Bengaluru: ಚಿಕ್ಕಪೇಟೆಯಲ್ಲಿ ಫೈರ್ ಆಡಿಟ್ ಕಡ್ಡಾಯ, ಅಪಾಯಕಾರಿ ಕಟ್ಟಡಗಳ ಮೇಲೆ ಜಿಬಿಎ ಕಣ್ಣು
ಬೆಂಗಳೂರು: ರಾಜಧಾನಿ ಬೆಂಗಳೂರಿನ ನಿರ್ವಹಿಸುವ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA Election 2026) ಚುನಾವಣೆ ಸಮೀಪಿಸುತ್ತಿದೆ. ಈ ಹಿನ್ನೆಲೆಯಲ್ಲಿ ನಗರದ ಸರ್ವತೋಮುಖ ಅಭಿವೃದ್ಧಿಗೆ, ಬಹುತೇಕ ಎಲ್ಲ ಸಮಸ್ಯೆಗಳಿಗೂ ಸರ್ಕಾರ ತಲೆ ಕೆಡಿಸಿಕೊಂಡಂತಿದೆ. ರಸ್ತೆ ಕಾಮಗಾರಿಗಳಿಗೆ ವೇಗ ನೀಡುವುದು, ಬೀದಿ ನಾಯಿ ನಿಯಂತ್ರಣ, ಸಸಿ ನೆಡುವುದು, ಒತ್ತುವರಿ ತೆರವು, ಮೂಲಸೌಕರ್ಯ ಅಭಿವೃದ್ಧಿಗೆ ಅನುದಾನ ನಿಗದಿ. ಹೀಗೆ ಅನೇಕ ವಿಷಯಗಳಿಗೆ ತಲೆ ಕೆಡಿಸಿಕೊಳ್ಳುತ್ತಿದೆ.
ಇದೀಗ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಮಟ್ಟದಲ್ಲಿ ನಗರ ಯೋಜಕರನ್ನೊಳಗೊಂಡ ವಿಶೇಷ ತಂಡವನ್ನು ರಚಿಸಲಾಗಿದೆ. ಚಿಕ್ಕಪೇಟೆ ವಿಭಾಗದ ಎಲ್ಲ ಕಟ್ಟಡಗಳ ಸಮಗ್ರ ಸರ್ವೆ ನಡೆಸುವಂತೆ ಜಿಬಿಎ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಈ ಮೂಲಕ ಅನಧಿಕೃತ ಕಟ್ಟಡ, ಸಂಭವಿಸಬಹುದಾದ ದುರಂತಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿದೆ. ಮಾತ್ರವಲ್ಲದೇ ಅಂಡರ್ ಗ್ರೌಂಡ್ ಕೇಬಲ್ ಮ್ಯಾಪ್, ಕುಡಿಯುವ ನರೀಕ್ಷೆಗೆ ಕೊಳಚೆ ನೀರು ಸೇರ್ಪಡೆ ತಡೆಗೆ ಆಯುಕ್ತರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಜಿಬಿಎ ಕೇಂದ್ರ ಕಚೇರಿಯಲ್ಲಿ ಮಂಗಳವಾರ ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಚಿಕ್ಕಪೇಟೆ ಕಟ್ಟಡಗಳ ಸರ್ವೆ ವೇಳೆ ಅನಧಿಕೃತ ಕಟ್ಟಡಗಳನ್ನು ಗುರುತಿಸಬೇಕು. ಸಂಬಂಧಪಟ್ಟವರಿಗೆ ನೋಟಿಸ್ ಜಾರಿ ಮಾಡಿ, ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.
ಅಗ್ನಿ ಸುರಕ್ಷತೆಗೆ ಫೈರ್ ಆಡಿಟ್
ಚಿಕ್ಕಪೇಟೆ ಸೇರಿದಂತೆ ಸೂಕ್ಷ್ಮ ಪ್ರದೇಶಗಳಲ್ಲಿ ಅಗ್ನಿ ಅವಘಡಗಳ ಸಾಧ್ಯತೆ ಗಮನದಲ್ಲಿಟ್ಟುಕೊಂಡು, ಅಗ್ನಿಶಾಮಕ ಸುರಕ್ಷತಾ ವ್ಯವಸ್ಥೆಗಳು, ತುರ್ತು ನಿರ್ಗಮನ ಮಾರ್ಗಗಳು ಹಾಗೂ ತುರ್ತು ಪರಿಸ್ಥಿತಿಯಲ್ಲಿ ಅನುಸರಿಸಬೇಕಾದ ಕ್ರಮಗಳ ಕುರಿತು ಕೂಡಲೇ ಫೈರ್ ಆಡಿಟ್ ನಡೆಸಬೇಕು ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ (ಕೆಆರ್ಡಿಸಿಎಲ್) ವತಿಯಿಂದ ಕೈಗೊಳ್ಳಲಾಗುತ್ತಿರುವ ರಸ್ತೆ ಕಾಮಗಾರಿಗಳ ಪ್ರಗತಿ ಮಾಹಿತಿ ಪಡೆದರು. ಭೂಸ್ವಾಧೀನ ಅಗತ್ಯವಿರುವ ಪ್ರದೇಶಗಳಲ್ಲಿ ಸಮಸ್ಯೆಗಳನ್ನು ಬಗೆಹರಿಸಿ, ಪ್ರಕ್ರಿಯೆಯನ್ನು ತ್ವರಿತಗೊಳಿಸಿ, ಕಾಮಗಾರಿಗಳನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಬೇಕು.
ಜಲಮಾರ್ಗಕ್ಕೆ ಕೊಳಚೆ ನೀರು ಸೇರ್ಪಡೆ ತಡೆಯಿರಿ
ನಗರದ ಕೆ-100 ಜಲಮಾರ್ಗದ ಕೆಲವು ಸ್ಥಳಗಳಲ್ಲಿ ಕೊಳಚೆ ನೀರು ಸೇರುತ್ತಿರುವುದು ಗಮನಕ್ಕೆ ಬಂದಿದೆ. ಈ ಸಂಬಂಧ ನಾಗರಿಕರು ದೂರುಗಳನ್ನು ನೀಡಿದ್ದಾರೆ. ಅದನ್ನು ಸಂಪೂರ್ಣವಾಗಿ ತಡೆಯಲು ತುರ್ತು ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದರು.
ಅಂಡರ್ ಗ್ರೌಂಡ್ ಕೇಬಲ್ ಮ್ಯಾಪ್..
ಬೆಂಗಳೂರಿನ ಮೂಲಸೌಕರ್ಯ ಕಾಮಗಾರಿಗಳ ಸಮನ್ವಯಕ್ಕಾಗಿ ಅಂಡರ್ ಗ್ರೌಂಡ್ ಕೇಬಲ್‌ಗಳ ಸಮಗ್ರ ನಕ್ಷೆ (ಮ್ಯಾಪ್) ಅನ್ನು ಶೀಘ್ರದಲ್ಲೇ ಸಲ್ಲಿಸುವಂತೆ ಬೆಂಗಳೂರು ವಿದ್ಯುತ್ ಸರಬರಾಜು ನಿಗಮ ನಿಯಮಿತ (ಬೆಸ್ಕಾಂ) ಅಧಿಕಾರಿಗಳಿಗೆ ಹೇಳಿದರು.
ಪಾದಾಚಾರಿ ಒತ್ತುವರಿ ತೆರವು: ಒಕ್ಕಲೆಬ್ಬಿಸುವಂತಿಲ್ಲ
ಇಂದು ಜಿಬಿಎ ವ್ಯಾಪ್ತಿಯಲ್ಲಿ ನಡೆದ ಇನ್ನೊಂದು ಪ್ರತ್ಯೇಕ ಸಭೆಯಲ್ಲಿ ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಪಾಲ್ಗೊಂಡಿದ್ದರು. ಪಾದಚಾರಿ ಮಾರ್ಗ ಒತ್ತುವರಿ ತೆರವುಗೊಳಿಸಬೇಕು. ಆದರೆ ಅಧಿಕಾರಿಗಳು ಒಕ್ಕಲೆಬ್ಬಿಸುವ ಕೆಲಸ ಮಾಡಬಾರದೆಂದು ತಿಳಿಸಿದರು.
ಪಾದಚಾರಿ ಒತ್ತುವರಿ ಸ್ಥಳಗಳ ತೆರವು ವೇಳೆ ಯಾರೊಬ್ಬರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡಕೂಡದು. ನಗರದಲ್ಲಿ ಸುಮಾರು ಶೇ.20ರಷ್ಟು ಪ್ರಮುಖ ರಸ್ತೆಗಳಲ್ಲಿ ಮಾತ್ರ ಪಾದಚಾರಿಗಳ ಸುರಕ್ಷತೆಯ ದೃಷ್ಟಿಯಿಂದ ಬೀದಿ ವ್ಯಾಪಾರ ಮಾಡದಂತೆ ಮನವಿ ಮಾಡಲಾಗಿದೆ. ಉಳಿದ ಶೇ.80ರಷ್ಟು ರಸ್ತೆಗಳಲ್ಲಿ ವ್ಯಾಪಾರ ನಡೆಸಲು ಅವಕಾಶವಿದೆ. ಪಾದಚಾರಿಗಳಿಗೆ ಸುಗಮ ಸಂಚಾರ ಕಲ್ಪಿಸಲು ಎಲ್ಲರೂ ಸಹಕರಿಸಬೇಕು ಎಂದು ಅವರು ವಿನಂತಿಸಿಕೊಂಡರು.













Click it and Unblock the Notifications