Karnataka Weather: ಹವಾಮಾನ ವೈಪರೀತ್ಯ, ಉತ್ತರ ಕರ್ನಾಟಕಕ್ಕೆ ಭರ್ಜರಿ ಮಳೆ ಎಚ್ಚರಿಕೆ, ಕರಾವಳಿಗೆ ರೆಡ್ ಅಲರ್ಟ್
ಬೆಂಗಳೂರು: ರಾಜ್ಯದಲ್ಲಿ ದುರ್ಬಲಗೊಂಡಿದ್ದ ಮುಂಗಾರು ಮಳೆ ಇದೀಗ ಉತ್ತರ ಕರ್ನಾಟಕದ ವಿವಿಧೆಡೆ ಅಲ್ಲಲ್ಲಿ ಬಿರುಸುಗೊಂಡಿದೆ. ತೀವ್ರ ಕೊರತೆ ಸೃಷ್ಟಿಸಿದ್ದ ಮಳೆ ಉತ್ತರ ಒಳನಾಡಿನ ಅನೇಕ ಜಿಲ್ಲೆಗಳಲ್ಲಿ ಜೋರಾಗಿ ಸುರಿದಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಚಂಡಮಾರುತ ಪ್ರಸರಣೆ ಹಿನ್ನೆಲೆಯಲ್ಲಿ ಮುಂದಿನ 6 ದಿನ ಇದೇ ರೀತಿ ಹಲವು ಜಿಲ್ಲೆಗಳಲ್ಲಿ ಗುಡುಗು ಮಿಂಚು ಸಹಿತ ಭಾರೀ ಮಳೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ರಾಜ್ಯ ಕೇಂದ್ರದ ವಿಜ್ಞಾನಿಗಳು ಮುನ್ಸೂಚನೆ ನೀಡಿದ್ದಾರೆ.
ಕರಾವಳಿ ಕರ್ನಾಟಕ ಭಾಗಕ್ಕೆ ಮಾತ್ರವೇ ಸೀಮಿತವಾಗಿದ್ದ ಮುಂಗಾರು ಮಳೆ ಜುಲೈ ಮೊದಲ ವಾರದಲ್ಲಿ ಮಲೆನಾಡು, ಒಳನಾಡು ಭಾಗಗಳಿಗೂ ವಿಸ್ತರಿಸಿದೆ. ಇದರಿಂದ ಬಿಸಿಲಿಗೆ ಒಣಗಿರುವ ಮುಂಗಾರು ಬೆಳೆಗಳಿಗೆ ಜೀವ ಬಂದಂತಾಗಿದೆ. ಬೆಳಗಾವಿ, ಧಾರವಾಡ, ಹಾವೇರಿ, ದಕ್ಷಿಣ ಕನ್ನಡ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಶನಿವಾರ ವ್ಯಾಪಕ ಮಳೆ ಆಗಿದೆ. ಇದರೊಂದಿಗೆ ಒಳನಾಡು ಜಿಲ್ಲೆಗಳಲ್ಲು ಮುಂಗಾರು ಸಕ್ರಿಯಗೊಂಡಿದೆ.

ರೆಡ್ ಅಲರ್ಟ್ ಜಿಲ್ಲೆಗಳಿವು
ಜುಲೈ 5 ಮತ್ತು 6 ರಂದು ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಿಗೆ 115ರಿಂದ 200ಮಿಲಿ ಮೀಟರ್‌ವರೆಗೆ ಮಳೆ ಆಗಲಿದ್ದು, ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ತದನಂತರ ಮೂರು ದಿನ (ಜುಲೈ 9ರವರೆಗೆ) ಕನಿಷ್ಠ 200 ಮಿಲಿ ಮೀಟರ್‌ಗಿಂತ ಅತ್ಯಧಿಕ ಪ್ರಮಾಣದಲ್ಲಿ ಗುಡುಗು ಮಿಂಚು ಸಹಿತ ಭಾರೀ ಮಳೆ ಆಗುವ ಸಾಧ್ಯತೆ ಹಿನ್ನೆಲ್ಲೆಯಲ್ಲಿ ಇದೇ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೊಷಿಸಲಾಗಿದೆ. ಧಾರಾಕಾರ ಮಳೆ ಕಾರಣಕ್ಕೆ ಕರಾವಳಿ ಜಿಲ್ಲೆಗಳ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಆಗುವ ಸಾಧ್ಯತೆ ಇದೆ.
ಉತ್ತರ ಒಳನಾಡಿಗೆ ಕೊನೆಗೂ ಬಂತು ಮುಂಗಾರು
ಹಾವೇರಿ ಜಿಲ್ಲೆ ವ್ಯಾಪ್ತಿಯಲ್ಲಿ ತೀವ್ರ ಮಳೆ ಕೊರತೆಯಿಂದಾಗಿ ಅಪಾರ ಬೆಳೆ ನಾಶವಾಗುವ ಹಂತದಲ್ಲಿದ್ದವು. ಹಾವೇರಿ ಶಾಸಕರು, ಸ್ಥಳೀಯ ರಾಜಕೀಯ ನಾಯಕರು ಮೋಡ ಬಿತ್ತನೆಗೆ ತೀರ್ಮಾನಿಸಿದ ಮಾರನೇ ದಿನವೇ ಅಲ್ಲಲ್ಲಿ ಜೋರು ಮಳೆ ದಾಖಲಾಗಿದೆ. ಕಳೆದ ಮೂರು-ನಾಲ್ಕು ವಾರಗಳಿಂದ ತೀವ್ರ ಬಿಸಿಲು, ಆಗಾಗ ಮಬ್ಬು ವಾತಾವರಣ ಕಂಡು ಬಂದರೂ ಮಳೆ ಮಾತ್ರ ಆಗಿರಲಿಲ್ಲ. ಮುಂಗಾರು ಒಂದರಿಂದ ಒಂದೂವರೆ ತಿಂಗಳ ಹಿಂದೆ ಬಿತ್ತನೆ ಮಾಡಿದ್ದ ರೈತರ ನಿದ್ದೆಗೆಡಿಸಿತ್ತು. ಮಳೆಯಾಶ್ರಿತ ರೈತರ ಹೊಲಗಳಲ್ಲಿ ಬೆಳೆ ಒಣಗಿ ಹೋಗುವ ಹಂತದಲ್ಲಿದ್ದವು. ಕೊನೆ ಘಳಿಗೆಯಲ್ಲಿ (ಶನಿವಾರ) ಹಾವೇರಿ, ಗದಗ, ಧಾರವಾಡ ಸೇರಿದಂತೆ ವಿವಿಧೆಡೆ ಮುಂಗಾರು ಮಳೆ ದಾಖಲಾಗಿದೆ.
ಬೆಳಗಾವಿ, ಬೀದರ್, ಧಾರವಾಡದಲ್ಲಿ ಇಂದು ಗುಡುಗು ಸಹಿತ ಭಾರೀ ಮಳೆ ಆಗಲಿದ್ದು 'ಆರೆಂಜ್ ಅಲರ್ಟ್' ನೀಡಲಾಗಿದೆ. ಈ ಮೂರು ಜಿಲ್ಲೆಗಳು ಸೇರಿದಂತೆ ಗದಗ, ಹಾವೇರಿ, ಕಲಬುರಗಿ ಜಿಲ್ಲೆಗಳಲ್ಲಿ ಮುಂದಿನ 5 ದಿನ ಸಾಧಾರಣದಿಂದ ಭಾರೀ ಮಳೆ ಆಗಲಿದ್ದು, ಯೆಲ್ಲೋ ಅಲರ್ಟ್ ನೀಡಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮಲೆನಾಡಿಗೂ ಭಾರೀ ಮಳೆ ಎಚ್ಚರಿಕೆ
ಮಲೆನಾಡು ಭಾಗವಾದ ಚಿಕ್ಕಮಗಳೂರು, ಕೊಡಗು, ಹಾಸನ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಜುಲೈ 09ರವರೆಗೆ ಧಾರಾಕಾರ ಮಳೆ ಆಗುವ ಸಂಭವವಿದ್ದು, 'ಆರೆಂಜ್ ಅಲರ್ಟ್' ಘೋಷಿಸಲಾಗಿದೆ. ಬೆಂಗಳೂರಿನಲ್ಲಿ ಇದೇ ರೀತಿ ತಂಪು ವಾತಾವರಣ ದಿನವಿಡೀ ಮುಂದುವರಿಯುವ ಸಾಧ್ಯತೆ ಇದೆ. ಈ ಭಾಗದಲ್ಲಿ ಜೋರು ಮಳೆ ಮುನ್ಸೂಚನೆ ಸದ್ಯಕ್ಕಿಲ್ಲ ಎಂದು ಐಎಂಡಿ ತಿಳಿಸಿದೆ.
ಬಂಗಾಳಕೊಲ್ಲಿ ಹಾಗೂ ಅರಬ್ಬಿ ಸಮುದ್ರ ಭಾಗದಲ್ಲಿ ಉಂಟಾಗಿರುವ ಹವಾಮಾನ ಬದಲಾವಣೆಗಳ ಹಿನ್ನೆಲೆಯಲ್ಲಿ ಮುಂಗಾರು ಚುರುಕುಕೊಂಡಿದೆ. ಸಮುದ್ರ ಭಾಗದಲ್ಲಿ ಚಂಡಮಾರುತ ಪರಿಚಲನೆ ಮುಂದುವರಿದಿದೆ. ಪ್ರತ್ಯೇಕ ಕಡೆಗಳಲ್ಲಿ ಟ್ರಫ್ ಸೃಷ್ಟಿಯಾಗಿದ್ದು, ಇದು ಬಿರುಗಾಳಿ ಮಳೆಗೆ ಕಾರಣವಾಗಿದೆ.













Click it and Unblock the Notifications