ಟೀಮ್ ಇಂಡಿಯಾ ಸೋಲಿಗೆ ಕಾರಣಕರ್ತೆಯಾದ ಆರ್‌ಸಿಬಿ ಆಟಗಾರ್ತಿ, ಸೆಮಿಫೈನಲ್ ಕನಸು ಭಗ್ನ
Women's T20 World Cup 2026: ಲಾರ್ಡ್ಸ್ ಮೈದಾನದಲ್ಲಿ ಭಾನುವಾರ (ಜೂನ್ 28) ನಡೆದ ಮಹಿಳಾ ಟಿ20 ವಿಶ್ವಕಪ್ 2026ರ ರೋಚಕ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ಭಾರತದ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಸೋಲಿನೊಂದಿಗೆ ಟೀಮ್ ಇಂಡಿಯಾದ ಸೆಮಿಫೈನಲ್ ಕನಸು ಭಗ್ನಗೊಂಡಿದೆ. ಇದಕ್ಕೆ ಪ್ರಮುಖ ಕಾರಣವೇ ಆರ್‌ಸಿಬಿ ಆಟಗಾರ್ತಿಯ ಆಕ್ರಮಣಕಾರಿ ಆಟ. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ಟಾಸ್ ಗೆದ್ದ ಟೀಮ್ ಇಂಡಿಯಾ ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಅದರಂತೆಯೇ ಭಾರತ ತಂಡವು ನಾಯಕಿ ಹರ್ಮನ್‌ಪ್ರೀತ್ ಕೌರ್ ಸಿಡಿಸಿದ ಅರ್ಧಶತಕದ ನೆರವಿನಿಂದ ಬೃಹತ್ ಮೊತ್ತ ಕಲೆಹಾಕಿತು. ಜವಾಬ್ದಾರಿಯುತ ಆಟವಾಡಿದ ನಾಯಕಿ ಕೇವಲ 27 ಎಸೆತಗಳಲ್ಲಿ 6 ಬೌಂಡರಿ 3 ಸಿಕ್ಸರ್‌ಗಳ ಸಹಿತ 56 ರನ್ ಚಚ್ಚಿದರು. ಪರಿಣಾಮ ತಂಡವು ನಿಗದಿ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 170 ರನ್ ಪೇರಿಸಿತು.

ಎಲ್ಲಿಸ್ ಪೆರ್ರಿ ಆಕ್ರಮಣಕಾರಿ ಆಟ
ಬೆಟ್ಟದಂತಹ ಸವಾಲಿನ ಮೊತ್ತವನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡಕ್ಕೆ ಆರಂಭದಲ್ಲೇ ಆಘಾತ ನೀಡಿದ ಭಾರತದ ಬೌಲರ್‌ಗಳು ಪ್ರಮುಖ 3 ವಿಕೆಟ್‌ಗಳನ್ನು ಬೇಗನೆ ಉರುಳಿಸುವಲ್ಲಿ ಯಶಸ್ವಿ ಆದರು. ಆದರೆ ಆ ಬಳಿಕ ಜೊತೆಯಾದ ಎಲ್ಲಿಸ್ ಪೆರ್ರಿ (38 ಎಸೆತಗಳಲ್ಲಿ 56 ರನ್) ಮತ್ತು ಆಶ್ಲೀ ಗಾರ್ಡ್ನರ್ (29 ಎಸೆತಗಳಲ್ಲಿ ಅಜೇಯ 53 ರನ್) ಜೋಡಿ 100 ರನ್‌ಗಳ ಅದ್ಭುತ ಜೊತೆಯಾಟ ಆಡುವ ಮೂಲಕ ಆಸ್ಟ್ರೇಲಿಯಾ ತಂಡವನ್ನು ಇನ್ನು ಒಂದು ಓವರ್ ಬಾಕಿ ಇರುವಂತೆಯೇ ಗೆಲುವಿನ ದಡ ಮುಟ್ಟಿಸಿತು.
ಭಾರತ ಸೋಲಿಗೆ ಕಾರಣರಾದ ಎಲ್ಲಿಸ್ ಪೆರ್ರಿ
ಆಸ್ಟ್ರೇಲಿಯಾ ಪರ ಆಕ್ರಮಣಕಾರಿ ಆಟ ಆಡಿದ ಎಲ್ಲಿಸ್ ಪೆರ್ರಿ ಅವರು ಕೇವಲ 38 ಎಸೆತಗಳಲ್ಲಿ 8 ಬೌಂಡರಿಗಳ ಸಹಿತ 56 ರನ್‌ಗಳನ್ನು ಕಲೆಹಾಕಿದರು. ಇವರ ಈ ಆಕರ್ಷಕ ಅರ್ಧಶತಕದ ನೆರವಿನಿಂದ ತಂಡವು ಭರ್ಜರಿ ಜಯ ಸಾಧಿಸಿ ಸೆಮಿಫೈನಲ್‌ಗೆ ಅರ್ಹತೆ ಪಡೆದುಕೊಂಡಿತು. ಇವರು ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡುತ್ತಾರೆ. ಉಳಿದಂತೆ ಇಂದಿನ ಪಂದ್ಯದಲ್ಲಿ ಆಸಿಸ್ ಪರ ಬೆಥ್ ಮೂನಿ 22(20), ಫೋಬೆ ಲಿಚ್ಫೀಲ್ಡ್ 24(25) ರನ್‌ಗಳ ಕೊಡುಗೆ ನೀಡಿದರು.
ಬೌಲಿಂಗ್‌ನಲ್ಲಿ ಎಡವಿದ ಟೀಮ್ ಇಂಡಿಯಾ
ಟೀಮ್ ಇಂಡಿಯಾ ಪರ ಬೌಲಿಂಗ್ ಮಾಡಿದ ರೇಣುಕಾ ಸಿಂಗ್ ಠಾಕೂರ್ ಅವರು ನಾಲ್ಕು ಓವರ್ ಎಸೆದು ಒಂದು ವಿಕೆಟ್ ಕೊತ್ತರೂ ಸಹ ಬರೋಬ್ಬರಿ 41 ರನ್ ಬಿಟ್ಟುಕೊಟ್ಟು ದುಬಾರಿಯಾದರು. ದೀಪ್ತಿ ಶರ್ಮಾ 31/1, ಶ್ರೀ ಚರಣಿ 32/2 ವಿಕೆಟ್ ಕಿತ್ತರು. ಬ್ಯಾಟಿಂಗ್‌ನಲ್ಲಿ ಸ್ಮೃತಿ ಮಂಧಾನ 38(37), ಶಫಾಲಿ ವರ್ಮಾ 34(26), ಜೆಮಿಯಾ 34(28) ರನ್ ಸಿಡಿಸಿದರೆ, ನಾಯಕಿ ಹರ್ಮ್‌ಪ್ರೀತ್ ಕೌರ್ 56(27) ರನ್ ಕಲೆಹಾಕಿ ತಂಡದ ಮೊತ್ತವನ್ನು 170 ಗಡಿ ಮುಟ್ಟಿಸಿದರು. ಆದರೂ ಸಹ ಗೆಲ್ಲಲು ಸಾಧ್ಯವಾಗಲಿಲ್ಲ. ಇದಕ್ಕೆ ಪ್ರಮುಖ ಕಾರಣವೇ ಬೌಲಿಂಗ್ ವಿಭಾಗದಲ್ಲಿ ಎಡವಿದ್ದು ಅಂದ್ರೆ ತಪ್ಪಾಗಲಾರದು.
ಇನ್ನೂ ಇದೇ ಪಂದ್ಯದಲ್ಲಿ ಭಾರತ ತಂಡದ ದೀಪ್ತಿ ಶರ್ಮಾ ಅವರು ಮಹಿಳಾ ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಧಿಕ ವಿಕೆಟ್ ಪಡೆದ ವಿಶ್ವದ ಮೊದಲ ಬೌಲರ್ ಎಂಬ ವೈಯಕ್ತಿಕ ಮೈಲಿಗಲ್ಲನ್ನು ಸಾಧಿಸಿ ಸಂಭ್ರಮಿಸಿದರು. ಆದರೆ, ಈ ಸೋಲಿನಿಂದಾಗಿ ಭಾರತ ತಂಡವು 'ಗ್ರೂಪ್ ಎ' ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡು ಟೂರ್ನಿಯಿಂದ ಹೊರಬಿದ್ದಿದ್ದು, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಪಡೆದುಕೊಂಡಿವೆ.












Click it and Unblock the Notifications