ದೋಸಾ ಅಲ್ಲ, ಲಕ್ಷಣವಾಗಿ ದೋಸೆ ಅನ್ನಿ: ದಾವಣಗೆರೆ ಹೋಟೆಲ್‌ನಲ್ಲಿ ಸೌಟು ಹಿಡಿದ ಆಶಿಕಾಗೆ ಕನ್ನಡಿಗರಿಂದ ಕ್ಲಾಸ್
ಸ್ಯಾಂಡಲ್‌ವುಡ್‌ನ ಕ್ಯೂಟ್ ಗರ್ಲ್ ಆಶಿಕಾ ರಂಗನಾಥ್ (Ashika Ranganath) ಅವರು ಬೆಣ್ಣೆ ನಗರಿ ದಾವಣಗೆರೆಗೆ ಭೇಟಿ ನೀಡಿದ್ದು, ಅಲ್ಲಿನ ಪ್ರಸಿದ್ಧ ಬೆಣ್ಣೆ ದೋಸೆಯ ರುಚಿ ಸವಿದಿದ್ದಾರೆ. ದಾವಣಗೆರೆಗೆ ಹೋದರೆ ಅಲ್ಲಿನ ಖ್ಯಾತ ಬೆಣ್ಣೆ ದೋಸೆ ತಿನ್ನದೇ ಯಾರೂ ವಾಪಸ್ ಬರಲ್ಲ. ಅದೇ ರೀತಿ ಆಶಿಕಾ ಕೂಡ ದೋಸೆ ತಿನ್ನಲು ಹೋಟೆಲ್‌ಗೆ ಭೇಟಿ ನೀಡಿದ್ದಾರೆ. ಆದರೆ, ಈ ಬಾರಿಯ ಅವರ ಭೇಟಿ ಮಾತ್ರ ಅತ್ಯಂತ ವಿಶೇಷವಾಗಿತ್ತು. ಜೊತೆಗೆ ಕನ್ನಡಿಗರನ್ನು ಕೆರಳಿಸುವಂತೆಯೂ ಮಾಡಿದೆ.
ಮಾಸ್ಟರ್‌ಗಾಗಿ ದೋಸೆ ಸುಟ್ಟ ಆಶಿಕಾ
ತಮ್ಮ ದಾವಣಗೆರೆ ಪ್ರವಾಸದ ಕುರಿತು ಪೋಸ್ಟ್ ಹಂಚಿಕೊಂಡಿರುವ ಆಶಿಕಾ ರಂಗನಾಥ್, ಅಲ್ಲಿ ತಮಗಾದ ಒಂದು ಅಪರೂಪದ ಹಾಗೂ ಮರೆಯಲಾಗದ ಅನುಭವವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಸಾಮಾನ್ಯವಾಗಿ ಹೋಟೆಲ್‌ನಲ್ಲಿ ಎಲ್ಲರಿಗೂ ಗರಿಗರಿಯಾದ ಬೆಣ್ಣೆ ದೋಸೆ ಮಾಡಿಕೊಡುವ ದೋಸೆ ಮಾಸ್ಟರ್ ಈ ಬಾರಿ ನಟಿ ಆಶಿಕಾ ರಂಗನಾಥ್ ಅವರಿಗೆ ಒಂದು ಸಿಹಿಯಾದ ಡಿಮ್ಯಾಂಡ್ ಇಟ್ಟಿದ್ದಾರೆ.

ಅದೇನೆಂದರೆ, "ನಾನು ಹೋಟೆಲ್‌ಗೆ ಬಂದವರೆಲ್ಲರಿಗೂ ದೋಸೆ ಮಾಡಿಕೊಡುತ್ತೇನೆ, ಆದರೆ ನೀವು ನನಗಾಗಿ ಒಂದು ದೋಸೆ ಮಾಡಿಕೊಡಬೇಕು" ಎಂದು ಕೇಳಿಕೊಂಡಿದ್ದಾರೆ. ದೋಸೆ ಮಾಸ್ಟರ್ ಅವರ ಈ ಪ್ರೀತಿಯ ಕೋರಿಕೆಗೆ ಸರಿ ಎಂದ ಆಶಿಕಾ, ತಾವೇ ಖುದ್ದಾಗಿ ಹೋಟೆಲ್‌ನ ದೊಡ್ಡ ಹೆಂಚಿನ ಮುಂದೆ ನಿಂತು, ಸೌಟು ಹಿಡಿದು ಅವರಿಗಾಗಿ ಪ್ರೀತಿಯಿಂದ ಬೆಣ್ಣೆ ದೋಸೆ ಸಿದ್ಧಪಡಿಸಿಕೊಟ್ಟಿದ್ದಾರೆ.
"ದಾವಣಗೆರೆಗೆ ಬಂದರೆ ಬೆಣ್ಣೆ ದೋಸೆ ಮಿಸ್ ಮಾಡ್ಬೇಡಿ!"
ಈ ಸುಂದರ ಕ್ಷಣಗಳ ಫೋಟೋ ಹಾಗೂ ನೆನಪನ್ನು ಹಂಚಿಕೊಂಡಿರುವ ಆಶಿಕಾ, "ದಾವಣಗೆರೆಗೆ ಬಂದರೆ ಬೆಣ್ಣೆ ದೋಸೆ ತಿನ್ನುವುದು ಮಸ್ಟ್. ಆದರೆ ಈ ಬಾರಿಯ ಭೇಟಿ ತುಂಬಾನೇ ಸ್ಪೆಷಲ್ ಆಗಿತ್ತು. ಏಕೆಂದರೆ, ಅವರು ಹೋಟೆಲ್‌ನಲ್ಲಿದ್ದ ಎಲ್ಲರಿಗೂ ದೋಸೆ ಮಾಡುತ್ತಿರುವಾಗ, ನನಗಾಗಿ ಅವರು ತಮಗೆ ದೋಸೆ ಮಾಡಿಕೊಡುವಂತೆ ಕೇಳಿಕೊಂಡರು" ಎಂದು ಬರೆದುಕೊಂಡು ಸಂಭ್ರಮಿಸಿದ್ದಾರೆ. ಇದರೊಂದಿಗೆ ಆಶಿಕಾ ಒಂದು ಎಡವಟ್ಟು ಮಾಡಿಕೊಂಡಿದ್ದಾರೆ.
When in davangere..A must visit for benne doseeee ♥️and this time it was special because he wanted me to make dosa for him while he made dosas for everyone ♥️🌻 pic.twitter.com/XBpWb65CQC
— Ashika Ranganath (@AshikaRanganath) June 29, 2026
ಹೋಟೆಲ್ ಕಿಚನ್‌ನಲ್ಲಿ ದೋಸೆ ಸುಟ್ಟ ಸುಂದರ ವಿಡಿಯೋಗೆ ಆಶಿಕಾ ಬರೆದುಕೊಂಡಿರುವ ಕ್ಯಾಪ್ಷನ್ ಈಗ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದು, ನಟಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ವಿಡಿಯೋ ಹಂಚಿಕೊಳ್ಳುವಾಗ ಅವರು "Dosa" (ದೋಸಾ) ಎಂದು ಬರೆದುಕೊಂಡಿದ್ದಾರೆ. ಇದೇ ಈಗ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಕರ್ನಾಟಕದ ಹೆಮ್ಮೆಯ ಆಹಾರವಾದ 'ದೋಸೆ'ಯನ್ನು 'ದೋಸಾ' ಎಂದು ಕರೆಯುವ ಪರಭಾಷಾ ಶೈಲಿಯನ್ನು ಆಶಿಕಾ ಬಳಸಿರುವುದಕ್ಕೆ ನೆಟ್ಟಿಗರು ಕಿಡಿಕಾರಿದ್ದಾರೆ. ಕಮೆಂಟ್ ಬಾಕ್ಸ್‌ನಲ್ಲಿ ಆಶಿಕಾ ಅವರಿಗೆ ಕ್ಲಾಸ್ ತಗೊಂಡಿರುವ ನೆಟ್ಟಿಗರು, "ಅದು ದೋಸಾ ಅಲ್ಲ ತಾಯಿ, ಲಕ್ಷಣವಾಗಿ ದೋಸೆ ಅನ್ನಿ" ಎಂದು ನೇರವಾಗಿಯೇ ಬುದ್ಧಿ ಮಾತು ಹೇಳಿದ್ದಾರೆ.

"ಚೂರು ಬೆಳೆದ ತಕ್ಷಣ ಕನ್ನಡ ಮರೆತರೆ ಹೇಗೆ?"
ಕನ್ನಡ ಚಿತ್ರರಂಗದ ಮೂಲಕವೇ ಗುರುತಿಸಿಕೊಂಡು, ಈಗ ಪರಭಾಷೆಗಳಲ್ಲೂ ಬ್ಯುಸಿಯಾಗಿರುವ ಆಶಿಕಾ ರಂಗನಾಥ್ ಅವರ ಈ ಇಂಗ್ಲಿಷ್ ಧಾಟಿಯ ಉಚ್ಚಾರಣೆಗೆ ಸೋಷಿಯಲ್ ಮೀಡಿಯಾದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ. "ಚೂರು ಬೆಳೆದ ಕೂಡಲೇ ಹೆತ್ತಮ್ಮನಂತಹ ಕನ್ನಡ ಪದಗಳನ್ನೇ ಮರೆತರೆ ಹೇಗೆ ಮೇಡಂ?" ಎಂದು ಮತ್ತೊಬ್ಬರು ತರಾಟೆಗೆ ತೆಗೆದುಕೊಂಡಿದ್ದಾರೆ. ನಮ್ಮ ನೆಲದ ಸೊಗಡಿನ ಭಾಷೆಯನ್ನು ಹೀಗೆ ಅನ್ಯ ಭಾಷೆಯ ಶೈಲಿಯಲ್ಲಿ ಬರೆಯುವುದು ಸರಿಯಲ್ಲ ಎಂದು ಕನ್ನಡಿಗರು ಅಸಮಾಧಾನ ಹೊರಹಾಕಿದ್ದಾರೆ.
"ಮೇಡಂ ನೀವು ಹುಷಾರು, ಬೆಣ್ಣೆ ತರ ಕರಗಿ ಹೋಗ್ತೀರ"
ಇನ್ನು ಕೆಲವರು ಆಶಿಕಾ ಅವರ ಕಾಲೆಳೆಯುವ ಕೆಲಸವನ್ನೂ ಮಾಡಿದ್ದಾರೆ. ದಾವಣಗೆರೆ ಬೆಣ್ಣೆ ದೋಸೆಯ ಹೆಂಚಿನ ಉರಿ ಹಾಗೂ ಅಲ್ಲಿನ ಬೆಣ್ಣೆಯ ಕಂಪು ಎರಡನ್ನೂ ನೋಡಿ ಫಿದಾ ಆಗಿರುವ ಅಭಿಮಾನಿಯೊಬ್ಬರು, "ಮೇಡಂ ನೀವು ಹುಷಾರು, ನೀವು ಕೂಡ ಬೆಣ್ಣೆ ತರಾನೇ ಇದ್ದೀರಿ, ಆ ದೋಸೆ ಹೆಂಚಿನ ಶಾಖಕ್ಕೆ ಎಲ್ಲಾದರೂ ಕರಗಿ ಹೋಗಿಬಿಟ್ಟೀರಿ" ಎಂದು ತಮಾಷೆಯಾಗಿ ಕಮೆಂಟ್ ಮಾಡಿ ಕಾಲೆಳೆದಿದ್ದಾರೆ. ಹೋಟೆಲ್ ಮಾಸ್ಟರ್ ಜೊತೆ ಸಾಮಾನ್ಯರಂತೆ ಬೆರೆತು ದೋಸೆ ಸುಟ್ಟ ಆಶಿಕಾ ಅವರ ಸರಳತೆಗೆ ಮೆಚ್ಚುಗೆ ವ್ಯಕ್ತವಾಗಿದ್ದರೂ, ಅವರು ಬಳಸಿದ ಒಂದೇ ಒಂದು 'ದೋಸಾ' ಎಂಬ ಪದ ಮಾತ್ರ ಈಗ ಕನ್ನಡಿಗರ ಕಣ್ಣು ಕೆಂಪಾಗಿಸಿರುವುದು ಸುಳ್ಳಲ್ಲ.












Click it and Unblock the Notifications