MSIL Recruitment: ಖಾಲಿ ಹುದ್ದೆಗಳ ಭರ್ತಿಯಲ್ಲಿ ಒತ್ತಡಕ್ಕೆ ಮಣಿಯಬೇಡಿ, ಮೆರಿಟ್‌ಗೆ ಆದ್ಯತೆ ನೀಡಿ: ಎಂ.ಬಿ ಪಾಟೀಲ್
ಬೆಂಗಳೂರು: ರಾಜ್ಯ ಸರ್ಕಾರಿ ಸ್ವಾಮ್ಯದ ಮೈಸೂರು ಸೇಲ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್ (MSIL) ಸಂಸ್ಥೆಯಲ್ಲಿನ ವಿವಿಧ ಖಾಲಿ ಹುದ್ದೆಗಳ ನೇಮಕಾತಿ ನಡೆಯುತ್ತಿದೆ. ಹುದ್ದೆಗಳ ಭರ್ತಿ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಒತ್ತಡಕ್ಕೆ ಮಣಿಯದೇ ಶೀಘ್ರವೇ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಮೈಸೂರು ಸೇಲ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್ (MSIL) ನಲ್ಲಿರುವ ಪ್ರಮುಖ 62 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ವಿಳಂಬವಾಗಿದೆ. ಈ ಸಂಬಂಧ ಇಂದು ಸೋಮವಾರ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮನೋಜಕುಮಾರ್ ಮತ್ತು ಇತರ ಅಧಿಕಾರಿಗಳೊಂದಿಗೆ ಸಚಿವ ಎಂಬಿ ಪಾಟೀಲರು ಪರಾಮರ್ಶನಾ ಸಭೆ ನಡೆಸಿದರು.

ಮೆರಿಟ್ ಅನುಸಾರ ನೇಮಕಾತಿ ಮಾಡಿ
ಸಭೆಯಲ್ಲಿ ಮಾತನಾಡಿದ ಅವರು, ನೇಮಕ ಮಾಡಿಕೊಳ್ಳುತ್ತಿರುವ ಹುದ್ದೆಗಳಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಮತ್ತು ಸೇಲ್ಸ್ ಮ್ಯಾನೇಜರ್ ಮುಂತಾದ ಹುದ್ದೆಗಳಿವೆ. ನೇಮಕಾತಿಯ ಭಾಗವಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಈಗಾಗಲೇ ಪರೀಕ್ಷೆ ನಡೆಸಿದ್ದು, ಮೆರಿಟ್ ಪಟ್ಟಿ ಪ್ರಕಟಿಸಿದೆ. ಇದಕ್ಕೆ ಅನುಸಾರವಾಗಿ ನೇಮಕ ಪ್ರಕ್ರಿಯೆ ತ್ವರಿತವಾಗಿ ಮುಗಿಸುವಂತೆ ಅವರು ತಾಕೀತು ಮಾಡಿದರು.
ಎಲ್ಲಾ ಹುದ್ದೆಗಳನ್ನೂ ಮೆರಿಟ್ ಆಧಾರದಲ್ಲೇ, ಸರ್ಕಾರದ ನಿಯಮಗಳಿಗೆ ಅನುಸಾರವಾಗಿ ಭರ್ತಿ ಮಾಡಿಕೊಳ್ಳತಕ್ಕದ್ದು. ಹುದ್ದೆಗೆ ಅರ್ಹರು ಬಾರದಿದ್ದರೆ ಮೆರಿಟ್ ಪಟ್ಟಿಯಲ್ಲಿ ನಂತರದ ಸ್ಥಾನದಲ್ಲಿರುವ ಅಭ್ಯರ್ಥಿಗಳಿಗೆ ಅವಕಾಶ ಕೊಡಬೇಕು. ಇದರಲ್ಲಿ ಯಾರದೋ ಒತ್ತಡಕ್ಕೆ ಅಧಿಕಾರಿಗಳು ಮಣಿಯಬಾರದು. ಪಾರದರ್ಶಕವಾಗಿ ಖಾಲಿ ಹುದ್ದೆಗಳಿಗೆ ಅರ್ಹರನ್ನು ನೇಮಕಾತಿ ಮಾಡಿಕೊಳ್ಳುವಂತೆ ಅವರು ಹೇಳಿದರು.
ಬೆಂಗಳೂರು ಕ್ವಿನ್ ಸಿಟಿ: ಹೂಡಿಕೆ ಆಕರ್ಷಣೆ
ಲಕ್ಸಂಬರ್ಗ್ ಉಪ ಪ್ರಧಾನಿ ಕ್ಸೇವಿಯರ್ ಬೆಟಲ್ ಸೆಪ್ಟಂಬರ್ 7ರಿಂದ 9ರ ನಡುವೆ ಬೆಂಗಳೂರಿಗೆ ಭೇಟಿ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಆ ದೇಶದ ಭಾರತೀಯ ರಾಯಭಾರಿಯಾಗಿರುವ ಕ್ರಿಶ್ಚಿಯನ್ ಬೀವರ್ ಮತ್ತು ಲಕ್ಸಂಬರ್ಗ್ ಎಂಬೆಸಿಯಲ್ಲಿ ಕೌನ್ಸೆಲರ್ ಆಗಿರುವ ಮ್ಯಾಕ್ಸಿಮ್ ವಿಕ್ಟರ್ ಸೋಮವಾರದಂದು ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಿದರು ಎಂದರು.
ಹೂಡಿಕೆ, ನಾವೀನ್ಯತೆ ಮತ್ತು ತಂತ್ರಜ್ಞಾನ ವಲಯಗಳಲ್ಲಿ ಲಕ್ಸಂಬರ್ಗ್ ಜತೆ ದ್ವಿಪಕ್ಷೀಯ ಬಾಂಧವ್ಯ ವೃದ್ಧಿಗೆ ಒಲವು ವ್ಯಕ್ತವಾಗಿದೆ. ಇದಕ್ಕೆ ಲಕ್ಸಂಬರ್ಗ್ ಕೂಡ ಸಂಪೂರ್ಣ ಸಹಮತ ವ್ಯಕ್ತಪಡಿಸಿದೆ. ಬೀವರ್ ಮತ್ತು ವಿಕ್ಟರ್ ಇಬ್ಬರೂ ಬೆಂಗಳೂರು ನಗರವು ಭಾರತದ ಸಿಲಿಕಾನ್ ಸಿಟಿ ಆಗಿ ಬೆಳೆದಿರುವುದನ್ನು ಮತ್ತು ಇಲ್ಲಿನ ಅತ್ಯುತ್ತಮ ಕೈಗಾರಿಕಾ ಕಾರ್ಯ ಪರಿಸರ ಹಾಗೂ ಪ್ರತಿಭಾನ್ವಿತ ಮಾನವ ಸಂಪನ್ಮೂಲವನ್ನು ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಡಾಬಸಪೇಟೆ-ದೊಡ್ಡಬಳ್ಳಾಪುರ ನಡುವೆ ಅಭಿವೃದ್ಧಿ ಪಡಿಸುತ್ತಿರುವ ಕ್ವಿನ್ ಸಿಟಿಯಲ್ಲಿ ಇರುವ ಸದವಕಾಶಗಳ ಬಗ್ಗೆಯೂ ಲಕ್ಸಂಬರ್ಗ್ ನಿಯೋಗಕ್ಕೆ ಮನದಟ್ಟು ಮಾಡಿಕೊಡಲಾಗಿದೆ. ಇಲ್ಲಿ ಆ ದೇಶದ ವಿಶ್ವವಿದ್ಯಾಲಯಗಳು, ಕಂಪನಿಗಳು ಮತ್ತು ನಾವೀನ್ಯತಾ ಸಂಸ್ಥೆಗಳು ಈ ಯೋಜನೆಯ ಭಾಗವಾಗಿ ಸಹಭಾಗಿತ್ವ ಸ್ಥಾಪಿಸಿಕೊಳ್ಳಬೇಕು ಮತ್ತು ಹೂಡಿಕೆ ಮಾಡಬೇಕು ಎಂದು ಮುಕ್ತವಾಗಿ ಆಹ್ವಾನಿಸಲಾಗಿದೆ ಎಂದು ಅವರು ಹೇಳಿದ್ದಾರೆ.













Click it and Unblock the Notifications