ಮುಂಜಾನೆ ನಿದ್ರೆಯಲ್ಲಿದ್ದವರ ಮೇಲೆ ಮೃತ್ಯುವಿನಂತೆ ಎರಗಿದ ಮಳೆರಾಯ; ಗೋಡೆ ಕುಸಿದು ಇಬ್ಬರು ಕಂದಮ್ಮ ಸೇರಿ ಮೂವರ ದುರ್ಮರಣ
ಮಂಗಳೂರು: ನಗರದಲ್ಲಿ ಸುರಿಯುತ್ತಿರುವ ಸತತ ಭಾರಿ ಮಳೆಗೆ ಮಂಗಳೂರಿನ ಗರೋಡಿ ಪ್ರದೇಶದಲ್ಲಿ ಮಂಗಳವಾರ ಮುಂಜಾನೆ ಭೀಕರ ದುರಂತ ಸಂಭವಿಸಿದೆ. ಎತ್ತರದ ಕಾಂಪೌಂಡ್ ಗೋಡೆಯೊಂದು ಬಾಡಿಗೆ ಮನೆಗಳ ಮೇಲೆ ಕುಸಿದು ಬಿದ್ದ ಪರಿಣಾಮ, ಇಬ್ಬರು ಬಾಲಕಿಯರು ಸೇರಿದಂತೆ ಒಟ್ಟು ಮೂವರು ಜೀವ ಕಳೆದುಕೊಂಡಿದ್ದಾರೆ. ಕಂಕನಾಡಿ ಪೊಲೀಸ್ ಠಾಣಾ ವ್ಯಾಪ್ತಿಯ 'ಮರಿಯಾಲ್ ಹೌಸ್' ಎಂಬಲ್ಲಿ ಮುಂಜಾನೆ 4:30 ಅವಧಿಯಲ್ಲಿ ಈ ಘಟನೆ ನಡೆದಿದೆ. ನಿರಂತರವಾಗಿ ಸುರಿಯುತ್ತಿದ್ದ ಮಳೆಯಿಂದಾಗಿ ಎತ್ತರದಲ್ಲಿದ್ದ ಕಾಂಪೌಂಡ್ ಗೋಡೆಯು ಏಕಾಏಕಿ ಕುಸಿದು ಬಿದ್ದಿದೆ. ಇದರ ಪಕ್ಕದಲ್ಲೇ ಇದ್ದ ನಾಲ್ಕು ಸಾಲು ಬಾಡಿಗೆ ಮನೆಗಳ ಹಿಂಭಾಗದ ಮೇಲೆ ಅವಶೇಷಗಳು ಬಿದ್ದಿದ್ದರಿಂದ, ಗಾಢ ನಿದ್ದೆಯಲ್ಲಿದ್ದ ಆರು ಮಂದಿ ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದರು.
ಬಿಹಾರ ಮೂಲದ ಕುಟುಂಬಕ್ಕೆ ಆಘಾತ
ಈ ದುರಂತದಲ್ಲಿ ಬಿಹಾರ ಮೂಲದ ಕುಟುಂಬವೊಂದು ತೀವ್ರವಾಗಿ ಸಂಕಷ್ಟಕ್ಕೆ ಸಿಲುಕಿದೆ. ಕಳೆದ ಎಂಟು ವರ್ಷಗಳಿಂದ ಇದೇ ಪ್ರದೇಶದಲ್ಲಿ ವಾಸವಿದ್ದ ಲಾಲ್‌ಬಾಬು ಎಂಬುವವರ ಮನೆ ಸಂಪೂರ್ಣ ಜಖಂಗೊಂಡಿದೆ. ಅವಶೇಷಗಳಡಿ ಸಿಲುಕಿದ್ದ ಲಾಲ್‌ಬಾಬು, ಅವರ ಪತ್ನಿ ಇಂದು ಮತ್ತು ಇಬ್ಬರು ಪುತ್ರಿಯರಾದ ಅಲ್ಕಾ (14) ಹಾಗೂ ಅನುಷಾ (11) ಅವರನ್ನು ರಕ್ಷಣಾ ಸಿಬ್ಬಂದಿ ಯಶಸ್ವಿಯಾಗಿ ಹೊರತೆಗೆದಿದ್ದಾರೆ. ಆದರೆ, ಇವರ ಕಿರಿಯ ಹೆಣ್ಣು ಮಕ್ಕಳಾದ ಅನಾಮಿಕಾ ಚೌರಾಸಿಯಾ (8) ಮತ್ತು ಪರಿ (4) ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿದ್ದಾರೆ.

ಮತ್ತೊಂದು ಕುಟುಂಬದಲ್ಲಿ ಸಾವು
ಲಾಲ್‌ಬಾಬು ಅವರ ಪಕ್ಕದ ಮನೆಯಲ್ಲಿದ್ದ ಬಾಲಕೃಷ್ಣ (48) ಎಂಬುವವರನ್ನು ಸ್ಥಳೀಯರು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಆದರೆ, ದುರದೃಷ್ಟವಶಾತ್ ಅವರ ಪತ್ನಿ ಶಾಂತಾ (46) ಅವರು ಅವಶೇಷಗಳಡಿ ಸಿಲುಕಿ ತೀವ್ರವಾಗಿ ಗಾಯಗೊಂಡಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ. ಘಟನೆ ತಿಳಿಯುತ್ತಿದ್ದಂತೆಯೇ ಸ್ಥಳೀಯ ನಿವಾಸಿಗಳು, ಕಂಕನಾಡಿ ಪೊಲೀಸರು ಹಾಗೂ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ತಕ್ಷಣವೇ ಜಂಟಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ತದನಂತರ ಎನ್‌ಡಿಆರ್‌ಎಫ್ ತಂಡ ಕೂಡ ಸ್ಥಳಕ್ಕೆ ಧಾವಿಸಿ, ಅವಶೇಷಗಳನ್ನು ತೆರವುಗೊಳಿಸುವಲ್ಲಿ ಮತ್ತು ಸಿಲುಕಿದ್ದವರನ್ನು ಹೊರತೆಗೆಯುವಲ್ಲಿ ಪ್ರಮುಖ ಪಾತ್ರ ವಹಿಸಿತು. ಸದ್ಯ ಸ್ಥಳದಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಡಿಸಿಎಂ ಪರಮೇಶ್ವರ್ ಪ್ರತಿಕ್ರಿಯೆ
ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರು ಮಂಗಳೂರಿನ ಕಾಂಪೌಂಡ್ ಗೋಡೆ ಕುಸಿತದ (ಭೂಕುಸಿತ) ದುರಂತದ ಕುರಿತು ತೀವ್ರ ಕಳಕಳಿ ವ್ಯಕ್ತಪಡಿಸಿದ್ದು, ಸರ್ಕಾರದ ವತಿಯಿಂದ ಕೈಗೊಳ್ಳಲಾಗಿರುವ ತಕ್ಷಣದ ಕ್ರಮಗಳ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಭಾರಿ ಮಳೆಯಿಂದಾಗಿ ಸಂಭವಿಸಿದ ಈ ದುರಂತದಲ್ಲಿ ಮೂವರು ಸಾವನ್ನಪ್ಪಿರುವ ಘಟನೆಗೆ ಗೃಹ ಸಚಿವರು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ ಮತ್ತು ಮೃತರ ಕುಟುಂಬಸ್ಥರಿಗೆ ತಮ್ಮ ಸಂತಾಪ ಸೂಚಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಮತ್ತು ರಕ್ಷಿಸಲ್ಪಟ್ಟವರು ಶೀಘ್ರವಾಗಿ ಹಾಗೂ ಸಂಪೂರ್ಣವಾಗಿ ಗುಣಮುಖರಾಗಲಿ ಎಂದು ಅವರು ಪ್ರಾರ್ಥಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ತಕ್ಷಣವೇ ಮಂಗಳೂರು ಜಿಲ್ಲಾಧಿಕಾರಿಗಳೊಂದಿಗೆ (DC) ಮಾತುಕತೆ ನಡೆಸಿದ್ದಾರೆ. ಬಾಧಿತ ಕುಟುಂಬಗಳಿಗೆ ರಕ್ಷಣಾ ಕಾರ್ಯ, ಸೂಕ್ತ ಪರಿಹಾರ ಹಾಗೂ ಪುನರ್ವಸತಿ ಕ್ರಮಗಳನ್ನು ಯಾವುದೇ ರೀತಿಯ ವಿಳಂಬವಿಲ್ಲದೆ, ಯುದ್ಧೋಪಾದಿಯಲ್ಲಿ ಕೈಗೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ವಿಪತ್ತು ನಿರ್ವಹಣೆಯ ಉಸ್ತುವಾರಿ ಸಚಿವರಾದ ಶ್ರೀ ಯು.ಟಿ. ಖಾದರ್ ಅವರೊಂದಿಗೂ ಪರಮೇಶ್ವರ್ ಅವರು ಚರ್ಚೆ ನಡೆಸಿದ್ದಾರೆ. ಸ್ಥಳೀಯ ಪರಿಸ್ಥಿತಿಯ ಮೇಲೆ ನಿರಂತರ ನಿಗಾ ವಹಿಸಿ, ತಕ್ಷಣವೇ ಸಂತ್ರಸ್ತರಿಗೆ ಅಗತ್ಯವಿರುವ ಎಲ್ಲ ನೆರವು ಮತ್ತು ತುರ್ತು ಸೌಕರ್ಯಗಳನ್ನು ಒದಗಿಸುವಂತೆ ಅವರು ಕೋರಿದ್ದಾರೆ. ಈ ಕಷ್ಟದ ಸಮಯದಲ್ಲಿ ಸಂಕಷ್ಟಕ್ಕೆ ಒಳಗಾದ ಕುಟುಂಬಗಳ ಬೆನ್ನಿಗೆ ಸರ್ಕಾರ ಗಟ್ಟಿಯಾಗಿ ನಿಲ್ಲಲಿದ್ದು, ಅಗತ್ಯವಿರುವ ಎಲ್ಲ ಆರ್ಥಿಕ ಮತ್ತು ಸಾಮಾಜಿಕ ನೆರವನ್ನು ಒದಗಿಸಲಿದೆ ಎಂದು ಭರವಸೆ ನೀಡಿದ್ದಾರೆ.













Click it and Unblock the Notifications