Hindi Imposition: ಕನ್ನಡ ನೆಲದಲ್ಲಿ ಹಿಂದಿ ಮೆರೆಸಿದರೆ ಸುಮ್ಮನಿರಲ್ಲ: BEL ಸರ್ಕಲ್‌ನಲ್ಲಿದ್ದ ಹಿಂದಿ ನಾಮಫಲಕ ಕಿತ್ತೆಸೆದ ಕರವೇ
ಬೆಂಗಳೂರು: ರಾಜಧಾನಿಯ ಜಾಲಹಳ್ಳಿಯಲ್ಲಿರುವ ಪ್ರಮುಖ ಬಿಇಎಲ್ (BEL) ವೃತ್ತದಲ್ಲಿ ಅಳವಡಿಸಲಾಗಿದ್ದ ಹಿಂದಿ ಭಾಷೆಯ ನಾಮಫಲಕವನ್ನು ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಕಾರ್ಯಕರ್ತರು ಮಂಗಳವಾರ ತೆರವುಗೊಳಿಸುವ ಮೂಲಕ ಪ್ರತಿಭಟನೆ ಮಾಡಿದ್ದಾರೆ. ನಾಮಫಲಕವನ್ನು ಕಿತ್ತೆಸೆದ ಬಳಿಕ ಆ ಜಾಗದಲ್ಲಿ ಕನ್ನಡದ ನಾಮಫಲಕವನ್ನು ಮರುಅಳವಡಿಸಲಾಗಿದೆ.
ಬಿಇಎಲ್ ವೃತ್ತದಲ್ಲಿ ಹಿಂದಿ ನಾಮಫಲಕವನ್ನು ಅಳವಡಿಸಿರುವ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಕೂಡಲೇ ಎಚ್ಚೆತ್ತ ಕನ್ನಡಪರ ಸಂಘಟನೆಗಳು ಹಿಂದಿ ಹೇರಿಕೆಯ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದವು. ಇದರ ಮುಂದುವರಿದ ಭಾಗವಾಗಿ ಮಂಗಳವಾರ ಕರವೇ ಬೆಂಗಳೂರು ನಗರ ಘಟಕದ ಅಧ್ಯಕ್ಷರಾದ ಟಿ.ಎ.ಧರ್ಮರಾಜ್ ಗೌಡ ಅವರ ನೇತೃತ್ವದಲ್ಲಿ ಜಮಾಯಿಸಿದ ನೂರಾರು ಕಾರ್ಯಕರ್ತರು ಸ್ಥಳದಲ್ಲಿದ್ದ ಹಿಂದಿ ಫಲಕವನ್ನು ಕಿತ್ತೆಸೆದು ಆಕ್ರೋಶ ಹೊರಹಾಕಿದರು.

ಅಧಿಕಾರಿಗಳ ವಜಾಕ್ಕೆ ಕರವೇ ಆಗ್ರಹ
ಪ್ರತಿಭಟನೆಯ ಸಂದರ್ಭದಲ್ಲಿ ಮಾತನಾಡಿದ ಕರವೇ ಮುಖಂಡರು, ಸಾರ್ವಜನಿಕ ವಲಯದ ಇಂತಹ ಪ್ರತಿಷ್ಠಿತ ಸಂಸ್ಥೆಯ ಆವರಣದಲ್ಲಿ ಕನ್ನಡವನ್ನು ಕಡೆಗಣಿಸಿ, ಅನಧಿಕೃತವಾಗಿ ಹಿಂದಿ ನಾಮಫಲಕ ಅಳವಡಿಸಲು ಕಾರಣರಾದ ಬಿಇಎಲ್ ಆಡಳಿತ ಮಂಡಳಿಯ ಸಂಬಂಧಪಟ್ಟ ಅಧಿಕಾರಿಗಳನ್ನು ತಕ್ಷಣವೇ ಸೇವೆಯಿಂದ ವಜಾ ಮಾಡಬೇಕು ಎಂದು ಒತ್ತಾಯಿಸಿದರು. ಬಿಇಎಲ್ ಆಡಳಿತ ಮಂಡಳಿಯು ಕನ್ನಡಿಗರ ಭಾವನೆಗಳನ್ನು ಗೌರವಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಭವಿಷ್ಯದಲ್ಲಿ ಇಂತಹ ಕನ್ನಡ ವಿರೋಧಿ ನಡೆಗಳನ್ನು ಯಾವುದೇ ಸಂಸ್ಥೆ ಪುನರಾವರ್ತಿಸಿದರೆ ಕರ್ನಾಟಕ ರಕ್ಷಣಾ ವೇದಿಕೆಯು ಅತ್ಯಂತ ಉಗ್ರವಾಗಿ ಪ್ರತಿಭಟಿಸಲಿದೆ ಎಂದು ಎಚ್ಚರಿಕೆ ನೀಡಿದರು.
ಇತಿಹಾಸ ನೆನಪಿಸಿದ ಕರವೇ
1954ರ ಅಕ್ಟೋಬರ್‌ನಲ್ಲಿ ಬಿಇಎಲ್ ಸಂಸ್ಥೆಯು ಬೆಂಗಳೂರಿನಲ್ಲಿ ಸ್ಥಾಪನೆಯಾದಾಗ, ಮುಖ್ಯಮಂತ್ರಿಯಾಗಿದ್ದ ಕಂಗಲ್ ಹನುಮಂತಯ್ಯನವರು ಈ ಸಂಸ್ಥೆಯನ್ನು ಮುನ್ನಡೆಸಲು ಮತ್ತು ಬೆಳೆಸಲು ಶ್ರಮಿಸಿದ್ದರು. ಕನ್ನಡಿಗರ ಭೂಮಿ ಮತ್ತು ಆಶ್ರಯದಲ್ಲಿ ಬೆಳೆದು ಬಂದಿರುವ ಇಂತಹ ರಕ್ಷಣಾ ಸಂಸ್ಥೆಯು, ಸಾರ್ವಜನಿಕ ರಸ್ತೆಯಲ್ಲೇ ಅನಧಿಕೃತವಾಗಿ ಹಿಂದಿ ಫಲಕವನ್ನು ಹಾಕುವ ಮೂಲಕ ಕನ್ನಡಿಗರನ್ನು ಕೆಣಕುತ್ತಿರುವುದರ ಉದ್ದೇಶವಾದರೂ ಏನು ಎಂದು ಪ್ರತಿಭಟನಾಕಾರರು ಪ್ರಶ್ನಿಸಿದ್ದಾರೆ. ಈ ಪ್ರತಿಭಟನೆಯಲ್ಲಿ ಕರವೇ ಪ್ರಮುಖ ಮುಖಂಡರಾದ ಸೋಮಶೇಖರ್ ಯಾದವ್, ಬೆಂಗಳೂರು ನಗರ ಮಹಿಳಾ ಘಟಕದ ಅಧ್ಯಕ್ಷರಾದ ಶ್ವೇತಾ ಗೌಡ ಹಾಗೂ ನಗರ ಘಟಕದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ್ ಸೇರಿದಂತೆ ನೂರಾರು ಕನ್ನಡ ಕಾರ್ಯಕರ್ತರು ಭಾಗವಹಿಸಿ ಬಿಇಎಲ್ ಆಡಳಿತದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಬೆಂಗಳೂರಿನ ಜಾಲಹಳ್ಳಿಯ ಬಿಇಎಲ್ ವೃತ್ತದಲ್ಲಿ ಅಕ್ರಮವಾಗಿ, ಅನಧಿಕೃತವಾಗಿ, ಅನೈತಿಕವಾಗಿ ಅಳವಡಿಸಲಾಗಿದ್ದ ಹಿಂದಿ ನಾಮಫಲಕವನ್ನು ಇಂದು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ತೆರವುಗೊಳಿಸಿದ್ದಾರೆ. ಕರ್ನಾಟಕದ ನೆಲದಲ್ಲಿ ಹಿಂದಿ ಹೇರಿಕೆಯನ್ನು ನಾವು ಯಾವತ್ತಿಗೂ ಸಹಿಸುವುದಿಲ್ಲ. ಹಿಂದಿಯನ್ನು ಯಾವುದೋ ಒಂದು ಬಾಗಿಲಲ್ಲಿ ತಂದು ಹಾಕುವುದನ್ನು… pic.twitter.com/qjtfyg560U
— ನಾರಾಯಣಗೌಡ್ರು.ಟಿ.ಎ | Narayanagowdru T.A. (@narayanagowdru) June 30, 2026
ಹಿಂದಿ ಹೇರಿಕೆಗೆ ಎಚ್ಚರಿಕೆ ಕೊಟ್ಟ ನಾರಾಯಣಗೌಡ
ಕರವೇ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡ ಅವರು ಭವಿಷ್ಯದ ಹಿಂದಿ ಹೇರಿಕೆಯ ವಿರುದ್ಧ ತೀವ್ರ ಎಚ್ಚರಿಕೆ ನೀಡಿದ್ದಾರೆ. "ಕರ್ನಾಟಕದ ನೆಲದಲ್ಲಿ ಯಾವುದೇ ರೀತಿಯ ಹಿಂದಿ ಹೇರಿಕೆಯನ್ನು ನಾವು ಯಾವತ್ತಿಗೂ ಸಹಿಸುವುದಿಲ್ಲ" ಎಂದು ಅವರು ಗುಡುಗಿದ್ದಾರೆ. ಬೆಂಗಳೂರಿನ ಜಾಲಹಳ್ಳಿಯ ಬಿಇಎಲ್ ವೃತ್ತದಲ್ಲಿ ಅಕ್ರಮವಾಗಿ, ಅನಧಿಕೃತವಾಗಿ ಮತ್ತು ಅನೈತಿಕವಾಗಿ ಹಿಂದಿ ನಾಮಫಲಕವನ್ನು ಅಳವಡಿಸಲಾಗಿತ್ತು. ಇದನ್ನು ಗಮನಿಸಿದ ನಮ್ಮ ಕಾರ್ಯಕರ್ತರು ಅದನ್ನು ಯಶಸ್ವಿಯಾಗಿ ತೆರವುಗೊಳಿಸಿದ್ದಾರೆ. ಹಿಂದಿಯನ್ನ ಯಾವುದೋ ಒಂದು ಕಳ್ಳಬಾಗಿಲಲ್ಲಿ ತಂದು ತೂರಿಸಲು ಪ್ರಯತ್ನಿಸುತ್ತಿರುವುದನ್ನು ನಾವು ಸೂಕ್ಷ್ಮವಾಗಿ ಗಮನಿಸುತ್ತಲೇ ಇದ್ದೇವೆ. ಇಂತಹ ಹಿಂದಿ ಸಾಮ್ರಾಜ್ಯಶಾಹಿಗಳ ಪ್ರತಿಯೊಂದು ಸಂಚನ್ನು ಕರವೇ ವಿಫಲಗೊಳಿಸುತ್ತಲೇ ಬರಲಿದೆ" ಎಂದು ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿರುವ ಕೇಂದ್ರೀಯ ಉದ್ದಿಮೆಗಳು ಕನ್ನಡಿಗರ ಶ್ರಮದ ಫಲ ಎಂದಿರುವ ಕರವೇ ಅಧ್ಯಕ್ಷ, "ಕರ್ನಾಟಕದಲ್ಲಿ ಕೇವಲ ಬಿಇಎಲ್ ಮಾತ್ರವಲ್ಲ, ಬಿಇಎಂಎಲ್ (BEML), ಎಚ್‌ಎಎಲ್ (HAL), ಐಟಿಐ (ITI) ನಂಥ ಪ್ರತಿಷ್ಠಿತ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದವರು ಕನ್ನಡಿಗರು. ಬೆಂಗಳೂರನ್ನು ಇವತ್ತು ಜಾಗತಿಕ ಮಟ್ಟದ ಕೈಗಾರಿಕಾ ರಾಜಧಾನಿಯನ್ನಾಗಿ ಮಾಡಿದ್ದೇ ಈ ಸಂಸ್ಥೆಗಳು. ಇದರ ಜೊತೆಗೆ ಸಿಎಸ್‌ಐಆರ್ (CSIR), ಎಚ್‌ಎಂಟಿ (HMT) ನಂಥ ಸಂಸ್ಥೆಗಳೂ ಇಲ್ಲಿವೆ. ಈ ಹೆಮ್ಮೆಯ ಸಂಸ್ಥೆಗಳನ್ನು ನಾವು ಹಿಂದಿಯವರಿಗೆ ಬರೆದುಕೊಟ್ಟಿಲ್ಲ. ಈ ಸಂಸ್ಥೆಗಳ ಮೂಲಕ ಹಿಂದಿ ಹೇರಿಕೆ ಮಾಡಲು ಹೊರಟಿರುವುದು ಒಂದು ದೊಡ್ಡ ಕುತಂತ್ರದ ಭಾಗವಾಗಿದ್ದು, ಇದನ್ನು ನಾವು ಸಹಿಸುವುದಿಲ್ಲ" ಎಂದು ಎಚ್ಚರಿಕೆ ನೀಡಿದ್ದಾರೆ.













Click it and Unblock the Notifications