Mahashivratri 2026: ರಾಜ್ಯಾದ್ಯಂತ ಶಿವರಾತ್ರಿ ಸಡಗರ, ಶಿವಸ್ತುತಿಯಲ್ಲಿ ಮಿಂದ ಭಕ್ತಸಾಗರ; ದೇಗುಲಗಳಲ್ಲಿ ವಿಶೇಷ ಪೂಜೆ, ಜಾಗರಣೆ
Mahashivratri 2026: ಫೆಬ್ರವರಿ 15ರಂದು ಭಾನುವಾರ ಮಾಘ ಮಾಸದ ಕೃಷ್ಣ ಪಕ್ಷದ ಚತುದರ್ಶಿಯಂದು ದೇಶದ ವಿವಿಧೆಡೆ ಮಹಾಶಿವರಾತ್ರಿ ಆಚರಣೆ ನಡೆಯುತ್ತಿದೆ. ಅದರಲ್ಲೂ ವಿಶೇಷವಾಗಿ ಕರ್ನಾಟಕದಲ್ಲಿ ಈ ಮಹಾಶಿವರಾತ್ರಿಯನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ, ಅರ್ಥಪೂರ್ಣವಾಗಿ ಆಚರಿಸಲಾಗುತ್ತದೆ. ಈ ಸಂಬಂಧ ಬೆಂಗಳೂರು ಸೇರಿದಂತೆ ನಾಡಿನೆಲ್ಲಡೆ ಶಿವ, ಶಿವ ಪಾರ್ವತಿ, ಈಶ್ವರನ ದೇವಾಲಯಗಳು ಆಚರಣೆಗೆ ಸಜ್ಜಾಗಿವೆ. ಶಿವರಾತ್ರಿ ಪ್ರಯುಕ್ತ ದೇಗುಲಗಳು ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿವೆ. ವಿಶೇಷ ಪೂಜೆ ಪುನಸ್ಕಾರಗಳು, ಧಾರ್ಮಿಕ ವಿಧಿ ವಿಧಾನಗಳು, ಶಿವಸ್ತುತಿ, ಉಪವಾಸ ವ್ರತಗಳ ಆಚರಣೆ ನಡೆಯುತ್ತಿದೆ.
ಕೆಲವು ಪ್ರಮುಖ ದೇವಾಲಯಗಳಲ್ಲಿ ಬೆಳಗ್ಗೆವರೆಗೆ ಶಿವನಾಮ ಪಠಣ ನಡೆಯಲಿದೆ. ಬೆಂಗಳೂರಿನ ಮಲ್ಲೇಶ್ವರಂನ ಕಾಡುಮಲ್ಲೇಶ್ವರ ಅತ್ಯಂತ ವಿಜೃಂಬಣೆಯಿಂದ ಆಚರಿಸಲಾಗುತ್ತದೆ. ಏಕೆಂದರೆ ನಾಳೆ ಫೆ.16ರಂದು ಈ ದೇವಸ್ಥಾನದಲ್ಲಿ ಬ್ರಹ್ಮ ರಥೋತ್ಸವ ನಡೆಯಲಿದೆ. ಹೀಗಾಗಿ ಅಪಾರ ಜನ ಸೇರಲಿದ್ದಾದ್ದು, ಇಂದು ಸಂಜೆಯಿಂದಲೇ ಶಿವರಾತ್ರಿ ಹಾಗೂ ಇತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಬೆಂಗಳೂರಿನ ಮುರುಗೇಶ ಪಾಳ್ಯದ ಶಿವೋಹಂ ದೇವಾಲಯ, ಗವಿ ಗಂಗಾಧರೇಶ್ವರ ದೇವಾಲಯ, ಬೃಹತ್ ಶಿವನ ಮೂರ್ತಿ ಇರುವ ಹಳೇ ಮದ್ರಾಸ್ ರಸ್ತೆಯ ಶಿವಮಂದಿರ, ಬೇಗೂರು ಪಂಚಲಿಂಗೇಶ್ವರ ದೇಗುಲ, ಓಂಕಾರ್ ಹಿಲ್ಸ್‌ನ ದ್ವಾದಶ ಜ್ಯೋತಿರ್ಲಿಂಗ ದೇವಾಲಯ, ವಿಜಯನಗರ, ಎಚ್‌ಎಸ್‌ಆರ್ ಬಡಾವಣೆ, ಜಯನಗರ, ಚಾಮರಾಜಪೇಟೆ ಸೇರಿದಂತೆ ಬೆಂಗಳೂರಿನ ನಾನಾ ಕಡೆಯಗಳ ದೇವಾಲಯದಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ಹಾಗೂ ಉಪವಾಸ ವ್ರತಾಚರಣೆ ಸಹಿತ ಅದ್ಧೂರಿ ಶಿವರಾತ್ರಿ ಆಚರಿಸಲಾಗುತ್ತಿದೆ. ಈಗಾಗಲೇ ಎಲ್ಲ ವಿಧದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಜೋರು
ಮಹಾಶಿವರಾತ್ರಿ ಪಯುಕ್ತ ಹಣ್ಣು ಹಂಪಲಗಳು, ಚಿಲ್ಲರೆ ಖರ್ಜೂರು, ಹೂವು ಹಾರಗಳ ದರ ಕೊಂಚ ದುಬಾರಿ ಆಗಿತ್ತು. ಮಾರುಕಟ್ಟೆಗಳಲ್ಲಿ ಶನಿವಾರದಿಂದ ಜನದಟ್ಟಣೆ, ಖರೀದಿ ಭರಾಟೆ ಕಂಡು ಬಂತು. ಭಾನುವಾರ ಬೆಳಗ್ಗೆಯು ಕೆ.ಆರ್.ಮಾರುಕಟ್ಟೆ, ವಿಜಯನಗರ ಮಾರುಕಟ್ಟೆ, ಬಸವನಗುಡಿ ಗಾಂಧಿ ಬಜಾರ್, ಮಲ್ಲೇಶ್ವರ ಸೇರಿ ವಿವಿಧೆಡೆ ವ್ಯಾಪಾರ ಜೋರಾಗಿತ್ತು. ಶಿವನಿಗೆ ಇಷ್ಟವಾದ ಬಿಲ್ವಪತ್ರೆಗೆ ಹೆಚ್ಚಿನ ಬೇಡಿಕೆ ಇದ್ದದ್ದು ಕಂಡು ಬಂತು. ನಗರಾದ್ಯಂತ ಉತ್ತಮ ವಹೀವಾಟು ನಡೆದಿದೆ. ನಾಗರಿಕರು, ಮಹಿಳೆಯರು, ಮಕ್ಕಳು ಸೇರಿ ಎಲ್ಲರೂ ಸಂಜೆ ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ ಮಾಡಿ, ನೈವೇಧ್ಯ ಅರ್ಪಿಸಿ ಭಕ್ತಿ ಸಮರ್ಪಿಸುತ್ತಿದ್ದಾರೆ.
ಬೆಂಗಳೂರಿನಲ್ಲಿ ಅತೀ ದೊಡ್ಡ ಶಿವನ ಮೂರ್ತಿ ಪ್ರತಿಷ್ಠಾಪನೆ
ಮಹಾಶಿವರಾತ್ರಿಯ ಸುಸಂದರ್ಭದಲ್ಲಿ ಬೆಂಗಳೂರು ನಗರವು ಇನ್ನೊಂದು ಬೃಹತ್ ಶಿವನ ಮೂರ್ತಿ ಪ್ರತಿಷ್ಠಾಪನೆಗೆ ಸಜ್ಜಾಗಿದೆ. ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಜೆ.ಪಿ ಪಾರ್ಕ್‌ನಲ್ಲಿ ವಾರ್ಡ್ ಸಂಖ್ಯೆ 17 ರಲ್ಲಿ ಮೂರ್ತಿ ಪ್ರತಿಷ್ಠಾಪಿಸಲಾಗುತ್ತಿದೆ. ಶಾಸಕ ಮುನಿರತ್ನ ಅಧ್ಯಕ್ಷತೆಯಲ್ಲಿ ಸಂಜೆ 6 ಗಂಟೆಯಿಂದ ವಿವಿಧ ವರ್ಣರಂಜಿತ ಕಾರ್ಯಕ್ರಮ ನಡೆಯಲಿವೆ. ಅತಿಥಿಗಳಾಗಿ ಕೇಂದ್ರ ಸರ್ಕಾರದ ಕೈಗಾರಿಕೆ, ಉಕ್ಕು ಗಣಿ ಖಾತೆ ಸಚಿವ ಎಚ್.ಡಿ ಕುಮಾರಸ್ವಾಮಿ ಅವರು ಆಗಮಿಸುವ ನಿರೀಕ್ಷೆ ಇದೆ.
ಅಹೋರಾತ್ರಿ ಜಾಗರಣ ಮಹೋತ್ಸವ
ಸುಕ್ಷೇತ್ರ ಸಿದ್ದರಬೆಟ್ಟ ಶ್ರೀ ಬಾಳೆ ಹೊನ್ನೂರು ಶಾಖಾಮಠದಲ್ಲಿ ಸಂಜೆ 7ಗಂಟೆಯಿಂದ ಮಹಾಶಿವರಾತ್ರಿಯ ವಿಶೇಷ ಆಚರಣೆಗಳು ನಡೆಯಲಿವೆ. ಇಲ್ಲಿ ಸೇರುವ ಜನರು ಬೆಳಗ್ಗೆವರೆಗೂ ಜಾಗರಣೆ ಮಾಡಲಿದ್ದಾರೆ. ಅವರನ್ನು ರಂಜಿಸಲು, ಶಿವ ಸ್ತುತಿ, ಶಿವ ಮತ್ತು ಶಿವರಾತ್ರಿ ಕುರಿತು ಭಕ್ತಿ ಗೀತೆಗಳು ಮೊಳಗಲಿವೆ. ಇತರ ಸಂಗೀತ, ಹಾಸ್ಯದ ಹೊನಲು ಹಾಗೂ ವಿವಿಧ ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ. ಖ್ಯಾತ ಹಿನ್ನೆಲೆ ಗಾಯಕರು, ಅನೇಕ ಕಾಮಿಡಿ ನಟ- ನಟಿಯರು ಪಾಲ್ಗೊಂಡು ನೆರೆದವರನ್ನು ರಂಜಿಸಲಿದ್ದಾರೆ.
ಈಶಾ ಫೌಂಡೇಶನ್‌ನಿಂದ ಮಹಾಶಿವರಾತ್ರಿ, ಆದಿಯೋಗಿ ದಿವ್ಯ ದರ್ಶನ
ಪ್ರತಿ ವರ್ಷ ಮಹಾಶಿವರಾತ್ರಿ ದಿನ ಈಶಾ ಫೌಂಡೇಶನ್ ವತಿಯಿಂದ ತಮಿಳುನಾಡಿನ ಕೊಯಮತ್ತೂರಿನಲ್ಲಿ ಅದ್ಧೂರಿ ಆಚರಣೆ ನಡೆಯುತ್ತದೆ. ಈ ವರ್ಷವು ಯೋಗೇಶ್ವರ ಲಿಂಗಕ್ಕೆ ಮಹಾ ಅಭಿಷೇಕ ನಡೆಯಲಿದೆ. ಸದ್ಗುರುಗಳಿಂದ ರುದ್ರಾಕ್ಷ ಪೂಜೆ ಜರುಗುತ್ತದೆ. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಆಗಮಿಸಲಿದ್ದಾರೆ. ಈ ವೇಳೆ ಸ್ಯಾಂಡಲ್‌ವುಡ್, ಬಾಲಿವುಡ್, ಟಾಲಿವುಡ್‌ಗಳಿಂದಲೂ ಅನೇಕ ಸೆಲೆಬ್ರೆಟಿಗಳು ಪಾಲ್ಗೊಂಡು ಅರ್ಥಪೂರ್ಣ ಶಿವರಾತ್ರಿ ಆಚರಣೆ ಮಾಡಲಿದ್ದಾರೆ.
ಬೆಳಗ್ಗೆವರೆಗೂ ಆದಿಯೋಗಿ ಶಿವನ ನಾಮ ಸ್ಮರಣೆ ನಡೆಯುತ್ತದೆ. ಮುಖ್ಯವಾಗಿ ಆದಿಯೋಗಿ ಬೃಹತ್ ಮೂರ್ತಿ ಮೇಲಿನ 'ಲೈಟ್ ಶೋ' ಆದಿಯೋಗಿಯ 'ದಿವ್ಯ ದರ್ಶನ' ನೋಡಲು ಭಕ್ತರು ಕಾತರದಿಂದ ಕಾಯುತ್ತಾರೆ. ಶಿವನ ಕುರಿತ ಪ್ರವಚನ, ಸಂಗೀತ ಕಾರ್ಯಕ್ರಮಗಳೂ ನಡೆಯಲಿವೆ. ಲಕ್ಷಾಂತರ ಶಿವಭಕ್ತರು ಇಲ್ಲಿ ಸೇರಲಿದ್ದಾರೆ. ಈ ವಿಶೇಷ ಕಾರ್ಯಕ್ರಮವನ್ನು ನೀವು ಸದ್ಗುರು ಆಪ್ ಇಲ್ಲವೇ ಸದ್ಗುರು ಕನ್ನಡ ಫೇಸ್‌ಬುಕ್, ಯೂಟ್ಯೂಬ್ ಚಾನಲ್‌ನಲ್ಲಿ ಲೈವ್ ನಲ್ಲಿ ನೋಡಬಹುದು. ಇನ್ನೂ ಮುಖ್ಯವಾಹಿನಿ ಚಾನಲ್‌ಗಳಾದ ಡಿಡಿ ಚಂದನ ಮತ್ತು ಇತರ ಕನ್ನಡ ಟಿವಿ ಚಾನಲ್‌ಗಳಲ್ಲಿ ಲೈವ್ ಪ್ರಸಾರ ಕಣ್ತುಂಬಿಕೊಳ್ಳಬಹುದು.
ಇದೇ ವೇಳೆ ಕರ್ನಾಟಕದ ಚಿಕ್ಕಬಳ್ಳಾಪುರದಲ್ಲಿ ಸ್ಥಾಪನೆಯಾಗಿರುವ ಆದಿ ಯೋಗಿ ಶಿವನ ಮೂರ್ತಿ ಸ್ಥಳಕ್ಕೆ ಅಪಾರ ಸಂಖ್ಯೆಯ ಜನರು ಬರುತ್ತಾರೆ. ಶಿವನ 'ದಿವ್ಯ ದರ್ಶನ' ಕಣ್ತುಂಬಿಕೊಳ್ಳುತ್ತಾರೆ. ಕೊಯಿಮತ್ತೂರಲ್ಲಿ ಸದ್ಗುರುಗಳ ನೇತೃತ್ವದಲ್ಲಿ ನಡೆಯುವ ಕಾರ್ಯಕ್ರಮವನ್ನು ಇಲ್ಲಿ ದೊಡ್ಡ ಎಲ್‌ಇಡಿ ಪರದೆ ಮೂಲಕ ಪ್ರಸಾರ ಮಾಡಲಾಗುತ್ತದೆ.
ದೇಗುಲಗಳಲ್ಲಿ ನವಗ್ರಹ ಪೂಜೆ, ರುದ್ರ ಹೋಮ
ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದ ಪುನೀತ್ ರಾಜಕುಮಾರ ವಾರ್ಡ್ ನ ನವನಂದಿನಿ ಉದ್ಯಾನವನ ಹತ್ತಿರವಿರುವ ಮುನೇಶ್ವರ ದೇವಸ್ಥಾನ ಹಾಗೂ ಅಕ್ಕಯ್ಯಮ್ಮನವರ ದೇವಸ್ಥಾನದಲ್ಲಿ ಅದ್ಧೂರಿ ಮಹಾಶಿವರಾತ್ರಿ ಸಂಭ್ರಮ ನಡೆಯಿತು. ಬೆಳಗ್ಗೆಯಿಂದಲೇ ನವಗ್ರಹ ಪೂಜೆ, ವಾಸ್ತು ಪೂಜಾ, ಗಣ ಹೋಮ ಹವನ, ಅಘೋರ ರುದ್ರಹೋಮ ಸೇರಿದಂತೆ ಹಲವು ಪೂಜಾ ಕಾರ್ಯಕ್ರಮ ನಡೆದವು. ಶಿವಭಕ್ತರ ದಂಡು ಬೆಳಗ್ಗೆಯಿಂದಲೇ ಸರತಿ ಸಾಲಿನಲ್ಲಿ ದೇವಸ್ಥಾನಕ್ಕೆ ಬಂದು ದೇವರ ದರ್ಶನ ಪಡೆತ್ತಿರುವುದು ಕಂಡು ಬಂತು.
ಇದರ ನಡುವೆ ಮುನೇಶ್ವರ ದೇವಸ್ಥಾನವನ್ನು ಹೂವು ತಳಿರು ತೋರಣಗಳಿಂದ ಹಾಗೂ ಅಲಂಕಾರಿಕ ಲೈಟ್ ಗಳಿಂದ ಸಿಂಗರಿಸಿರುವದರಿಂದ ದೇವಸ್ಥಾನ ಎಲ್ಲರ ಗಮನ ಸೆಳೆಯಿತು. ಇನ್ನು ಸಾಯಂಕಾಲ ನಡೆಯುವ ಶಿವಸ್ತುತಿ ಹಾಡು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಎಲ್ಲ ಶಿವಭಕ್ತರು ಪಾಲ್ಗೊಂಡು ಶಿವನ ಕೃಪೆಗೆ ಪಾತ್ರರಾಗಬೇಕು ಜೊತೆಗೆ ಅನ್ನ ಪ್ರಸಾದ ವಿತರಣೆ ಇದೆ ಎಂದು ಪ್ರಧಾನ ಅರ್ಚಕರಾದ ವಿಜಯಕುಮಾರ್ ತಿಳಿಸಿದರು.
12 ಜ್ಯೋತಿರ್ಲಿಂಗ ಪವಿತ್ರ ಸ್ಥಳದಲ್ಲೂ ಶಿವರಾತ್ರಿ
ಆಂಧ್ರ ಪ್ರದೇಶದ ಕರ್ನೂಲ ಜಿಲ್ಲೆಯ ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನದಲ್ಲೂ ಇಂದು ವಿಶೇಷವಾಗಿ ಮಹಾ ಶಿವರಾತ್ರಿ ಆಚರಣೆ ಜರುಗುತ್ತದೆ. ಒಟ್ಟಾರೆ ದೇಶದ 12 ಜ್ಯೋತಿರ್ಲಿಂಗ ಹೊಂದಿರುವ ದೇವಾಲಯಗಳ ಪವಿತ್ರ ಸ್ಥಳದಲ್ಲಿ ಇಂದು ವಿಶೇಷ ಪೂಜೆ, ಹೋಮ, ಹವನಗಳು ಈ ದಿನ ನಡೆಯುತ್ತವೆ.
-
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ












Click it and Unblock the Notifications