'ಲಕ್ಷ್ಮೀ ಬಾರಮ್ಮ' ಬೆಡಗಿ ತನ್ವಿ ರಾವ್ ಈಗ ಹೊಸ ಸೀರಿಯಲ್‌ನಲ್ಲಿ ನಾಯಕಿ: ಇದೇ ಜುಲೈ 6ರಿಂದ ಪ್ರಸಾರ

ಕಲರ್ಸ್ ಕನ್ನಡ ವಾಹಿನಿಯ ಅತ್ಯಂತ ಜನಪ್ರಿಯ ಧಾರಾವಾಹಿ 'ಲಕ್ಷ್ಮೀ ಬಾರಮ್ಮ' ಮೂಲಕ ಕನ್ನಡಿಗರ ಮನೆಮನಗೆದ್ದಿದ್ದ ನಟಿ ತನ್ವಿ ರಾವ್ (Tanvi Rao) ಈಗ ಹೊಸ ಅವತಾರದಲ್ಲಿ ಕಿರುತೆರೆಗೆ ಮರಳುತ್ತಿದ್ದಾರೆ. ಸದಾ ವಿನೂತನ ಕಥೆಗಳ ಮೂಲಕ ಪ್ರೇಕ್ಷಕರನ್ನು ರಂಜಿಸುವ 'ಉದಯ ಟಿವಿ' (ಸನ್ ಉದಯ) ವಾಹಿನಿಯ ಹೊಚ್ಚಹೊಸ ಮೆಗಾ ಪ್ರೊಡಕ್ಷನ್ 'ಭಾಗ್ಯವಂತರು' ಧಾರಾವಾಹಿಯಲ್ಲಿ ತನ್ವಿ ರಾವ್ ಈಗ ನಾಯಕಿಯಾಗಿ ಅಬ್ಬರಿಸಲು ಸಜ್ಜಾಗಿದ್ದಾರೆ.

ಇತ್ತೀಚೆಗಷ್ಟೇ 'ಮೂಗುತಿ ಮಲ್ಲಿ' ಹಾಗೂ 'ಮಹಾಲಕ್ಷ್ಮೀ ಮದುವೆ'ಯಂತಹ ಸೂಪರ್ ಹಿಟ್ ಸೀರಿಯಲ್‌ಗಳನ್ನು ನೀಡಿ ಸೈ ಎನಿಸಿಕೊಂಡಿರುವ ಉದಯ ಟಿವಿಯಲ್ಲಿ, ಇದೇ ಜುಲೈ 6ರಿಂದ ಸೋಮವಾರದಿಂದ ಶನಿವಾರದವರೆಗೆ ಪ್ರತಿದಿನ ರಾತ್ರಿ 7:30ಕ್ಕೆ ಈ ಹೊಸ ಕಥೆ ಪ್ರಸಾರವಾಗಲಿದೆ.

Tanvi Rao

ತಂದೆಯ ಕನಸು ಹೊತ್ತ 'ಜನನಿ'ಯಾಗಿ ತನ್ವಿ ರಾವ್ ಎಂಟ್ರಿ

ಕಲರ್ಸ್ ಕನ್ನಡದಲ್ಲಿ ಪ್ರಮುಖ ಪಾತ್ರದ ಮೂಲಕ ಸಿನಿರಸಿಕರ ಮನಗೆದ್ದಿದ್ದ ತನ್ವಿ ರಾವ್, ಈ ಧಾರಾವಾಹಿಯಲ್ಲಿ 'ಜನನಿ' ಎಂಬ ವಿಭಿನ್ನ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ. ಕಥೆಯ ಪ್ರಕಾರ ಜನನಿ ತನ್ನ ತಂದೆ ಶ್ಯಾಮಸುಂದರ್ ಅವರ ಮುದ್ದಿನ ಮಗಳು. ತಂದೆಯ ಆಶಯದಂತೆ ಭವಿಷ್ಯದಲ್ಲಿ ದೊಡ್ಡ ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್ (MD) ಆಗಬೇಕೆಂಬ ಮಹತ್ವಾಕಾಂಕ್ಷೆ ಹೊಂದಿರುವ ಹಠಮಾರಿ ವಿದ್ಯಾವಂತೆ.

ದಿಢೀರ್‌ ಅಂತ್ಯಗೊಂಡ ಲಕ್ಷ್ಮೀ ಬಾರಮ್ಮ ಧಾರಾವಾಹಿ: ಕಲಾವಿದರಿಗೆ ಎದುರಾದ ಸಮಸ್ಯೆಯೇನು?
ದಿಢೀರ್‌ ಅಂತ್ಯಗೊಂಡ ಲಕ್ಷ್ಮೀ ಬಾರಮ್ಮ ಧಾರಾವಾಹಿ: ಕಲಾವಿದರಿಗೆ ಎದುರಾದ ಸಮಸ್ಯೆಯೇನು?

ವಿದ್ಯಾಭ್ಯಾಸಕ್ಕೆ ಮೊದಲ ಆದ್ಯತೆ ನೀಡುವ ಈಕೆಯನ್ನು, ಮಂಡ್ಯದ ಪ್ರತಿಷ್ಠಿತ ಹಾಗೂ ಶ್ರೀಮಂತ ಕುಟುಂಬದ 'ಶಕ್ತಿ ನಾಯಕ್' (ನಟ ವಿಕಾಸ್) ಎಂಬುವವರ ಜೊತೆ ವಿವಾಹ ಮಾಡಲಾಗುತ್ತದೆ. ಮಂಡ್ಯದ ಪ್ರಭಾವಿ ವ್ಯಕ್ತಿ ಗುಣಶೇಖರ್ ನಾಯಕ್ ಅವರ ಕೊನೆಯ ತಮ್ಮನೇ ಈ ಶಕ್ತಿ.

ಡಬಲ್ ಡಿಗ್ರಿ ಸೊಸೆಯಂದಿರ ಮನೆಗೆ ನಾಲ್ಕನೇ ಸೊಸೆಯ ಸವಾಲ್

ಗುಣಶೇಖರನ ಸಾಂಪ್ರದಾಯಿಕ ಮನೆಯಲ್ಲಿ ಈಗಾಗಲೇ ಮೂವರು 'ಡಬಲ್ ಡಿಗ್ರಿ' ಓದಿರುವ ಸುಶಿಕ್ಷಿತ ಸೊಸೆಯಂದಿರು ಸಂಸಾರವನ್ನು ಅಚ್ಚುಕಟ್ಟಾಗಿ ಮುನ್ನಡೆಸುತ್ತಿರುತ್ತಾರೆ. ಇವರ ಮಧ್ಯೆ ನಾಲ್ಕನೇ ವಿದ್ಯಾವಂತ ಸೊಸೆಯಾಗಿ ಜನನಿ (ತನ್ವಿ ರಾವ್) ಪ್ರವೇಶ ಪಡೆಯುತ್ತಾಳೆ. ಮದುವೆಯ ನಂತರ ತನ್ನ ಕರಿಯರ್ ಮತ್ತು ಗಂಡನ ಮನೆಯ ಜವಾಬ್ದಾರಿ ಎರಡನ್ನೂ ಸಮತೋಲನ ಕಾಯ್ದುಕೊಳ್ಳುವುದು ಜನನಿಗೆ ಎದುರಾಗುವ ಅತಿ ದೊಡ್ಡ ಸವಾಲು. ಈ ಕೌಟುಂಬಿಕ ಸವಾಲುಗಳನ್ನು ಆಕೆ ಹೇಗೆ ಎದುರಿಸುತ್ತಾಳೆ ಎಂಬುದೇ ಸೀರಿಯಲ್‌ನ ಮುಖ್ಯ ಕಥಾಹಂದರ.

ತಾರಾಗಣ ಹಾಗೂ ತಾಂತ್ರಿಕ ಬಳಗ

ಲಕ್ಷ್ಮೀ ಬಾರಮ್ಮ ಖ್ಯಾತಿಯ ತನ್ವಿ ರಾವ್ ಹಾಗೂ ವಿಕಾಸ್ ನಾಯಕ-ನಾಯಕಿಯಾಗಿ ನಟಿಸುತ್ತಿದ್ದರೆ, ಕನ್ನಡ ಚಿತ್ರರಂಗದ ಹಿರಿಯ ನಟರಾದ ಸುಚೇಂದ್ರ ಪ್ರಸಾದ್, ಶೋಭರಾಜ್ ಹಾಗೂ ಆರ್.ಕೆ.ಚಂದನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರೊಂದಿಗೆ ಸುರೇಶ್ ರೈ, ಶಾಲಿನಿ, ಸಮೀಕ್ಷಾ, ಧನ್ಯಾ, ವರ್ಷಾ, ಮಧುಸಾಗರ್, ಲಕ್ಷ್ಮೀ ಹೆಗ್ಡೆ ಸೇರಿದಂತೆ ದೊಡ್ಡ ಕಲಾವಿದರ ದಂಡೇ ಚಿತ್ರದಲ್ಲಿದೆ. ಎ.ಎಸ್.ಎಮ್ ಪ್ರೊಡಕ್ಷನ್ಸ್‌ನಡಿ ನಿರ್ಮಾಣವಾಗುತ್ತಿರುವ ಈ ಧಾರಾವಾಹಿ ತಂಡದಲ್ಲಿ ಸಂಪೃಥ್ವಿ ನಿರ್ದೇಶನ, ಶುಭ್ರ ಪುತ್ರಕಳ ಅವರ ಕಥೆ, ಸುಮಾ ಶಿನಗನಳ್ಳಿ ಅವರ ಸಂಭಾಷಣೆ, ಗೌತಮ್ ಕೃಷ್ಣನ್ ಅವರ ಛಾಯಾಗ್ರಹಣ ಇರಲಿದೆ.

"ಹುಟ್ಟಿದ ಮನೆ ಬೆಳಗಿದವರು, ಮೆಟ್ಟಿದ ಮನೆಗೆ ಬೆಳಕಾಗುವ ಭಾಗ್ಯವಂತರು" ಎಂಬ ಅಡಿಬರಹದೊಂದಿಗೆ ಮೂಡಿಬರುತ್ತಿರುವ ಈ ಧಾರಾವಾಹಿ, ಪ್ರತಿಯೊಂದು ಕುಟುಂಬಕ್ಕೂ ಹತ್ತಿರವಾಗುವಂತಿದೆ. ವಿವಾಹಿತ ಮಹಿಳೆಯರ ಕನಸುಗಳಿಗೆ ಸಮಾಜದಲ್ಲಿ ಸಿಗಬೇಕಾದ ಗೌರವವನ್ನು ಈ ಸೀರಿಯಲ್ ಮೂಲಕ ಉದಯ ಟಿವಿ ಸಾರಲು ಹೊರಟಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+