ಕರ್ನಾಟಕದ ಕೈತಪ್ಪಿದ ಭಾರತದ 5ನೇ ತಲೆಮಾರಿನ ಸ್ಟೆಲ್ತ್ ಯುದ್ಧ ವಿಮಾನ ನಿರ್ಮಾಣದ ಅವಕಾಶ!
ಭಾರತದ ಪಾಲಿಗೆ ಒಂದು ದೊಡ್ಡ, ಹೆಮ್ಮೆಯ ಕ್ಷಣ ಎದುರಾಗಿದೆ. ನಮ್ಮ ಸರ್ಕಾರ ಭಾರತವನ್ನು ರಕ್ಷಣಾ ಕ್ಷೇತ್ರದಲ್ಲಿ ಇನ್ನಷ್ಟು ಶಕ್ತಿಶಾಲಿಯಾಗಿಸಲು ಒಂದು ಮಹತ್ವದ ಹೆಜ್ಜೆ ಇಡುತ್ತಿದೆ. ಸದ್ಯದಲ್ಲೇ ಅಡ್ವಾನ್ಸ್ಡ್ ಮಲ್ಟಿರೋಲ್ ಕಾಂಬ್ಯಾಟ್ ಏರ್‌ಕ್ರಾಫ್ಟ್ (ಎಎಂಸಿಎ) ಯೋಜನೆಯಡಿ ಮುಂದಿನ ತಲೆಮಾರಿನ ಯುದ್ಧ ವಿಮಾನಗಳನ್ನು ನಿರ್ಮಿಸಲು ಗುತ್ತಿಗೆಗಳನ್ನು (ಅಧಿಕೃತ ಕೆಲಸದ ಆದೇಶ) ಮೂರು ನಂಬಿಕಸ್ಥ ಖಾಸಗಿ ಕಂಪನಿಗಳಿಗೆ ನೀಡಲಾಗುತ್ತದೆ. ಭಾರತ ಅತ್ಯಂತ ಶಕ್ತಿಶಾಲಿ ದೇಶವನ್ನಾಗಿ ನೋಡುವ ಕನಸು ಕಾಣುತ್ತಿರುವ ಎಲ್ಲ ಭಾರತೀಯರಿಗೂ ಇದೊಂದು ಸಂತೋಷದ ಸಮಾಚಾರವಾಗಿದೆ.
ಈ ಯೋಜನೆಯ ಒಳಹೊರಗನ್ನು ತಿಳಿದವರು ಇದಕ್ಕೆ ಸಂಬಂಧಿಸಿದ ತಾಂತ್ರಿಕ ಮತ್ತು ಕಾನೂನಾತ್ಮಕ ಅಂಶಗಳನ್ನು ಅಂತಿಮಗೊಳಿಸಲಾಗಿದೆ ಎಂದಿದ್ದಾರೆ. ಇದಕ್ಕಾಗಿ ಆಯ್ಕೆಯಾಗಿರುವ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್, ಲಾರ್ಸೆನ್ & ಟೂಬ್ರೊ (ಎಲ್&ಟಿ), ಮತ್ತು ಭಾರತ್ ಫೋರ್ಜ್ ಕಂಪನಿಗಳಿಗೆ ಈ ತಿಂಗಳ ಅಂತ್ಯದಲ್ಲಿ ಗುತ್ತಿಗೆ ಲಭಿಸುವ ನಿರೀಕ್ಷೆಗಳಿವೆ. ಈ ಕಂಪನಿಗಳನ್ನು ಅವುಗಳ ಅಸಾಧಾರಣ ಕೌಶಲ ಮತ್ತು ಕಷ್ಟಕರ ಯೋಜನೆಗಳನ್ನು ನಿರ್ವಹಿಸಿರುವ ದಾಖಲೆಗಳನ್ನು ಆಧರಿಸಿಯೇ ಆಯ್ಕೆ ಮಾಡಿಕೊಳ್ಳಲಾಗಿದೆ. ಹೇಗೆ ನಾವು ನಮ್ಮ ಮನೆಯ ನಿರ್ಮಾಣ ಕೆಲಸಗಳಿಗೆ ಸಂಬಂಧಿಸಿದಂತೆ ಉತ್ತಮ ಬಡಗಿಗಳು, ಯಾಂತ್ರಿಕ ಕೆಲಸಗಾರರನ್ನು ಆರಿಸುತ್ತೇವೋ, ಅದೇ ರೀತಿ ಸರ್ಕಾರವೂ ಸಹ ಈ ಸಮರ್ಥ ಖಾಸಗಿ ಕಂಪನಿಗಳನ್ನು ಆಯ್ಕೆ ಮಾಡಿದೆ. ಈ ಯೋಜನೆ ಕೇವಲ ವಿಮಾನಗಳನ್ನು ನಿರ್ಮಿಸುವುದಕ್ಕೆ ಮಾತ್ರ ಸೀಮಿತವಲ್ಲ. ಇದು ವಾಯು ಸಾಮರ್ಥ್ಯದ ನಿಯಮಗಳನ್ನೇ ಬದಲಿಸಬಲ್ಲ, ಭಾರತದ ಸ್ವಂತ ಐದನೇ ತಲೆಮಾರಿನ ಯುದ್ಧ ವಿಮಾನಗಳನ್ನು ನಿರ್ಮಿಸುವ ಮಹತ್ವದ ಯೋಜನೆಯಾಗಿದೆ.

ಹಳೆಯದಾದ, ಅಷ್ಟೇ ನಿಧಾನವಾದ ಸರ್ಕಾರಿ ಸ್ವಾಮ್ಯದ ವ್ಯವಸ್ಥೆಯಡಿ ಇದನ್ನು ನಿರ್ಮಿಸುವ ಬದಲು, ಸರ್ಕಾರ ವೇಗವಾಗಿ ನಿರ್ಮಾಣ ನಡೆಸಬಲ್ಲ ಖಾಸಗಿ ಸಂಸ್ಥೆಗಳನ್ನು ಜಾಗರೂಕವಾಗಿ ಆರಿಸಿದೆ. ಆಶ್ಚರ್ಯಕರ ನಿರ್ಧಾರವೊಂದರಲ್ಲಿ, ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಕಾರ್ಯಾಚರಿಸುತ್ತಿರುವ ಪ್ರಸಿದ್ಧ ಸರ್ಕಾರಿ ಸ್ವಾಮ್ಯದ ಸಂಸ್ಥೆಯಾದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ಅನ್ನು ಈ ಸ್ಪರ್ಧೆಯಿಂದ ಹೊರಗಿಡಲಾಗಿದೆ. ಎಚ್ಎಎಲ್ ಭಾರತೀಯ ಸೇನಾ ಪಡೆಗಳಿಗೆ ಏರ್‌ಕ್ರಾಫ್ಟ್‌ಗಳನ್ನು ನಿರ್ಮಿಸುವ ಸುದೀರ್ಘ ಇತಿಹಾಸ ಹೊಂದಿದೆ. ಆದರೆ, ತನ್ನ ನಿಧಾನಗತಿಯ ನಿರ್ಣಯಗಳು ಮತ್ತು ಹಳೆಯದಾದ ಕಾರ್ಯಾಚರಣಾ ವಿಧಾನದ ಕಾರಣದಿಂದಲೇ ಎಚ್ಎಎಲ್ ಈ ಅವಕಾಶ ಕಳೆದುಕೊಂಡಿರಬಹುದು ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ. ಏರೋಸ್ಪೇಸ್ ಪ್ರತಿಭೆಗಳ ವಿಚಾರಕ್ಕೆ ಬಂದರೆ ಅತ್ಯಂತ ಶ್ರೀಮಂತವಾಗಿರುವ ಕರ್ನಾಟಕ ಈ ಕ್ಷೇತ್ರದಲ್ಲಿ ನಿಜಕ್ಕೂ ಇನ್ನಷ್ಟು ಬೆಳವಣಿಗೆ ಹೊಂದಬಹುದಿತ್ತು. ಆದರೆ, ಅತಿಯಾದ ಆಡಳಿತಶಾಹಿ ವ್ಯವಸ್ಥೆ ಮತ್ತು ಸೋಮಾರಿತನದ ವಿಧಾನದಿಂದಾಗಿ ಕರ್ನಾಟಕ ಈ ಅವಕಾಶವನ್ನು ಕಳೆದುಕೊಂಡಿದೆ. ನೂತನ ಪರೀಕ್ಷಾ ಕೇಂದ್ರ ಈಗ ಆಂಧ್ರ ಪ್ರದೇಶದ ಪುಟ್ಟಪರ್ತಿಯಲ್ಲಿ ನಿರ್ಮಾಣವಾಗುತ್ತಿದ್ದು, ಕರ್ನಾಟಕ ಪ್ರಬಲ ನೆಲೆ ಹೊಂದಿದ್ದೂ ಹಿಂದುಳಿದಿರುವಾಗ ಇತರ ರಾಜ್ಯಗಳು ಹೇಗೆ ವೇಗವಾಗಿ ಮುಂದಕ್ಕೆ ಸಾಗುತ್ತಿವೆ ಎನ್ನುವುದಕ್ಕೆ ಸಾಕ್ಷಿಯಾಗಿದೆ.
ಈ ಮೂರೂ ಖಾಸಗಿ ಸಂಸ್ಥೆಗಳ ಪೈಕಿ ಯಾರಿಗೆ ಗುತ್ತಿಗೆ ನೀಡಲಾಗುತ್ತದೆ ಎನ್ನುವುದು ಸಂಪೂರ್ಣವಾಗಿ ವಾಣಿಜ್ಯಿಕ ಬಿಡ್ ಮೇಲೇ ಅವಲಂಬಿಸಿದೆ. ಅಂದರೆ, ಯಾರು ಅತ್ಯುತ್ತಮ ಬೆಲೆ ಮತ್ತು ಮೌಲ್ಯ ಒದಗಿಸುತ್ತಾರೋ ಅವರಿಗೆ ಅವಕಾಶ ಲಭಿಸುತ್ತದೆ. ಈ ಸ್ಪರ್ಧೆಯಲ್ಲಿ ಗೆಲುವು ಸಾಧಿಸಿದ ಸಂಸ್ಥೆ ಏರೋನಾಟಿಕಲ್ ಡೆವಲಪ್‌ಮೆಂಟ್ ಏಜೆನ್ಸಿ (ಎಡಿಎ) ಜೊತೆ ಕೈಜೋಡಿಸಿ, ಐದು ಎಎಂಸಿಎ ಮಾದರಿಗಳನ್ನು (ಪ್ರೋಟೋಟೈಪ್) ನಿರ್ಮಿಸಲಿದೆ. ಪ್ರೊಟೋಟೈಪ್ ಎಂದರೇನು? ಸರಳವಾಗಿ ಹೇಳುವುದಾದರೆ ಇವು ಪರೀಕ್ಷಾ ಮಾದರಿಗಳಿದ್ದಂತೆ. ಹೇಗೆ ನೂತನ ಬೈಕ್ ಅಥವಾ ಕಾರುಗಳ ಸಂಪೂರ್ಣ ಉತ್ಪಾದನೆ ಆರಂಭಗೊಳ್ಳುವ ಮುನ್ನ ಪರೀಕ್ಷೆ ನಡೆಸಲಾಗುತ್ತದೋ, ಹಾಗೇ ಈ ಐದು ಯುದ್ಧ ವಿಮಾನಗಳನ್ನು ಆಗಸದಲ್ಲಿ ಕೂಲಂಕಷವಾಗಿ ಪರಿಶೀಲಿಸಲಾಗುತ್ತದೆ.
ನೂತನ ಘಟಕ ಮುಂದಿನ ಒಂದು ವರ್ಷದೊಳಗೆ ಸಿದ್ಧವಾಗುವ ನಿರೀಕ್ಷೆಗಳಿವೆ. 2032ಕ್ಕೂ ಮುನ್ನ ಪ್ರೊಟೊಟೈಪ್‌ಗಳನ್ನು ಸಿದ್ಧಪಡಿಸಿ, ಅವುಗಳ ಹಾರಾಟ ನಡೆಸುವ ಗುರಿ ಹಾಕಿಕೊಳ್ಳಲಾಗಿದೆ. ಇದೇ ಘಟಕದಲ್ಲಿ ಘಾತಕ್ ಯೋಜನೆಯಡಿ ಮಾನವ ರಹಿತ ಕಾಂಬ್ಯಾಟ್ ಏರ್‌ಕ್ರಾಫ್ಟ್‌ಗಳನ್ನೂ ಅಭಿವೃದ್ಧಿ ಪಡಿಸಲಾಗುತ್ತದೆ. ಘಾತಕ್ ಯೋಜನೆಗೆ ರಕ್ಷಣಾ ಸಚಿವಾಲಯ ಇತ್ತೀಚೆಗೆ ಅನುಮೋದನೆ ನೀಡಿದೆ. ಎಎಂಸಿಎ ಮ್ಯಾನ್ಡ್ - ಅನ್‌ಮ್ಯಾನ್ಡ್ (ಮಾನವ ಸಹಿತ ಮತ್ತು ಮಾನವ ರಹಿತ) ಟೀಮಿಂಗ್ (ಎಂಯುಎಂ-ಟಿ) ಸಾಮರ್ಥ್ಯ ಹೊಂದಿರುವುದರಿಂದ, ಎಎಂಸಿಎ ಮತ್ತು ಅನ್‌ಮ್ಯಾನ್ಡ್ ಕಾಂಬ್ಯಾಟ್ ಏರ್‌ಕ್ರಾಫ್ಟ್ ನಡುವಿನ ಸಂಬಂಧ ಮುಖ್ಯವಾಗುತ್ತದೆ. ಎಂಯುಎಂ-ಟಿ ವ್ಯವಸ್ಥೆ ನೈಜ ಯುದ್ಧದ ಸನ್ನಿವೇಶದಲ್ಲಿ ಯುದ್ಧ ವಿಮಾನ ಡ್ರೋನ್‌ಗಳ ಜೊತೆ ನಿಕಟವಾಗಿ ಕಾರ್ಯಾಚರಿಸಲು ಅನುಕೂಲ ಕಲ್ಪಿಸುತ್ತದೆ.
ಒಂದು ಬಾರಿ ಪ್ರೊಟೊಟೈಪ್‌ಗಳು ತಮ್ಮ ಸಾಮರ್ಥ್ಯ ಸಾಬೀತುಪಡಿಸಿದರೆ, ಭಾರತೀಯ ವಾಯು ಸೇನೆ ದೊಡ್ಡ ಪ್ರಮಾಣದಲ್ಲಿ ಈ ವಿಮಾನಗಳನ್ನು ಖರೀದಿಸಲು ಆದೇಶ ಸಲ್ಲಿಸಲಿದೆ. ಈ ನಂತರದ ಹಂತದ ಗುತ್ತಿಗೆ ಹೆಚ್ಚಿನ ಕಂಪನಿಗಳಿಗೆ ಮುಕ್ತವಾಗಲಿದ್ದು, ಎಚ್ಎಎಲ್ ಸಹ ಅವುಗಳೊಡನೆ ಸ್ಪರ್ಧಿಸಬಹುದು. ಆದರೆ, ಈ ಮೂಲ ಮಾದರಿಯನ್ನು ನಿರ್ಮಿಸುವ ಕಂಪನಿಗೆ ವಿಮಾನದ ಒಳಹೊರಗು ಸ್ಪಷ್ಟವಾಗಿ ತಿಳಿದಿರುವುದರಿಂದ, ಸಹಜವಾಗಿಯೇ ಅದಕ್ಕೆ ಹೆಚ್ಚಿನ ಅನುಕೂಲತೆ ಇರಲಿದೆ.
ಪ್ರೊಟೊಟೈಪ್ ನಿರ್ಮಾಣದ ಹಂತಕ್ಕಾಗಿಯೇ ರಕ್ಷಣಾ ಸಚಿವಾಲಯ ಅಂದಾಜು 15,000 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದೆ. ಒಂದು ಬಾರಿ ವಿಮಾನ ತನ್ನ ಸಾಮರ್ಥ್ಯ ಮತ್ತು ಮೌಲ್ಯವನ್ನು ಸಾಬೀತುಪಡಿಸಿದರೆ, ಅಂತಿಮ ಖರೀದಿ ಆದೇಶ ಎಷ್ಟೋ ಪಟ್ಟು ಹೆಚ್ಚಿನ ಮೌಲ್ಯ ಹೊಂದಿರಲಿದೆ. ವರದಿಗಳ ಪ್ರಕಾರ, ವಾಯುಪಡೆ ಮೊದಲ ಹಂತದಲ್ಲೇ 120 ಯುದ್ಧ ವಿಮಾನಗಳ ಖರೀದಿಗೆ ಆದೇಶ ಸಲ್ಲಿಸಲಿದ್ದು, 2035ರ ವೇಳೆಗೆ ಅವುಗಳ ಪೂರೈಕೆ ನೆರವೇರಲಿದೆ. 2030ರ ದಶಕದ ಮಧ್ಯ ಭಾಗದಿಂದ, ಈ ವಿಮಾನ ಭಾರತೀಯ ಆಗಸಗಳ ಪ್ರಮುಖ ರಕ್ಷಕ ಎನಿಸಲಿದೆ.
ಎಎಂಸಿಎಯನ್ನು ಇಷ್ಟೊಂದು ವಿಶೇಷವಾಗಿಸಿರುವುದು ಏನು? ಸರಳ ಪದಗಳಲ್ಲಿ ಹೇಳುವುದಾದರೆ ಅದರ ಸ್ಟೆಲ್ತ್ ಸಾಮರ್ಥ್ಯ. ಹಾಗೆಂದರೇನು? ಇದು ಶತ್ರುಗಳ ರೇಡಾರ್ ಕಣ್ಣಿಗೆ ಬೀಳದಂತೆ ಬಚ್ಚಿಡುವ ಸಾಮರ್ಥ್ಯವಾಗಿದ್ದು, ಯುದ್ಧ ವಿಮಾನ ಶತ್ರುಗಳಿಗೆ ಬಹುತೇಕ ಅಗೋಚರವಾಗಿರುತ್ತದೆ. ಇನ್ನು ಕೃತಕ ಬುದ್ಧಿಮತ್ತೆ (ಎಐ) ಕಠಿಣ ಸಂದರ್ಭದಲ್ಲಿ ಕ್ಷಿಪ್ರ ನಿರ್ಧಾರಗಳನ್ನು ಕೈಗೊಳ್ಳಲು ಪೈಲಟ್‌ಗೆ ನೆರವಾಗುತ್ತದೆ. ದೀರ್ಘ ವ್ಯಾಪ್ತಿಯ ದಾಳಿ ಸಾಮರ್ಥ್ಯ ಸಾಕಷ್ಟು ದೂರದಿಂದಲೇ ಗುರಿಯತ್ತ ದಾಳಿ ನಡೆಸಲು ಅನುಕೂಲಕರವಾಗಿದ್ದು, ನಮ್ಮ ಪೈಲಟ್ ಅನ್ನು ಸುರಕ್ಷಿತವಾಗಿಡುತ್ತದೆ. ಇನ್ನು ಯುದ್ಧ ವಿಮಾನಗಳು ಡ್ರೋನ್‌ಗಳೊಡನೆ ಸೇರಿಕೊಂಡು ಕಾರ್ಯಾಚರಿಸುವುದು ಭವಿಷ್ಯದ ಸ್ಮಾರ್ಟ್ ಯುದ್ಧದ ಭಾಗವಾಗಿರಲಿದೆ. ಇದರ ಪರಿಣಾಮವಾಗಿ, ನಮ್ಮ ವಾಯು ಯೋಧರಿಗೆ ದೇಶದ ಗಡಿಗಳನ್ನು ಕಾಯಲು ಹೆಚ್ಚು ಸುರಕ್ಷಿತವಾದ, ಸ್ಮಾರ್ಟ್ ಆದ, ಮತ್ತು ಶಕ್ತಿಶಾಲಿಯಾದ ಯಂತ್ರಗಳು ಲಭಿಸಲಿವೆ.
ಭಾರತದ ಖಾಸಗಿ ಉದ್ಯಮ ವಲಯಕ್ಕೆ ಇದು ನಿಜಕ್ಕೂ ಹೆಮ್ಮೆಯ ಕ್ಷಣ. ಹಲವಾರು ದಶಕಗಳ ಕಾಲ, ರಕ್ಷಣಾ ಕಾರ್ಯಗಳು ಬಹುತೇಕ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಕೈಯಲ್ಲೇ ಇದ್ದವು. ಟಾಟಾ, ಎಲ್&ಟಿ, ಮತ್ತು ಭಾರತ್ ಫೋರ್ಜ್ ರೀತಿಯ ಕಂಪನಿಗಳನ್ನು ನಂಬುವುದರಿಂದ, ಭಾರತ ತನ್ನ ಖಾಸಗಿ ವಲಯದ ಮೇಲೆ ವಿಶ್ವಾಸ ಇರಿಸಿದೆ ಎನ್ನುವುದು ಸಾಬೀತಾಗಿ, ರಕ್ಷಣಾ ವಲಯಕ್ಕೆ ಹೊಸ ಶಕ್ತಿ ಮತ್ತು ಜಾಗತಿಕ ಗುಣಮಟ್ಟವೂ ಲಭಿಸುತ್ತದೆ.
ಆದರೆ, ಕರ್ನಾಟಕದ ಪಾಲಿಗಂತೂ ಇದು ಬಹುದೊಡ್ಡ ಎಚ್ಚರಿಕೆಯ ಕರೆ. ಬೆಂಗಳೂರಿನ ಸುತ್ತಮುತ್ತಲೂ ಅತ್ಯಂತ ಸಮರ್ಥ ಏರೋಸ್ಪೇಸ್ ವ್ಯವಸ್ಥೆ ಇದ್ದರೂ, ಒಂದಷ್ಟು ಅನನುಕೂಲತೆಗಳು, ಸಮಸ್ಯೆಗಳು ಹೊಸ ಯೋಜನೆಗಳನ್ನು ಬೇರೆ ರಾಜ್ಯಗಳತ್ತ ತಳ್ಳುತ್ತಿವೆ. ಸ್ಥಳೀಯ ಮಾಧ್ಯಮಗಳಂತೂ ಡಿ ಕೆ ಶಿವಕುಮಾರ್ - ಸಿದ್ದರಾಮಯ್ಯನವರ ಸುತ್ತಲಿನ ರಾಜಕಾರಣದ ಸುದ್ದಿಯತ್ತಲೇ ಗಮನ ನೆಟ್ಟಿದ್ದು, ಪ್ರಮುಖ ರಾಷ್ಟ್ರೀಯ ವಿಚಾರಗಳನ್ನು ಮರೆತುಬಿಟ್ಟಿವೆ. ಕರ್ನಾಟಕ ತಕ್ಷಣವೇ ಎಚ್ಚರಗೊಂಡು, ಕ್ರಮ ಕೈಗೊಂಡು, ವಿಳಂಬಗಳನ್ನು ತಡೆಗಟ್ಟಿ, ವೇಗವಾದ ಮತ್ತು ಸ್ಪರ್ಧಾತ್ಮಕ ವ್ಯವಸ್ಥೆಯನ್ನು ನಿರ್ಮಿಸಬೇಕು.
ಸಾಮಾನ್ಯ ಭಾರತೀಯರಿಗೆ ಎಎಂಸಿಎ ಯೋಜನೆ ಉದ್ಯೋಗಗಳು, ತಂತ್ರಜ್ಞಾನದ ಪ್ರಗತಿ, ಮತ್ತು ಪ್ರಬಲ ಭದ್ರತೆ ಕಲ್ಪಿಸಲಿದೆ. ನಮ್ಮದೇ ಆದ ಯುದ್ಧ ವಿಮಾನಗಳನ್ನು ನಿರ್ಮಿಸುವುದರಿಂದ ವಿದೇಶಿ ಅವಲಂಬನೆಯೂ ಕಡಿಮೆಯಾಗಿ, ಹಣದ ಉಳಿತಾಯವಾಗುತ್ತದೆ. ಇದು ಆತ್ಮನಿರ್ಭರ ಭಾರತಕ್ಕೆ ನೈಜ ಯಶಸ್ಸಾಗಲಿದೆ. 2032ರಲ್ಲಿ ಮೂಲ ಮಾದರಿಗಳು ಹಾರಾಟ ನಡೆಸಿ, 2035ರ ವೇಳೆಗೆ ಯುದ್ಧ ವಿಮಾನಗಳು ಪೂರೈಕೆಯಾಗುತ್ತವೆ ಎನ್ನಲಾಗಿದ್ದು, ಯೋಜನೆಯ ಮಾರ್ಗಸೂಚಿ ಸ್ಪಷ್ಟವಾಗಿದೆ. ಭಾರತದ ಈ ಮಹತ್ವದ ಯಾನವನ್ನು ನಾವು ಹೆಮ್ಮೆ ಮತ್ತು ನಿರೀಕ್ಷೆಗಳಿಂದ ವೀಕ್ಷಿಸೋಣ.
(ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: [email protected]).
ಗಿರೀಶ್ ಲಿಂಗಣ್ಣ (ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)














Click it and Unblock the Notifications