Rain Alert: ಕರ್ನಾಟಕದ ಈ ಭಾಗದಲ್ಲಿ 3 ದಿನ ಭರ್ಜರಿ ಮಳೆ, ಆರೆಂಜ್ ಅಲರ್ಟ್ ಘೋಷಣೆ
Karnataka Rain Alert: ಕರ್ನಾಟಕ ರಾಜ್ಯಾದ್ಯಂತ ಮುಂಗಾರು ಮಳೆ ಕ್ಷೀಣಿಸಿದ್ದು, ಕರಾವಳಿ ಜಿಲ್ಲೆಗಳಲ್ಲಿ ಕೆಲವು ದಿನಗಳಿಂದ ಭರ್ಜರಿ ಮಳೆ ಆಗುತ್ತಿದೆ. ಮುಂದಿನ ಒಂದು ವಾರ ಕರಾವಳಿ ಭಾಗಕ್ಕೆ ಬಿರುಗಾಳಿ ಸಹಿತ ಭಾರೀ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹಾಗಾದರೆ ಬೆಂಗಳೂರು ಸೇರಿ ಒಳನಾಡು ಜಿಲ್ಲೆಗಳಿಗೆ ಹವಾಮಾನ ಮುನ್ಸೂಚನೆ ಏನಿದೆ?
ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಮಳೆ ಕೊರತೆ ಆಗಿದ್ದು, ನಿರೀಕ್ಷಿತ ಮಳೆ ಬಾರದೇ ರೈತರು, ಜನರು ಸಂಕಷ್ಟ ಎದುರಿಸುವಂತಾಗಿದೆ. ಈ ನಡುವೆ ಒಳನಾಡು ಜಿಲ್ಲೆಗಳಲ್ಲಿ ಆಗೊಮ್ಮೆ, ಈಗೊಮ್ಮೆ ಹಗುರ ಮಳೆ ಆಗುತ್ತಿದೆ. ಇನ್ನೂ ಕರಾವಳಿ ಭಾಗದಲ್ಲಿ ಮುಂದಿನ ಒಂದು ವಾರದ ಪೈಕಿ ಜೂನ್ 27ರವರೆಗೆ ಗಂಟೆಗೆ 50-60 ಕಿಲೋ ಮೀಟರ್ ವೇಗದ ಬಿರುಗಾಳಿ ಸಹಿತ ಭಾರೀ ಮಳೆ ಆಗಲಿದೆ. ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಮೂರು ದಿನ 'ಆರೆಂಜ್ ಅಲರ್ಟ್' ಘೋಷಿಸಲಾಗಿದೆ.

ಇಂದು ಜೂನ್ 24ರಂದು ಸಹ ಕರಾವಳಿ ಭಾಗದಲ್ಲಿ ಅತ್ಯಧಿಕ ಮಳೆ ಸುರಿಯಲಿದ್ದು, ಜೂನ್ 28ರಿಂದ ಕೊಂಚ ಮಳೆ ತಗ್ಗಲಿದ್ದು, ಆಗ ಹಗುರದಿಂದ ಸಾಧಾರಣವಾಗಿ ಮಳೆ ಆಗಲಿದೆ. ಐಎಂಡಿ ಎರಡು ದಿನ 'ಯೆಲ್ಲೋ ಅಲರ್ಟ್' ನೀಡಿರುವುದಾಗಿ ತಿಳಿಸಿದೆ. ಈ ಮೂಲಕ ಕರಾವಳಿಗೆ ನಿರೀಕ್ಷಿತ ಮುಂಗಾರು ಮಳೆ ಬರುವ ಲಕ್ಷಣಗಳು ಗೋಚರಿಸಿವೆ.
ಮಲೆನಾಡಿಗೆ ಮಳೆ ಅಬ್ಬರ: ಯೆಲ್ಲೋ ಅಲರ್ಟ್ ಜಿಲ್ಲೆಗಳಿವು
ರಾಜ್ಯದ ಮಲೆನಾಡಿನ ಭಾಗವಾದ ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು ಮತ್ತು ಹಾಸನ ಭಾಗಗಳಲ್ಲಿ ಮುಂಗಾರು ಚುರುಕು ಪಡೆಯುವ ಸಾಧ್ಯತೆ ಇದೆ. ಚಿಕ್ಕಮಗಳೂರು ಮತ್ತು ಶಿವಮೊಗ್ಗದಲ್ಲಿ ಜೂನ್ 25ರಿಂದ ಆರು ದಿನಗಳ ಕಾಲ ಭಾರೀ ಮಳೆ ಆಗಲಿದ್ದು, 'ಯೆಲ್ಲೋ ಅಲರ್ಟ್' ನೀಡಲಾಗಿದೆ. ಪ್ರತಿ ವರ್ಷ ಮಲೆನಾಡು, ಕರಾವಳಿಗೆ ಹೆಚ್ಚಿರುತ್ತಿದ್ದ ಮಳೆ, ಈ ಬಾರಿ ಅಲ್ಲಿಯು ಬರಗಾಲದ ಛಾಯೆ ಆವರಿಸಿದೆ.
ಉತ್ತರ ಕರ್ನಾಟಕದ ಒಂದೆರಡು ಜಿಲ್ಲೆಗಳಿಗೆ ಭಾರೀ ಮಳೆ
ಇನ್ನೂ ಬೆಂಗಳೂರು ನಗರ, ಉತ್ತರ ಕರ್ನಾಟಕ ಸೇರಿದಂತೆ ಒಳನಾಡು ಜಿಲ್ಲೆಗಳಲ್ಲಿ ಮಳೆ ಸಂಪೂರ್ಣ ದುರ್ಬಲವಾಗಿದೆ. ಮುಂದಿನ ಮೂರು ದಿನ ಬೆಳಗಾವಿ, ಧಾರವಾಡ ಜಿಲ್ಲೆಗೆ, ಒಂದು ದಿನ ಬೀದರ್ ಹಾಗೂ ಹಾವೇರಿ ಜಿಲ್ಲೆಗಳಿಗೆ ಹಗುರದಿಂದ ಸಾಧಾರಣವಾಗಿ (65-115 ಮಿಲಿ ಮೀಟರ್) ಮಳೆ ಆಗಲಿದೆ. ಈ ಹಿನ್ನೆಲೆ ಅವುಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಹವಾಮಾನ ಸ್ಥಿತಿ ಬದಲಾದರೆ ಆ ಭಾಗಗಳಲ್ಲಿ ನಿರೀಕ್ಷಿತ ಮಳೆ ಆಗುವುದು ಅನುಮಾನ ಎನ್ನಲಾಗಿದೆ. ಏಕೆಂದರೆ ಇತ್ತೀಚೆಗೆ ಉತ್ತರ ಕರ್ನಾಟಕದ ಭಾಗಗಳಿಗೆ ಐಎಂಡಿ ನೀಡುತ್ತಿರುವ ದಿನಗಳಲ್ಲಿ ಒಂದು ದಿನವೂ ಭಾರೀ ಮಳೆ ದಾಖಲಾಗಿಲ್ಲ.
ಬೆಂಗಳೂರು ನಗರದಲ್ಲಿ ಅಲ್ಲಲ್ಲಿ ತುಂತುರು ಮಳೆ ಆಗಲಿದ್ದು, ಆಗಾಗ ಬಿಸಿಲು, ಮುಬ್ಬು ವಾತಾವರಣ ಕಂಡು ಬರಲಿದೆ. ಚುರುಕು ಬಿಸಿಲಿನ ವಾತಾವರಣ ಕಂಡು ಬಂದರೂ ಸಹಿತ ರಾತ್ರಿ ತಂಪು ಗಾಳಿ ಬೀಸಬಹುದೆಂದು ಅಂದಾಜಿಸಲಾಗಿದೆ.
ರಾಜ್ಯಾದ್ಯಂತ ಒಣಹವೆ ಎಚ್ಚರಿಕೆ, ಮಳೆ ಅಭಾವ
ಇನ್ನೂಳಿದಂತೆ ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ, ಮೈಸೂರು, ಚಾಜರಾಮನಗರ, ತುಮಕೂರು, ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ, ವಿಜಯನಗರ, ಬೆಳಗಾವಿ, ಕೊಪ್ಪಳ, ಗದಗ, ರಾಯಚೂರು, ಬೀದರ್, ಕಲಬುರಗಿ, ಬಾಗಲಕೋಟೆ, ಹಾವೇರಿ ಇನ್ನಿತರ ಕಡೆಗಳಲ್ಲಿ ಒಣಹವೆ ಮುಂದುವರಿಯಲಿದ್ದು, ಅಲ್ಲಲ್ಲಿ ಹಗುರ ಮಳೆ ಆಗಬಹುದು. ಕರಾವಳಿ ಹೊರತು ಉಳಿದ ಭಾಗಗಳಲ್ಲಿ ಅಷ್ಟಾಗಿ ಧಾರಾಕಾರ ಮಳೆ ಆಗುವುದು ಅನುಮಾನ ಎನ್ನಲಾಗಿದೆ.














Click it and Unblock the Notifications