Namma Metro: ರಾತ್ರಿಯಿಡೀ ಕಾರ್ಯ ಯಶಸ್ವಿ, ವೈಯರ್ ಸ್ಪೋಟದಿಂದ ನಿಂತಿದ್ದ ಮೆಟ್ರೋ ಸಂಚಾರ ಪುನಃ ಆರಂಭ
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮೆಟ್ರೋ ಸಂಚಾರದಲ್ಲಿ ಭಾರೀ ವ್ಯತ್ಯಯ ಉಂಟಾಗಿತ್ತು. ನೆನ್ನೆ ಮಂಗಳವಾರ ಸಂಜೆಯಿಂದಲೇ ಕಬ್ಬನ್ ಪಾರ್ಕ್ ನಿಲ್ದಾಣದಲ್ಲಿ ಉಂಟಾದ ತಾಂತ್ರಿಕ ಲೋಪದಿಂದ ನೇರಳೆ ಮಾರ್ಗದಲ್ಲಿ ಮೆಟ್ರೋ ಸಂಚಾರ ಅಸ್ತವ್ಯಸ್ತವಾಯಿತು. ಪ್ರಯಾಣಿಕರು ಪರದಾಡಿದ್ದು, ದೊಡ್ಡ ಸುದ್ದಿ ಆಯಿತು. ಕೊನೆಗೂ ರಾತ್ರಿಯಿಡೀ ಕಾರ್ಯ ನಿರ್ವಹಿಸಿದ ಅಧಿಕಾರಿಗಳು ಲೋಪವನ್ನು ಯಶಸ್ವಿಯಾಗಿ ಸರಿಪಡಿಸಲಾಗಿದೆ. ಬುಧವಾರ (ಜೂನ್ 24) ಬೆಳಗ್ಗೆ ಎಂದಿನಂತೆ ಬೆಳಗ್ಗೆ 5 ಗಂಟೆಯಿಂದಲೇ ಮೆಟ್ರೋ ರೈಲಿನ ಸಂಚಾರ ಆರಂಭವಾಗಿದೆ.
ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಅಧಿಕೃತ ಮಾಹಿತಿ ನೀಡಿದೆ. ನಮ್ಮ ಮೆಟ್ರೋ (Namma Metro) ನೇರಳೆ ಮಾರ್ಗದಲ್ಲಿ ವೈಟ್‌ಫಿಲ್ಡ್‌ನಿಂದ ಚಲಘಟ್ಟವರೆಗೆ ಸುಗಮ ಸಂಚಾರ ಸಾಧ್ಯವಾಗಿದೆ. ಯಾವುದೇ ಚಿಂತೆ, ಭಯ ಇಲ್ಲದೇ ಪ್ರಯಾಣಿಕರು ಸಂಚಾರ ಮಾಡಬಹುದೆಂದು ಅಧಿಕಾರಿಗಳು ದೃಢಪಡಿಸಿದ್ದಾರೆ.

ವಿದ್ಯುತ್ ವೈಯರ್ ಸ್ಪೋಟ, ಸಂಚಾರ ಸಮಸ್ಯೆ
ಬೆಂಗಳೂರು ಮೆಟ್ರೋ ನೇರಳೆ ಮಾರ್ಗದಲ್ಲಿ (Purple Line Metro) ಕಬ್ಬನ್ ಪಾಕ್ ಮೆಟ್ರೋ ನಿಲ್ದಾಣದಲ್ಲಿ ರೈಲು ಸ್ಥಗಿತಗೊಂಡಿತು. ಮಂಗಳವಾರ ಸಂಜೆ 4 ಗಂಟೆ ಹೊತ್ತಿಗೆ ಎಂಜಿ ರಸ್ತೆಯಿಂದ ಚಿನ್ನಸ್ವಾಮಿ ಸ್ಟೇಡಿಯಂ ನಿಲ್ದಾಣದ ಅಂಡರ್‌ಗ್ರೌಂಡ್ ನಲ್ಲಿ ಬರುತ್ತಿದ್ದಂತೆ ವಿದ್ಯುತ್ ಸರಬರಾಜು ಮಾಡುವ ವೈಯರ್ ಸ್ಪೋಟಿಸಿದ ಶಬ್ದ ಕೇಳಿ ಬಂತು. ರೈಲಿನ ಒಳಗಿದ್ದ ಎಲ್ಲ ಪ್ರಯಾಣಿಕರು ಗಾಬರಿಯಾದರು. ವಿದ್ಯುತ್ ಪೂರೈಕೆ ಕೊರತೆಯಿಂದ ರೈಲು ಕಬ್ಬನ್ ಪಾರ್ಕ್ ನಿಲ್ದಾಣದಲ್ಲಿಯೇ ನಿಂತಿತು. ಈ ತಾಂತ್ರಿಕ ಲೋಪದಿಂದಾಗಿ ಕಬ್ಬನ್ ಉದ್ಯಾನ ನಿಲ್ದಾಣದಲ್ಲಿ ಇಳಿದ ನೂರಾರು ಪ್ರಯಾಣಿಕರು ಪರದಾಡಿದರು. ಕೆಲ ಕಾಲ ಭಯದ ವಾತಾವರಣ ನಿರ್ಮಾಣವಾಯಿತು.
ಸೈರನ್ ಮೊಳಗಿಸಿದ ಮೆಟ್ರೋ ಸಿಬ್ಬಂದಿ
ಸ್ಪೋಟದ ಶಬ್ದ ಕೇಳುತ್ತಿದ್ದಂತೆ ಪ್ರಯಾಣಿಕರು ಗಾಬರಿಯಿಂದ ಹೊರ ಓಡಲು ಆರಂಭಿಸಿದರು. ಬಳಿಕ ಮೆಟ್ರೋ ಸಿಬ್ಬಂದಿ ಸೈರನ್ ಮೊಳಗಿಸಿದರು. ಆದ ಸಮಸ್ಯೆ ಬಗ್ಗೆ ತಿಳಿಸುತ್ತಿದ್ದಂತೆ ಪ್ರಯಾಣಿಕರು ನಿರಾಳಗೊಂಡರು. ಕೂಡಲೇ ವೈಟ್‌ಫಿಲ್ಡ್‌ನಿಂದ ಹಾಗೂ ಚಲ್ಲಘಟ್ಟ ಕಡೆಯಿಂದ ಮೆಜೆಸ್ಟಿಕ್ ಕಡೆಗೆ ಬರುತ್ತಿದ್ದಂತೆ ರೈಲುಗಳನ್ನು ನಿಲ್ಲಿಸಿದರು.
ಈ ಅವಧಿಯಲ್ಲಿ ಎಂಜಿ ರಸ್ತೆಯಿಂದ ಮಾಗಡಿ ರಸ್ತೆವರೆಗೆ ಮೆಟ್ರೋ ಸಂಚಾರದಲ್ಲಿ ಭಾರೀ ವ್ಯತ್ಯಯ ಕಂಡು ಬಂತು. ಮಾಗಡಿ ರಸ್ತೆಯಿಂದ ಚಲ್ಲಘಟ್ಟ, ಎಂಜಿ ರಸ್ತೆಯಿಂದ ವೈಟ್‌ಫಿಲ್ಡ್ ಕಡೆಗೆ ಮಾತ್ರವೇ ಸಂಚಾರ ನಡೆಸಲಾಯಿತು. ತಾಂತ್ರಿಕ ಪರಿಣಿತರು, BMRCL ಎಂಜಿನಿಯರ್‍ಗಳು ರಾತ್ರಿಯಿಡಿ ತಾಂತ್ರಿಕ ಲೋಪ ಸರಿಪಡಿಸುವಲ್ಲಿ ಪರದಾಡಿದ್ದಾರೆ. ಎದುರಾಗಿದ್ದ ಸಮಸ್ಯೆಯನ್ನು ಬುಧವಾರ ಬೆಳಗಿನ ಜಾವದ ಹೊತ್ತಿಗೆ ಸರಿಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನೇರಳೆ ಮಾರ್ಗದಲ್ಲಿ ಎಂದಿನಂತೆ ಮೆಟ್ರೋಗಳ ಓಡಾಟ ಕಂಡು ಬಂದಿದೆ.
ಮೆಟ್ರೋ ಬಿಟ್ಟು ಬೈಕ್, ಟ್ಯಾಕ್ಸಿ ಮೂಲಕ ಸಂಚಾರ
ತಾಂತ್ರಿಕ ದೋಷ ಉಂಟಾದ ಬೆನ್ನಲ್ಲೆ ಇನ್ನೂ ಮೆಟ್ರೋ ಪ್ರಯಾಣ ತಮಗೆ ಸಿಗುವುದಿಲ್ಲ ಎಂದು ಗೊತ್ತಾಗುತ್ತಿದ್ದಂತೆ ನಿಲ್ದಾಣದಿಂದ ಹೊರ ಬಂದ ನೂರಾರು ಪ್ರಯಾಣಿಕರು, ಬೈಕ್, ಟ್ಯಾಕ್ಸಿ, ಆಟೋ ಹಿಡಿದು ಗಮ್ಯಸ್ಥಾನ ತಲುಪಿದರು. ತುರ್ತು ಕೆಲಸ ನಿಮಿತ್ತ ತೆರಳುತ್ತಿದ್ದ ಕೆಲವರು ಕಿರಿ ಕಿರಿ ಅನುಭವಿಸಿದರು.














Click it and Unblock the Notifications