ವೈಭವ್ ಸೂರ್ಯವಂಶಿಗಾಗಿ ಟಿ20 ವಿಶ್ವಕಪ್ ಹೀರೋ ಕೈಬಿಟ್ಟಿದ್ದು ಸರಿಯಲ್ಲ: ಭುಗಿಲೆದ್ದ ಆಕ್ರೋಶ
Vaibhav Sooryavanshi: ಮ್ಯಾಂಚೆಸ್ಟರ್‌ನಲ್ಲಿ ಶನಿವಾರ (ಜುಲೈ 04) ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಪ್ಲೇಯಿಂಗ್ 11ನಿಂದ ಸಂಜು ಸ್ಯಾಮ್ಸನ್ ಅವರನ್ನು ಕೈಬಿಡಲಾಗಿದೆ. ಇವರ ಬದಲಿಗೆ 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿಗೆ ಅವಕಾಶ ನೀಡಲಾಗಿದೆ. ಇದು ಇದೀಗ ತೀವ್ರ ವಿವಾದಕ್ಕೆ ಕಾರಣವಾಗಿದೆ.
ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಆಟಗಾರನನ್ನು ಇಷ್ಟು ಸುಲಭವಾಗಿ ತಂಡದಿಂದ ಹೊರಹಾಕಿರುವುದು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಸಂಜು ಸ್ಯಾಮ್ಸನ್ ಬದಲಿಗೆ ಬೇರೆಯವರನ್ನು ಬೆಂಚ್ ಕಾಯಿಸಬಹುದಾಗಿತ್ತು ಎನ್ನುವ ಮಾತುಗಳು ಕೇಳಿಬರುತ್ತಿವೆ.

ಸಂಜು ಸ್ಯಾಮ್ಸನ್ ಔಟ್, ಅಭಿಮಾನಿಗಳ ಆಕ್ರೋಶ
ಸಂಜು ಸ್ಯಾಮ್ಸನ್ ಅವರನ್ನು ದಿಢೀರ್ ಆಗಿ ತಂಡದಿಂದ ಕೈಬಿಟ್ಟಿರುವುದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಭಾರತ ತಂಡದ ಮ್ಯಾನೇಜ್‌ಮೆಂಟ್‌ನ ಈ ನಿರ್ಧಾರದ ವಿರುದ್ಧ ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಹೊರಹಾಕಿದ್ದಾರೆ. 'ಸಂಜು ಸ್ಯಾಮ್ಸನ್‌ಗೆ ಅರ್ಹತೆಗೆ ತಕ್ಕ ಗೌರವ ಸಿಗುತ್ತಿಲ್ಲ, ಅವರ ವಿಷಯದಲ್ಲಿ ಬಿಸಿಸಿಐ ಇಷ್ಟು ಕೀಳುಮಟ್ಟಕ್ಕೆ ಇಳಿಯಬಾರದಿತ್ತು,' ಬೇಸರ ವ್ಯಕ್ತಪಡಿಸಿದ್ದಾರೆ.
'ವಿಶ್ವಕಪ್ ಹೀರೋ ಬೆಂಚ್ ಕಾಯುವುದು ಸರಿಯೇ?'
ಕಳೆದ ಕೆಲವು ಪಂದ್ಯಗಳಲ್ಲಿ ಅವರು ರನ್ ಗಳಿಸಲು ಪರದಾಡಿದ್ದು ನಿಜ. ಆದರೂ ಕೇವಲ ಒಂದೆರಡು ಪಂದ್ಯಗಳ ವೈಫಲ್ಯಕ್ಕಾಗಿ ವಿಶ್ವಕಪ್ ವಿಜೇತ ಹೀರೊ ಒಬ್ಬನನ್ನು ಹೀಗೆ ಬೆಂಚ್ ಕಾಯಿಸುವುದು ಎಷ್ಟು ಸರಿ ಎಂಬ ಪ್ರಶ್ನೆ ಎದ್ದಿದೆ. ಯುವ ಪ್ರತಿಭೆಗಳಿಗೆ ಅವಕಾಶ ನೀಡಬೇಕು ಎನ್ನುವ ಹಠಕ್ಕೆ ಬಿದ್ದು, ಸ್ಥಿರ ಪ್ರದರ್ಶನ ನೀಡಬಲ್ಲ ಹಿರಿಯ ಆಟಗಾರನ ವೃತ್ತಿಜೀವನದ ಜೊತೆ ಚೆಲ್ಲಾಟವಾಡಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ.
ವಿಶ್ವಕಪ್ ಹೀರೊ ಸಂಜುಗೆ ಸಿಗದ ನಿರಂತರ ಬೆಂಬಲ
'ಭಾರತ ತಂಡವು ಟಿ20 ವಿಶ್ವಕಪ್ ಗೆಲ್ಲುವಲ್ಲಿ ಸಂಜು ಸ್ಯಾಮ್ಸನ್ ಅವರ ಆಕ್ರಮಣಕಾರಿ ಆಟವೇ ಪ್ರಮುಖ ಕಾರಣ. ಮಧ್ಯಮ ಕ್ರಮಾಂಕದಲ್ಲಿ ಬಂದು ಸ್ಫೋಟಕ ಬ್ಯಾಟಿಂಗ್ ನಡೆಸುವ ಮೂಲಕ ತಂಡಕ್ಕೆ ಹಲವು ಬಾರಿ ಆಸರೆಯಾಗಿದ್ದರು. ಆದರೆ ಭಾರತೀಯ ಕ್ರಿಕೆಟ್‌ನಲ್ಲಿ ಸಂಜು ಅವರ ಪಯಣ ಯಾವಾಗಲೂ ಅನಿಶ್ಚಿತತೆಯಿಂದಲೇ ಕೂಡಿದೆ. ಅವರು ಶತಕ ಬಾರಿಸಿದಾಗಲೂ ಮುಂದಿನ ಸರಣಿಯಲ್ಲಿ ತಂಡದಿಂದ ಕೈಬಿಟ್ಟ ಇತಿಹಾಸ ಇದೆ. ಈಗ 15 ವರ್ಷದ ವೈಭವ್ ಸೂರ್ಯವಂಶಿ ಅವರ ಪದಾರ್ಪಣೆಗೆ ಹಾದಿ ಮಾಡಿಕೊಡಲು ಸಂಜು ಅವರನ್ನೇ ಬಲಿಪಶು ಮಾಡಲಾಗಿದೆ,' ಎಂದು ನೆಟ್ಟಿಗರು ಗಂಭೀರ ಆರೋಪ ಮಾಡುತ್ತಿದ್ದಾರೆ.
ಮ್ಯಾನೇಜ್‌ಮೆಂಟ್ ನಡೆ ವಿರುದ್ಧ ಅಭಿಮಾನಿಗಳ ಆಕ್ರೋಶ
15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ತಮ್ಮ ಚೊಚ್ಚಲ ಪಂದ್ಯದಲ್ಲಿ 14 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ. ತಂಡಕ್ಕೆ ಯುವ ಆಟಗಾರರ ಅಗತ್ಯವಿದೆ ಎಂಬುದನ್ನು ಒಪ್ಪಿಕೊಳ್ಳಬೇಕು. ಆದರೂ ಸಂಜು ಸ್ಯಾಮ್ಸನ್ ಅವರಂತಹ ಅನುಭವಿ ಆಟಗಾರನಿಗೆ ತಂಡದ ಒಳಗೆ ಮತ್ತು ಹೊರಗೆ ಇರುವ ಅಸ್ಥಿರ ವಾತಾವರಣ ಅವರ ಆತ್ಮವಿಶ್ವಾಸವನ್ನು ಕುಗ್ಗಿಸುತ್ತದೆ ಎಂದು ಹಲವರು ಆತಂಕ ವ್ಯಕ್ತಪಡಿಸಿದ್ದಾರೆ.
ಬಿಸಿಸಿಐಗೆ ದೊಡ್ಡ ತಲೆನೋವು
ಯುವ ಆಟಗಾರರನ್ನು ಬೆಳೆಸುವ ಆತುರದಲ್ಲಿ ತಂಡಕ್ಕಾಗಿ ಸದಾ ಶ್ರಮಿಸಿದ ಆಟಗಾರರಿಗೆ ಅನ್ಯಾಯವಾಗಬಾರದು. ಮುಂಬರುವ ಪಂದ್ಯಗಳಲ್ಲಾದರೂ ಸಂಜು ಸ್ಯಾಮ್ಸನ್‌ಗೆ ಸೂಕ್ತ ಅವಕಾಶ ಸಿಗಲಿದೆಯೇ ಅಥವಾ ಅವರು ಮತ್ತೊಮ್ಮೆ ಕೇವಲ ಬ್ಯಾಕ್-ಅಪ್ ಆಟಗಾರನಾಗಿ ಉಳಿಯಲಿದ್ದಾರೆಯೇ ಎಂಬುದನ್ನು ಬಿಸಿಸಿಐ ಮ್ಯಾನೇಜ್‌ಮೆಂಟ್ ಸ್ಪಷ್ಟಪಡಿಸಬೇಕಿದೆ. ಒಟ್ಟಿನಲ್ಲಿ ಇದೀಗ ಹೊಸ ಆಟಗಾರರ ಎಂಟ್ರಿ, ಸ್ಥಾನ ಬದಲಾವಣೆಯೇ ಮ್ಯಾನೇಜ್‌ಮೆಂಟ್‌ಗೆ ದೊಡ್ಡ ತಲೆನೋವಾಗಿದೆ.












Click it and Unblock the Notifications