ಒಂದು ಶತಮಾನಕ್ಕೂ ಹೆಚ್ಚು ಕಾಲ ಬದುಕಿವೆ ದ್ವೀಪದಲ್ಲಿ ಬಿಟ್ಟು ಬಂದಿರುವ 5 ಹಸುಗಳು!ವಿಜ್ಞಾನಿಗಳನ್ನು ಬೆರಗುಗೊಳಿಸಿದ ರಹಸ್ಯ
ಮನುಷ್ಯರ ನೆರವಿಲ್ಲದೆ, ಅತಿ ಕಠಿಣ ಹವಾಮಾನದಲ್ಲಿ ಕೇವಲ ಐದೇ ಐದು ಹಸುಗಳು ಒಂದು ಶತಮಾನಕ್ಕೂ ಹೆಚ್ಚು ಕಾಲ ಬದುಕಿ ಉಳಿದಿದೆ. ಮಾತ್ರವಲ್ಲ ಈ ಐದು ಹಸುಗಳು ಸಾವಿರಾರು ಸಂಖ್ಯೆಯಲ್ಲಿ ವೃದ್ಧಿಯಾಗಿರುವ ಕತೆ ಈಗ ವಿಜ್ಞಾನಿಗಳನ್ನು ಬೆರಗುಗೊಳಿಸಿದೆ. 1871ರಲ್ಲಿ ದ್ವೀಪವೊಂದರಲ್ಲಿ ಅತಂತ್ರವಾಗಿ ಬಿಟ್ಟು ಹೋಗಿದ್ದ ಈ ಹಸುಗಳು ಅಸಾಧ್ಯವೆನಿಸುವಂತಹ ಪರಿಸ್ಥಿತಿಗಳಲ್ಲಿ ಹೇಗೆ ಬದುಕುಳಿದವು ಎಂಬುದಕ್ಕೆ ಈಗ ವೈಜ್ಞಾನಿಕ ಉತ್ತರ ಸಿಕ್ಕಿದೆ.
ಐದು ಹಸುಗಳಿಂದ ಸಾವಿರಾರು ಜಾನುವಾರುಗಳ ಸಾಮ್ರಾಜ್ಯ:
1871ರಲ್ಲಿ ಫ್ರೆಂಚ್ ಒಡೆತನದ ಆಮ್‌ಸ್ಟರ್‌ಡ್ಯಾಮ್ ದ್ವೀಪದಲ್ಲಿ ವಸಾಹತು ಸ್ಥಾಪಿಸಲು ಯತ್ನಿಸಿದ್ದ ಹೆರ್ಟಿನ್ ಎಂಬ ರೈತ. ಇದಕ್ಕಾಗಿ ಈ ರೈತ ತನ್ನೊಂದಿಗೆ ರಿಯೂನಿಯನ್ ದ್ವೀಪದಿಂದ ಐದು ಜಾನುವಾರುಗಳನ್ನು ಕರೆತಂದಿದ್ದ. ಆದರೆ, ಈ ಜಾಗದಲ್ಲಿ ವಸಾಹತು ನಿರ್ಮಿಸುವ ಪ್ರಯತ್ನ ವಿಫಲವಾಯಿತು. ಹಾಗಾಗಿ ಇಲ್ಲಿಗೆ ವಸಾಹತಿಗಾಗಿ ಬಂದಿದ್ದ ಮನುಷ್ಯರು ದ್ವೀಪ ತೊರೆದರು. ಆದರೆ ತಾವು ಈ ದ್ವೀಪ ಬಿಟ್ಟು ಹೋಗುವಾಗ ತಾನು ತಂದಿದ್ದ ಐದು ಹಸುಗಳನ್ನು ರೈತ ಇಲ್ಲಿಯೇ ಬಿಟ್ಟು ಹೋಗಿದ್ದ. ಆ ಐದು ಹಸುಗಳು ಅಲ್ಲೇ ಉಳಿದುಕೊಂಡವು. ಅಚ್ಚರಿಯೆಂದರೆ, ಈ ಹಸುಗಳು ಅಳಿಯುವ ಬದಲು ಪ್ರಕೃತಿಯೊಂದಿಗೆ ಹೊಂದಿಕೊಂಡು,ಕಠಿಣ ಗಾಳಿ ಮತ್ತು ಸೀಮಿತ ಸಂಪನ್ಮೂಲಗಳ ನಡುವೆ ಸಂತಾನೋತ್ಪತ್ತಿ ನಡೆಸಿ, ಒಂದು ದೈತ್ಯ ಹಿಂಡಾಗಿ ಬೆಳೆದವು.

ಹೊಸ ಸಂಶೋಧನೆಯಲ್ಲಿ ಬಯಲಾದ ಸತ್ಯ:
2010ರಲ್ಲಿ ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಈ ಹಸುಗಳನ್ನು ದ್ವೀಪದಿಂದ ತೆರವುಗೊಳಿಸಲಾಗಿತ್ತು. ಆದರೆ, 1992 ಮತ್ತು 2006 ರಲ್ಲಿ 18 ಜಾನುವಾರುಗಳಿಂದ ಸಂಗ್ರಹಿಸಲಾದ ಡಿಎನ್ಎ ಮಾದರಿಗಳನ್ನು ಸಂರಕ್ಷಿಸಲಾಗಿದೆ. ನಂತರ ಸಂಶೋಧಕರು ಹಿಂಡಿನ ಆನುವಂಶಿಕ ಇತಿಹಾಸವನ್ನು ಪುನರ್ನಿರ್ಮಿಸಲು ಎಂಟು ಪ್ರಾಣಿಗಳ ಮೇಲೆ ಸಂಪೂರ್ಣ ಜೀನೋಮ್ ಅನುಕ್ರಮ ಸೇರಿದಂತೆ ಆಧುನಿಕ ಆನುವಂಶಿಕ ತಂತ್ರಗಳನ್ನು ಬಳಸಿದರು. ಅದಕ್ಕೂ ಮುನ್ನ ಸಂಗ್ರಹಿಸಲಾಗಿದ್ದ ಡಿಎನ್‌ಎ ಮಾದರಿಗಳನ್ನು ಆಧರಿಸಿ ವಿಜ್ಞಾನಿಗಳು ನಡೆಸಿದ ಅಧ್ಯಯನದಲ್ಲಿ ರೋಚಕ ವಿಷಯಗಳು ಹೊರಬಿದ್ದಿವೆ.
ಮಿಶ್ರ ತಳಿಗಳೇ ವರದಾನ:
ಈ ಹಸುಗಳು ಕೇವಲ ಒಂದೇ ತಳಿಗೆ ಸೇರಿದವಾಗಿರಲಿಲ್ಲ. ಸುಮಾರು 75% ದನಗಳು ಯೂರೋಪಿಯನ್ ತಳಿಗೆ (ಜರ್ಸಿ ತಳಿ) ಸೇರಿದರೆ, ಉಳಿದ 25% ಭಾರತೀಯ ಮಹಾಸಾಗರದ ಪ್ರದೇಶಗಳಲ್ಲಿ ಕಂಡುಬರುವ 'ಜೆಬು' (Zebu) ತಳಿಗೆ ಸೇರಿದವಾಗಿವೆ. ಈ ವಿಶಿಷ್ಟ ತಳಿಯ ಮಿಶ್ರಣವೇ ಅವುಗಳ ಬದುಕುಳಿಯುವಿಕೆಗೆ ಕಾರಣ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.
ಹವಾಮಾನಕ್ಕೆ ಹೊಂದಾಣಿಕೆ:
ಇವುಗಳ ಪೂರ್ವಜರು ಈಗಾಗಲೇ ತಂಪಾದ ಮತ್ತು ಗಾಳಿಯಿರುವ ವಾತಾವರಣಕ್ಕೆ ಒಗ್ಗಿಕೊಂಡಿದ್ದವು. ಇದು ಆಮ್‌ಸ್ಟರ್‌ಡ್ಯಾಮ್ ದ್ವೀಪದ ಕಠಿಣ ಪರಿಸ್ಥಿತಿಯಲ್ಲಿ ಬದುಕಲು ನೆರವಾಯಿತು.
ಕ್ಷಿಪ್ರ ಸಂತಾನೋತ್ಪತ್ತಿ:
ಕೇವಲ ಐದು ಪ್ರಾಣಿಗಳಿಂದ ಪ್ರಾರಂಭವಾಗಿದ್ದರಿಂದ ತಳಿ ವೃದ್ಧಿಯಲ್ಲಿ ಕುಸಿತ ಉಂಟಾಗುವ ಭೀತಿಯಿತ್ತು. ಆದರೆ, ಹಸುಗಳು ಅತ್ಯಂತ ವೇಗವಾಗಿ ಸಂತಾನೋತ್ಪತ್ತಿ ಮಾಡಿದ ಕಾರಣ, ಆನುವಂಶಿಕ ವೈವಿಧ್ಯತೆ ಉಳಿಯಲು ಸಾಧ್ಯವಾಯಿತು.
ಕುಬ್ಜತ್ವದ ವಾದಕ್ಕೆ ಅಂತ್ಯ:
ಹಿಂದೆ, ಈ ಹಸುಗಳು ದ್ವೀಪದ ಸಣ್ಣ ಗಾತ್ರದಿಂದಾಗಿ ಗಾತ್ರದಲ್ಲಿ ಕುಗ್ಗಿವೆ ಎಂದೇ ಹೇಳಲಾಗಿತ್ತು. ಆದರೆ ಹೊಸ ಅಧ್ಯಯನವು, ಇವುಗಳ ಮೂಲ ತಳಿಯೇ ಗಾತ್ರದಲ್ಲಿ ಚಿಕ್ಕದಾಗಿದ್ದವು ಎಂದು ಸಾಬೀತುಪಡಿಸಿದೆ. ಅಲ್ಲದೆ, ನರಮಂಡಲಕ್ಕೆ ಸಂಬಂಧಿಸಿದ ಜೀನ್‌ಗಳಲ್ಲಿ ಆದ ಬದಲಾವಣೆಗಳು ಅವುಗಳ ನಡವಳಿಕೆಯನ್ನು ಬದಲಾಯಿಸಿ, ಪರಿಸರಕ್ಕೆ ಹೊಂದಿಕೊಳ್ಳುವಂತೆ ಮಾಡಿದ್ದವು ಎಂದು ಸಂಶೋಧನೆ ತಿಳಿಸಿದೆ.
ಪರಿಸರ ರಕ್ಷಣೆಗಾಗಿ ಅಂತ್ಯ:
ಆಮ್ಸ್ಟರ್‌ಡ್ಯಾಮ್ ದ್ವೀಪದ ದುರ್ಬಲ ಪರಿಸರ ವ್ಯವಸ್ಥೆಗೆ ಜಾನುವಾರುಗಳು ಪ್ರಮುಖ ಬೆದರಿಕೆಯಾಗಿತ್ತು.ಈ ಹಸುಗಳು ದ್ವೀಪದ ಸ್ಥಳೀಯ ಸಸ್ಯವರ್ಗ ಮತ್ತು ಅಲ್ಬಟ್ರಾಸ್ ಪಕ್ಷಿಗಳ ನೆಲೆಗೆ ಧಕ್ಕೆ ಉಂಟುಮಾಡುತ್ತಿದ್ದ ಕಾರಣ, 2010ರಲ್ಲಿ ಇವುಗಳನ್ನು ಸಂಪೂರ್ಣವಾಗಿ ತೆರವುಗೊಳಿಸಲಾಯಿತು. ಆರಂಭದಲ್ಲಿ ಒಂದು ದ್ವೀಪವನ್ನು ವಿಭಜಿಸಿ ಅದರ ದೊಡ್ಡ ಭಾಗಗಳಿಂದ ದನಗಳನ್ನು ತೆಗೆದುಹಾಕಲಾಯಿತು. ಅಂತಿಮವಾಗಿ 2010 ರಲ್ಲಿ ಇಲ್ಲಿರುವ ಎಲ್ಲಾ ಪ್ರಾಣಿಗಳನ್ನು ನಿರ್ಮೂಲನೆ ಮಾಡಲಾಯಿತು. ಯುನೆಸ್ಕೋದ ವಿಶ್ವ ಪರಂಪರೆಯ ತಾಣವಾಗಿರುವ ಈ ದ್ವೀಪದಲ್ಲಿ ಈಗ ಪರಿಸರ ಪುನಶ್ಚೇತನ ಕಾರ್ಯಗಳು ಭರದಿಂದ ಸಾಗಿವೆ.
ಒಟ್ಟಾರೆಯಾಗಿ, ಈ ಐದು ಹಸುಗಳ ಬದುಕುಳಿಯುವಿಕೆಯ ಕಥೆಯು ಪ್ರಾಣಿಗಳ ಹೊಂದಾಣಿಕೆಯ ಸಾಮರ್ಥ್ಯಕ್ಕೆ ಜಗತ್ತಿನಲ್ಲೇ ಅತ್ಯಂತ ಅಪರೂಪದ ನಿದರ್ಶನವಾಗಿ ಉಳಿದಿದೆ.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications