'ಬೆಂಗಳೂರು ಹಸಿರೂರು' ಅಭಿಯಾನ: 64 ಸಾವಿರ ಸಸಿ ನೆಡುವ ಗುರಿ, ನಾಗರಿಕರಿಗೆ ಉಚಿತ ಸಸಿ ಬೇಕಾ? ಮನವಿ ಸಲ್ಲಿಸಿ
ಬೆಂಗಳೂರು: ರಾಜಧಾನಿ ಬೆಂಗಳೂರಲ್ಲಿ ನಗರೀಕರಣ ಪ್ರಭಾವದಿಂದಾಗಿ ಹಸಿರು ಹೊದಿಕೆ ಕಡಿಮೆ ಆಗಿದ್ದು, ಅದನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ಮುಂದಾಗಿದೆ. ನಗರದಲ್ಲಿ ಒಂದು ತಿಂಗಳು ಕಾಲ "ಬೆಂಗಳೂರು ಹಸಿರೂರು ಅಭಿಯಾನ' ಹಮ್ಮಿಕೊಂಡಿದೆ. ಉದ್ದೇಶಿತ ಒಟ್ಟು ಸಸಿಗಳ ಪೈಕಿ ಒಂದಷ್ಟು ಸಸಿಗಳನ್ನು ನಾಗರಿಕರಿಗೆ ನೀಡಲಾಗುತ್ತದೆ. ಸಸಿ ನೆಡಲು ಇಚ್ಛಿಸುವವರು ಆನ್‌ಲೈನ್ ಮೂಲಕ ಮನವಿ ಸಲ್ಲಿಸಬಹುದಾಗಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಅರಣ್ಯ ವಿಭಾಗದಿಂದ ಸಸಿ ನೆಡುವ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಇಂದು ಸೋಮವಾರ ಸಭೆ ನಡೆಸಿದ ನಗರಾಭಿವೃದ್ಧೀ ಸಚಿವ ಕೃಷ್ಣ ಬೈರೇಗೌಡ ಅವರು ಮಾತನಾಡಿದರು. ಈ ಬಾರಿ ಪಾಲಿಕೆ ವತಿಯಿಂದ 64 ಸಾವಿರ ಸಸಿಗಳನ್ನು ನೆಡುವ ಹಾಗೂ 40 ಸಾವಿರ ಸಸಿಗಳನ್ನು ನಾಗರಿಕರಿಗೆ ವಿತರಿಸುವ ಯೋಜನೆ ರೂಪಿಸಲಾಗಿದೆ. ಅದಕ್ಕೆ ಅಗತ್ಯವಿರುವ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಗಿಡ ನೆಡುವ ಕಾರ್ಯಕ್ರಮ ಕೇವಲ ಪೇಪರ್ ಕಾರ್ಯಕ್ರಮ ಅಗಬಾರದು. ನಿಜವಾಗಿಯೂ ಗಿಡಗಳನ್ನು ನೆಟ್ಟು, ಅವುಗಳನ್ನು ಸಂರಕ್ಷಿಸಿ ಬೆಳೆಸುವ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು ಎಂದರು.

ಇದೇ ಆಗಸ್ಟ್ 15ರಿಂದ ಸೆಪ್ಟೆಂಬರ್ 15 ರವರೆಗೆ ಒಟ್ಟು ಒಂದು ತಿಂಗಳು ಕಾಲ ಸಸಿ ನೆಡುವ ಅಭಿಯಾನ ಹಮ್ಮಿಕೊಳ್ಳಲಾಗಿದೆ. ನೀವು ಅದರಲ್ಲಿ ಪಾಲ್ಗೊಳ್ಳಲು ಕೂಡಲೇ ಆನ್‌ಲೈನ್ ನಲ್ಲಿ ಕೋರಿಕೊಳ್ಳಬಹುದು. ನಗರದ ಬಡಾವಣೆಗಳ ನಿವಾಸಿಗಳು, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು ಹಾಗೂ ನಾಗರಿಕರು ತಮ್ಮ ಬಡಾವಣೆಗಳಲ್ಲಿ ಕನಿಷ್ಠ 30 ಸಸಿಗಳನ್ನು ನೆಡಲು ಅವಕಾಶ ಇದ್ದಲ್ಲಿ ನೀವು ಆಗಸ್ಟ್ 10ರೊಳಗಾಗಿ ಪಾಲಿಕೆಯ ವೆಬ್‌ಸೈಟ್ https://gbatreeplantation.com/ ಹಾಗೂ ಇ-ಮೇಲ್ [email protected] ಮೂಲಕ ಮನವಿ ಸಲ್ಲಿಸಬಹುದು. ಮನವಿಗಳ ಆಧಾರದ ಮೇಲೆ ಅರಣ್ಯಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಸಸಿ ನೆಡಲು ಅವಕಾಶವಿದ್ದಲ್ಲಿ ಪಾಲಿಕೆಯಿಂದಲೇ ಸಸಿಗಳನ್ನು ನೆಡಲಾಗುವುದು. ಈ ಸಂಬಂಧ ಆಯಾ ನಗರ ಪಾಲಿಕೆಗಳಲ್ಲಿ ಸಸಿ ನೆಡುವ ಟೆಂಡರ್ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ ಸಚಿವರು ನಿರ್ದೇಶಿಸಿದರು.
ಟ್ರ್ಯಾಕಿಂಗ್ ವ್ಯವಸ್ಥೆ ಲಭ್ಯ
ಪ್ರಸಕ್ತ ಸಾಲಿನಲ್ಲಿ ನೆಡಲಾಗುವ ಎಲ್ಲಾ ಸಸಿಗಳಿಗೂ 'ಟ್ರ್ಯಾಕಿಂಗ್ ವ್ಯವಸ್ಥೆ' ಕಲ್ಪಿಸಲಾಗುತ್ತಿದೆ. ನಗರದಲ್ಲಿ ಎಲ್ಲೆಲ್ಲಿ ಹಾಗೂ ಎಷ್ಟು ಸಸಿಗಳನ್ನು ನೆಡಲಾಗಿದೆ ಎಂಬ ಮಾಹಿತಿಯು ಜಿಯೋ-ಲೊಕೇಷನ್ ಸಹಿತ ಪಾಲಿಕೆಯ ವೆಬ್‌ಸೈಟ್‌ನಲ್ಲಿ ಲಭ್ಯವಿದ್ದು, ನಾಗರಿಕರು ಕೂಡ ಅದನ್ನು ವೀಕ್ಷಿಸಬಹುದಾಗಿದೆ.
ನಾಗರಿಕರಿಗೆ 40 ಸಾವಿರ ಸಸಿ ವಿತರಣೆ
ಪಾಲಿಕೆ ವತಿಯಿಂದ 64 ಸಾವಿರ ಸಸಿಗಳನ್ನು ನೆಡಲಾಗುತ್ತದೆ. ಇದರ ಜೊತೆಗೆ ಸಾರ್ವಜನಿಕರು ಮನವಿ ಸಲ್ಲಿಸಿದಲ್ಲಿ ವಿತರಿಸಲು 40 ಸಾವಿರ ಸಸಿಗಳನ್ನು ಮೀಸಲಿಡಲಾಗಿದೆ. ಬಂದಿರುವ ಮನವಿಗಳ ಸಂಖ್ಯೆಗೆ ಅನುಗುಣವಾಗಿ ಸಸಿಗಳನ್ನು ವಿತರಿಸಿ, ಉಳಿದ ಸಸಿಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ನೆಟ್ಟು ಪೋಷಿಸಲಾಗುವುದು ಎಂದು ಹೇಳಿದರು.
ಒಂದು ಮರ ಕಡಿತಕ್ಕೆ 10 ಸಸಿಗಳನ್ನು ನೆಡಲಾಗುವುದು
ನಗರದಲ್ಲಿ ಪಾಲಿಕೆ, ಮೆಟ್ರೋ ಸೇರಿದಂತೆ ವಿವಿಧ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳ ಸಂದರ್ಭದಲ್ಲಿ ಮರಗಳನ್ನು ಕಡಿತಗೊಳಿಸುವ ಮೊದಲು, ಒಂದು ಮರಕ್ಕೆ 10 ಸಸಿಗಳನ್ನು ನೆಡುವ ವೆಚ್ಚವನ್ನು ಅರಣ್ಯ ವಿಭಾಗಕ್ಕೆ ಪಾವತಿಸಬೇಕು. ಈ ಸಸಿಗಳನ್ನೂ ಪ್ರಸಕ್ತ ಸಾಲಿನ ಗುರಿಯಲ್ಲಿ ಸೇರಿಸಲಾಗಿದೆ ಎಂದು ಹೇಳಿದರು.
ನೆಟ್ಟ ಗಿಡಗಳ ಮೇಲ್ವಿಚಾರಣೆ ಆಗಿಲ್ಲ: ಸಚಿವರ ಗರಂ
ನಗರದಲ್ಲಿ ಈ ಹಿಂದೆ ನೆಟ್ಟ ಗಿಡಗಳ ಸಮರ್ಪಕ ದಾಖಲೆ ಹಾಗೂ ಮೇಲ್ವಿಚಾರಣೆ ಮಾಡಲಾಗಿಲ್ಲ. ಮುಂದಿನ ದಿನಗಳಲ್ಲಿ ಇಂತಹ ಪರಿಸ್ಥಿತಿ ಮರುಕಳಿಸದಂತೆ ಕ್ರಮ ವಹಿಸಬೇಕು ಎಂದು ಅಧಿಕಾರಿಗಳ ವಿರುದ್ಧ ಸಚಿವರು ಗರಂ ಆದರು.
ನಗರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಸಿಗಳನ್ನು ನೆಟ್ಟು, ಅವುಗಳನ್ನು ಸಮರ್ಪಕವಾಗಿ ಪೋಷಿಸಿದರೆ ತಾಪಮಾನ ಹಾಗೂ ವಾಯುಮಾಲಿನ್ಯವನ್ನು ಕಡಿಮೆ ಮಾಡುವುದರ ಜೊತೆಗೆ ನಗರದ ಸೌಂದರ್ಯ ಮತ್ತು ಪರಿಸರವೂ ವೃದ್ಧಿಯಾಗಲಿದೆ. ಈ ನಿಟ್ಟಿನಲ್ಲಿ ಪಬ್ಲಿಕ್-ಪ್ರೈವೇಟ್ ಪ್ಲಾಂಟಿಂಗ್ ಪ್ರೋಗ್ರಾಂ(ಪಿಪಿಪಿಪಿ) ಮೂಲಕ ಸಾರ್ವಜನಿಕರ ಸಹಭಾಗಿತ್ವದಲ್ಲಿ ಸಸಿ ನೆಡುವ ಅಭಿಯಾನ ಕೈಗೊಳ್ಳುವಂತೆ ಅವರು ಸೂಚಿಸಿದರು.
ಯಾವೆಲ್ಲ ತಳಿಗಳ ಸಸಿಗಳ ನೆಡಲಾಗುತ್ತದೆ?
ಬೆಂಗಳೂರಿನ ಉಳಿವಿಗಾಗಿ ಗಿಡ ನೆಡುವ ಕಾರ್ಯಕ್ರಮ ಸಹಾಯಕವಾಗಲಿದೆ. ನಗರದ ಭವಿಷ್ಯಕ್ಕಾಗಿ ಇದು ಅತ್ಯಂತ ಅಗತ್ಯ ಕಾರ್ಯಕ್ರಮವಾಗಿದೆ. ಗಿಡ ನೆಡುವ ಕಾರ್ಯಕ್ರಮ ಕೇವಲ ದಾಖಲೆಗಳಿಗೆ ಸೀಮಿತವಾಗದೆ, ನೈಜವಾಗಿ ಕಾರ್ಯರೂಪಕ್ಕೆ ಬರಬೇಕು. ಈ ಬಾರಿ ನಗರದಲ್ಲಿ ಟೊಳ್ಳಾಗಿರುವ ಅಥವಾ ಗುಣಮಟ್ಟವಿಲ್ಲದ ಸಸಿಗಳನ್ನು ನೆಡುವುದಿಲ್ಲ. ಮಹಾಗನಿ, ಟಬೆಬಿಯಾ ರೋಸಿಯಾ, ಹೊಂಗೆ, ಬೇವು, ನೇರಳೆ ಸೇರಿದಂತೆ ಗುಣಮಟ್ಟದ ಮರಗಳನ್ನಷ್ಟೇ ನೆಡಲಾಗುವುದು ಎಂದು ತಿಳಿಸಿದರು.
9.64 ಕೋಟಿ ರೂ. ವೆಚ್ಚದ ಯೋಜನೆ
ಪ್ರಸಕ್ತ ಸಾಲಿನಲ್ಲಿ 64,000 ಸಸಿಗಳನ್ನು ನೆಡುವ ಗುರಿ ಹೊಂದಲಾಗಿದೆ. ಸಸಿ ನೆಟ್ಟ ನಂತರ ಮೂರು ವರ್ಷಗಳ ನಿರ್ವಹಣೆಯೂ ಸೇರಿದಂತೆ ಐದು ನಗರ ಪಾಲಿಕೆಗಳ ಆಯವ್ಯಯದಲ್ಲಿ 9.64 ಕೋಟಿ ರೂ. ಮೀಸಲಿಡಲಾಗಿದೆ. ಸಸಿಗಳನ್ನು ಯಶಸ್ವಿಯಾಗಿ ನೆಟ್ಟು ನಿರ್ವಹಿಸುವ ಆಧಾರದ ಮೇಲೆ ಹಣವನ್ನು ಬಿಡುಗಡೆ ಮಾಡಲಾಗುವುದು ಎಂದು ಅವರು ತಿಳಿಸಿದರು.


Click it and Unblock the Notifications
