ದಿಢೀರ್ ಅಂತ್ಯಗೊಂಡ ಲಕ್ಷ್ಮೀ ಬಾರಮ್ಮ ಧಾರಾವಾಹಿ: ಕಲಾವಿದರಿಗೆ ಎದುರಾದ ಸಮಸ್ಯೆಯೇನು?
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ ಲಕ್ಷ್ಮೀ ಬಾರಮ್ಮ ಏಕಾಏಕಿ ಮುಕ್ತಾಯಗೊಂಡಿದೆ. ಟಿಆರ್‌ಪಿಯಲ್ಲೂ ಒಳ್ಳೆಯ ಸ್ಥಾನದಲ್ಲಿದ್ದ, ಕಥೆಯಲ್ಲೂ ರೋಚಕ ತಿರುವು ಇಟ್ಟುಕೊಂಡಿದ್ದ ಲಕ್ಷ್ಮೀ ಬಾರಮ್ಮ ಧಾರಾವಾಹಿ ಬಿಗ್ ಬಾಸ್ ತ್ರಿವಿಕಮ್ ನಟನೆಯ ಮುದ್ದು ಸೊಸೆ ಧಾರಾವಾಹಿ ಆರಂಭಕ್ಕೆ ದಾರಿ ಮಾಡಿಕೊಟ್ಟು ಅಂತ್ಯವಾಯಿತು. ಇದರಿಂದ ಲಕ್ಷ್ಮೀ ಬಾರಮ್ಮ ಧಾರಾವಾಹಿ ಕಲಾವಿದರಿಗೆ ಬೇಸರವಾಗಿದ್ದು, ಚೆನ್ನಾಗಿ ನಡೆದುಕೊಂಡು ಹೋಗುತ್ತಿದ್ದ ಧಾರಾವಾಹಿ ದಿಢೀರ್ ಅಂತ್ಯವಾದರೆ ಏನಾಗುತ್ತದೆ ಎನ್ನುವುದರ ಬಗ್ಗೆ ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಕಾವೇರಿ ಪಾತ್ರಧಾರಿ ನಟಿ ಸುಷ್ಮಾ ನಾಣಯ್ಯ ಮಾತನಾಡಿದ್ದಾರೆ.
ಏಷ್ಯಾನೆಟ್ ಸುವರ್ಣ ನ್ಯೂಸ್ ವಾಹಿನಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, 'ಒಂದು ಧಾರಾವಾಹಿ ನಡೆಯುವಾಗ ನಮ್ಮದೇ ಆದ ಕೆಲವು ಹಣಕಾಸಿನ ಕಮಿಟ್‌ಮೆಂಟ್‌ಗಳನ್ನು ಮಾಡಿಕೊಂಡಿಕೊಂಡಿರುತ್ತೇವೆ. ಲಕ್ಷ್ಮೀ ಬಾರಮ್ಮ ಧಾರಾವಾಹಿ ಚೆನ್ನಾಗಿಯೇ ನಡೆಯುತ್ತಿತ್ತು. ಏನೂ ತೊಂದರೆ ಇಲ್ಲದೇ ನಡೆದುಕೊಂಡು ಹೋಗುತ್ತಿತ್ತು. ಹೀಗಿರುವಾಗ ಒಮ್ಮೆಲೆ ಧಾರಾವಾಹಿ ಮುಗಿಯಿತು ಅಂದಾಗ ಶಾಕ್ ಆಯ್ತು. ನಮಗೆಲ್ಲಾ ನಮ್ಮದೇ ಆದ ಕಮಿಟ್‌ಮೆಂಟ್‌ಗಳು ಇರುತ್ತದೆ. ಆದರೆ ಕಲಾವಿದರ ಜೀವನವೇ ಹೀಗೆ. ಈ ಕ್ಷೇತ್ರಕ್ಕೆ ಬಂದಾಗಲೇ ಇಂತಹ ಸಂದರ್ಭಗಳನ್ನು ಎದುರಿಸಲು ಸಿದ್ಧರಿರಬೇಕು' ಎಂದರು.

'ಧಾರಾವಾಹಿ ಇಲ್ಲದೇ ಎರಡು ಮೂರು ತಿಂಗಳು ಮುಂದೆ ಹೇಗೆ ಜೀವನ ಸಾಗಿಸಬೇಕು ಎನ್ನುವುದನ್ನು ಮೊದಲೇ ಯೋಚಿಸಿರಬೇಕು. ನಮಗಿರುವ ಕಮಿಟ್‌ಮೆಂಟ್‌ಗಳನ್ನು ಹಾಗೂ ನಮ್ಮ ಖರ್ಚುಗಳನ್ನು ಹೇಗೆ ಸರಿದೂಗಿಸಬೇಕು ಎನ್ನುವುದನ್ನು ನಾವು ಮೊದಲೇ ಪ್ಲಾನ್ ಮಾಡಿರಬೇಕು. ಸದ್ಯ ನಾನು ಮಾಡಿರುವ ಉಳಿತಾಯ ನನಗೆ ಮುಂದಿನ ಧಾರಾವಾಹಿ ಸಿಗುವ ತನಕ ದೂಡಿಕೊಂಡು ಹೋಗಬಹುದು. ಈ ಮನೋರಂಜನಾ ಕ್ಷೇತ್ರ ಹೊರಗಿನಿಂದ ಚೆನ್ನಾಗಿ ಕಾಣಿಸುತ್ತದೆ. ಆದರೆ ಅದರ ಹಿಂದೆ ಏನೇನು ಇರುತ್ತದೆ ಎನ್ನುವುದು ಯಾರಿಗೂ ಗೊತ್ತಿರುವುದಿಲ್ಲ' ಎಂದು ಹೇಳಿದರು.
'ಈ ಕ್ಷೇತ್ರ ಇರುವುದು ಹೀಗೆ. ಇದನ್ನು ಬದಲಾಯಿಸಲು ಯಾರಿಂದಲೂ ಆಗುವುದಿಲ್ಲ. ಧಾರಾವಾಹಿ ಮುಗಿಯುತ್ತಿದೆ, ನೀವು ಇನ್ನೊಂದನ್ನು ನೋಡಿಕೊಳ್ಳಿ ಅಂತಾ ನಮಗೆ ಒಂದು ನೋಟಿಸ್ ಕೂಡ ಕೊಡುವುದಿಲ್ಲ. ಇದೆಲ್ಲಾ ಸ್ವಲ್ಪ ಬದಲಾಗಬೇಕು ಅಂತಾ ನನಗೆ ಅನಿಸುತ್ತದೆ. ಯಾಕೆಂದರೆ ಒಂದು ಧಾರಾವಾಹಿ ಅಂದರೆ ಮೂವತ್ತರಿಂದ ನೆಲವತ್ತು ಜನ ಅದರಿಂದ ಊಟ ಮಾಡುತ್ತಿರುತ್ತೇವೆ. ಹೀಗಾಗಿ ಒಂದು ನೋಟಿಸ್ ಇಲ್ಲದೇ ಅದನ್ನು ನಿಲ್ಲಿಸುವುದು ತುಂಬಾ ಕೆಟ್ಟದು ಅನಿಸುತ್ತದೆ. ಅದರಿಂದ ಮಾನಸಿಕ ಒತ್ತಡ ಕೂಡ ಆಗುತ್ತದೆ' ಎಂದರು.

'ಮನೆಯಲ್ಲಿ ಆರ್ಥಿಕವಾಗಿ ಸಬಲರಾಗಿದ್ದರೆ ಆ ರೀತಿ ಏನು ಅನಿಸುವುದಿಲ್ಲ. ಆದರೆ ಒಬ್ಬಳು ದುಡಿಯುವ ಮಹಿಳೆಯಾಗಿ ಮೊದಲು ನಾವೇ ದುಡಿದು ಕೈಬಿಚ್ಚಿ ಖರ್ಚು ಮಾಡಿರುತ್ತೇವೆ. ಆಮೇಲೆ ಕೆಲಸ ಇಲ್ಲದೇ ಇದ್ದಾಗ ಗಂಡನ ಬಳಿ ಕೇಳಲು ಕಷ್ಟವಾಗುತ್ತದೆ. ಅದನ್ನು ನಾವು ಹೇಗೆ ನಿಬಾಯಿಸುತ್ತೇವೆ ಎನ್ನುವುದು ಮುಖ್ಯ. ಹೀಗಾಗಿ ಕಲಾವಿದರಾಗಿ ಹೊಸದಾಗಿ ಬರುವವರಿಗೆ ನಾನು ಹೇಳುವುದು ಏನು ಅಂದರೆ ಈ ಕ್ಷೇತ್ರದ ಬಗ್ಗೆ ಸರಿಯಾಗಿ ತಿಳಿದುಕೊಂಡು ಬನ್ನಿ' ಎಂದು ನಟಿ ಸುಷ್ಮಾ ನಾಣಯ್ಯ ಹೇಳಿದ್ದಾರೆ.












Click it and Unblock the Notifications