ಪ್ರೆಶರ್ ಕುಕ್ಕರ್ ಸೇಫ್ಟಿ , ಪೇಟೆಂಟ್ ಫ್ರೀ ಉದ್ಯಮದ ಹರಿಕಾರ, ದಿವಾಳಿ ಕಂಪನಿಯನ್ನು ಬಿಲಿಯನ್ ಡಾಲರ್ ಸಾಮ್ರಾಜ್ಯವಾಗಿಸಿದ ನಾಯಕ
ಪ್ರೆಶರ್ ಕುಕ್ಕರ್‌ಗಳಲ್ಲಿ 'ಗ್ಯಾಸ್ಕೆಟ್ ರಿಲೀಸ್ ಸಿಸ್ಟಮ್' ಎಂಬ ಅದ್ಭುತ ಸುರಕ್ಷತಾ ತಂತ್ರಜ್ಞಾನವನ್ನು ಆವಿಷ್ಕರಿಸಿ, ಕೋಟ್ಯಂತರ ಕುಟುಂಬಗಳ ಅಡುಗೆಮನೆಗೆ ಸುರಕ್ಷತೆ ಒದಗಿಸಿದವರು ಪ್ರಖ್ಯಾತ ಉದ್ಯಮಿ ದಿವಂಗತ ಟಿ.ಟಿ. ಜಗನ್ನಾಥನ್. ಇವರಿಗೆ ದೇಶದ ಅತ್ಯುನ್ನತ ಪದ್ಮ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ. ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಈ ಗೌರವವನ್ನು ಹಸ್ತಾಂತರಿಸಿದ್ದಾರೆ.
ರಾಷ್ಟ್ರಪತಿಗಳು ಈ ಸಮಾರಂಭದಲ್ಲಿ ಒಟ್ಟು 65 ಪದ್ಮ ಪ್ರಶಸ್ತಿಗಳನ್ನು ಪ್ರದಾನ ಮಾಡಿದ್ದಾರೆ. ಇದರಲ್ಲಿ ಇಬ್ಬರಿಗೆ ಪದ್ಮವಿಭೂಷಣ, ಏಳು ಜನರಿಗೆ ಪದ್ಮಭೂಷಣ ಹಾಗೂ 56 ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿಗಳು ಸೇರಿವೆ.

ಅಡುಗೆಮನೆ ಇತಿಹಾಸವನ್ನೇ ಬದಲಿಸಿದ ಸುರಕ್ಷತಾ ಆವಿಷ್ಕಾರ:
ಪ್ರೆಶರ್ ಕುಕ್ಕರ್‌ಗಳು ಸ್ಫೋಟಗೊಂಡು ಸಂಭವಿಸುತ್ತಿದ್ದ ಅಪಘಾತಗಳು, ಗಾಯಗಳು ಮತ್ತು ಸಾವು-ನೋವುಗಳನ್ನು ತಡೆಗಟ್ಟುವ ಸಲುವಾಗಿ ಟಿ.ಟಿ. ಜಗನ್ನಾಥನ್ ಅವರು 'ಗ್ಯಾಸ್ಕೆಟ್ ರಿಲೀಸ್ ಸಿಸ್ಟಮ್' ಅನ್ನು ಕಂಡುಹಿಡಿದರು. ಈ ಆವಿಷ್ಕಾರವು ಇಡೀ ಅಡುಗೆಮನೆ ಉದ್ಯಮದ ಚಿತ್ರಣವನ್ನೇ ಬದಲಾಯಿಸಿತು.
ಪೇಟೆಂಟ್ ಫ್ರೀ ತಂತ್ರಜ್ಞಾನ :
ಇನ್ನೂ ವಿಶೇಷವೆಂದರೆ, ಇಲ್ಲಿ ಅವರು ಒಬ್ಬ ಬಿಸ್‌ಮ್ಯಾನ್ ಆಗಿ ಯೋಚಿಸಲಿಲ್ಲ. ಅವರ ಮನಸ್ಸಿನಲ್ಲಿ ಇದ್ದದ್ದು, ದೇಶದ ಬಡ ಮತ್ತು ಮಧ್ಯಮ ವರ್ಗದ ಕೋಟ್ಯಂತರ ಕುಟುಂಬಗಳ ಸುರಕ್ಷತೆ ಮಾತ್ರ. ಹಾಗಾಗಿ ತಾವೊಬ್ಬರೇ ಆರ್ಥಿಕ ಲಾಭ ಗಳಿಸುವ ಹಾದಿಯನ್ನು ಜಗನ್ನಾಥ್ ಹಿಡಿಯಲಿಲ್ಲ. ಹೌದು ತಮ್ಮ ಈ ತಂತ್ರಜ್ಞಾನಕ್ಕೆ ಪೇಟೆಂಟ್ ಪಡೆಯಲಿಲ್ಲ. ಬದಲಿಗೆ ಈ ತಂತ್ರಜ್ಞಾನವನ್ನು ಇಡೀ ಉದ್ಯಮದ ಎಲ್ಲಾ ತಯಾರಕರಿಗೂ ಸಂಪೂರ್ಣ ಉಚಿತವಾಗಿ ನೀಡಿದರು.
ನಷ್ಟದಲ್ಲಿದ್ದ ಕಂಪನಿಯನ್ನು ಬಿಲಿಯನ್ ಡಾಲರ್ ಸಾಮ್ರಾಜ್ಯವಾಗಿಸಿದ ನಾಯಕ :
ಮದ್ರಾಸ್ ಐಐಟಿಯಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಮತ್ತು ಅಮೆರಿಕದ ಕಾರ್ನೆಲ್ ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣ ಮುಗಿಸಿದ್ದ ಜಗನ್ನಾಥನ್, 1975ರಲ್ಲಿ ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದ 'ಟಿಟಿ ಲಿಮಿಟೆಡ್' ಕಂಪನಿಯ ಜವಾಬ್ದಾರಿಯನ್ನು ವಹಿಸಿಕೊಂಡರು.
ಮುಂದಿನ ಐದು ದಶಕಗಳಲ್ಲಿ ತಮ್ಮ ದಕ್ಷ ನಾಯಕತ್ವದಿಂದ ಈ ಕಂಪನಿಯನ್ನು ಬಿಲಿಯನ್ ಡಾಲರ್ ಉದ್ಯಮವಾಗಿ ಪರಿವರ್ತಿಸಿದರು. ಇವರ ಪರಿಶ್ರಮದಿಂದ 'ಪ್ರೆಸ್ಟೀಜ್' ಬ್ರ್ಯಾಂಡ್ ಭಾರತದ ಮನೆಮಾತಾಗಿದ್ದು, ಮಾತ್ರವಲ್ಲ, ಬ್ರಿಟನ್ ಮತ್ತು ಅಮೆರಿಕ ಸೇರಿದಂತೆ ಅಂತಾರಾಷ್ಟ್ರೀಯ ಮಾರುಕಟ್ಟೆಗೂ ಲಗ್ಗೆ ಇಟ್ಟಿತು. ಇದರೊಂದಿಗೆ ಸಾವಿರಾರು ಜನರಿಗೆ ಉದ್ಯೋಗಾವಕಾಶಗಳೂ ಸೃಷ್ಟಿಯಾದವು.
ಭಾರತದ 'ಕಿಚನ್ ಮೊಗಲ್':
ದೇಶದಾದ್ಯಂತ ಟಿಟಿಕೆ ಉತ್ಪನ್ನಗಳನ್ನು ಪ್ರತಿಯೊಂದು ಮನೆಗೂ ತಲುಪಿಸಿದ ಹಿನ್ನೆಲೆಯಲ್ಲಿ ಜಗನ್ನಾಥನ್ ಅವರು ಭಾರತದ "ಕಿಚನ್ ಮೊಗಲ್" ಎಂದೇ ಪ್ರಖ್ಯಾತರಾಗಿದ್ದರು. ಕೇವಲ ವ್ಯವಹಾರವಷ್ಟೇ ಅಲ್ಲದೆ, ತಮ್ಮ ಸಮೂಹ ಸಂಸ್ಥೆಗಳ ಮೂಲಕ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಸಾಲು ಸಾಲು ಸಾಮಾಜಿಕ ಕಾರ್ಯಗಳನ್ನು ಮಾಡುವ ಮೂಲಕ ಲೋಕೋಪಕಾರಿಯಾಗಿಯೂ ಗುರುತಿಸಿಕೊಂಡರು.
ಅವರ ಸಾಧನೆಗಾಗಿ ಬಿಸಿನೆಸ್ ಸ್ಟ್ಯಾಂಡರ್ಡ್ ಮತ್ತು ಅರ್ನ್ಸ್ಟ್ ಆಂಡ್ ಯಂಗ್ ಸಂಸ್ಥೆಗಳು 'ಅತ್ಯುತ್ತಮ ಉದ್ಯಮಿ' ಪ್ರಶಸ್ತಿ ನೀಡಿ ಗೌರವಿಸಿತು. ಅಷ್ಟೇ ಅಲ್ಲದೆ, 2025ರಲ್ಲಿ ಅವರನ್ನು ಪ್ರತಿಷ್ಠಿತ 'ಸಿಎನ್‌ಬಿಸಿ ಟಿವಿ18 ಹಾಲ್ ಆಫ್ ಫೇಮ್'ಗೆ ಸೇರ್ಪಡೆಗೊಳಿಸಲಾಗಿತ್ತು.
ಮರಣೋತ್ತರ ಸನ್ಮಾನ:
ಭಾರತೀಯ ಉದ್ಯಮ, ತಾಂತ್ರಿಕ ಆವಿಷ್ಕಾರ ಮತ್ತು ಸಾರ್ವಜನಿಕ ಸುರಕ್ಷತೆಗೆ ನೀಡಿದ ಅಪಾರ ಕೊಡುಗೆಯನ್ನು ಪರಿಗಣಿಸಿ ಜಗನ್ನಾಥನ್ ಅವರಿಗೆ ಈ ಗೌರವವನ್ನು ನೀಡಲಾಗಿದೆ. ಟಿ.ಟಿ. ಜಗನ್ನಾಥನ್ ಅವರು ಅಕ್ಟೋಬರ್ 9, 2025 ರಂದು ನಿಧನರಾಗಿದ್ದು, ಇದೀಗ ಅವರಿಗೆ ಮರಣೋತ್ತರವಾಗಿ ಈ ಪದ್ಮ ಪ್ರಶಸ್ತಿಯನ್ನು ಸಲ್ಲಿಸಲಾಗಿದೆ.














Click it and Unblock the Notifications