SSLC ಪರೀಕ್ಷೆಯಲ್ಲಿ ಪೂರ್ಣ ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಉಡುಪಿಯ ಬಸ್ ಕಂಡಕ್ಟರ್ ಪುತ್ರ ಪ್ರೀತಂ
ನಿನ್ನೆ ಅಷ್ಟೇ ಪ್ರಕಟವಾಗಿರುವ ಎಸ್ಎಸ್ಎಲ್‌ಸಿ ಫಲಿತಾಂಶದಲ್ಲಿ ಉಡುಪಿ ಜಿಲ್ಲೆಯ ಗ್ರಾಮೀಣ ಭಾಗದ ಪ್ರತಿಭೆ, ಪ್ರೀತಂ ಜಿ. ಪೂಜಾರಿ ಅವರು 625 ಕ್ಕೆ 625 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿ ಕರಾವಳಿ ಭಾಗದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಖಾಸಗಿ ಬಸ್ ಕಂಡಕ್ಟರ್ ಮಗನಾಗಿರುವ ಪ್ರೀತಂ ಅವರ ಈ ಸಾಧನೆ ನಿಜಕ್ಕೂ ಅನೇಕ ವಿದ್ಯಾರ್ಥಿಗಳಿಗೆ ಸ್ಫೂರ್ತಿದಾಯಕವಾಗಿದೆ.
ಸಾಧಾರಣ ಹಿನ್ನೆಲೆಯಿಂದ ಬಂದು ಅಸಾಧಾರಣ ಸಾಧನೆ
ಪ್ರೀತಂ ಅವರ ತಾಯಿ ಗೃಹಿಣಿಯಾಗಿದ್ದು, ತಂದೆ ಹೆಬ್ರಿ-ಮಂದಾರ್ತಿ-ಉಡುಪಿ ಮಾರ್ಗದಲ್ಲಿ ಸಂಚರಿಸುವ 'ಲಕ್ಷ್ಮಿ ಎಕ್ಸ್ ಪ್ರೆಸ್' ಖಾಸಗಿ ಬಸ್ಸಿನಲ್ಲಿ ನಿರ್ವಾಹಕರಾಗಿ ಕೆಲಸ ಮಾಡುತ್ತಿದ್ದಾರೆ. ಹೆತ್ತವರ ನಿರಂತರ ಪ್ರೋತ್ಸಾಹ ಹಾಗೂ ತನ್ನ ಕಠಿಣ ಪರಿಶ್ರಮದಿಂದ ಪ್ರೀತಂ ಇಂದು ಈ ಹಂತ ತಲುಪಿದ್ದಾರೆ. ಪರೀಕ್ಷೆಯ ಫಲಿತಾಂಶದ ಬಗ್ಗೆ ಮಾತನಾಡಿದ ಪ್ರೀತಂ, "ನನಗೆ 620ಕ್ಕೂ ಹೆಚ್ಚು ಅಂಕಗಳು ಬರುವ ನಿರೀಕ್ಷೆ ಇತ್ತು. ಆದರೆ, 625ಕ್ಕೆ 625 ಅಂಕ ಬಂದಿರುವುದು ಖುಷಿ ನೀಡಿದೆ. ಫಲಿತಾಂಶ ಬಂದಾಗ ನಾನು ಸಂಬಂಧಿಕರ ಮನೆಯ ಮದುವೆ ಕಾರ್ಯಕ್ರಮದಲ್ಲಿದ್ದೆ. ಈ ಸುದ್ದಿ ಕೇಳಿ ಆಶ್ಚರ್ಯ ಮತ್ತು ಖುಷಿ ಎರಡು ಒಟ್ಟಿಗೇ ಆಯಿತು," ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಪ್ರೀತಂ ದಿನವಿಡೀ ಓದುತ್ತಿರಲಿಲ್ಲ. ಬದಲಿಗೆ, ಶಾಲೆಯಿಂದ ಮನೆಗೆ ಬಂದ ನಂತರ ಫ್ರೆಶ್ ಆಗಿ ಅಂದಿನ ಪಾಠಗಳನ್ನು ರಿವಿಷನ್ ಮಾಡುತ್ತಿದ್ದ. ಹೋಮ್ ವರ್ಕ್ ಮತ್ತು ಬರವಣಿಗೆಯ ಕೆಲಸಗಳನ್ನು ಮುಗಿಸಿದ ನಂತರ, ಪ್ರತಿದಿನ ಐದು ನಿಮಿಷಗಳ ಕಾಲ ಕುಳಿತು ಆ ದಿನ ಓದಲು ಗುರಿ ಇಟ್ಟುಕೊಳ್ಳುತ್ತಿದ್ದ. ಆ ಗುರಿಯನ್ನು ಪ್ರತಿದಿನ ಕಡ್ಡಾಯವಾಗಿ ಪೂರ್ಣಗೊಳಿಸುತ್ತಿದ್ದ ಕೂಡ. ಹೀಗೆ ಪ್ರತಿದಿನದ ಶಿಸ್ತುಬದ್ಧ ಮತ್ತು ವ್ಯವಸ್ಥಿತ ಓದು ಅವರ ಈ ದೊಡ್ಡ ಸಾಧನೆಗೆ ಕಾರಣವಾಗಿದೆ. ಯಾವತ್ತೂ ಒತ್ತಡದಿಂದ ಓದದೆ, ಇಷ್ಟಪಟ್ಟು ಓದಬೇಕು ಎಂಬುದು ಅವರ ಮಾತು.
ಪೋಷಕರ ಹಾಗೂ ಶಿಕ್ಷಕರ ಬೆಂಬಲ
"ನನ್ನ ತಂದೆಯವರು ಪ್ರತಿದಿನ ಬೆಳಿಗ್ಗೆ ಎದ್ದ ಕೂಡಲೇ ನನ್ನ ಜೊತೆ ಹದಿನೈದರಿಂದ ಅರ್ಧ ಗಂಟೆ ಮಾತನಾಡುತ್ತಿದ್ದರು. ಜೀವನದ ನೈತಿಕ ಮೌಲ್ಯಗಳು ಹಾಗೂ ತಾವು ಪಡುತ್ತಿರುವ ಕಷ್ಟಗಳ ಬಗ್ಗೆ ವಿವರಿಸಿ, ನನ್ನಲ್ಲಿ ಸ್ಫೂರ್ತಿ ತುಂಬುತ್ತಿದ್ದರು. ತಾಯಿ ಕೂಡ ನನಗೆ ಭಾವುಕ ಬೆಂಬಲ ನೀಡಿದರು. ಅಂಕಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡ, ನಿನ್ನ ಪ್ರಯತ್ನ ನೀನು ಮಾಡು, ಫಲಿತಾಂಶದ ಬಗ್ಗೆ ಚಿಂತೆ ಬೇಡ ಎಂದು ಧೈರ್ಯ ತುಂಬುತ್ತಿದ್ದರು," ಎಂದು ಪ್ರೀತಂ ತಮ್ಮ ಹೆತ್ತವರ ಪ್ರೀತಿಯನ್ನು ಸ್ಮರಿಸುತ್ತಾರೆ.
ಶಾಲೆಯ ಪ್ರಾಂಶುಪಾಲರು ಹಾಗೂ ಶಿಕ್ಷಕರು ಕೂಡ ಪ್ರೀತಂ ಅವರ ಪ್ರತಿ ಹೆಜ್ಜೆಯಲ್ಲೂ ಮಾರ್ಗದರ್ಶನ ಮಾಡಿದ್ದಾರೆ. ಅದರಲ್ಲೂ ಏಳನೇ ತರಗತಿಯಿಂದಲೇ ಅವರ ಹ್ಯಾಂಡ್ ರೈಟಿಂಗ್ ಸುಧಾರಿಸಲು ಕನ್ನಡ ಶಿಕ್ಷಕಿ ವೈಶಾಲಿ ಅವರು ನೀಡಿದ ಮಾರ್ಗದರ್ಶನವನ್ನು ಪ್ರೀತಂ ವಿಶೇಷವಾಗಿ ನೆನಪಿಸಿಕೊಂಡಿದ್ದಾನೆ.
ಕೇವಲ ಓದುವುದಷ್ಟೇ ಅಲ್ಲದೆ, ಪಠ್ಯೇತರ ಚಟುವಟಿಕೆಗಳಲ್ಲೂ ಪ್ರೀತಂ ಸಕ್ರಿಯರಾಗಿದ್ದರು. ಪ್ರತಿಭಾ ಕಾರಂಜಿ ಕಾರ್ಯಕ್ರಮದಡಿ ರಾಜ್ಯ ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನವನ್ನೂ ಪಡೆದಿದ್ದಾರೆ. ನಿರಂತರ ಓದಿನಿಂದ ಉಂಟಾಗುವ ಮಾನಸಿಕ ಒತ್ತಡವನ್ನು ನಿವಾರಿಸಲು ಕ್ರೀಡೆ ಮತ್ತು ಇತರ ಪಠ್ಯೇತರ ಚಟುವಟಿಕೆಗಳು ಸಹಾಯ ಮಾಡಿದವು ಎನ್ನುತ್ತಾರೆ ಈ ಎಸ್ಎಸ್ಎಲ್‌ಸಿ ಟಾಪರ್ ಪ್ರೀತಂ.
ಮುಂದಿನ ಗುರಿ
ಪ್ರೀತಂ ಅವರ ಮುಂದಿನ ಗುರಿ ದ್ವಿತೀಯ ಪಿಯುಸಿಯಲ್ಲಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡಿ, ಜೆಇಇ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ಇಂಜಿನಿಯರಿಂಗ್ ಮಾಡುವುದು. ಜೊತೆಗೆ, ತಮ್ಮ ತಂದೆ-ತಾಯಿ ಮತ್ತು ಮಾವನ ಆಸೆಯಂತೆ ಭವಿಷ್ಯದಲ್ಲಿ ಐಎಎಸ್ ಅಧಿಕಾರಿಯಾಗುವ ಕನಸನ್ನೂ ಹೊಂದಿದ್ದಾರೆ. ಕಠಿಣ ಪರಿಶ್ರಮವಿದ್ದರೆ ಯಾವತ್ತೂ ಸೋಲಿಲ್ಲ ಎಂಬುದಕ್ಕೆ ಪ್ರೀತಂ ಜಿ. ಪೂಜಾರಿ ಅವರ ಈ ಸಾಧನೆಯೇ ನಿಜವಾದ ಉದಾಹರಣೆ.












Click it and Unblock the Notifications