ದೇವಿಯ ಪೀರಿಯಡ್ಸ್‌ನಿಂದ ಕೆಂಪಾಗುತ್ತದೆ ನದಿ! ಕಾಮಾಖ್ಯದ ಅಂಬುಬಾಚಿ ಮೇಳದ ರಹಸ್ಯಗಳು
ನೀವು ಈಗ ಅಸ್ಸಾಂನ ಗುವಾಹಟಿಯಲ್ಲಿರುವ ಕಾಮಾಖ್ಯ ದೇವಸ್ಥಾನಕ್ಕೆ ಹೋದರೆ, ಭಾರತದ ಅತ್ಯಂತ ವಿಶಿಷ್ಟ ಮೇಳ- ಜಾತ್ರೆ- ಉತ್ಸವವೊಂದನ್ನು ನೋಡಬಹುದು. ಅಲ್ಲಿ ಚಿತ್ರವಿಚಿತ್ರ ಯೋಗಿಗಳು, ಸನ್ಯಾಸಿಗಳು, ಮಂತ್ರವಾದಿಗಳು, ಸಾಧು ಸಂತರನ್ನೂ ಭೇಟಿ ಆಗಬಹುದು. ಹುಷಾರ್! ಎಚ್ಚರ ತಪ್ಪಿದರೆ, ಈ ವಾಮಾಚಾರಿಗಳ ಮಂತ್ರ ಮಾಟಕ್ಕೂ ನೀವು ಬಲಿ ಆಗಬಹುದು. ಇದು ಕಾಮಾಖ್ಯ ದೇವಾಲಯದ ʼಅಂಬುಬಾಚಿ ಮೇಳʼ.
ಭಾರತದಲ್ಲಿ ಅನೇಕ ಧಾರ್ಮಿಕ ಆಚರಣೆಗಳು ಮತ್ತು ಉತ್ಸವಗಳಿವೆ. ಅವುಗಳಲ್ಲಿ ಅತ್ಯಂತ ವಿಶಿಷ್ಟ, ಕುತೂಹಲಕಾರಿ ಮತ್ತು ಚರ್ಚಿತವಾದ ಹಬ್ಬ ಅಂಬುಬಾಚಿ ಮೇಳ. ಅಸ್ಸಾಂನ ಗುವಾಹಟಿಯಲ್ಲಿರುವ ಪ್ರಸಿದ್ಧ ಕಾಮಾಖ್ಯ ದೇವಾಲಯದಲ್ಲಿ ನಡೆಯುವ ಈ ಮೇಳ, ದೇವಿಯ ಋತುಸ್ರಾವವನ್ನು (ಪೀರಿಯಡ್ಸ್) ಆಚರಿಸುವ ಅಪರೂಪದ ಸಂಪ್ರದಾಯವಾಗಿದೆ.

ಪ್ರತಿ ವರ್ಷ ಲಕ್ಷಾಂತರ ಭಕ್ತರು, ಸಾಧುಗಳು, ತಾಂತ್ರಿಕರು ಮತ್ತು ಪ್ರವಾಸಿಗರು ಈ ಮೇಳದಲ್ಲಿ ಭಾಗವಹಿಸುತ್ತಾರೆ. ಮಹಿಳೆಯರ ಮಾಸಿಕ ಋತುಚಕ್ರವನ್ನು ಪ್ರಕೃತಿಯ ಸೃಷ್ಟಿಶಕ್ತಿಯ ಸಂಕೇತವಾಗಿ ನೋಡುವ ಈ ಆಚರಣೆ ಜಗತ್ತಿನ ಗಮನ ಸೆಳೆದಿದೆ.
ಅಂಬುಬಾಚಿ ಮೇಳ ಎಂದರೇನು?
ಹಿಂದೂ ನಂಬಿಕೆಯ ಪ್ರಕಾರ, ಕಾಮಾಖ್ಯ ದೇವಿ ಶಕ್ತಿಯ ಸ್ವರೂಪ. ಪ್ರತಿ ವರ್ಷ ಜೂನ್ ತಿಂಗಳ ಕೊನೆಯ ಭಾಗದಲ್ಲಿ ಅಥವಾ ಮಳೆಗಾಲದ ಆರಂಭದಲ್ಲಿ ದೇವಿ ಮೂರು ದಿನಗಳ ಕಾಲ ಋತುಸ್ರಾವದಲ್ಲಿರುತ್ತಾರೆ ಎಂದು ನಂಬಲಾಗುತ್ತದೆ. ಈ ಅವಧಿಯಲ್ಲೇ ಅಂಬುಬಾಚಿ ಮೇಳ ನಡೆಯುತ್ತದೆ. ಅಂದು ದೇವಿಯ ವಿಗ್ರಹ ಇರುವಲ್ಲಿ (ಯೋನಿ) ರಕ್ತವರ್ಣದ ನೀರು ಕಾಣಿಸಿಕೊಳ್ಳುತ್ತದೆ. ಇದು ದೇವಿಯ ಋತುಸ್ರಾವ ಎಂದು ನಂಬಿಕೆ. ಪಕ್ಕದ ಬ್ರಹ್ಮಪುತ್ರ ನದಿಯ ನೀರು ಕೂಡ ಈಗ ಕೆಂಪಾಗಿರುತ್ತದೆ.

"ಅಂಬು" ಎಂದರೆ ನೀರು ಮತ್ತು "ಬಾಚಿ" ಎಂದರೆ ಹರಿಯುವುದು. ಮಳೆಗಾಲ ಆರಂಭವಾಗಿ ಭೂಮಿ ಫಲವತ್ತಾಗುವ ಸಮಯವನ್ನೂ ಇದು ಸೂಚಿಸುತ್ತದೆ. ಹೀಗಾಗಿ ಈ ಹಬ್ಬವು ಮಹಿಳೆಯ ಫಲವತ್ತತೆ, ಪ್ರಕೃತಿಯ ಪುನರುತ್ಪಾದನಾ ಶಕ್ತಿ ಮತ್ತು ಸೃಷ್ಟಿಯ ಚಕ್ರವನ್ನು ಪ್ರತಿನಿಧಿಸುತ್ತದೆ.
ಕಾಮಾಖ್ಯ ದೇವಾಲಯದ ವಿಶೇಷತೆ ಏನು?
ಭಾರತದ 51 ಶಕ್ತಿಪೀಠಗಳಲ್ಲಿ ಕಾಮಾಖ್ಯ ದೇವಾಲಯ ಅತ್ಯಂತ ಪ್ರಮುಖವಾದುದು. ಪುರಾಣಗಳ ಪ್ರಕಾರ, ಸತಿಯ ದೇಹವನ್ನು ಹೊತ್ತುಕೊಂಡು ಹೋಗುತ್ತಿದ್ದ ಶಿವನಿಂದ ವಿಷ್ಣು ಸುದರ್ಶನ ಚಕ್ರದ ಮೂಲಕ ಸತಿಯ ದೇಹವನ್ನು ತುಂಡು ಮಾಡಿದಾಗ, ಆಕೆಯ ಯೋನಿ ಭಾಗ ಈ ಸ್ಥಳದಲ್ಲಿ ಬಿದ್ದಿತು ಎಂದು ನಂಬಲಾಗಿದೆ.
ಇದರಿಂದ ಇಲ್ಲಿ ಯಾವುದೇ ದೇವಿಯ ವಿಗ್ರಹವಿಲ್ಲ. ಬದಲಾಗಿ ಒಂದು ನೈಸರ್ಗಿಕ ಕಲ್ಲಿನ ಬಿರುಕು (ಯೋನಿ ಕುಂಡ) ಪೂಜೆಗೆ ಪಾತ್ರವಾಗಿದೆ. ಆ ಬಿರುಕಿನಿಂದ ಸದಾ ನೀರು ಹರಿಯುತ್ತಿರುತ್ತದೆ.
ಋತುಸ್ರಾವದ ಈ ಮೂರು ದಿನ ದೇವಾಲಯ ಮುಚ್ಚಿರುತ್ತದೆ? ಅಂಬುಬಾಚಿ ಮೇಳದ ಅತ್ಯಂತ ವಿಶೇಷ ಅಂಶವೇ ಇದು. ದೇವಿ ಋತುಸ್ರಾವದಲ್ಲಿದ್ದಾರೆ ಎಂಬ ನಂಬಿಕೆಯಿಂದ ಮೂರು ದಿನಗಳ ಕಾಲ ದೇವಾಲಯದ ಬಾಗಿಲುಗಳನ್ನು ಸಂಪೂರ್ಣ ಮುಚ್ಚಲಾಗುತ್ತದೆ. ಈ ಸಮಯದಲ್ಲಿ ಯಾವುದೇ ಪೂಜೆ, ದರ್ಶನ ಅಥವಾ ಧಾರ್ಮಿಕ ವಿಧಿಗಳು ನಡೆಯುವುದಿಲ್ಲ. ಇದನ್ನು ದೇವಿಯ ವಿಶ್ರಾಂತಿ ಅವಧಿ ಎಂದು ಪರಿಗಣಿಸಲಾಗುತ್ತದೆ. ಮಹಿಳೆಯರಿಗೆ ಪೀರಿಯಡ್ಸ್ ಸಮಯದಲ್ಲಿ ವಿಶ್ರಾಂತಿ ನೀಡಬೇಕೆಂಬ ಸಂದೇಶವನ್ನೂ ಅನೇಕರು ಇದರಲ್ಲಿ ಕಾಣುತ್ತಾರೆ.
ನಾಲ್ಕನೇ ದಿನ ಏನಾಗುತ್ತದೆ?
ಮೂರು ದಿನಗಳ ನಂತರ ದೇವಿ ಶುದ್ಧೀಕರಣಗೊಂಡಿದ್ದಾರೆ ಎಂದು ನಂಬಲಾಗುತ್ತದೆ. ನಾಲ್ಕನೇ ದಿನ ದೇವಾಲಯದ ಬಾಗಿಲು ತೆರೆಯಲಾಗುತ್ತದೆ. ಈ ದಿನವನ್ನು ಅತ್ಯಂತ ಪವಿತ್ರ ಎಂದು ಪರಿಗಣಿಸಲಾಗುತ್ತದೆ. ಸಾವಿರಾರು ಭಕ್ತರು ದೇವಿಯ ದರ್ಶನಕ್ಕಾಗಿ ಗಂಟೆಗಟ್ಟಲೆ ಸಾಲಿನಲ್ಲಿ ನಿಂತಿರುತ್ತಾರೆ.
ಈ ಸಂದರ್ಭದಲ್ಲಿ ಭಕ್ತರಿಗೆ ಕೆಂಪು ಬಣ್ಣದ ಬಟ್ಟೆಯ ತುಂಡುಗಳನ್ನು ಪ್ರಸಾದವಾಗಿ ನೀಡಲಾಗುತ್ತದೆ. ಇದನ್ನು ದೇವಿಯ ಋತುಸ್ರಾವದ ಸಂಕೇತ ಎಂದು ನಂಬಲಾಗುತ್ತದೆ. ಇದನ್ನು ಮನೆಗಳಲ್ಲಿ ಇಟ್ಟುಕೊಂಡರೆ ಶುಭ, ಸಮೃದ್ಧಿ ಮತ್ತು ರಕ್ಷಣೆ ದೊರೆಯುತ್ತದೆ ಎಂಬ ನಂಬಿಕೆಯಿದೆ.
ತಾಂತ್ರಿಕರ ಮಹಾಕುಂಭ
ಅಂಬುಬಾಚಿ ಮೇಳವನ್ನು ತಾಂತ್ರಿಕರ ಕುಂಭಮೇಳ ಎಂದೂ ಕರೆಯುತ್ತಾರೆ. ದೇಶದ ವಿವಿಧ ಭಾಗಗಳಿಂದ ತಾಂತ್ರಿಕ ಸಾಧಕರು, ಅಘೋರಿಗಳು, ನಾಗಾ ಸಾಧುಗಳು, ಶಕ್ತ್ಯೋಪಾಸಕರು, ವಾಮಾಚಾರಿಗಳು ಈ ಸಂದರ್ಭದಲ್ಲಿ ಕಾಮಾಖ್ಯಕ್ಕೆ ಆಗಮಿಸುತ್ತಾರೆ. ಅನೇಕರು ತಮ್ಮ ಸಾಧನೆ ಮತ್ತು ತಪಸ್ಸುಗಳನ್ನು ಇದೇ ಸಮಯದಲ್ಲಿ ನಡೆಸುತ್ತಾರೆ.
ಸಾಮಾನ್ಯವಾಗಿ ಸಾರ್ವಜನಿಕರ ಕಣ್ಣಿಗೆ ಕಾಣಿಸದ ಅನೇಕ ಸಾಧು-ಸಂತರನ್ನು ಈ ಮೇಳದಲ್ಲಿ ನೋಡಬಹುದು. ಆದ್ದರಿಂದ ಇದು ಧಾರ್ಮಿಕ ಆಚರಣೆಯ ಜೊತೆಗೆ ಒಂದು ಸಾಂಸ್ಕೃತಿಕ ಅನುಭವವೂ ಆಗಿದೆ.
ಆದರೆ ಹುಷಾರು, ಕೆಲವು ಕೇಡಿ ಬುದ್ಧಿಯ ವಾಮಾಚಾರಿಗಳೂ ಇವರ ನಡುವೆ ಇರಬಹುದು. ಸಿಹಿಯಾದ ಮಾತುಗಳಿಂದ ಮರುಳು ಮಾಡಿ, ಸಿದ್ಧಿಗಳನ್ನು ಕಲಿಸಿಕೊಡುತ್ತೇವೆಂದು ನಂಬಿಸಿ, ಕರೆದೊಯ್ದು ಸ್ಮಶಾನಗಳಲ್ಲಿ ನಿಮ್ಮನ್ನು ತಮ್ಮ ವಾಮಾಚಾರಕ್ಕೆ ಬಳಸಿಕೊಳ್ಳಬಹುದು. ಇಂಥ ಸಂಗತಿಗಳು ಹಿಂದೆ ಘಟಿಸಿವೆ. ಎಚ್ಚರ ಮುಖ್ಯ.
ಪೀರಿಯಡ್ಸ್ ಬಗ್ಗೆ ವಿಭಿನ್ನ ಸಂದೇಶ
ಸಮಾಜದ ಅನೇಕ ಭಾಗಗಳಲ್ಲಿ ಇನ್ನೂ ಪೀರಿಯಡ್ಸ್ ಬಗ್ಗೆ ಮುಜುಗರ, ತಪ್ಪು ಕಲ್ಪನೆಗಳು ಮತ್ತು ನಿರ್ಬಂಧಗಳಿವೆ. ಆದರೆ ಅಂಬುಬಾಚಿ ಮೇಳ ಮಹಿಳೆಯ ಋತುಚಕ್ರವನ್ನು ಸೃಷ್ಟಿಯ ಮೂಲಶಕ್ತಿ ಎಂದು ಗೌರವಿಸುತ್ತದೆ. ಅಶುದ್ಧತೆ ಎಂದಲ್ಲ. ದೇವಿಯೇ ಋತುಸ್ರಾವ ಅನುಭವಿಸುತ್ತಾಳೆ ಎಂಬ ನಂಬಿಕೆ ಮಹಿಳೆಯ ದೇಹದ ಸಹಜ ಪ್ರಕ್ರಿಯೆಗೆ ಧಾರ್ಮಿಕ ಗೌರವ ನೀಡುತ್ತದೆ.
ಅಂಬುಬಾಚಿ ಮೇಳಕ್ಕೆ ಭಕ್ತಿಯಷ್ಟೇ ಟೀಕೆಗಳೂ ಇವೆ. ಕೆಲವರು ಇದನ್ನು ಮಹಿಳಾ ದೇಹದ ಸ್ವಾಭಾವಿಕ ಪ್ರಕ್ರಿಯೆಯ ಆಚರಣೆ ಎಂದು ಪ್ರಶಂಸಿಸಿದರೆ, ಇನ್ನೂ ಕೆಲವರು ಧಾರ್ಮಿಕ ನಂಬಿಕೆ ಮತ್ತು ವೈಜ್ಞಾನಿಕ ಸತ್ಯಗಳನ್ನು ಬೇರೆಬೇರೆ ದೃಷ್ಟಿಯಿಂದ ನೋಡಬೇಕೆಂದು ಅಭಿಪ್ರಾಯಪಡುತ್ತಾರೆ. ಆದರೂ ಈ ಹಬ್ಬ ಮಹಿಳೆಯರ ಆರೋಗ್ಯ, ಪೀರಿಯಡ್ಸ್ ಮತ್ತು ಸಾಮಾಜಿಕ ನಂಬಿಕೆಗಳ ಬಗ್ಗೆ ಚರ್ಚೆ ಹುಟ್ಟುಹಾಕುವಲ್ಲಿ ಮಹತ್ವದ ಪಾತ್ರ ವಹಿಸಿದೆ.
(ಬರಹ: ಭವಾನಿ ಭಟ್)














Click it and Unblock the Notifications