Vande Bharat Express: ಹೊಸ ರೂಲ್ಸ್‌ನಿಂದ ಬೆಂಗಳೂರು ಸೇರಿ 8 ವಂದೇ ಭಾರತ್ ರೈಲುಗಳಿಗೆ ಬೇಡಿಕೆ, ಆದಾಯ ಹೆಚ್ಚಳ
ಬೆಂಗಳೂರು: ಬೆಂಗಳೂರು, ಕರ್ನಾಟಕದ ವಿವಿಧ ಭಾಗಗಳು ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಸಂಚರಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ (Vande Bharat Express Train) ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ರೈಲ್ವೆ ಇಲಾಖೆಯ ಟಿಕೆಟ್ ಬುಕಿಂಗ್‌ನಲ್ಲಿ ಕೈಗೊಂಡ ನೂತನ ಕ್ರಮದಿಂದಾಗಿ ವಂದೇ ಭಾರತ್ ರೈಲು ಪ್ರಯಾಣಿಕರ ಸಂಖ್ಯೆ ಮತ್ತು ರೈಲ್ವೆ ಆದಾಯದಲ್ಲಿ ಏರಿಕೆಯಾಗಿದೆ.
ರೈಲ್ವೆ ಇಲಾಖೆ ಪ್ರಯಾಣಿಕರಿಗೆ ಉಪಯುಕ್ತವಾಗುವ ಜೊತೆಗೆ ಇಲಾಖೆಗೆ ಆದಾಯ ಹೆಚ್ಚಾಗುವ ನಿಟ್ಟಿನಲ್ಲಿ ಅನೇಕ ಕ್ರಮ ಜಾರಿಗೊಳಿಸಿದೆ. ಅದರಲ್ಲಿ ಹೊಸದಾಗಿ ಪರಿಚಯಿಸಿದ 'ಕರೆಂಟ್ ಬುಕಿಂಗ್' ಸೌಲಭ್ಯವು ಒಂದಾಗಿದೆ. ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಪ್ರಯಾಣಿಕರು ರೈಲು ಆರಂಭವಾಗುವ ಕೇವಲ 15 ನಿಮಿಷಗಳ ಮುಂಚಿತವಾಗಿಯೂ ರೈಲಿನ ಖಾಲಿ ಸೀಟುಗಳನ್ನು ಸುಲಭವಾಗಿ ಬುಕ್ ಮಾಡಿಕೊಳ್ಳಬಹುದಾಗಿದೆ. ಮೊಲದು ಈ ವ್ಯವಸ್ಥೆ ಇರಲಿಲ್ಲ. ದಕ್ಷಿಣ ಭಾರತದ ರಾಜ್ಯಗಳಲ್ಲಿ ಕಾರ್ಯಾಚರಣೆ ಮಾಡುವ ಒಟ್ಟು 08 ರೈಲುಗಳ ಟಿಕೆಟ್ ಬುಕ್ಕಿಂಗ್‌ನಲ್ಲಿ ಈ ವ್ಯವಸ್ಥೆ ಪರಿಚಯಿಸಲಾಗಿದೆ.

803.86 ಕೋಟಿ ರೂ. ಆದಾಯ
ಈ ಹಿನ್ನೆಲೆಯಲ್ಲಿ ದಕ್ಷಿಣ ರೈಲ್ವೆ ವಲಯದಲ್ಲಿ ವಂದೇ ಭಾರತ್ ರೈಲುಗಳ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ವಲಯದ ಆದಾಯ ಸಹ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 2025-26ರ ಆರ್ಥಿಕ ವರ್ಷದಲ್ಲಿ ಒಟ್ಟು 24 ವಂದೇ ಭಾರತ್ ರೈಲು ಸಂಚಾರಗಳಿಂದ 77.38 ಲಕ್ಷ ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಅದರಿಂದ ಬರೋಬ್ಬರಿ 803.86 ಕೋಟಿ ರೂಪಾಯಿ ಆದಾಯ ಸಂಗ್ರಹವಾಗಿದೆ.
2026 ಎರಡೇ ತಿಂಗಳಲ್ಲಿ ಭರ್ಜರಿ ಆದಾಯ
ಇನ್ನೂ ಅದರ ಹಿಂದಿನ ಆರ್ಥಿಕ ವರ್ಷದಲ್ಲಿ 54.12 ಲಕ್ಷ ಪ್ರಯಾಣಿಕರಿಂದ 540.65 ಕೋಟಿ ರೂಪಾಯಿ ಆದಾಯ ಗಳಿಸಲಾಗಿತ್ತು. ಅದೇ ರೀತಿ ಹೊಸ ಆರ್ಥಿಕ ವರ್ಷದ ಆರಂಭಿಕ ಎರಡು ತಿಂಗಳುಗಳಲ್ಲೇ (ಏಪ್ರಿಲ್-ಮೇ 2026) 15.21 ಲಕ್ಷ ಪ್ರಯಾಣಿಕರು ವಂದೇ ಭಾರತ್ ರೈಲಿನಲ್ಲಿ ಸಂಚಾರ ಮಾಡಿದ್ದು, ಅದರಲ್ಲಿ ಬರೋಬ್ಬರಿ 162.96 ಕೋಟಿ ರೂ. ಹಣ ಸಂಗ್ರಹವಾಗಿದೆ. ಈ ಮೂಲಕ ರೈಲ್ವೆ ಜಾಲದಲ್ಲಿ ಕ್ರಾಂತಿ ತಂದ ವಂದೇ ಭಾರತ್ ರೈಲಿನ ಮೂಲಕ ಇಲಾಖೆ ಹೊಸ ಮೈಲಿಗಲ್ಲು ಸಾಧಿಸಿದೆ.
ಕೊನೆಯ ಕ್ಷಣದ ಪ್ರಯಾಣಿಕರಿಗೆ ಹೆಚ್ಚು ಅನುಕೂಲ
ಹದಿನೈದು ನಿಮಿಷಕ್ಕೂ ಮುನ್ನವೇ ಖಾಲಿ ಸೀಟು ಬುಕಿಂಗ್ ನಿಯಮವನ್ನು 2025ರ ಜುಲೈ 17ರಂದು ಜಾರಿಗೆ ತರಲಾಯಿತು. ಅಂದಿನಿಂದ ಈ ನಿಯಮ ಪ್ರಯಾಣಿಕ ಸ್ನೇಹಿಯಾಗಿದ್ದು, ಕೊನೆ ಕ್ಷಣದ ಪ್ರಯಾಣಿಕರಿಗೆ ಅನುಕೂಲ ಒದಗಿಸುತ್ತಿದೆ. ಟ್ರಾವೆಲ್ ಚಾರ್ಟ್ ಸಿದ್ಧವಾದ ಬಳಿಕ ಉಳಿಯುವ ಸೀಟುಗಳನ್ನು ಕಾಯ್ದಿರಿಸಲು ರೈಲ್ವೆ ಇಲಾಖೆ ಈ ಮೂಲಕ ಅವಕಾಶ ಮಾಡಿಕೊಟ್ಟಿದೆ. ಈ ಸೌಲಭ್ಯದ ಅಡಿಯಲ್ಲಿ ಹೆಸರು ಅಥವಾ ವಯಸ್ಸಿನ ಬದಲಾವಣೆಗೆ ಅವಕಾಶವಿರುವುದಿಲ್ಲ.
ಬೆಂಗಳೂರು ಸೇರಿ 8 ರೈಲುಗಳಲ್ಲಿ ಈ ಸೌಲಭ್ಯ, ಆದಾಯ ಏರಿಕೆ
* ಕೊಯಮತ್ತೂರು-ಬೆಂಗಳೂರು ಕಂಟೊನ್ಮೆಂಟ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು (20642)
* ಮಂಗಳೂರು ಸೆಂಟ್ರಲ್-ತಿರುವನಂತಪುರಂ ಸೆಂಟ್ರಲ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು (20631)
* ತಿರುವನಂತಪುರಂ ಸೆಂಟ್ರಲ್-ಮಂಗಳೂರು ಸೆಂಟ್ರಲ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು (20632)
* ಚೆನ್ನೈ ಎಗ್ಮೋರ್-ನಾಗರ್ಕೋಯಿಲ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು (20627)
* ನಾಗರ್‌ಕೋಯಿಲ್-ಚೆನ್ನೈ ಎಗ್ಮೋರ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು (20628)
* ಮಂಗಳೂರು ಸೆಂಟ್ರಲ್-ಮಡ್ಗಾಂವ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು (20646)
* ಮಧುರೈ-ಬೆಂಗಳೂರು ಕ್ಯಾಂಟ್. ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು (20671)
* ಡಾ ಎಂಜಿಆರ್ ಚೆನ್ನೈ ಸೆಂಟ್ರಲ್-ವಿಜಯವಾಡ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು (20677) ಈ ಪ್ರಾಯೋಗಿಕ ಬುಕಿಂಗ್ ಸೌಲಭ್ಯ ಯಶಸ್ವಿಯಾಗಿ ಜಾರಿಗೊಳಿಸಲಾಗಿದೆ.
ಮಂಗಳೂರು-ತಿರುವನಂತಪುರಂ, ಕಾಸರಗೋಡು-ತಿರುವನಂತಪುರಂ ಮತ್ತು ಚೆನ್ನೈ ಎಗ್ಮೋರ್-ನಾಗರ್‌ಕೋವಿಲ್ ಮಾರ್ಗಗಳಲ್ಲಿ ಹೆಚ್ಚಿನ ಪ್ರಯಾಣಿಕರ ಸಂಚಾರವಿದೆ. ಪ್ರತಿ ಸಂಚಾರದ ಸಮಯದಲ್ಲೂ ಶೇಕಡಾ ನೂರರಷ್ಟು ಸೀಟುಗಳು ಭರ್ತಿಯಾಗುತ್ತಿವೆ. ಕೊನೆಯ ಕ್ಷಣದ ಬುಕಿಂಗ್ ಆಯ್ಕೆಯು ಕಡಿಮೆ ಅವಧಿಯಲ್ಲೇ ಪ್ರಯಾಣಿಕರಲ್ಲಿ ಭಾರಿ ಜನಪ್ರಿಯತೆ ಗಳಿಸಿದೆ.
ಮುಖ್ಯವಾಗಿ ಈ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಆಂಧ್ರಪ್ರದೇಶದ ಪ್ರಮುಖ ನಗರಗಳನ್ನು ಸಂಪರ್ಕಿಸುತ್ತವೆ. ವಿವಿಧ ವರ್ಗದ ಪ್ರಯಾಣಿಕರಿಗೆ ನಮ್ಮ ನಿಯಮದಿಂದ ಅನುಕೂಲವಾಗಿದೆ. ಇದರಿಂದ ಜನರಿಗೆ ಸಹಾಯವಾಗುವ ಜೊತೆಗೆ ಇಲಾಖೆ ಆದಾಯವು ಏರಿಕೆ ಆಗಿದೆ ಎಂದು ದಕ್ಷಿಣ ರೈಲ್ವೆಯ ಅಧಿಕಾರಿಗಳು ತಿಳಿಸಿದೆ.














Click it and Unblock the Notifications