ಕೆಎಲ್ ರಾಹುಲ್ ಬ್ಯಾಟಿಂಗ್‌ಗಿಳಿದಾಗ ಟಿವಿ ಆಫ್ ಮಾಡ್ತೇನೆ: ಮಾವ ಸುನೀಲ್ ಶೆಟ್ಟಿ
KL RahuL: ಕನ್ನಡಿಗ ಕೆಎಲ್ ರಾಹುಲ್ ಅವರು ಟೀಂ ಇಂಡಿಯಾ ಸ್ಟಾರ್ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ. ಇದೀಗ ಬಾಲಿವುಡ್‌ನ ಹಿರಿಯ ನಟ ಸುನೀಲ್ ಶೆಟ್ಟಿ ಅವರು ತನ್ನ ಹಾಗೂ ಅಳಿಯ ರಾಹುಲ್ ನಡುವಿನ ಬಾಂಧವ್ಯ ಎಂತಹದ್ದು ಎನ್ನುವ ವಿಚಾರವನ್ನು ಸಂದಶರ್ನವೊಂದರಲ್ಲಿ ಬಹಿರಂಗಪಡಿಸಿದ್ದಾರೆ. ಇದು ಇದೀಗ ಎಲ್ಲೆಡೆ ಸಖತ್ ಸದ್ದು ಮಾಡುತ್ತಿದೆ.
ಬಾಲಿವುಡ್‌ನ ಹಿರಿಯ ನಟ ಸುನೀಲ್ ಶೆಟ್ಟಿ ಅವರು ತಮ್ಮ ಅಳಿಯ, ಭಾರತೀಯ ಕ್ರಿಕೆಟಿಗ ಕೆ.ಎಲ್.ರಾಹುಲ್ ಅವರೊಂದಿಗಿನ ತಮ್ಮ ವಿಶೇಷ ಬಾಂಧವ್ಯದ ಬಗ್ಗೆ ಸಂದರ್ಶನವೊಂದರಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ. ತಾವು ಮೊದಲಿನಿಂದಲೂ ಕ್ರಿಕೆಟ್‌ನ ದೊಡ್ಡ ಅಭಿಮಾನಿ ಆಗಿದ್ದು, ಕೆ.ಎಲ್.ರಾಹುಲ್ ಮೈದಾನದಲ್ಲಿ ಬ್ಯಾಟಿಂಗ್ ಆಡುವಾಗ ತಮಗೆ ಎದುರಾಗುವ ತೀವ್ರ ಆತಂಕ ಹಾಗೂ ಒತ್ತಡದ ಕ್ಷಣಗಳು ಹೇಗಿರುತ್ತವೆ ಎಂದು ಹೇಳಿಕೊಂಡಿದ್ದಾರೆ.

ಪಂದ್ಯದ ನೇರಪ್ರಸಾರ ನೋಡುವುದನ್ನ ನಿಲ್ಲಿಸಿದ್ದೇಕೆ?
ಸುನೀಲ್ ಶೆಟ್ಟಿ ಅವರು ಕೆ.ಎಲ್.ರಾಹುಲ್ ಆಟವನ್ನು ವೈಲ್ ನೋಡುವುದನ್ನೇ ನಿಲ್ಲಿಸಿದ್ದಾರೆ ಎಂಬ ಆಸಕ್ತಿದಾಯಕ ವಿಷಯವನ್ನು ಬಹಿರಂಗಪಡಿಸಿದ್ದಾರೆ. ರಾಹುಲ್ ಮೈದಾನದಲ್ಲಿದ್ದಾಗ ತಮಗೆ ಹೆಚ್ಚು ಒತ್ತಡ, ಹೆದರಿಕೆ ಆಗುತ್ತದೆ. ಆದ್ದರಿಂದ ಪಂದ್ಯ ಮುಗಿದ ನಂತರ ಹೈಲೈಟ್ಸ್ ನೋಡುವುದನ್ನು ರೂಢಿ ಮಾಡಿಕೊಂಡಿರುವುದಾಗಿ ಹೇಳಿಕೊಂಡಿದ್ದಾರೆ. 'ನಾನು ಪಂದ್ಯವನ್ನು ಲೈವ್ ನೋಡದಿದ್ದಾಗ ರಾಹುಲ್ ಚೆನ್ನಾಗಿ ಆಡುತ್ತಾರೆ, ಅದೊಂದು ನಂಬಿಕೆ,' ಎಂದು ಹೇಳಿದ್ದಾರೆ.
'ನಾನು ಒಬ್ಬ ಹೆದರಿದ ಮಾವ'
ತಮ್ಮ ಈ ಆತಂಕಕ್ಕೆ ಕಾರಣವಾದ ವಾಂಖೆಡೆ ಕ್ರೀಡಾಂಗಣದ ಘಟನೆಯೊಂದನ್ನು ನೆನಪಿಸಿಕೊಂಡ ಸುನೀಲ್ ಶೆಟ್ಟಿ, 'ಒಮ್ಮೆ ನಾನು ಮತ್ತು ನನ್ನ ಪತ್ನಿ ಇಬ್ಬರೂ ರಾಹುಲ್ ಅವರ ಆಟವನ್ನು ಲೈವ್ ವೀಕ್ಷಿಸುತ್ತಿದ್ದೆವು. ನಾನು ಪತ್ನಿಯೊಂದಿಗೆ ಮಾತನಾಡಲು ಕೇವಲ ಒಂದು ಕ್ಷಣ ಹಿಂದೆ ತಿರುಗಿದೆ. ಅಷ್ಟರಲ್ಲೇ ಮುಂದಿನ ಎಸೆತದಲ್ಲೇ ರಾಹುಲ್ ಔಟಾದರು. ಆ ಘಟನೆಯಿಂದ ನಾನು ತೀವ್ರ ಬೇಸರಗೊಂಡೆ ಮತ್ತು ಅಂದಿನಿಂದ ಮೈದಾನಕ್ಕೆ ಹೋಗಿ ಪಂದ್ಯ ನೋಡುವುದನ್ನು ಸಂಪೂರ್ಣವಾಗಿ ನಿಲ್ಲಿಸಿದೆ. ನಾನು ಒಬ್ಬ ಹೆದರಿದ ಮಾವ,' ಎಂದು ತಮಾಷೆಯಾಗಿ ಹಾಗೂ ಭಾವುಕರಾಗಿ ಹೇಳಿದ್ದಾರೆ.
'ರಾಹುಲ್ ಬ್ಯಾಟಿಂಗ್ ಶೈಲಿಗೆ ಫಿದಾ'
ಕೆ.ಎಲ್.ರಾಹುಲ್ ಅಥಿಯಾ ಶೆಟ್ಟಿ ಅವರನ್ನು ಪ್ರೀತಿಸಿ ಮದುವೆ ಆಗುವುದಕ್ಕಿಂತ ಮುಂಚೆಯೇ, ಸುನೀಲ್ ಶೆಟ್ಟಿ ಅವರು ರಾಹುಲ್ ಬ್ಯಾಟಿಂಗ್ ಶೈಲಿಯ ದೊಡ್ಡ ಅಭಿಮಾನಿ ಆಗಿದ್ದರು. ಈ ಬಗ್ಗೆಯೂ ಮಾತನಾಡಿದ್ದಾರೆ. 'ರಾಹುಲ್ ಕರ್ನಾಟಕ ಹಾಗೂ ಮಂಗಳೂರು ಮೂಲದವರಾಗಿದ್ದು, ಅದು ನಮ್ಮ ಜನ್ಮಸ್ಥಳಕ್ಕೆ ಕೇವಲ ಮೂರು ಕಿಲೋ ಮೀಟರ್ ಹತ್ತಿರದಲ್ಲಿದೆ. ರಾಹುಲ್ ದ್ರಾವಿಡ್ ಮತ್ತು ಸುನಿಲ್ ಗವಾಸ್ಕರ್ ಅವರಂತಹ ಶಿಸ್ತಿನ ಕ್ರಿಕೆಟಿಗರನ್ನು ಆರಾಧಿಸುವ ಸುನೀಲ್ ಶೆಟ್ಟಿ ಅವರಿಗೆ ರಾಹುಲ್ ಅವರ ಬ್ಯಾಟಿಂಗ್ ಶೈಲಿ ಮತ್ತು ಅವರ ವ್ಯಕ್ತಿತ್ವ ತುಂಬಾ ಇಷ್ಟವಾಗಿತ್ತು,' ಎಂದು ಹೇಳಿದ್ದಾರೆ.
'ಅವರು ಕುಟುಂಬದ ಭಾಗವಾಗುವ ಮೊದಲೇ ನಾನು ಅವರ ಆಟ ಮತ್ತು ನಡವಳಿಕೆಯನ್ನು ಮೆಚ್ಚಿಕೊಂಡಿದ್ದೆ. ನನ್ನ ಸ್ನೇಹಿತರೆಲ್ಲರೂ ನೀನು ಮೊದಲೇ ಮನಸ್ಸಿನಲ್ಲಿ ಅಂದುಕೊಂಡಿದ್ದರಿಂದಲೇ ರಾಹುಲ್ ನಿನ್ನ ಮನೆಗೆ ಅಳಿಯನಾಗಿ ಬಂದಿದ್ದಾನೆ ಎಂದು ಹೇಳುತ್ತಾರೆ,' ಎಂದು ಸುನೀಲ್ ಶೆಟ್ಟಿ ಅವರು ಹೇಳಿಕೊಂಡಿದ್ದಾರೆ.
'ಕೆಎಲ್ ರಾಹುಲ್ ಅಳಿಯನಲ್ಲ, ನನ್ನ ಮಗ'
ಕೆಎಲ್ ರಾಹುಲ್ ಅವರ ಕ್ರಿಕೆಟ್ ಆಟದಲ್ಲಿ ತಾವು ಎಂದಿಗೂ ಹಸ್ತಕ್ಷೇಪ ಮಾಡುವುದಿಲ್ಲ ಮತ್ತು ಯಾವುದೇ ಸಲಹೆಗಳನ್ನು ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿರು. 'ಒಬ್ಬ ಕುಟುಂಬದ ಸದಸ್ಯನಾಗಿ ಸದಾ ಬೆಂಬಲ ನೀಡುತ್ತೇನೆ. ತಮಗೆ ಮತ್ತು ತಮ್ಮ ಪತ್ನಿ ಅವರಿಗೆ ರಾಹುಲ್ ನಡುವೆ ಇರುವ ಬಾಂಧವ್ಯ ಅದ್ಭುತವಾಗಿದೆ. ನಾನು ಅವರನ್ನು ಎಂದಿಗೂ ಅಳಿಯ ಎಂದು ಕರೆಯುವುದಿಲ್ಲ. ಅವರು ಪ್ರಾಮಾಣಿಕವಾಗಿ ನನ್ನ ಸ್ವಂತ ಮಗನಂತೆ,' ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಇದೀಗ ಸುನೀಲ್ ಶೆಟ್ಟಿ ಅವರು ರಿವೀಲ್ ಮಾಡಿರುವ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.












Click it and Unblock the Notifications