R Ashwin: 'ಕೇಪ್ ವರ್ಡೆ' ಹೆಸರನ್ನು ನೆನಪಿಟ್ಟುಕೊಳ್ಳಿ, ಮರೆಯಬೇಡಿ: ಆರ್. ಅಶ್ವಿನ್
R Ashwin: ಟೀಮ್ ಇಂಡಿಯಾ ಮಾಜಿ ಕ್ರಿಕೆಟರ್ ರವಿಚಂದ್ರನ್ ಅಶ್ವಿನ್ ಅವರು ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಲಿರುತ್ತಾರೆ. ಇದೀಗ ಫಿಫಾ ವಿಶ್ವಕಪ್ 2026ರ ಟೂರ್ನಿಯಲ್ಲಿ ಮೊದ ಬಾರಿಗೆ ಕಣಕ್ಕಿಳಿದು ಅದ್ಭುತ ಪ್ರದರ್ಶನ ನೀಡಿದ ಕೇಪ್ ವರ್ಡೆ ತಂಡವನ್ನು ಪ್ರಶಂಸಿಸಿದ್ದಾರೆ. ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಅವರು ಮಾಡಿರುವ ಈ ಪೋಸ್ಟ್ ಇದೀಗ ಭಾರಿ ವೈರಲ್ ಆಗಿದೆ.
ಟೂರ್ನಿಯಿಂದ ಹೊರಬಿದ್ದರೂ ಜಗತ್ತಿನಾದ್ಯಂತ ಕೋಟ್ಯಂತರ ಫುಟ್‌ಬಾಲ್ ಅಭಿಮಾನಿಗಳ ಹೃದಯ ಗೆದ್ದಿರುವ ಕೇಪ್ ವರ್ಡೆ ತಂಡದ ಹೋರಾಟದ ಸಾಮರ್ಥ್ಯವನ್ನು ಆರ್. ಅಶ್ವಿನ್ ಅವರು ಕೊಂಡಾಡಿದ್ದಾರೆ. 'ಮುಂದೆ ಏನೇ ಆಗಲಿ.. ಕೇಪ್ ವರ್ಡೆ ಎಂಬ ಹೆಸರನ್ನು ಸದಾ ನೆನಪಿಟ್ಟುಕೊಳ್ಳಿ. ಎಂತಹ ಅದ್ಭುತ ತಂಡ. ಈ ವಿಶ್ವಕಪ್‌ನಲ್ಲಿ ಅವರು ಇದುವರೆಗೆ ನೀಡಿರುವ ಪ್ರದರ್ಶನ ನಿಜಕ್ಕೂ ಅದ್ಭುತವಾಗಿದೆ,' ಎಂದು ಅಶ್ವಿನ್ #FIFAworldcup ಹ್ಯಾಶ್‌ಟ್ಯಾಗ್ ಬಳಸಿ ಟ್ವೀಟ್ ಮಾಡಿ ಗಮನ ಸೆಳೆದಿದ್ದಾರೆ.

ಅರ್ಜೆಂಟೀನಾ ವಿರುದ್ಧ ರೋಚಕ ಹೋರಾಟ
ಲಿಯೋನೆಲ್ ಮೆಸ್ಸಿ ನಾಯಕತ್ವದ ಬಲಿಷ್ಠ ಅರ್ಜೆಂಟೀನಾ ವಿರುದ್ಧದ ನಾಕೌಟ್ ಪಂದ್ಯದಲ್ಲಿ ಕೇಪ್ ವರ್ಡೆ ತಂಡವು ಅದ್ಭುತ ಆಟದ ಮೂಲಕ ಜಗತ್ತನ್ನೇ ಬೆರಗುಗೊಳಿಸಿತು. ಹಾಲಿ ಚಾಂಪಿಯನ್ ಅರ್ಜೆಂಟೀನಾಗೆ ತೀವ್ರ ಪೈಪೋಟಿ ನೀಡಿದ ಈ ಹೊಸ ತಂಡ ಪಂದ್ಯವನ್ನು ಹೆಚ್ಚುವರಿ ಸಮಯದವರೆಗೆ ಕೊಂಡೊಯ್ಯುವಲ್ಲಿ ಯಶಸ್ವಿಯಾಯಿತು. ಆದರೂ 111ನೇ ನಿಮಿಷದಲ್ಲಿ ಬಾರಿಸಿದ ಗೋಲ್‌ನಿಂದಾಗಿ ಕೇಪ್ ವರ್ಡೆ 3-2 ಗೋಲುಗಳ ಅಂತರದಿಂದ ಸೋಲೊಪ್ಪಿಕೊಂಡಿತು.
ವಿಶ್ವಕಪ್‌ನಲ್ಲಿ ಹೊಸ ಇತಿಹಾಸ ಬರೆದ ಪುಟ್ಟ ತಂಡ
ಕೇಪ್ ವರ್ಡೆ ತಂಡದ ಈ ಬಾರಿಯ ವಿಶ್ವಕಪ್ ಪಯಣ ಕೇವಲ ಅದೃಷ್ಟದಿಂದ ಕೂಡಿರಲಿಲ್ಲ. ಅವರ ಕಠಿಣ ಪರಿಶ್ರಮ ಮತ್ತು ಛಲಕ್ಕೆ ಸಾಕ್ಷಿಯಾಗಿತ್ತು. ಲೀಗ್ ಹಂತದಲ್ಲಿ ಯುರೋಪಿಯನ್ ಚಾಂಪಿಯನ್ ಸ್ಪೇನ್ ತಂಡವನ್ನು ಗೋಲು ರಹಿತ ಡ್ರಾಗೆ ತಡೆದಿದ್ದ ಈ ತಂಡ, ಸೌದಿ ಅರೇಬಿಯಾ ಮತ್ತು ಮಾಜಿ ಚಾಂಪಿಯನ್ ಉರುಗ್ವೆ ವಿರುದ್ಧವೂ ಪಾಯಿಂಟ್ಸ್ ಹಂಚಿಕೊಳ್ಳುವ ಮೂಲಕ ತನ್ನ ಚೊಚ್ಚಲ ವಿಶ್ವಕಪ್‌ನಲ್ಲೇ ನಾಕೌಟ್ ಹಂತಕ್ಕೇರಿ ಇತಿಹಾಸ ನಿರ್ಮಿಸಿತ್ತು.
ಅರ್ಜೆಂಟೀನಾ ವಿರುದ್ಧದ ಪಂದ್ಯದಲ್ಲಿ ಲಿಯೋನೆಲ್ ಮೆಸ್ಸಿ ಅದ್ಭುತ ಗೋಲು ಬಾರಿಸಿ ತಂಡಕ್ಕೆ ಆರಂಭಿಕ ಮುನ್ನಡೆ ತಂದುಕೊಟ್ಟಿದ್ದರು. ಆದರೆ ಪಟ್ಟುಬಿಡದ ಕೇಪ್ ವರ್ಡೆ ಪರ ಡೆರಾಯ್ ಡುವಾರ್ಟೆ ಗೋಲು ಬಾರಿಸಿ ಇತಿಹಾಸದಲ್ಲೇ ತನ್ನ ದೇಶದ ಮೊದಲ ನಾಕೌಟ್ ಗೋಲನ್ನು ದಾಖಲಿಸಿದರು.
ಅನುಭವಿ ಗೋಲ್‌ಕೀಪರ್ ವೋಜಿನ್ಹಾ ಅವರ ಅತ್ಯದ್ಭುತ ರಕ್ಷಣೆ ಹಾಗೂ ಸಿಡ್ನಿ ಲೋಪ್ಸ್ ಅವರ ಗೋಲುಗಳ ನೆರವಿನಿಂದ ತಂಡ 2-2 ಸಮಬಲ ಸಾಧಿಸಿತ್ತು. ಕೊನೆಯಲ್ಲಿ ದಿನೇ ಬೋರ್ಗೆಸ್ ಅವರ ದುರದೃಷ್ಟಕರ ಸ್ವಂತ ಗೋಲಿನಿಂದಾಗಿ ಅರ್ಜೆಂಟೀನಾ ಪ್ರೀ-ಕ್ವಾರ್ಟರ್ ಫೈನಲ್ ಪ್ರವೇಶಿಸಿತು. ಸೋತರೂ ವಿಶ್ವದಾದ್ಯಂತ ಕ್ರೀಡಾಭಿಮಾನಿಗಳ ಪ್ರಶಂಸೆಗೆ ಕೇಪ್ ವರ್ಡೆ ಪಾತ್ರವಾಗಿದೆ. ಒಟ್ಟಿನಲ್ಲಿ ಇಷ್ಟು ಚಿಕ್ಕ ರಾಷ್ಟ್ರ ಇದೀಗ ಜಗತ್ತಿನಾದ್ಯಂತ ಸದ್ದು ಮಾಡಿರುವುದೇ ವಿಶೇಷವಾಗಿದೆ.












Click it and Unblock the Notifications