ಹಿಂದಿ ಹೇರಿಕೆಗೆ ಹೊಸ ಮಾರ್ಗ ಕಂಡುಕೊಂಡ ಕೇಂದ್ರ ಸರ್ಕಾರ: ಕಾಂಗ್ರೆಸ್‌ನಿಂದ ತೀವ್ರ ವಿರೋಧ
ಕೇಂದ್ರ ಸರ್ಕಾರವು ಹಿಂದಿ ಹೇರಿಕೆ ಮಾಡುತ್ತಿದೆ. ಇಂಗ್ಲಿಷ್ ಅಕ್ಷರಗಳಲ್ಲಿ ಹಿಂದಿ ಭಾಷೆಯನ್ನು ಬಳಕೆ ಮಾಡಲಾಗುತ್ತಿದೆ. ಇದು ಹಿಂದಿಯೇತರ ಭಾಷೆ ಮಾತನಾಡುವ ಹಾಗೂ ದೇಶದ ವಿವಿಧ ಭಾಷಿಕರಿಗೆ ಮಾಡುವ ಅವಮಾನ ಎಂದು ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದೆ.
ಈ ಸಂಬಂಧ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ಕಾಂಗ್ರೆಸ್ ಮುಖಂಡ ಹಾಗೂ ಕೇಂದ್ರ್ ಮಾಜಿ ಸಚಿವ ಪಿ ಚಿದಂಬರಂ ಅವರು, ಸಂಸತ್ತಿನಲ್ಲಿ ಪರಿಚಯಿಸಲಿರುವ ಮಸೂದೆಗಳ ಶೀರ್ಷಿಕೆಯಲ್ಲಿ ಸರ್ಕಾರವು ಇಂಗ್ಲಿಷ್ ಅಕ್ಷರಗಳಲ್ಲಿ ಹಿಂದಿ ಪದಗಳನ್ನು ಬಳಸುವುದನ್ನು ನಾನು ವಿರೋಧಿಸುತ್ತೇನೆ. ಸಂಸತ್‌ನಲ್ಲಿ ಇಲ್ಲಿಯವರೆಗೆ, ಮಸೂದೆಯ ಶೀರ್ಷಿಕೆಯನ್ನು ಇಂಗ್ಲಿಷ್ ಆವೃತ್ತಿಯಲ್ಲಿ ಇಂಗ್ಲಿಷ್ ಪದಗಳಲ್ಲಿ ಮತ್ತು ಮಸೂದೆಯ ಹಿಂದಿ ಆವೃತ್ತಿಯಲ್ಲಿ ಹಿಂದಿ ಪದಗಳಲ್ಲಿ ಬರೆಯುವ ಪದ್ಧತಿ ಇತ್ತು. 75 ವರ್ಷಗಳ ಆಚರಣೆಯಲ್ಲಿ ಯಾರೂ ಯಾವುದೇ ತೊಂದರೆಯ ಬಗ್ಗೆ ಮಾತನಾಡದೆ ಇದ್ದ ಸಂದರ್ಭದಲ್ಲಿ, ಸರ್ಕಾರ ಏಕೆ ಬದಲಾವಣೆ ಮಾಡಬೇಕು ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ಮುಂದುವರಿದು ಈ ಬದಲಾವಣೆಯು ಹಿಂದಿ ಮಾತನಾಡದ ಜನರಿಗೆ ಮತ್ತು ಹಿಂದಿ ಹೊರತುಪಡಿಸಿ ಬೇರೆ ಅಧಿಕೃತ ಭಾಷೆಯನ್ನು ಹೊಂದಿರುವ ರಾಜ್ಯಗಳಿಗೆ ಅವಮಾನವಾಗಿದೆ. ಹಿಂದಿ ಮಾತನಾಡದ ಜನರು ಇಂಗ್ಲಿಷ್ ಅಕ್ಷರಗಳಲ್ಲಿ ಬರೆಯಲಾದ ಹಿಂದಿ ಪದಗಳಲ್ಲಿರುವ ಶೀರ್ಷಿಕೆಗಳೊಂದಿಗೆ ಮಸೂದೆ/ಕಾಯ್ದೆಯನ್ನು ಗುರುತಿಸಲು ಸಾಧ್ಯವಿಲ್ಲ; ಅಥವಾ ಅವರು ಮಸೂದೆ/ ಕಾಯ್ದೆಯ ಶೀರ್ಷಿಕೆಯನ್ನು ಉಚ್ಚರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಇಂಗ್ಲಿಷ್ ಸಹಾಯಕ ಅಧಿಕೃತ ಭಾಷೆಯಾಗಿ ಉಳಿಯುತ್ತದೆ ಎಂಬ ಭರವಸೆಯನ್ನು ಸತತ ಸರ್ಕಾರಗಳು ಪುನರುಚ್ಚರಿಸಿವೆ. ಆ ಭರವಸೆ ಮುರಿಯುವ ಅಪಾಯದಲ್ಲಿದೆ ಎಂದು ನಾನು ಆತಂಕಕ್ಕೆ ಒಳಗಾಗಿದ್ದೇನೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯ ಸರ್ಕಾರದ ನಿರ್ಧಾರಕ್ಕೂ ವಿರೋಧ
ಇನ್ನು ಈಚೆಗೆ ಪಿ. ಚಿದಂಬರಂ ಅವರು ರಾಜ್ಯ ಗೃಹ ಸಚಿವ ಜಿ. ಪರಮೇಶ್ವರ್ ಅವರ ನಿರ್ಧಾರಕ್ಕೂ ವಿರೋಧ ವ್ಯಕ್ತಪಡಿಸಿದ್ದರು. ಕರ್ನಾಟಕದಲ್ಲಿ ಡ್ರಗ್ಸ್ ಮಾರಾಟ ಪ್ರಕರಣ ಹೆಚ್ಚಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ್ದೇವೆ ಎಂದು ಹೇಳಿದ್ದ ಗೃಹ ಸಚಿವ ಜಿ. ಪರಮೇಶ್ವರ್ ಅವರು, ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕೆಲವೊಂದು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿರುವುದಾಗಿ ಹೇಳಿದ್ದರು.
ಈ ರೀತಿ ಅವರು ಹೇಳುವಾಗ ವಿಶಾಲ ಕಾರ್ಯತಂತ್ರದ ಭಾಗವಾಗಿ ಮಾದಕ ದ್ರವ್ಯ ವ್ಯಾಪಾರದಲ್ಲಿ ಭಾಗಿಯಾಗಿರುವ ವಿದೇಶಿ ಪ್ರಜೆಗಳು ವಾಸಿಸುವ ಮನೆಗಳನ್ನು ನೆಲಸಮ ಮಾಡುವುದಾಗಿ ಎಚ್ಚರಿಕೆ ನೀಡಿದ್ದರು. ಅಲ್ಲದೇ ಕಠಿಣ ಕ್ರಮಗಳನ್ನು ಸರ್ಕಾರ ತೆಗೆದುಕೊಳ್ಳಲಿದೆ ಎಂದೂ ಎಚ್ಚರಿಕೆಯನ್ನು ಗೃಹ ಸಚಿವ ಜಿ. ಪರಮೇಶ್ವರ್ ಅವರು ಹೇಳಿದ್ದರು. ಆದರೆ, ಉತ್ತರ ಪ್ರದೇಶದ ಬುಲ್ಡೋಜರ್ ಮಾದರಿಯ ರೀತಿ ಗೃಹ ಸಚಿವ ಜಿ. ಪರಮೇಶ್ವರ್ ಅವರು ಮಾತನಾಡಿದ್ದು ವಿರೋಧಕ್ಕೆ ಕಾರಣವಾಗಿತ್ತು. ಇದಕ್ಕೂ ಪಿ.ಚಿದಂಬರಂ ಅವರು ಈಚೆಗೆ ತೀವ್ರ ಆಕ್ಷೇಪವನ್ನು ವ್ಯಕ್ತಪಡಿಸಿದ್ದರು. ಅಲ್ಲದೇ ಕಾಂಗ್ರೆಸ್ ಸಹ ಗೃಹ ಸಚಿವ ಜಿ. ಪರಮೇಶ್ವರ್ ಅವರ ಹೇಳಿಕೆಯಿಂದ ಮುಜುಗರಕ್ಕೆ ಒಳಗಾದಂತೆ ಇತ್ತು.












Click it and Unblock the Notifications