ದೊಡ್ಡ ಬಂಡವಾಳ ಇರಲಿಲ್ಲ, ದೊಡ್ಡ ಕನಸಿತ್ತು! 4 ಯುವಕರ ಐಡಿಯಾ ಕೋಟ್ಯಾಂತರ ಭಾರತೀಯರ ಜೀವನಾಡಿ, ಸೆಳೆದಿದೆ ಗೂಗಲ್ ಗಮನ
ರೈಲು ಯಾವಾಗ ಬರುತ್ತದೆ? ಎಷ್ಟು ತಡವಾಗಿದೆ? ಈಗ ಎಲ್ಲಿದೆ? ಎಂಬ ಪ್ರಶ್ನೆಗಳು ಭಾರತೀಯ ರೈಲ್ವೆ ಪ್ರಯಾಣಿಕರನ್ನು ಹಲವು ವರ್ಷಗಳ ಕಾಲ ಕಾಡಿದೆ. ನಿಲ್ದಾಣದಲ್ಲಿ ಘೋಷಣೆ ಇಲ್ಲ, ಮೊಬೈಲ್ ನೆಟ್‌ವರ್ಕ್ ಇಲ್ಲ, ರೈಲಿನ ಬಗ್ಗೆ ಮಾಹಿತಿ ಇಲ್ಲ. ವಿಪರ್ಯಾಸವೆಂದರೆ, ಇದನ್ನೇ ಒಂದು ಸಹಜ ಪ್ರಕ್ರಿಯೆ ಎಂದು ಎಲ್ಲರೂ ಮರು ಪ್ರಶ್ನಿಸದೆ ಒಪ್ಪಿಕೊಂಡಿದ್ದರು.
ಬೆಂಗಳೂರು ಇಂಜಿನಿಯರ್‌ಗಳ 'ಸಿಗ್ಮಾಯ್ಡ್ ಲ್ಯಾಬ್ಸ್' ತಂತ್ರಜ್ಞಾನ ಕ್ರಾಂತಿ!
ರೈಲ್ವೆ ಪ್ರಯಾಣಿಕರ ದಶಕಗಳ ಕಾಲದ ಸಮಸ್ಯೆಗೆ 2015ರಲ್ಲಿ ಅದ್ಭುತವಾದ ಪರಿಹಾರವೊಂದು ಸಿಕ್ಕಿತು. ಬೆಂಗಳೂರಿನ ನಾಲ್ವರು ಪ್ರತಿಭಾವಂತ ಯುವ ಇಂಜಿನಿಯರ್‌ಗಳು ಈ ಸಮಸ್ಯೆಗೆ ಪರಿಹಾರ ಹುಡುಕಲು ಮುಂದಾದರು. ಅವರು ಸ್ಥಾಪಿಸಿದ 'ಸಿಗ್ಮಾಯ್ಡ್ ಲ್ಯಾಬ್ಸ್' (Sigmoid Labs) ಎಂಬ ಸಣ್ಣ ಸ್ಟಾರ್ಟ್‌ಅಪ್ ಕಂಪನಿ ಭಾರತೀಯ ರೈಲು ಪ್ರಯಾಣದ ವ್ಯವಸ್ಥೆಯನ್ನೇ ಬದಲಿಸುವಂತಹ ಕ್ರಾಂತಿಕಾರಿ ತಂತ್ರಜ್ಞಾನವನ್ನು ಜಗತ್ತಿಗೆ ಪರಿಚಯಿಸಿತು.

'Where Is My Train' ಹುಟ್ಟಿದ್ದು ಹೇಗೆ?
ಇಂಟರ್ನೆಟ್ ಇಲ್ಲದೆ ಮತ್ತು ಜಿಪಿಎಸ್ ಸಿಗದಿದ್ದರು ಚಲಿಸುವ ರೈಲನ್ನು ನಿಖರವಾಗಿ ಟ್ರ್ಯಾಕ್ ಮಾಡಲು ಸಾಧ್ಯವೇ ಎಂಬ ಕುತೂಹಲ ಪ್ರಶ್ನೆಯೆ 'Where Is My Train' ಅಪ್ಲಿಕೇಶನ್ ಜನನಕ್ಕೆ ಕಾರಣವಾಯಿತು. ಇಂಟರ್ನೆಟ್ ಇಲ್ಲದೆ ಪ್ರಯಾಣಿಕರಿಗೆ ರೈಲಿನ ನಿಖರ ಮಾಹಿತಿ ನೀಡಬೇಕೆಂಬ ಇವರ ಜಿದ್ದಿನ ಪ್ರಯತ್ನವೇ ಇಂದು ಈ ಅಪ್ಲಿಕೇಶನ್ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಭಾರತದ ಅತಿ ಹೆಚ್ಚು ಡೌನ್‌ಲೋಡ್ ಆದ ರೈಲ್ವೆ ಅಪ್ಲಿಕೇಶನ್್ಗಳ ತಂದು ಸಾಲಿನಲ್ಲಿ ನಿಲ್ಲಿಸಿದೆ.
ಯಶಸ್ಸಿನ ಹಿಂದಿನ ಮೂರು ಪ್ರಮುಖ ಕಾರಣಗಳು
1. ಕೋಟ್ಯಂತರ ಸಾಮಾನ್ಯ ಜನರ ಸಮಸ್ಯೆಗೆ ಸರಳ ಪರಿಹಾರ:
ರೈಲು ಪ್ರಯಾಣಿಕರ ಸಾಮಾನ್ಯ ಸಮಸ್ಯೆ: ಇವರ ಯಶಸ್ಸಿನ ಮೊದಲ ಹೆಜ್ಜೆ ಕೋಟ್ಯಂತರ ಸಾಮಾನ್ಯ ಜನರ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದು.
ವಿಭಿನ್ನ ಆಲೋಚನೆ: ಯಾವುದೇ ದುಬಾರಿ ತಂತ್ರಜ್ಞಾನ ಅಥವಾ ಹೈಪೈ ಕ್ಲೈಂಟ್್ಗಳ ಹಿಂದೆ ಬೀಳದ ತಂಡ, ನಿತ್ಯ ರೈಲಿನಲ್ಲಿ ಸಂಚರಿಸುವ ಸಾಮಾನ್ಯ ಭಾರತೀಯರ ದೈನಂದಿನ ಕಿರಿಕಿರಿಗೆ ಅತ್ಯಂತ ಸರಳ ರೀತಿಯಲ್ಲಿ ಪರಿಹಾರ ನೀಡುವಲ್ಲಿ ಯಶಸ್ವಿಯಾಯಿತು.
2. ಇಂಟರ್ನೆಟ್ ಇಲ್ಲದಿದ್ದರೂ ಕೆಲಸ ಮಾಡಲಿದೆ ಈ ತಂತ್ರಜ್ಞಾನ!
ಭಾರತದಾದ್ಯಂತ ಜಿಪಿಎಸ್ ಮತ್ತು ಇಂಟರ್ನೆಟ್ ಕೊರತೆಯನ್ನು ಮನಗಂಡ ತಂಡ ಆಫ್‌ಲೈನ್ ತಂತ್ರಜ್ಞಾನ ಮತ್ತು 'ಸೆಲ್ ಟವರ್ ಟ್ರಯಾಂಗ್ಯುಲೇಷನ್' ಆಧಾರಿತ ಸ್ಮಾರ್ಟ್ ಪರಿಹಾರವನ್ನು ಸಿದ್ಧಪಡಿಸಿದೆ. ಇದು ಇಂಟರ್ನೆಟ್ ಸಂಪರ್ಕವಿಲ್ಲದ ದುರ್ಗಮ ಪ್ರದೇಶಗಳಲ್ಲೂ ಯಾವುದೇ ಅಡೆತಡೆಯಿಲ್ಲದೆ ಅತ್ಯಂತ ನಿಖರವಾಗಿ ಕೆಲಸ ಮಾಡುತ್ತದೆ.
3. ನಿಖರ ಮಾಹಿತಿಗೆ ಮೊದಲ ಆದ್ಯತೆ
ಅಪ್ಲಿಕೇಶನ್ ಕೇವಲ ವಿನ್ಯಾಸಕ್ಕಿಂತ ಒಳಗಿನ ಮಾಹಿತಿಯ ನಿಖರತೆಗೆ ತಂಡವು ಪ್ರಾಮುಖ್ಯತೆ ನೀಡಿತು. ಇದರಿಂದಾಗಿ, ರೈಲು ಚಲಿಸುತ್ತಿರುವ ನಿಖರವಾದ ಸ್ಥಳವನ್ನು ಕ್ಷಣಕ್ಷಣಕ್ಕೂ (ರಿಯಲ್-ಟೈಮ್) ಅತ್ಯಂತ ಕಡಿಮೆ ಸಮಯದ ವ್ಯತ್ಯಾಸದಲ್ಲಿ ತಿಳಿಯುವಂತಾಯಿತು. ಇದೇ ಕಾರಣಕ್ಕೆ ಇಂದು ಇದು ಭಾರತೀಯ ರೈಲ್ವೆ ಪ್ರಯಾಣಿಕರ ಅತ್ಯಂತ ನೆಚ್ಚಿನ ಹಾಗೂ ವಿಶ್ವಾಸಾರ್ಹ ಸೇವೆಯಾಗಿ ಹೊರಹೊಮ್ಮಿದೆ.
ಗೂಗಲ್ ಗಮನ ಸೆಳೆದ ಸ್ಟಾರ್ಟ್‌ಅಪ್
'ವೇರ್ ಇಸ್ ಮೈ ಟ್ರೈನ್' ಅಪ್ಲಿಕೇಶನ್ ಕೋಟ್ಯಂತರ ಭಾರತೀಯರ ಅಚ್ಚುಮೆಚ್ಚಿನ ರೈಲು ಮಾಹಿತಿ ನೀಡುವ ಅಪ್ಲಿಕೇಶನ್ ಆಗಿ ಬೆಳೆದ ನಂತರ, ಜಾಗತಿಕ ಟೆಕ್ ದೈತ್ಯ ಗೂಗಲ್ (Google) 2018ರಲ್ಲಿ ಸಿಗ್ಮಾಯ್ಡ್ ಲ್ಯಾಬ್ಸ್ ಅನ್ನು ಸ್ವಾಧೀನಪಡಿಸಿಕೊಂಡಿತು. ಈ ಒಪ್ಪಂದದ ಮೌಲ್ಯವನ್ನು ಅಧಿಕೃತವಾಗಿ ಬಹಿರಂಗಪಡಿಸದಿದ್ದರೂ, ಅದು ಬಹುಮಿಲಿಯನ್ ಡಾಲರ್ ಮಟ್ಟದಲ್ಲಿತ್ತು ಎಂದು ವರದಿಗಳು ತಿಳಿಸಿವೆ.
ಯಶಸ್ಸಿನ ನಿಜವಾದ ಸೂತ್ರ
ವ್ಯಾಪಾರದಲ್ಲಿ ಯಶಸ್ಸು ಸಾಧಿಸಲು ಕೋಟ್ಯಂತರ ರೂಪಾಯಿ ಬಂಡವಾಳ, ದೊಡ್ಡ ತಂತ್ರಜ್ಞಾನದ ಹಿನ್ನೆಲೆ ಅಥವಾ ಸಾವಿರಾರು ಉದ್ಯೋಗಿಗಳ ದಂಡೇ ಇರಬೇಕಾಗಿಲ್ಲ. ಜನರು ತಮ್ಮ ದೈನಂದಿನ ಜೀವನದಲ್ಲಿ ಎದುರಿಸುವ ತೊಂದರೆಗಳಿಗೆ ಯಾರು ಅತ್ಯಂತ ಸರಳ ಮತ್ತು ತಕ್ಷಣದ ಪರಿಹಾರ ನೀಡುತ್ತಾರೋ, ಅವರೇ ನಿಜವಾದ ವಿಜೇತರು. ಇದಕ್ಕೆ 'Where Is My Train' ಆ್ಯಪ್‌ಗಿಂತ ದೊಡ್ಡ ಉದಾಹರಣೆ ಬೇಕಿಲ್ಲ. ಸಾಮಾನ್ಯ ಜನರ ನಾಡಿಮಿಡಿತ ಅರಿತು ರೂಪಿಸಿದ ಒಂದು ಸಣ್ಣ ಅಪ್ಲಿಕೇಶನ್, ಇಂದು ಜಾಗತಿಕ ದೈತ್ಯ ಕಂಪನಿಗಳೇ ತಿರುಗಿ ನೋಡುವಂತಹ ಅದ್ಭುತ ಸಾಮ್ರಾಜ್ಯವಾಗಿ ಬೆಳೆದು ನಿಂತಿದೆ.














Click it and Unblock the Notifications