಿಮೆ ಮಾಡುತ್ತದೆ.ಇದು ಬೇರು ಕೊಳೆಯುವುದಕ್ಕೂ ಕಾರಣವಾಗುತ್ತದೆ. ತುಳಸಿಯ ಬೇರು ಕೊಳೆಯಲು ಆರಂಭವಾದರೆ ಸಸ್ಯ ಹೆಚ್ಚು ಕಾಲ ಬದುಕುವುದಿಲ್ಲ.
ಹೆಚ್ಚುವರಿ ನೀರನ್ನು ಹೊರಹಾಕಿ:
ಮಳೆಗಾಲದಲ್ಲಿ, ನಿಮ್ಮ ಹೂವಿನ ಕುಂಡ ಅಥವಾ ತುಳಸಿ ಕಟ್ಟೆಯಲ್ಲಿ ನೀರು ಹೊರ ಹೋಗುವುದಕ್ಕೆ ಜಾಗ ಇದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಕುಂಡದಲ್ಲಿ ಸಂಗ್ರಹವಾಗುವ ಹೆಚ್ಚುವರಿ ಮಳೆನೀರನ್ನು ಹೊರಹಾಕಿ. ಇದು ಮಣ್ಣಿನಲ್ಲಿನ ಅತಿಯಾದ ತೇವಾಂಶವನ್ನು ತಡೆಯುತ್ತದೆ. ನಿಂತ ನೀರು ಡೆಂಗ್ಯೂ ಮತ್ತು ಮಲೇರಿಯಾ ಹರಡುವ ಸೊಳ್ಳೆಗಳನ್ನು ಸಹ ಉತ್ಪಾದಿಸಬಹುದು.
ಅರಿಶಿನದ ಬಳಕೆ:
ಇನ್ನು ಮಳೆಗಾಲದಲ್ಲಿ ಸಸ್ಯಗಳ ಮೇಲೆ ಕೂಡಾ ಫಂಗಸ್ ಹುಟ್ಟಿಕೊಳ್ಳುವ ಭಯ ಇರುತ್ತದೆ. ಇದರಿಂದ ಸಸ್ಯವನ್ನು ರಕ್ಷಿಸಲು ನೀವು ಅರಿಶಿನವನ್ನು ಬಳಸಬಹುದು. ಮೊದಲು, ಕೋಲು ಅಥವಾ ಯಾವುದಾದರೂ ಒಂದು ಉಪಕರಣದಿಂದ ಮಣ್ಣನ್ನು ಲಘುವಾಗಿ ಅಗೆಯಿರಿ. ನಂತರ, ಅರ್ಧ ಟೀಚಮಚ ಅರಿಶಿನ ಪುಡಿಯನ್ನು ಮಣ್ಣಿನಲ್ಲಿ ಸಿಂಪಡಿಸಿ. ಅರಿಶಿನವು ನೈಸರ್ಗಿಕ ಶಿಲೀಂಧ್ರ ವಿರೋಧಿ ಮತ್ತು ಬ್ಯಾಕ್ಟೀರಿಯಾ ವಿರೋಧಿ ಏಜೆಂಟ್ ಆಗಿರುತ್ತದೆ. ಹಾಗಾಗಿ ಇದು ಸಸ್ಯಗಳ ಮೇಲೆ ಶಿಲೀಂಧ್ರವು ರೂಪುಗೊಳ್ಳುವುದನ್ನು ತಡೆಯುತ್ತದೆ.
ತುಳಸಿ ಗಿಡಕ್ಕೆ ನಿತ್ಯ ಬೆಳಿಗ್ಗೆ ನೀರು ಅರ್ಪಿಸುವ ಕ್ರಮ ಸರ್ವೆ ಸಾಮಾನ್ಯ. ಆದರೆ, ಮಳೆಗಾಲದಲ್ಲಿ ನೀರು ಅರ್ಪಿಸುವ ವೇಳೆ ಅದರ ಬುಡದಲ್ಲಿ ನೀರು ನಿಂತಿದೆಯೇ? ಅಥವಾ ಮಣ್ಣು ತೇವಾಂಶದಿಂದ ಕೂಡಿದೆಯೇ ಎನ್ನುವುದನ್ನು ಪರೀಕ್ಷಿಸಿಕೊಳ್ಳಿ. ಒಂದು ವೇಳೆ ಮಣ್ಣು ಒದ್ದೆಯಾಗಿದೆ ಎಂದಾದರೆ ಮತ್ತೆ ನೀರು ಹಾಕುವ ಅಗತ್ಯ ಇರುವುದಿಲ್ಲ. ಕೇವಲ ದೀಪ ಧೂಪಗಳನ್ನು ಬೆಳಗಿ ಪೂಜೆ ಮಾಡಿದರೆ ಸಾಕಾಗುತ್ತದೆ.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications