ಒಂಭತ್ತು ತಿಂಗಳು ಮಗುವನ್ನು ಬೆಳೆಸುವ ರಕ್ತ ಮೈಲಿಗೆಯಾ? ಪೀರಿಯೆಡ್ಸ್ ಬಗ್ಗೆ ಕರ್ಣ ಡಾಕ್ಟ್ರ ಪವರ್‌ಫುಲ್ ಡೈಲಾಗ್
ಕರ್ಣ ಸೀರಿಯಲ್‌ಗೆ ಉತ್ತಮ ರೆಸ್ಪಾನ್ಸ್ ಬರ್ತಿದೆ. ಇದರಲ್ಲಿ ಕರ್ಣ ಪೀರಿಯೆಡ್ಸ್ ಬಗ್ಗೆ ಆಡಿರೋ ಮಾತಿಗೆ ಸಾಕಷ್ಟು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ಕರ್ಣ ಆಡಿರೋ ಮಾತು ಸಂಪ್ರದಾಯ ವಿರೋಧಿಯ ಅಂದರೆ ಅದಕ್ಕೂ ಸೀರಿಯಲ್‌ನಲ್ಲಿ ಉತ್ತರ ಇದೆ.
ಕರ್ಣ ಸೀರಿಯಲ್‌ನಲ್ಲಿ ಆರಂಭದಿಂದಲೂ ಹೈ ಡ್ರಾಮಾ ನಡೆಯುತ್ತಿತ್ತು. ಅನಾಥ ಮಗುವೊಂದನ್ನು ಸಾಕಿ ಬೆಳೆಸುವ ಕುಟುಂಬ ಆತನನ್ನು ಚೆನ್ನಾಗಿ ಓದಿಸುತ್ತದೆ. ಆ ಕುಟುಂಬದಲ್ಲೇ ಆತನನ್ನು ಹಣಿಯುವ ಮಂದಿಯೂ ಇದ್ದಾರೆ. ಆದರೆ ಕರ್ಣ ನಮ್ಮ ಮಹಾಭಾರತದ ಕರ್ಣನ ಥರ, ವಿಷ್ಣುವರ್ಧನ್ ಸಿನಿಮಾದ ಕರ್ಣನ ಥರ ಸಿಕ್ಕಾಪಟ್ಟೆ ಒಳ್ಳೆಯವನು. ಯಾವತ್ತೂ ತನ್ನ ಸ್ವಾರ್ಥ ನೋಡದೇ ಇತರರ ಒಳಿತಿಗಾಗಿ ದುಡಿಯುವವನು. ಹೀಗಾಗಿ ಈ ಕರ್ಣನಿಗೆ ಲೈಫ್‌ನಲ್ಲಿ ಮಿತಿಮೀರಿ ಕಷ್ಟಗಳು ಬರುತ್ತವೆ. ಆತ ಕಷ್ಟಗಳ ನಡುವೆ ಬೇಯುತ್ತ ಉಳಿದವರಿಗೆ ಬೆಳಕಾಗುತ್ತ ಹೋಗುತ್ತಾನೆ.

ಇಂಥಾ ಕರ್ಣನಿಗೆ ಎರಡೆರಡು ಬಾರಿ ಮದುವೆ ಆಗಿದೆ. ಆತ ಮೊದಲು ಮದುವೆ ಆಗಿದ್ದ ಹುಡುಗಿ ಆತನ ಆಯ್ಕೆ ಅಲ್ಲ, ಇಲ್ಲೂ ಕರ್ಣನ ಒಳ್ಳೆತನವೇ ಕೆಲಸ ಮಾಡಿದೆ. ಮದುವೆ ಆಗದೇ ಗರ್ಭಿಣಿ ಆಗಿರುವ ನಿತ್ಯಾಗೆ ಎಲ್ಲೂ ಸಮಸ್ಯೆ ಆಗದಿರಲಿ ಎಂಬ ಕಾಳಜಿ ಆತನಿಗಿರುತ್ತದೆ. ಆತನ ಪ್ರೀತಿಯ ಹುಡುಗಿ ತನ್ನ ಸ್ಟೂಡೆಂಟ್ ನಿಧಿ. ಅವಳು ಇವನ ಹಿಂದೆ ಬಿದ್ದು ಈತ ಅವಾಯ್ಡ್ ಮಾಡಿದರೂ ಬಿಡದೆ ಹಿಂಬಾಲಿಸಿ ಕರ್ಣನ ಮನಸ್ಸು ಗೆದ್ದು ಮನದನ್ನೆಯಾಗಿದ್ದಾಳೆ. ಕೊನೆಗೂ ನಿತ್ಯಾ ಜೊತೆಗೆ ನಡೆದ ಕರ್ಣನ ಮದುವೆ ಫೇಕ್ ಅಂತ ರಿವೀಲ್ ಆದಮೇಲೆ ಅವನು ಪ್ರೀತಿಸುವ ಹುಡುಗಿ ನಿಧಿ ಜೊತೆಗೆ ಅವನ ಮದುವೆ ಆಗಿದೆ. ಅವಳ ವಿಚಾರಕ್ಕೆ ಕರ್ಣ ಆಡಿರೋ ಪೀರಿಯೆಡ್ ಕುರಿತಾದ ಮಾತು ಎಷ್ಟೋ ಜನರ ಕಣ್ಣು ತೆರೆಸುವಂತಿದೆ.
ನಿಧಿ ಕರ್ಣ ನಡುವಿನ ಕ್ಯೂಟ್ ಲವ್‌ಸ್ಟೋರಿ
ನಿಧಿ ಕರ್ಣ ನಡುವಿನ ಕ್ಯೂಟ್ ಲವ್‌ಸ್ಟೋರಿ ಸಾಕಷ್ಟು ಗಮನ ಸೆಳೆದಿತ್ತು. ಇದೀಗ ಕರ್ಣನ ಮನದನ್ನೆಯೂ ಮಡದಿಯೂ ಆಗಿರುವ ನಿಧಿಗೆ ಪೀರಿಯೆಡ್ಸ್ ಆಗಿದೆ. ಕರ್ಣ ಹೋಗಿ ಪ್ಯಾಡ್ ತಂದು ಕೊಡುತ್ತಾನೆ. ಹೇಳಿ ಕೇಳಿ ಅವನು ಗೈನಕಾಲಜಿಸ್ಟ್. ಇಂಥಾ ವಿಚಾರಗಳ ಬಗ್ಗೆ ಸಾಕಷ್ಟು ನಾಲೆಡ್ಜ್ ಆತನಿಗಿದೆ. ಆತ ಪ್ಯಾಡ್ ತಗೊಂಡು ಹೊರಟಾಗ ಚಿಕ್ಕಮ್ಮ ಎದುರಾಗಿ ದೊಡ್ಡ ವಿಚಾರವೊಂದನ್ನು ಹೇಳಲು ಬಂದಿದ್ದಾಳೆ. ಆದರೆ ಹೆಂಡತಿಗೆ ಆದಷ್ಟು ಬೇಗ ಪ್ಯಾಡ್ ಕೊಡಬೇಕು ಅನ್ನುವ ಯೋಚನೆಯಲ್ಲಿರುವ ಕರ್ಣನಿಗೆ ಅದರ ಮುಂದೆ ಯಾವುದೂ ದೊಡ್ಡದಾಗಿ ಕಂಡಿಲ್ಲ. ಇದು ವಿಲನ್ ಚಿಕ್ಕಮ್ಮನಿಗೆ ಸಿಟ್ಟು ತರಿಸಿದೆ.
ಕರ್ಣ ನಿಧಿಗಾಗಿ ಬಿಸಿನೀರು ಕಾಯಿಸಲು ಬಂದಾಗಲೂ ಚಿಕ್ಕಮ್ಮ ಆತನನ್ನು ಹಿಂಬಾಲಿಸಿಕೊಂಡು ಬಂದಿದ್ದಾಳೆ. ಮುಂದೆ ನಡೆಯೋ ಎಂಗೇಜ್‌ಮೆಂಟ್ ಅನ್ನು ಪೋಸ್ಟ್‌ಪೋನ್ ಮಾಡಲು ಹೇಳುತ್ತಾಳೆ. ಕಾರಣ ನಿಧಿ ಪೀರಿಯೆಡ್ಸ್ ಆಗಿರುವ ಕಾರಣ ಮನೆಯೆಲ್ಲ ಮೈಲಿಗೆ ಆಗಿರುತ್ತೆ. ಇಂಥಾ ಟೈಮಲ್ಲಿ ಎಂಗೇಜ್‌ಮೆಂಟ್‌ನಂಥಾ ಶುಭ ಕಾರ್ಯ ಮಾಡೋದು ಚೆನ್ನಾಗಿರಲ್ಲ ಅನ್ನೋದು ಚಿಕ್ಕಮ್ಮನ ಮಾತು. ಇದಕ್ಕೆ ಪ್ರತಿಯಾಗಿ ಕರ್ಣ ಆಡುವ ಮಾತು ಬಹಳ ಮಂದಿಗೆ ಪಾಠ ಮಾಡುವ ಹಾಗಿದೆ.
ʼನಮ್ಮ ಹಾರ್ಟ್ ಹೇಗೆ ಬ್ಲಡ್ ಪಂಪ್ ಮಾಡುತ್ತೋ, ಶ್ವಾಸಕೋಶ ಹೇಗೆ ಉಸಿರಾಟಕ್ಕೆ ಸಹಾಯ ಮಾಡುತ್ತೋ ಅಷ್ಟೇ ಸಹಜವಾಗಿ ಹೆಣ್ಣಿನ ದೇಹದಲ್ಲಿ ಪೀರಿಯೆಡ್ಸ್ ಆಗುತ್ತಿರುತ್ತದೆ. ಅದು ಹೆಣ್ಣಿನ ದೇಹಕ್ಕೆ ಬಹಳ ಮುಖ್ಯವೂ ಕೂಡ. ಯಾವ ರಕ್ತ ಒಂಭತ್ತು ತಿಂಗಳು ಒಂದು ಮಗೂನ ಸಾಕಿ ಬೆಳೆಸುತ್ತೋ ಅದೇ ರಕ್ತ ಹೊರಗಡೆ ಹೋಗುವಾಗ ಮೈಲಿಗೆ ಆಗಿಬಿಡುತ್ತಾ?ʼ ಅನ್ನೋ ಮಾತನ್ನು ಕರ್ಣ ಬಹಳ ಪವರ್‌ಫುಲ್ ಆಗಿ ಹೇಳ್ತಾನೆ.
ಮುಟ್ಟಿನ ಸಮಯದಲ್ಲಿ ಪ್ರತ್ಯೇಕ ಯಾಕೆ?
ಪಟ್ಟುಬಿಡದ ಚಿಕ್ಕಮ್ಮ, ʼಹಾಗಿದ್ರೆ ಹಿಂದಿನವ್ರು ಮಾಡಿರೋದಕ್ಕೆಲ್ಲ ಏನರ್ಥ?ʼ ಅಂತ ಕೇಳ್ತಾರೆ. ಸಂಪ್ರದಾಯವಿರೋಧಿಯಲ್ಲದ ಕರ್ಣ ಅದಕ್ಕೂ ಉತ್ತರ ಹೇಳ್ತಾನೆ. ʼಹಿಂದಿನವರು ಮಾಡಿದ್ದು ಖಂಡಿತಾ ತಪ್ಪಲ್ಲ. ಆಗ ಈಗಿನ ಹಾಗೆ ವ್ಯವಸ್ಥೆಗಳಿರಲಿಲ್ಲ. ರುಬ್ಬೋ ಕಲ್ಲಲ್ಲಿ ರಬ್ಬಬೇಕಿತ್ತು. ಬಾವಿಯಿಂದ ನೀರು ಸೇದಬೇಕಿತ್ತು. ಪೀರಿಯೆಡ್ಸ್ ಟೈಮ್ ಅಲ್ಲಿ ಇಂಥಾ ಕೆಲಸ ಮಾಡೋದು ಕಷ್ಟ ಅಂತ ಅವರು ಹೆಣ್ಮಕ್ಕಳನ್ನು ಮುಟ್ಟಿನ ಸಮಯದಲ್ಲಿ ಪ್ರತ್ಯೇಕ ಕೂರಿಸಲು ಶುರು ಮಾಡಿದರುʼ ಅನ್ನುತ್ತಾನೆ.
ಇದನ್ನು ಸಾಕಷ್ಟು ಮಂದಿ ಮೆಚ್ಚಿಕೊಂಡಿದ್ದಾರೆ. ಆಮೇಲೆ ಕರ್ಣ ನಿಧಿಗೆ ಬಿಸಿನೀರ ಪ್ಯಾಕ್ ಮಾಡಿ ಕೊಡುತ್ತಾನೆ. ತನ್ನ ತೊಡೆ ಮೇಲೆ ಮಲಗಿಸಿ ಪ್ರೀತಿಯಿಂದ ಆರೈಕೆ ಮಾಡುತ್ತಾನೆ. ಇದು ಗಂಡನಲ್ಲಿರುವ ಅಮ್ಮನ ಗುಣದಂತಿದೆ ಎಂದು ಬಹಳಷ್ಟು ಮಂದಿ ಹೇಳುತ್ತಿದ್ದಾರೆ.
(ಬರಹ: ಭವಾನಿ ಭಟ್)














Click it and Unblock the Notifications