ಹೃದಯಕ್ಕೆ ಹತ್ತಿರವಾದ ವ್ಯಕ್ತಿಯನ್ನ ಕಳ್ಕೊಂಡಿದ್ದೀನಿ, ಪ್ಲೀಸ್ ಅವನು ರೆಸ್ಟ್ ಮಾಡಲು ಬಿಡಿ: ಕೃಷಿ ತಾಪಂಡ ಪೋಸ್ಟ್
ತಮ್ಮ ನಿವಾಸದಲ್ಲಿ ಗೆಳೆಯ ವೈಶಾಖ್ ಆತ್ಮಹತ್ಯೆ ಬೆನ್ನಲ್ಲೇ ನಟಿ ಕೃಷಿ ತಾಪಂಡ ಸುದೀರ್ಘ ಪೋಸ್ಟ್ ಹಂಚಿಕೊಂಡಿದ್ದಾರೆ. ತಮ್ಮ ಆಪ್ತ ಗೆಳೆಯ ವೈಶಾಖ್ ನಿಧನದ ನಂತರ ತೀವ್ರ ಆಘಾತಕ್ಕೊಳಗಾಗಿರುವ ಕೃಷಿ ತಾಪಂಡ, ತಮಗೆ ಇಂತಹದೊಂದು ಪರಿಸ್ಥಿತಿ ಬರುತ್ತದೆ ಎಂದು ಎಂದಿಗೂ ಊಹಿಸಿರಲಿಲ್ಲ ಎಂದಿದ್ದಾರೆ. "ನನ್ನ ಜೀವನದಲ್ಲಿ ಇಂತಹದೊಂದು ಬರವಣಿಗೆಯನ್ನು ಬರೆಯಬೇಕಾದ ಪರಿಸ್ಥಿತಿ ಬರುತ್ತದೆ ಎಂದು ನಾನು ಎಂದಿಗೂ ಕಲ್ಪಿಸಿಕೊಂಡಿರಲಿಲ್ಲ. ಪ್ರಸ್ತುತ ಈ ವಿಷಯವನ್ನು ಬರೆಯಲು ಅಥವಾ ಜಗತ್ತಿನ ಮುಂದೆ ಹಂಚಿಕೊಳ್ಳಲು ನನ್ನಲ್ಲಿ ಮಾನಸಿಕ ಶಕ್ತಿಯಾಗಲಿ ಅಥವಾ ದೈಹಿಕ ಶಕ್ತಿಯಾಗಲಿ ಉಳಿದಿಲ್ಲ. ಇಂತಹ ಕಠಿಣ ಸಮಯದಲ್ಲಿ ಸಾರ್ವಜನಿಕವಾಗಿ ಯಾವುದೇ ಹೇಳಿಕೆ ನೀಡುವುದು ನನಗಿಷ್ಟವಿರಲಿಲ್ಲ" ಎಂದು ಕೃಷಿ ತಾಪಂಡ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
"ಆದರೆ ನನ್ನ ಸುತ್ತಲೂ ಸೃಷ್ಟಿಯಾಗಿರುವ ವಿಪರೀತ ಒತ್ತಡ, ಸತತವಾಗಿ ಕೇಳಿಬರುತ್ತಿರುವ ವದಂತಿಗಳು ಮತ್ತು ಅನುಮಾನಗಳು ಹಾಗೂ ನನ್ನನ್ನು, ನನ್ನ ಸ್ನೇಹಿತರನ್ನು ಮತ್ತು ನಮ್ಮ ಕುಟುಂಬದವರನ್ನು ಗುರಿಯಾಗಿಸಿಕೊಂಡು ಪದೇ ಪದೇ ಕೇಳಲಾಗುತ್ತಿರುವ ಪ್ರಶ್ನೆಗಳಿಂದಾಗಿ ನಾನು ಈ ಪೋಸ್ಟ್ ಹಾಕುವಂತಾಗಿದೆ. ನಾವೆಲ್ಲರೂ ಕಲ್ಪಿಸಿಕೊಳ್ಳಲಾಗದಂತಹ ದೊಡ್ಡ ನಷ್ಟವನ್ನು ಅನುಭವಿಸುತ್ತಾ, ಅದರಿಂದ ಹೊರಬರಲು ಹೆಣಗಾಡುತ್ತಿರುವಾಗ, ನಮ್ಮಿಂದಲೇ ಅದಕ್ಕೆ ವಿವರಣೆ ನಿರೀಕ್ಷಿಸಲಾಗುತ್ತಿದೆ" ಎಂದು ಅವರು ಬೇಸರ ಹೊರಹಾಕಿದ್ದಾರೆ.

ಕಳೆದ ಕೆಲವು ದಿನಗಳು ನನ್ನ ಇಡೀ ಜೀವನವನ್ನೇ ನಾನು ಎಂದಿಗೂ ಯೋಚಿಸದ ರೀತಿಯಲ್ಲಿ ಬದಲಾಯಿಸಿವೆ ಎಂದಿರುವ ನಟಿ, "ನಡೆದಿರುವ ಎಲ್ಲ ಘಟನೆಗಳ ನಡುವೆ, ನನ್ನ ಹೃದಯಕ್ಕೆ ಅತ್ಯಂತ ಹತ್ತಿರವಾಗಿದ್ದ ಒಬ್ಬ ವ್ಯಕ್ತಿಯನ್ನು ನಾನು ಕಳೆದುಕೊಂಡಿದ್ದೇನೆ. ಆತ ಯಾವಾಗಲೂ ನನ್ನ ಪರವಾಗಿ ನಿಲ್ಲುತ್ತಿದ್ದ, ನನ್ನನ್ನು ರಕ್ಷಿಸುತ್ತಿದ್ದ ಮತ್ತು ಕೇವಲ ದಯೆಯುಳ್ಳ ಹೃದಯದಿಂದ ನನ್ನನ್ನು ನೋಡಿಕೊಳ್ಳುತ್ತಿದ್ದ. ಆತನನ್ನು ಕಳೆದುಕೊಂಡಿರುವುದು ನನ್ನ ಬದುಕಿನಲ್ಲಿ ಮಾತುಗಳಲ್ಲಿ ವಿವರಿಸಲಾಗದ ಶೂನ್ಯತೆಯನ್ನು ಸೃಷ್ಟಿಸಿದೆ. ಈ ದೊಡ್ಡ ನಷ್ಟವನ್ನು ನಾನು ಎಂದಾದರೂ ಅರಗಿಸಿಕೊಳ್ಳಲು ಸಾಧ್ಯವೇ ಎಂಬುದು ನನಗೇ ತಿಳಿಯುತ್ತಿಲ್ಲ" ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ.
ಸಾವನ್ನ ಕಥೆ ಮಾಡಲು ಹೊರಟಿದ್ದಾರೆ
ತಮ್ಮ ಆಪ್ತ ಸ್ನೇಹಿತನ ನಿಧನದ ದುಃಖದಲ್ಲಿರುವ ನಟಿ ಕೃಷಿ ತಾಪಂಡ, ತಮಗೆ ಕನಿಷ್ಠ ದುಃಖಿಸಲು ಸಮಯ ಮತ್ತು ಅವಕಾಶ ಸಿಗುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ಮೃತರ ಕುಟುಂಬಸ್ಥರು, ಸ್ನೇಹಿತರು ಮತ್ತು ಆಪ್ತರು ಈ ದೊಡ್ಡ ಆಘಾತದಿಂದ ಚೇತರಿಸಿಕೊಳ್ಳಲು ಒದ್ದಾಡುತ್ತಿದ್ದಾರೆ. ಆದರೆ ಸೋಷಿಯಲ್ ಮೀಡಿಯಾ ಹಾಗೂ ಕೆಲವು ವೇದಿಕೆಗಳಲ್ಲಿ ನಿರಂತರವಾಗಿ ವದಂತಿ, ಊಹೆಗಳು ಹರಿದಾಡುತ್ತಿವೆ. ಒಬ್ಬ ವ್ಯಕ್ತಿಯ ಸಾವನ್ನು ಕೇವಲ ಒಂದು ರೋಚಕ ಕಥೆಯನ್ನಾಗಿ ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದು ಬೇಸರ ಹೊರಹಾಕಿದ್ದಾರೆ.
ಸತ್ಯ ತಿಳಿಯದೆ ಪ್ರಶ್ನಿಸಬೇಡಿ
"ನಾನು ಇಲ್ಲಿ ಯಾವುದೇ ಒಬ್ಬ ನಿರ್ದಿಷ್ಟ ವ್ಯಕ್ತಿ ಅಥವಾ ಮಾಧ್ಯಮ ಉದ್ದೇಶಿಸಿ ಮಾತನಾಡುತ್ತಿಲ್ಲ. ನಿಜವಾದ ಸತ್ಯ ಏನೆಂದು ತಿಳಿಯದೆ ಕೇವಲ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಹೊರಟಿರುವ ಪ್ರತಿಯೊಬ್ಬರಿಗೂ ಇದನ್ನು ಹೇಳುತ್ತಿದ್ದೇನೆ. ನಿಮ್ಮ ಇಂತಹ ನಡೆಗಳು ಮತ್ತು ಪ್ರಶ್ನೆಗಳು, ಹಿಂದೆ ಉಳಿದಿರುವ (ಬದುಕಿರುವ) ಜನರ ಮೇಲೆ ಎಂತಹ ಭೀಕರ ಪರಿಣಾಮ ಬೀರುತ್ತವೆ ಎಂಬುದನ್ನು ದಯವಿಟ್ಟು ಅರ್ಥಮಾಡಿಕೊಳ್ಳಿ. ದುಃಖದಲ್ಲಿರುವ ಯಾವುದೇ ಒಬ್ಬ ವ್ಯಕ್ತಿಯೂ ತನ್ನ ನೋವನ್ನು ಜಗತ್ತಿನ ಮುಂದೆ ಸಮರ್ಥಿಸಿಕೊಳ್ಳಬೇಕು ಎಂದು ನಿರೀಕ್ಷಿಸುವುದು ಸರಿಯಲ್ಲ" ಎಂದಿದ್ದಾರೆ.
ಕೈಮುಗಿದು ಬೇಡಿಕೊಳ್ಳುತ್ತಿದ್ದೇನೆ, ಇಲ್ಲಿಗೇ ನಿಲ್ಲಿಸಿ
ತಮ್ಮ ಆಪ್ತ ಗೆಳೆಯನ ನಿಧನದ ನಂತರ ನಿರಂತರವಾಗಿ ಹರಡುತ್ತಿರುವ ವದಂತಿಗಳಿಗೆ ಬ್ರೇಕ್ ಹಾಕಲು ನಟಿ ಕೃಷಿ ತಾಪಂಡ ಅವರು ಕೈಮುಗಿದು ಪ್ರಾರ್ಥಿಸಿದ್ದಾರೆ. ಆತನ ಕುಟುಂಬವನ್ನು, ನನ್ನ ಕುಟುಂಬವನ್ನು ಅಥವಾ ನಮ್ಮ ಸ್ನೇಹಿತರನ್ನು ದಯವಿಟ್ಟು ಯಾರೂ ಕಾಡಬೇಡಿ. ಒಬ್ಬ ವ್ಯಕ್ತಿಯ ಸಾವನ್ನು ಮನರಂಜನೆಯ ವಿಷಯವನ್ನಾಗಿ ಬದಲಾಯಿಸಬೇಡಿ. ದಯವಿಟ್ಟು ನಮಗೆ ನೆಮ್ಮದಿಯಿಂದ ದುಃಖಿಸಲು ಕನಿಷ್ಠ ಗೌರವ ಹಾಗೂ ಗೌಪ್ಯತೆಯನ್ನು ನೀಡಿ ಎಂದು ಕೇಳಿಕೊಂಡಿದ್ದಾರೆ" ಎಂದು ಕೃಷಿ ಕೇಳಿಕೊಂಡಿದ್ದಾರೆ.
ನಮ್ಮ ಕಣ್ಣೀರಿಗೆ ಕಾರಣರಾಗಬೇಡಿ
"ನಾನು ಜೀವನದಲ್ಲಿ ಮೊದಲಿನಿಂದಲೂ ಒಂದು ವಿಷಯವನ್ನು ಬಲವಾಗಿ ನಂಬುತ್ತಾ ಬಂದಿದ್ದೇನೆ, ನಿಮಗೆ ಯಾರ ಮುಖದಲ್ಲೂ ನಗು ಮೂಡಿಸಲು ಸಾಧ್ಯವಾಗದಿದ್ದರೆ ಪರವಾಗಿಲ್ಲ, ಆದರೆ ಕನಿಷ್ಠ ಪಕ್ಷ ಅವರ ಕಣ್ಣೀರಿಗೆ ನೀವೇ ಕಾರಣರಾಗಬೇಡಿ. ನಿಮಗೆ ಯಾರಿಗಾದರೂ ಬದುಕಲು ಒಂದು ಹೊಸ ಭರವಸೆ ಅಥವಾ ಕಾರಣವನ್ನು ನೀಡಲು ಸಾಧ್ಯವಾಗದಿದ್ದರೆ ಪರವಾಗಿಲ್ಲ, ಆದರೆ ಕನಿಷ್ಠ ಪಕ್ಷ ಅವರು ಬದುಕಿನ ಮೇಲಿಟ್ಟಿರುವ ಭರವಸೆಯನ್ನೇ ಕಳೆದುಕೊಳ್ಳುವಂತೆ ಮಾಡಬೇಡಿ. ನಾನು ಕೈಮುಗಿದು ಎಲ್ಲರಲ್ಲೂ ಕೇಳಿಕೊಳ್ಳುತ್ತಿದ್ದೇನೆ, ದಯವಿಟ್ಟು ಆತನ ಆತ್ಮಕ್ಕೆ ಶಾಂತಿ ಸಿಗಲು ಬಿಡಿ. ಆತನ ಕುಟುಂಬ, ಸ್ನೇಹಿತರು ಮತ್ತು ನಾವೆಲ್ಲರೂ ನೆಮ್ಮದಿಯಿಂದ ಮೌನವಾಗಿ ದುಃಖಿಸಲು ಬಿಡಿ" ಎಂದಿದ್ದಾರೆ.













Click it and Unblock the Notifications