WhatsApp: ಇನ್ಮುಂದೆ ಫೋನ್ ನಂಬರ್ ಇಲ್ಲದೆ ವಾಟ್ಸಾಪ್ ಚಾಟ್ ಮಾಡಬಹುದು, ಇಲ್ಲಿದೆ ಹೊಸ ಅಪ್‌ಡೇಟ್
ವಿಶ್ವದ ಅತ್ಯಂತ ಜನಪ್ರಿಯ ಮೆಸೇಜಿಂಗ್ ಆ್ಯಪ್ ಆದ ವಾಟ್ಸಾಪ್ (WhatsApp) ತನ್ನ ಬಳಕೆದಾರರ ಸುರಕ್ಷತೆ ಮತ್ತು ಗೌಪ್ಯತೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಅತ್ಯಂತ ಮಹತ್ವದ ಅಪ್‌ಡೇಟ್ ಒಂದನ್ನು ತರುತ್ತಿದೆ. ಇನ್ಮುಂದೆ ಟ್ವಿಟರ್ ಅಥವಾ ಇನ್‌ಸ್ಟಾಗ್ರಾಮ್‌ನಂತೆಯೇ ವಾಟ್ಸಾಪ್‌ನಲ್ಲೂ ಪ್ರತ್ಯೇಕ 'ಯೂಸರ್‌ನೇಮ್' (Username) ಬಳಸುವ ವೈಶಿಷ್ಟ್ಯವನ್ನು ಪರಿಚಯಿಸಲಾಗುತ್ತಿದೆ. ಹೀಗಾಗಿ ಇನ್ಮುಂದೆ ಯಾರೊಂದಿಗಾದರೂ ಚಾಟ್ ಮಾಡಲು ನಿಮ್ಮ ವೈಯಕ್ತಿಕ ಮೊಬೈಲ್ ಸಂಖ್ಯೆಯನ್ನು ಹಂಚಿಕೊಳ್ಳುವ ಅಗತ್ಯವಿರುವುದಿಲ್ಲ.
ಜಾಗತಿಕವಾಗಿ 300 ಕೋಟಿಗೂ ಅಧಿಕ ಬಳಕೆದಾರರನ್ನು ಹೊಂದಿರುವ ವಾಟ್ಸಾಪ್, ಈ ವೈಶಿಷ್ಟ್ಯವನ್ನು ಅಧಿಕೃತವಾಗಿ ಬಿಡುಗಡೆ ಮಾಡುವ ಮುನ್ನವೇ ಯೂಸರ್‌ನೇಮ್‌ಗಳನ್ನು ಮುಂಗಡವಾಗಿ ಕಾಯ್ದಿರಿಸುವ 'ಯೂಸರ್‌ನೇಮ್ ರಿಸರ್ವೇಶನ್' (Username Reservation) ಪ್ರಕ್ರಿಯೆಯನ್ನು ಜೂನ್ 29ರಿಂದಲೇ ಜಾಗತಿಕವಾಗಿ ಆರಂಭಿಸಿದೆ. ಈ ಹೊಸ ಪ್ರೈವೆಸಿ ಫೀಚರ್ ಹೇಗೆ ಕೆಲಸ ಮಾಡುತ್ತದೆ ಮತ್ತು ಇದರ ಉಪಯೋಗಗಳೇನು ಎಂಬ ಸಂಪೂರ್ಣ ವಿವರ ಇಲ್ಲಿದೆ.

ಫೋನ್ ನಂಬರ್ ಹೈಡ್ ಆಗಲಿದೆ
ಪ್ರಸ್ತುತ ವಾಟ್ಸಾಪ್‌ನಲ್ಲಿ ಯಾರೊಂದಿಗಾದರೂ ಹೊಸದಾಗಿ ಮಾತನಾಡಬೇಕಾದರೆ ಫೋನ್ ನಂಬರ್ ನೀಡುವುದು ಕಡ್ಡಾಯವಾಗಿದೆ. ಆದರೆ ಹೊಸ ಅಪ್‌ಡೇಟ್ ಬಂದ ಬಳಿಕ, ನಿಮ್ಮ ಮೊಬೈಲ್ ಸಂಖ್ಯೆಯನ್ನು ಸಂಪೂರ್ಣವಾಗಿ ಗೌಪ್ಯವಾಗಿಡಬಹುದು. ಯಾರಾದರೂ ನಿಮ್ಮನ್ನು ಸಂಪರ್ಕಿಸಬೇಕಾದರೆ ಕೇವಲ ನಿಮ್ಮ ವಾಟ್ಸಾಪ್ ಯೂಸರ್‌ನೇಮ್ (ಉದಾಹರಣೆಗೆ: @ನಿಮ್ಮಹೆಸರು) ತಿಳಿದಿದ್ದರೆ ಸಾಕು, ನೇರವಾಗಿ ಚಾಟ್ ಆರಂಭಿಸಬಹುದು. ಇದು ಅಪರಿಚಿತ ಗ್ರೂಪ್‌ಗಳು ಅಥವಾ ಕಮ್ಯುನಿಟಿ ಚಾಟ್‌ಗಳಲ್ಲಿ ಮಹಿಳೆಯರ ಫೋನ್ ನಂಬರ್ ದುರುಪಯೋಗವಾಗುವುದನ್ನು ಸಂಪೂರ್ಣವಾಗಿ ತಡೆಯುತ್ತದೆ.
ಯಾವುದೇ ಪಬ್ಲಿಕ್ ಡೈರೆಕ್ಟರಿ ಇರುವುದಿಲ್ಲ
ಇನ್‌ಸ್ಟಾಗ್ರಾಮ್ ಅಥವಾ ಫೇಸ್‌ಬುಕ್‌ನಲ್ಲಿ ಯಾರ ಹೆಸರನ್ನಾದರೂ ಸರ್ಚ್ ಮಾಡಿ ಅವರ ಪ್ರೊಫೈಲ್ ಪತ್ತೆಹಚ್ಚಬಹುದು. ಆದರೆ ವಾಟ್ಸಾಪ್ ಈ ವಿಷಯದಲ್ಲಿ ಕಟ್ಟುನಿಟ್ಟಿನ ನಿಯಮ ತಂದಿದೆ. ಇಲ್ಲಿ ಯಾವುದೇ ಸಾರ್ವಜನಿಕ ಸರ್ಚ್ ಡೈರೆಕ್ಟರಿ ಇರುವುದಿಲ್ಲ. ಇದರರ್ಥ, ಒಬ್ಬ ವ್ಯಕ್ತಿಗೆ ನಿಮ್ಮ ನಿಖರವಾದ ಯೂಸರ್‌ನೇಮ್ ಗೊತ್ತಿದ್ದರೆ ಮಾತ್ರ ಆತ ನಿಮಗೆ ಮೆಸೇಜ್ ಕಳುಹಿಸಲು ಸಾಧ್ಯ, ಇಲ್ಲದಿದ್ದರೆ ಇಲ್ಲ. ಇದರಿಂದ ಅನಗತ್ಯ ಸ್ಪ್ಯಾಮ್ (Spam) ಮೆಸೇಜ್‌ಗಳಿಗೆ ಬ್ರೇಕ್ ಬೀಳಲಿದೆ.
ಹೆಚ್ಚುವರಿ ಸುರಕ್ಷತೆಗೆ 'ಯೂಸರ್‌ನೇಮ್ ಕೀ' (Username Key)
ನಿಮ್ಮ ಯೂಸರ್‌ನೇಮ್ ಅನ್ನು ಯಾರಾದರೂ ಊಹಿಸಿ ಮೆಸೇಜ್ ಮಾಡುವುದನ್ನು ತಡೆಯಲು ವಾಟ್ಸಾಪ್ 'ಯೂಸರ್‌ನೇಮ್ ಕೀ' ಎಂಬ ಮತ್ತೊಂದು ಸೆಕ್ಯೂರಿಟಿ ಲೇಯರ್ ನೀಡುತ್ತಿದೆ. ಇದು ಒಂದು ರಹಸ್ಯ ಕೋಡ್‌ನಂತೆ ಕೆಲಸ ಮಾಡುತ್ತದೆ. ಮೊದಲ ಬಾರಿಗೆ ನಿಮ್ಮ ಯೂಸರ್‌ನೇಮ್ ಬಳಸಿ ಯಾರಾದರೂ ಸಂದೇಶ ಕಳುಹಿಸಬೇಕಾದರೆ, ಅವರಿಗೆ ಯೂಸರ್‌ನೇಮ್ ಜೊತೆಗೆ ಈ 'ಕೀ' ಕೂಡ ತಿಳಿದಿರಬೇಕಾಗುತ್ತದೆ. ಈ ಕೀಯನ್ನು ನೀವು ಯಾವಾಗ ಬೇಕಾದರೂ ಬದಲಾಯಿಸಿಕೊಳ್ಳಬಹುದು.
ಬಿಸಿನೆಸ್ ಮತ್ತು ಕ್ರಿಯೇಟರ್ಸ್‌ಗೆ ಬ್ರ್ಯಾಂಡಿಂಗ್ ಸುಲಭ
ಕಂಟೆಂಟ್ ಕ್ರಿಯೇಟರ್ಸ್, ಸೆಲೆಬ್ರಿಟಿಗಳು ಮತ್ತು ಡಿಜಿಟಲ್ ಉದ್ಯಮ ನಡೆಸುವವರಿಗೆ ಇದು ಸಹಕಾರಿಯಾಗಲಿದೆ. ತಮ್ಮ ಫೇಸ್‌ಬುಕ್ ಅಥವಾ ಇನ್‌ಸ್ಟಾಗ್ರಾಮ್‌ನಲ್ಲಿ ಈಗಾಗಲೇ ಇರುವ ಅಧಿಕೃತ ಯೂಸರ್‌ನೇಮ್ ಅನ್ನೇ ವಾಟ್ಸಾಪ್‌ನಲ್ಲೂ ಕಾಯ್ದಿರಿಸಲು ಮೆಟಾ ಸಂಸ್ಥೆ ಅವಕಾಶ ಮಾಡಿಕೊಡುತ್ತಿದೆ.
ನಿಮ್ಮ ವಾಟ್ಸಾಪ್ ಯೂಸರ್‌ನೇಮ್ ರಿಸರ್ವ್ ಮಾಡುವುದು ಹೇಗೆ?
ವಾಟ್ಸಾಪ್‌ನಲ್ಲಿ ಕೋಟ್ಯಂತರ ಬಳಕೆದಾರರಿರುವುದರಿಂದ ನಿಮಗಿಷ್ಟವಾದ ಹೆಸರನ್ನು ಬೇರೆಯವರು ಕಾಯ್ದಿರಿಸುವ ಮುನ್ನವೇ ನೀವು ಈ ಹಂತಗಳ ಮೂಲಕ ರಿಸರ್ವ್ ಮಾಡಿಕೊಳ್ಳಬಹುದು.
ಮೊದಲು ನಿಮ್ಮ ಮೊಬೈಲ್‌ನಲ್ಲಿರುವ ವಾಟ್ಸಾಪ್ ಆ್ಯಪ್ ಅನ್ನು ಲೇಟೆಸ್ಟ್ ವರ್ಷನ್‌ಗೆ ಅಪ್‌ಡೇಟ್ ಮಾಡಿಕೊಳ್ಳಿ.
ವಾಟ್ಸಾಪ್ ಓಪನ್ ಮಾಡಿ ಸೆಟ್ಟಿಂಗ್ಸ್‌ಗೆ (Settings) ಹೋಗಿ.
ಅಕೌಂಟ್ (Account) ಆಪ್ಷನ್ ಕ್ಲಿಕ್ ಮಾಡಿ.
ನಿಮಗೆ ಯೂಸರ್‌ನೇಮ್ (Username) ಎಂಬ ಆಯ್ಕೆ ಕಾಣಿಸಿದರೆ, ಅದರ ಮೇಲೆ ಟ್ಯಾಪ್ ಮಾಡಿ ನಿಮಗಿಷ್ಟವಾದ ವಿಶಿಷ್ಟ ಹೆಸರನ್ನು ಟೈಪ್ ಮಾಡಿ ರಿಸರ್ವ್ ಮಾಡಿ.
ಒಂದು ವೇಳೆ ನೀವು ಹುಡುಕುವ ಹೆಸರು ಈಗಾಗಲೇ ಬೇರೆಯವರು ಪಡೆದುಕೊಂಡಿದ್ದರೆ, ವಾಟ್ಸಾಪ್‌ನ ಇನ್-ಬಿಲ್ಟ್ ಜನರೇಟರ್ ನಿಮಗೆ ಕೆಲವು ಪರ್ಯಾಯ ಹೆಸರುಗಳನ್ನು ಸೂಚಿಸುತ್ತದೆ. ಈ ಫೀಚರ್ ಅನ್ನು ಹಂತ-ಹಂತವಾಗಿ ಎಲ್ಲ ದೇಶಗಳ ಬಳಕೆದಾರರಿಗೆ ವಿಸ್ತರಿಸಲಾಗುತ್ತಿದ್ದು, ನಿಮ್ಮ ಅಕೌಂಟ್‌ಗೆ ಲಭ್ಯವಾದ ತಕ್ಷಣ ವಾಟ್ಸಾಪ್ ಆ್ಯಪ್ ಒಳಗಡೆಯೇ ನಿಮಗೆ ನೋಟಿಫಿಕೇಶನ್ ಬರಲಿದೆ. ಯೂಸರ್‌ನೇಮ್ ಬಳಸುವುದು ಸಂಪೂರ್ಣವಾಗಿ ಆಯ್ಕೆಯಾಗಿದ್ದು, ಹಳೆಯ ಶೈಲಿಯಲ್ಲೇ ಫೋನ್ ನಂಬರ್ ಬಳಸಿ ಮುಂದುವರಿಯಲು ಇಚ್ಛಿಸುವವರು ಹಾಗೆಯೇ ಬಳಸಬಹುದು.













Click it and Unblock the Notifications